LLB Exam- Karnataka HC sought detail- 5 Year LLB ಪರೀಕ್ಷೆ ರದ್ದು ಕೋರಿ ಅರ್ಜಿ: ಆಫ್‌ಲೈನ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮಾಹಿತಿ ಕೇಳಿದ ಹೈಕೋರ್ಟ್
5 Year LLB ಪರೀಕ್ಷೆ ರದ್ದು ಕೋರಿ ಅರ್ಜಿ: ಆಫ್‌ಲೈನ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮಾಹಿತಿ ಕೇಳಿದ ಹೈಕೋರ್ಟ್
ಡಿಸೆಂಬರ್ 15ರಿಂದ ಆರಂಭವಾದ ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ 2ನೇ ಮತ್ತು 4ನೇ ಸೆಮಿಸ್ಟರ್ ಆಫ್‌ಲೈನ್ ಪರೀಕ್ಷೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂಬುದರ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಶುಕ್ರವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (ಕೆಎಸ್‌ಎಲ್‌ಯು) ಹೈಕೋರ್ಟ್ ನಿರ್ದೇಶಿಸಿದೆ.
ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ 2ನೇ ಮತ್ತು 4ನೇ ಸೆಮಿಸ್ಟರ್ ಪರೀಕ್ಷೆ ನಡೆಸುವ ಸಂಬಂಧ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ 2021ರ ಡಿಸೆಂಬರ್ 1ರಂದು ಹೊರಡಿಸಿದ ಅಧಿಸೂಚನೆ ರದ್ದು ಕೋರಿ ಕೆ.ಪಿ ಪ್ರಭುದೇವ್ ಹಾಗೂ ಇನ್ನಿತರೆ ವಿದ್ಯಾರ್ಥಿಗಳು ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಎಂ.ಪಿ ಶ್ರೀಕಾಂತ್, ಸಾಕಷ್ಟು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗೆ ಹಾಜರಾಗಿಲ್ಲ. ತರಗತಿ ಆಲಿಸಲು ಲ್ಯಾಪಟಾಪ್, ಡೆಸ್ಕ್‌ಟಾಪ್ ಮತ್ತು ಇಂಟರ್‌ನೆಟ್ ಸೇರಿ ಇತರೆ ಅಗತ್ಯ ಸೌಲಭ್ಯಗಳಿರಲಿಲ್ಲ. ವಿದ್ಯಾರ್ಥಿಗಳಿಗೆ ಸೂಕ್ತ ತರಗತಿಗಳು ನಡೆದಿಲ್ಲ. ಇದೇ ಕಾರಣಕ್ಕೆ 3 ವರ್ಷದ ಕಾನೂನು ಪದವಿಯ 2ನೇ ಮತ್ತು 4ನೇ ಸೆಮಿಸ್ಟರ್ ಪರಿಕ್ಷೆ ನಡೆಸಲು ವಿವಿ ಹೊರಡಿಸಿದ್ದ ಅಧಿಸೂಚನೆಯನ್ನು ಧಾರವಾಡ ಹೈಕೋರ್ಟ್ ಪೀಠ ಡಿಸೆಂಬರ್ 14ರಂದು ರದ್ದುಪಡಿಸಿತ್ತು.
ಅದೇ ರೀತಿ 5 ವರ್ಷದ ಕಾನೂನು ಪದವಿಯ 2ನೇ ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಕೂಡ ರದ್ದುಪಡಿಸಬೇಕು. 5 ಮತ್ತು 3 ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡಬಾರದು ಎಂದು ಮನವಿ ಮಾಡಿದರು.
ವಿವಿ ಪರ ವಕೀಲರು ವಾದಿಸಿ, ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಲಾಗಿತ್ತು. ವಿದ್ಯಾರ್ಥಿಗಳಿಗೆ ಆನ್‌ಲೈನ್ ಆಕ್ಸೆಸ್ ಇತ್ತು. ಈಗಾಗಲೇ ಡಿಸೆಂಬರ್ 15ರಿಂದ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳು ಆರಂಭವಾಗಿದ್ದು, ಶೇಕಡಾ 90ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯನ್ನೇ ಬಹಿಷ್ಕರಿಸಿದ್ದಾರೆ. ಬಹುಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂಬ ವಿವಿ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.
ಅಂತಿಮವಾಗಿ, ವಿವಿ ಪರ ವಕೀಲರ ಕೋರಿಕೆ ಮೇರೆಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪೀಠ ಕಾಲಾವಕಾಶ ನೀಡಿ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ಮುಂದೂಡಿತು. ಇದೇ ವೇಳೆ 5 ವರ್ಷದ ಕಾನೂನು ಪದವಿಯ 2ನೇ ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆಯ ಮಾಹಿತಿ ನೀಡುವಂತೆ ವಿವಿಗೆ ಸೂಚಿಸಿತು.