-->
Judicial is Stronger- Article by Rtd Judge : ವಿಪಕ್ಷದ ಪಾದಯಾತ್ರೆ ಪ್ರಹಸನ: ಸರಕಾರದ ಅಸಹಾಯಕತನ ಮತ್ತು ನ್ಯಾಯಾಂಗದ ಗಟ್ಟಿತನ

Judicial is Stronger- Article by Rtd Judge : ವಿಪಕ್ಷದ ಪಾದಯಾತ್ರೆ ಪ್ರಹಸನ: ಸರಕಾರದ ಅಸಹಾಯಕತನ ಮತ್ತು ನ್ಯಾಯಾಂಗದ ಗಟ್ಟಿತನ

ವಿಪಕ್ಷದ ಪಾದಯಾತ್ರೆ ಪ್ರಹಸನ: ಸರಕಾರದ ಅಸಹಾಯಕತನ ಮತ್ತು ನ್ಯಾಯಾಂಗದ ಗಟ್ಟಿತನ

ಲೇಖನ: ಎಸ್. ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ.


ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಕ್ಷದವರು ಪ್ರಾರಂಭ ಮಾಡಿದ್ದ, ಪಾದಯಾತ್ರೆ ಇಂದು ಮಧ್ಯದಲ್ಲಿ ಅಂತ್ಯ ಕಂಡಿದೆ. ನಮ್ಮ ರಾಜ್ಯದ ಜಲಸಂಪತ್ತು ಸರಿಯಾಗಿ ಬಳಸಿಕೊಂಡು, ರಾಜ್ಯದ ಅಭಿವೃದ್ಧಿ ಮಾಡುವದು ಸರಕಾರದ ಆದ್ಯ ಕರ್ತವ್ಯ.ನಮ್ಮ ಅಂತರರಾಜ್ಯ ನದಿಗಳ ನೀರಿನಲ್ಲಿ ನಮ್ಮ ಹಕ್ಕು ಪಡೆಯುವದು ಅತ್ಯಗತ್ಯ, ಇದಕ್ಕೆ ಯಾರೂ ಎದುರಾಡುವುದಿಲ್ಲ.


ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಹರಡಿರುವ, ಸಾಂಕ್ರಾಮಿಕ ರೋಗದ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ.ಒಟ್ಟಾರೆ ಇಡೀ ದೇಶವೇ ಒಂದು ಭಯಾನಕ ಸ್ಥಿತಿ ಎದುರಿಸುತ್ತಿದೆ, ಈ ಸ್ಥಿತಿ ಎದುರಿಸಲು ವಿಪತ್ತು ನಿರ್ವಹಣಾ ಕಾನೂನು ಜಾರಿ ಮಾಡಿದೆ.ಇದರ ಪ್ರಕಾರ ಕೋವಿಡ್ ನಿಯಮಗಳನ್ನು ರೂಪಿಸಲಾಗಿದೆ, ಎಲ್ಲರೂ ಈ ನಿಯಮ ಪಾಲನೆ ಮಾಡಲೇ ಬೇಕು.


ಈಗಿರುವ ನಿಯಮದ ಪ್ರಕಾರ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನಸಂದಣಿ ಸೇರುವದು ನಿಷೇಧಿತ. ಮಾಸ್ಕ್ ಹಾಕದೇ ಹೊರಗೆ ಬರುವ ಸಾಮಾನ್ಯ ಜನರಿಗೆ, ಮುಲಾಜಿಲ್ಲದೆ ಸರಕಾರ ದಂಡ ವಿಧಿಸುತ್ತದೆ.ಆದರೆ ಸರಕಾರಕ್ಕೆ ಸವಾಲು ಹಾಕಿ ಎಲ್ಲ ನಿಯಮ ಮೀರಿ ಪಾದಯಾತ್ರೆ ಮಾಡಿದ, ವಿರೋಧ ಪಕ್ಷದ ನಾಯಕರ ವಿರುದ್ಧ ಮಾತ್ರ ಅಸಹಾಯಕತೆ ಪ್ರದರ್ಶನ ಮಾಡಿದ್ದು ಯಾಕೆ, ಎನ್ನುವದು ಜನರ ಪ್ರಶ್ನೆ.


ಎಲ್ಲರೂ ಕಾನೂನು ಮುಂದೆ ಸಮಾನರು ಮತ್ತು ಕಾನೂನು ಎಲ್ಲರಿಗೂ ಒಂದೇ, ಎನ್ನುವ ದೊಡ್ಡ ದೊಡ್ಡ ಮಾತುಗಳನ್ನ ಹಲವಾರು ಸಭೆಗಳಲ್ಲಿ ಕೇಳಿದ ಸಾಮಾನ್ಯನಿಗೆ, ಇಂದು ಎಲ್ಲರೂ ಸಮಾನರು ಎಂದರೆ ಎನು ಎನ್ನುವ ಪ್ರಶ್ನೆ ಕಾಡುತ್ತದೆ.ಯಾಕೆಂದರೆ ದಿಗ್ಬಂಧನ ಮತ್ತು ಕರ್ಫ್ಯೂ ಅವಧಿಯಲ್ಲಿ ಸಾಮಾನ್ಯ ಜನರನ್ನು ಪೊಲೀಸರು ದನ ಬಡಿದಂತೆ ಬಡಿದು ಹಿಂಸೆ ಮಾಡಿದ್ದು ಮತ್ತು ವಾಹನ ಜಪ್ತಿ ಮಾಡಿದ್ದು ನೋಡಿದ ಮತ್ತು ಅನುಭವಿಸಿದ ಜನರಿಗೆ, ಇಂದು ಎಲ್ಲ ನಿಯಮ ಮೀರಿ ಪಾದಯಾತ್ರೆ ಮಾಡಿದ ರಾಜಕಾರಣಿಗಳ ಮೇಲೆ ಯಾವದೇ ಕಾನೂನು ಕ್ರಮ ಕೈಗೊಳ್ಳದೇ ಇರುವದು, ಪ್ರಶ್ನೆಯಾಗಿ ಕಾಡುತ್ತದೆ.


ಯಾವದೇ ಪಕ್ಷ ಇರಲಿ ಅವು ಒಮ್ಮೆ ಆಡಳಿತ ಪಕ್ಷ ಮತ್ತು ಇನ್ನೊಮ್ಮೆ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತವೆ. ಇಂದು ರಾಜ್ಯ ಸಾಂಕ್ರಾಮಿಕ ರೋಗದ ಆಪತ್ತು ಎದುರಿಸುತ್ತಿದೆ.ಇಂತಹ ಸಂದರ್ಭದಲ್ಲಿ ಶಾಸನ ಮುರಿದು ಪಾದಯಾತ್ರೆ ಮಾಡುವದು, ಕೇವಲ ರಾಜಕೀಯ ಕಾರಣಕ್ಕೆ ಅನ್ನುವದು ಎಲ್ಲರಿಗೂ ಗೊತ್ತು. ವಿರೋಧ ಪಕ್ಷ ಎಂದರೆ ಕಾನೂನು ಮುರಿದು ತನ್ನ ಶಕ್ತಿ ಪ್ರದರ್ಶನ ಮಾಡುವದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಇಂತಹ ಸಂದರ್ಭದಲ್ಲಿ ಕೂಡಾ ರಾಜಕೀಯ ಲಾಭ ಪಡೆಯಲು ವಿರೋಧ ಪಕ್ಷ ಹವಣಿಸುವದು ಇಂದಿನ ನಮ್ಮ ರಾಜಕೀಯದ ಮಟ್ಟದ ಸಾಕ್ಷಿ.


ಸರಕಾರ ಯಾಕೆ ಕಾನೂನು ಕ್ರಮ ಕೈಗೊಳ್ಳಲಿಲ್ಲ ಎನ್ನುವದಕ್ಕೆ, ರಾಜಕೀಯ ಕಾರಣಗಳ ಹೊರತಾಗಿ ಯಾವದೇ ಕಾರಣ ಇಲ್ಲ.ಎಲ್ಲರೂ ಕಾನೂನು ಮುಂದೆ ಸಮಾನರು ಎಂದು ಹೇಳಿದಾಗ, ಅಲ್ಲಿ ವಿರೋಧ ಪಕ್ಷದವರು ಕಾನೂನು ಮೇಲೆ ಇದ್ದಾರೆ ಅಂತ ಅಲ್ಲ.ಆದರೆ ಅವರ ಪಾದಯಾತ್ರೆ ತಡೆದು ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡರೆ, ಅದನ್ನು ಅವರು ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ ,ಅಂತ ಸರಕಾರ ಸುಮ್ಮನೆ ಕಾಟಾಚಾರಕ್ಕೆ ಪ್ರಥಮ ವರ್ತಮಾನ ದಾಖಲು ಮಾಡಿ, ಸಾಂಕೇತಿಕ ಕಾನೂನು ಕ್ರಮ ಕೈಗೊಳ್ಳಲಾಗಿದೆ ಅಂತ ಸಮರ್ಥಿಸಿಕೊಂಡಿದೆ.ಕೆಲವೊಂದು ಸಂದರ್ಭಗಳಲ್ಲಿ ಕೆಲವರನ್ನು ಬಂಧಿಸಿದರೆ ಸಾರ್ವಜನಿಕ ಶಾಂತಿಗೆ ಧಕ್ಕೆ ಬರುವ ಸಾಧ್ಯತೆ ಇದ್ದರೇ, ಅಂತಹ ಸಂದರ್ಭಗಳಲ್ಲಿ ಬಂಧನ ಮಾಡದೇ ಇರಲು ಸರಕಾರ ತೀರ್ಮಾನ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.


ಸಾಮಾನ್ಯರ ಮೇಲೆ ಎರಗಿ ಹಿಂಸೆ ಮಾಡುವ ಪೊಲೀಸರು, ಇಂದು ಸರಕಾರದ ಸೂಚನೆಯಂತೆ ಮೂಕ ಪ್ರೇಕ್ಷಕರಾಗಿದ್ದಾರೆ.ಇದು ಪೊಲೀಸರ ತಪ್ಪಲ್ಲ.ಸರಕಾರವೇ ಅಸಹಾಯಕತೆ ಪ್ರದರ್ಶನ ಮಾಡಿದರೆ ಪೊಲೀಸರು ಎನು ಮಾಡಲು ಸಾಧ್ಯ. ಯಾವದೇ ಆಡಳಿತ ಪಕ್ಷ ಇದ್ದರೂ ಇದೇ ರೀತಿ ಮಾಡುತ್ತಿತ್ತು ಅನ್ನುವದು ಗಮನಾರ್ಹ. ಇದು ರಾಜಕೀಯದ ಮರ್ಮ.ಇಂತಹ ರಾಜಕೀಯದ ಕಾರಣ ಕಾನೂನು ಆಡಳಿತ ಹಾಸ್ಯಾಸ್ಪದ ಆಗುತ್ತದೆ.


ಸಾಮಾನ್ಯವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವದು ಸರಕಾರದ (ಕಾರ್ಯಾಂಗ) ಕೆಲಸ, ಅದರಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುವದಿಲ್ಲ.ಆದರೆ ಎಲ್ಲಿ ಸರಕಾರ ವಿಫಲವಾಗುವದೋ ಅಲ್ಲಿ ನ್ಯಾಯಾಂಗದ ಪ್ರವೇಶ ಅಗತ್ಯವಾಗುತ್ತದೆ.ಸಾರ್ವಜನಿಕ ಹಿತಾಸಕ್ತಿ ದಾವೇಯ ಮೂಲಕ, ಇಂದು ನ್ಯಾಯಾಂಗ, ಕಾರ್ಯಾಂಗ ವಿಫಲವಾದ ಸಂದರ್ಭದಲ್ಲಿ ಸೂಕ್ತ ನಿರ್ದೇಶನ ನೀಡುತ್ತಾ ಬಂದಿದೆ.ಕೆಲವು ಇಂತಹ ಕಠಿಣ ಆದೇಶಗಳ ಕಾರಣ, ನ್ಯಾಯಾಂಗ ಕಾರ್ಯಾಂಗದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವುದು, ಅನ್ನುವ ಆರೋಪ ಕೂಡಾ ಎದುರಿಸಿದೆ.ಆದರೆ ಇಂದು ಸರಕಾರಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನೀಡಿದ ನೋಟೀಸು ವರದಾನವಾಗಿದೆ.


ನ್ಯಾಯಾಲಯದ ಸೂಚನೆಗೆ ಮೇರೆಗೆ, ಪಾದಯಾತ್ರೆ ನಿಲ್ಲಿಸಲು ಸರಕಾರ ಆದೇಶ ಮಾಡಿದೆ. ನ್ಯಾಯಾಲಯಕ್ಕೆ ಗೌರವ ನೀಡಿ ಮತ್ತು ಜನಹಿತ ಗಮನಿಸಿ ಪಾದಯಾತ್ರೆ ಸ್ಥಗಿತ ಮಾಡಿದೆ ಅಂತ ವಿರೋಧ ಪಕ್ಷ ಹೇಳಿಕೆ ನೀಡಿ, ಇಬ್ಬರೂ ನ್ಯಾಯಾಂಗದ ಪ್ರವೇಶದ ಲಾಭ ಪಡೆದುಕೊಂಡು , ಪಾದಯಾತ್ರೆ ಪ್ರಹಸನಕ್ಕೆ ತೆರೆ ಎಳೆದಿದ್ದಾರೆ.ಉಭಯ ಪಕ್ಷದವರು ಇಂದು ನ್ಯಾಯಾಂಗದ ಪ್ರವೇಶ ಲಾಭ ಪಡೆದು ತಮ್ಮ ಘನತೆ /ಗೌರವ ಉಳಿಸಿಕೊಂಡಿದ್ದಾರೆ ಅನ್ನುವದು ಗಮನಾರ್ಹ.


ಸಾರ್ವಜನಿಕ ಹಿತಾಸಕ್ತಿ ದಾವೆ ಜನಕ ನ್ಯಾಯಮೂರ್ತಿ ಶ್ರಿ ಪಿ.ಎನ್.ಭಗವತಿಯವರು ಇಂದು ಸ್ಮರಣೀಯ. ಸಾರ್ವಜನಿಕ ಹಿತಾಸಕ್ತಿ ದಾವೆಯಿಂದ ಆಡಳಿತದ ಹಲವಾರು ದೋಷಗಳನ್ನು ಸರಿಪಡಿಸಲಾಗಿದೆ.ಹಲವಾರು ಸಂದರ್ಭಗಳಲ್ಲಿ ನ್ಯಾಯಾಂಗ ಗಟ್ಟಿ ನಿಲುವು ತಾಳಿ, ಕಾನೂನು ಆಡಳಿತ ಅಪಹಾಸ್ಯಕ್ಕೆ ಗುರಿಯಾಗುವದನ್ನು ತಪ್ಪಿಸಿ, ಸ್ವತಂತ್ರ ನ್ಯಾಯಾಂಗ ಸುಭದ್ರ ರಾಷ್ಟ್ರದ ಹೆಗ್ಗುರುತು ಅಂತ ರುಜುವಾತು ಮಾಡಿದೆ, ದೇಶದ ನ್ಯಾಯಾಂಗ.ಇದು ನಮ್ಮ ಹೆಮ್ಮೆ.


(ವಿ.ಸೂ.: ಈ ಲೇಖನದಲ್ಲಿ ವ್ಯಕ್ತವಾದ ಎಲ್ಲ ಅಭಿಪ್ರಾಯಗಳು ಲೇಖಕರದ್ದು. ಇದರಲ್ಲಿ ಸುದ್ದಿ ಸಂಸ್ಥೆಯ ಯಾವುದೇ ಅಭಿಪ್ರಾಯ/ಹಿತಾಸಕ್ತಿ ಇರುವುದಿಲ್ಲ..)

Ads on article

Advertise in articles 1

advertising articles 2

Advertise under the article