Karnataka HC allows Abortion - ಮಹಿಳೆಯ ಗರ್ಭಹೊರುವ ಹಕ್ಕು ವೈಯಕ್ತಿಕ ಸ್ವಾತಂತ್ರ್ಯದ ಭಾಗ: ಕರ್ನಾಟಕ ಹೈಕೋರ್ಟ್
ಮಹಿಳೆಯ ಗರ್ಭಹೊರುವ ಹಕ್ಕು ವೈಯಕ್ತಿಕ ಸ್ವಾತಂತ್ರ್ಯದ ಭಾಗ: ಕರ್ನಾಟಕ ಹೈಕೋರ್ಟ್
ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ: ಕರ್ನಾಟಕ ಹೈಕೋರ್ಟ್ ಅನುಮತಿ
ಅತ್ಯಾಚಾರಕ್ಕೆ ಒಳಗಾಗಿದ್ದ 16 ವರ್ಷದ ಬಾಲಕಿ(ಸಂತ್ರಸ್ತೆ)ಯ ಗರ್ಭಪಾತಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.
ಸಂತಾನೋತ್ಪತ್ತಿ ಆಯ್ಕೆ ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯದ ಭಾಗ. ಆದುದರಿಂದ ಅತ್ಯಾಚಾರದಿಂದ ಉಂಟಾದ ಗರ್ಭವನ್ನು ತೆಗೆಯದಂತೆ ಆಕೆಗೆ ಬಲವಂತ ಮಾಡಲಾಗದು ಎಂದು ಹೈಕೋರ್ಟ್ ಧಾರವಾಡ ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ತನ್ನ ದೈಹಿಕ ಸಮಗ್ರತೆಯನ್ನು ರಕ್ಷಿಸಿಕೊಳ್ಳುವ ಪವಿತ್ರ ಹಕ್ಕನ್ನು ಮಹಿಳೆ ಹೊಂದಿದ್ದಾರೆ. ಸಂವಿಧಾನದ 21ನೇ ವಿಧಿಯಡಿ ಸಂತಾನೋತ್ಪ ಹಕ್ಕು ಮಹಿಳೆಯ "ವೈಯಕ್ತಿಕ ಸ್ವಾತಂತ್ರ್ಯ"ದ ಭಾಗ ಎಂದು ತೀರ್ಪು ಹೇಳಿದೆ.
ವೈದ್ಯಕೀಯ ಗರ್ಭಪಾತ ಕಾಯಿದೆ 1971ರ ಸೆಕ್ಷನ್ 3ರಡಿ ಗರ್ಭ ಧರಿಸಿ 24 ವಾರಗಳು ಪೂರ್ಣಗೊಂಡಿದ್ದರೆ ಗರ್ಭಪಾತ ಮಾಡಲಾಗದು ಎಂದು ವೈದ್ಯಕೀಯ ಅಧಿಕಾರಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಅತ್ಯಾಚಾರ ಸಂತ್ರಸ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.
ಶಾಸನದಲ್ಲಿ ವಿಧಿಸಲಾದ ಶಾಸನಬದ್ಧ ಮಿತಿಗಳು ಹೈಕೋರ್ಟ್‌ನ ಸಂವಿಧಾನಿಕ ಅಧಿಕಾರ ಚಲಾಯಿಸಲು ಅಡ್ಡಿಯಾವುದಿಲ್ಲ. ಸಂವಿಧಾನಿಕ ಅಧಿಕಾರ ಚಲಾವಣೆಯನ್ನು ವಿರಳವಾಗಿ, ಮಿತವಾಗಿ ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಬಳಸಬೇಕು ಮತ್ತು ಇದು ಪ್ರತಿ ಪ್ರಕರಣದ ವಾಸ್ತವಿಕ ಅಂಶಗಳನ್ನು ಆಧರಿಸುತ್ತದೆ ಎಂದು ಪೀಠ ಹೇಳಿದೆ.
16ನೇ ವಯಸ್ಸಿನಲ್ಲಿ ಅಪ್ರಾಪ್ತೆಯ ಗರ್ಭವನ್ನು ಮುಂದುವರಿಸುವ ಪರಿಣಾಮಗಳು ಆಕೆಯ "ಘನತೆಯ ಜೀವನ"ಕ್ಕೆ ತೀವ್ರ ಹಾನಿ ಉಂಟು ಮಾಡಬಹುದು ಎಂದು ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.