-->
Guest Column- Article by Rtd Judge: ಕೊರೊನಾ ಲಾಕ್‌ಡೌನ್, ಮಾರ್ಗಸೂಚಿ: ಉಲ್ಲಂಘನೆ ಮತ್ತು ಕಾನೂನಿನ ಅಪಹಾಸ್ಯ?

Guest Column- Article by Rtd Judge: ಕೊರೊನಾ ಲಾಕ್‌ಡೌನ್, ಮಾರ್ಗಸೂಚಿ: ಉಲ್ಲಂಘನೆ ಮತ್ತು ಕಾನೂನಿನ ಅಪಹಾಸ್ಯ?

ಕೊರೊನಾ ಲಾಕ್‌ಡೌನ್, ಮಾರ್ಗಸೂಚಿ: ಉಲ್ಲಂಘನೆ ಮತ್ತು ಕಾನೂನಿನ ಅಪಹಾಸ್ಯ?





ಭಾರತದಲ್ಲಿ ಕೋವಿಡ್ ಮಹಾಮಾರಿ 2020ರ ಮಾರ್ಚ್ ಮೊದಲ ವಾರದಲ್ಲಿ ತನ್ನ ಕಬಂಧಬಾಹು ಚಾಚಲು ಶುರು ಮಾಡಿತು. ಆಗ ಸರಕಾರ ಹಲವು ಕೋವಿಡ್ ಮಾರ್ಗಸೂಚಿಗಳನ್ನು ನೀಡಿತು. ನಂತರ ವಿಪತ್ತು ನಿರ್ವಹಣಾ ಕಾಯಿದೆ ಪ್ರಕಾರ ಆದೇಶ ಹೊರಡಿಸಿ, ಜನಸಂದಣಿ ಸೇರುವ ಎಲ್ಲ ಕಾರ್ಯಕ್ರಮ ನಿಷೇಧಿಸಿ, ನಿರ್ದಿಷ್ಟವಾಗಿ ಸೇರಬಹುದಾದ ಜನಸಂಖ್ಯೆ ನಿಗದಿಪಡಿಸಿ ಮಾರ್ಗಸೂಚಿ ಹೊರಡಿಸಿತು.




ಯಾವುದೇ ಕಾರ್ಯಕ್ರಮ ಮಾಡಿದರೂ ಅಲ್ಲಿ ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಕಾಪಾಡಿಕೊಂಡು ನಿಗದಿತ ಸಂಖ್ಯೆ ಜನ ಮಾತ್ರ ಸೇರಲು ಅವಕಾಶ ನೀಡಲಾಗಿತ್ತು. ಇದು ಸರಕಾರಿ ಮತ್ತು ಖಾಸಗಿ ಎಲ್ಲ ಕಾರ್ಯಕ್ರಮಗಳಿಗೆ ಅನ್ವಯ.



ಆಗ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಬಂದ ಅಂದಿನ ಮುಖ್ಯ ಮಂತ್ರಿ, ತಮ್ಮ ಸರಕಾರ ಅಂದರೆ ತಾವೇ ಹೊರಡಿಸಿದ ಆದೇಶ ಉಲ್ಲಂಘನೆ ಮಾಡಿದರು ಎಂದು ಮಾಧ್ಯಮದಲ್ಲಿ ವರದಿ ಬಂತು. ಇನ್ನು ಅಲ್ಲಿ ಯಾವ ಕಾನೂನು ಕ್ರಮದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಕೋವಿಡ್ ಪ್ರಾರಂಭದ ಮೊದಲ ಹಂತದಲ್ಲಿ ಹೊರಡಿಸಿದ ಆದೇಶ ಉಲ್ಲಂಘನೆ ಪ್ರಕರಣ.



2020 ಮಾರ್ಚ್‌ 24ರಿಂದ ದೇಶದಲ್ಲಿ ದಿಗ್ಬಂಧನ ವಿಧಿಸಲಾಯಿತು. ಆಗ ಯಾವ ನಾಗರಿಕನೂ ಮನೆ ಹೊರಗೆ ಬರುವಂತಿರಲಿಲ್ಲ. ಹೊರಗೆ ಬಂದವರ ಮೇಲೆ ಪೊಲೀಸರು ಲಾಠಿಪ್ರಹಾರ ಮಾಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಂಡರು. ಆಗ ಕೂಡಾ ಕೆಲವರು ಬಲಾಢ್ಯರು ಏನೇನೋ ಮಾಡಿ ತಪ್ಪಿಸಿಕೊಂಡು ಹೋದರು.




ಕಾನೂನು ಮುರಿಯುವ ಸಾಮಾನ್ಯರ ಮೇಲೆ ಮಾತ್ರ ಕ್ರಮ ಆಯಿತು. ಆದರೆ ಪ್ರಭಾವಿಗಳು ಬಚಾವ್ ಆದರು. ಎಲ್ಲರೂ ಕಾನೂನಿನ ಮುಂದೆ ಸಮಾನರು ಎಂಬ ಮಾತು ಟೊಳ್ಳು ಎಂದು ಇದರಿಂದ ಜನ ಭಾವಿಸುವುದು ತಪ್ಪಲಿಲ್ಲ. ಕಾನೂನು ಮುರಿಯುವುದು ತಪ್ಪು ಮತ್ತು ಕಾನೂನು ಬಿಗಿಯಾಗಿ ಜಾರಿ ಮಾಡಿದೇ ಇರುವುದೂ ತಪ್ಪು.




2021ರಲ್ಲಿ ಕೋವಿಡ್ ಎರಡನೇ ಅಲೆ ಭೀಕರ ರೂಪ ತಾಳಿದಾಗ ಸ್ವಲ್ಪ ಅವಧಿ ದಿಗ್ಬಂಧನ ವಿಧಸಲಾಯಿತು. ಆಗ ಪೊಲೀಸರು ಯಾವ ಮಟ್ಟದಲ್ಲಿ ಅಮಾನುಷವಾಗಿ ವರ್ತಿಸಿದರು ಎಂದರೆ ಮಾನ್ಯ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶ ಮಾಡಿ ನಿರ್ದೇಶನ ನೀಡಬೇಕಾಯಿತು.



ಜನ ಕಾನೂನು ಉಲ್ಲಂಘಿಸಿದ್ದು ತಪ್ಪು. ಆದರೆ, ಪೊಲೀಸರು ಅಮಾನುಷವಾಗಿ ವರ್ತಿಸಿದ್ದು ಅಷ್ಟೇ ತಪ್ಪು. ನಾವೇ ಮಾಡಿದ ಕಾನೂನನ್ನು ಬೇಕಾಬಿಟ್ಟಿ ಉಲ್ಲಂಘನೆ ಮಾಡಿ ಕಾನೂನು ಆಡಳಿತವನ್ನು ಒಂದು ಬೆದರು ಬೊಂಬೆ ಮಾಡಿದ್ದೇವೆ.



ಈಗಿನ ಸಾಂಕ್ರಾಮಿಕ ಸಂದರ್ಭದಲ್ಲಿ ರೋಗ ನಿಯಂತ್ರಣ ಮಾಡಲು ಮಾಸ್ಕ್, ಸಾಮಾಜಿಕ ಅಂತರ, ಕೈ ವಾಶ್ ಮಾಡುವುದು ಮತ್ತು ಕರ್ಫ್ಯೂ ವಗೈರೆ ನಿರ್ಬಂಧ ವಿಧಿಸಿದ್ದು ಜನಹಿತಕ್ಕಾಗಿ. ಈ ಬಾರಿ ನಿಯಮಗಳನ್ನು ಜಾರಿ ಮಾಡುವ ಅಧಿಕಾರಿಗಳು ಸಾಮಾನ್ಯರ ಮೇಲೆ ಅತ್ಯಂತ ಕಟ್ಟು ನಿಟ್ಟಾಗಿ ಜಾರಿ ಮಾಡುತ್ತಾರೆ. ಆದರೆ ಅದೇ ಪ್ರಭಾವಿ ವ್ಯಕ್ತಿಗಳ ಮೇಲೆ ಏನೂ ಕ್ರಮ ಕೈಗೊಳ್ಳದೇ ಸುಮ್ಮನೆ ಇರುತ್ತಾರೆ.



ಒಬ್ಬ ಮಂತ್ರಿ ಹೇಳುತ್ತಾರೆ ಮಾಸ್ಕ್ ಹಾಕಿಕೊಳ್ಳುವುದು ನನ್ನ ಇಷ್ಟ, ಒಬ್ಬ ಶಾಸಕ ಹೇಳುತ್ತಾರೆ ನಾನು ಕಾನೂನು ಮುರಿದಿದ್ದೇನೆ ಕೇಸು ಹಾಕಿ. ವಿರೋಧ ಪಕ್ಷದ ನಾಯಕರು ಸರಕಾರ ಏನೇ ಮಾಡಿದರೂ ನಾವು ಕಾನೂನು ಮುರಿದು ಪಾದ ಯಾತ್ರೆ ಮಾಡುತ್ತೇವೆ. ಇದರಿಂದ ಪ್ರೇರಿತ ಜನ ನಾವು ಜಾತ್ರೆ ಮಾಡುತ್ತೇವೆ, ಉತ್ಸವ ಮಾಡುತ್ತೇವೆ ಏನಾದರೂ ಮಾಡಿ. ಇವೆಲ್ಲ ಶಾಸಕರನ್ನು ಆರಿಸುವ ಜನ, ಜನರಿಂದ ಆಯ್ಕೆಯಾದ ಶಾಸಕರು, ಚುನಾಯಿತ ಸರಕಾರದ ಸಚಿವರು ಮತ್ತು ಸರಕಾರಿ ಅಧಿಕಾರಿಗಳು ಎಲ್ಲರೂ ಕಾನೂನು ಮುರಿಯುತ್ತ ಹೋದರೆ ನ್ಯಾಯಾಡಳಿತ ಎಂದರೆ ಏನು ಎನ್ನುವ ಪ್ರಶ್ನೆ ಉಂಟಾಗುತ್ತದೆ.




ಸರಕಾರ ಕೋವಿಡ್ ಸಾಂಕ್ರಾಮಿಕತೆ ತಡೆಗಟ್ಟಲು ಸಾಮೂಹಿಕ ರಕ್ಷಣಾ ಕ್ರಮ ಕೈಗೊಂಡಿದೆ. ಇನ್ನು ಜನರು ಬರೀ ಸರಕಾರ ದೂಷಿಸದೆ ವಯಕ್ತಿಕವಾಗಿ ತಮ್ಮ ರಕ್ಷಣೆಗಾಗಿ ಎಲ್ಲ ಎಚ್ಚರಿಕೆ ಕ್ರಮ ಕೈಕೊಳ್ಳುವದು ಅವರ ಕರ್ತವ್ಯ.



ಮೂರನೇ ಅಲೆಯಲ್ಲಿ ಹರಡುವಿಕೆ ವೇಗ ಹೆಚ್ಚಿದೆ, ತೀವ್ರತೆ ಕಡಿಮೆ ಇದೆ ಎನ್ನುವುದು ಸಮಾಧಾನಕರ ಸಂಗತಿ. ವಾರಾಂತ್ಯ ಕರ್ಫ್ಯೂ ನಿಷ್ಪ್ರಯೋಜಕ. ಆದರೂ ಸಾಂಕ್ರಾಮಿಕತೆ ಕಡಿಮೆ ಇದ್ದಾಗ ವಿಧಿಸಿ, ಈಗ ಸಾಂಕ್ರಾಮಿಕತೆ ಹೆಚ್ಚಿದಾಗ ವಾರಾಂತ್ಯದ ಕರ್ಫ್ಯೂ ರದ್ದು ಮಾಡಿದ್ದು ಸರಕಾರದ ವಿವೇಚನೆ ಬಗ್ಗೆ ಪ್ರಶ್ನೆ ಹುಟ್ಟುಹಾಕುತ್ತದೆ.



ತಜ್ಞರ ಸಮಿತಿ ವರದಿಯಂತೆ ಈ ಕ್ರಮ ಎಂದು ಸರಕಾರ ಸಮರ್ಥನೆ ಮಾಡಿಕೊಂಡಿದೆ.ಹರಡುವಿಕೆ ವೇಗ ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಲು ಸಲಹೆ ಮಾಡಿದ ಸಮಿತಿ, ಈಗ ಹರಡುವಿಕೆ ಹೆಚ್ಚಾದಾಗ ಕರ್ಫ್ಯೂ ರದ್ದು ಮಾಡಲು ಸಲಹೆ ಮಾಡಿದ್ದು, ಸಮಿತಿಯ ಸಕ್ಷಮತೆ ಬಗ್ಗೆ ಸಂದೇಹ ಬರುವಂತೆ ಮಾಡುತ್ತದೆ.




ಇದು ಕೇವಲ ಸಾಂಕ್ರಾಮಿಕ ತಡೆಗಟ್ಟುವ ಕಾಯಿದೆ ಉಲ್ಲಂಘನೆ ಮಾತ್ರ.ಇದರಿಂದ ಸಾಂಕ್ರಾಮಿಕ ಕಳೆದ ವರ್ಷ ಮಾಡಿದ ಅನಾಹುತ ನಾವೆಲ್ಲ ಅನುಭವಿದುದ್ದೇವೆ. ಇನ್ನು ದಿನನಿತ್ಯ ನಡೆಯುವ ಇತರೇ ಕಾನೂನು ಉಲ್ಲಂಘನೆಯನ್ನು ಗಮನಹರಿಸಿದರೆ ಇಂದಿನ ಭ್ರಷ್ಟ ಮತ್ತು ದುರಾಡಳಿತಕ್ಕೆ ಎನು ಕಾರಣ ಎಂದು ನಾವು ತಿಳಿದುಕೊಳ್ಳಬಹುದು.



ಸಿಂಗಾಪುರಕ್ಕೆ ಹೋಗಿ ಬಂದವರು ಅಲ್ಲಿಯ ಕಾನೂನು ಜಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಲ್ಲಿ ಕಾನೂನು ಉಲ್ಲಂಘನೆಗೆ ಶಿಕ್ಷೆ ಖಚಿತ.ಹೀಗಾಗಿ ಯಾರೂ ಕಾನೂನು ಮುರಿಯುವ ಸಾಹಸ ಮಾಡುವದಿಲ್ಲ. ಇದಕ್ಕೆ ಕಾರಣ ಕಾನೂನು ಜಾರಿ ಮಾಡುವ ನೌಕರಶಾಹಿ ವ್ಯವಸ್ಥೆಯಲ್ಲಿ ಯಾರೂ ಹಸ್ತಕ್ಷೇಪ ಮಾಡುವದಿಲ್ಲ.



ಆದರೆ ನಮ್ಮಲ್ಲಿ ಕಾನೂನು ಮುರಿದು, ತಾನು ಬಹಳ ದೊಡ್ಡವನೆಂದು ಬಿಂಬಿಸಿಕೊಳ್ಳುವ ಜನರೇ ಆಡಳಿತದ ಚುಕ್ಕಾಣಿ ಹಿಡಿಯುವ ಕಾರಣ, ಕಾನೂನು ಮುಂದೆ ಎಲ್ಲರೂ ಒಂದೇ ಎಂದು ಘೋಷಿಸುತ್ತ,ಪ್ರಬಲರ ಮುಂದೆ ದುರ್ಬಲವಾಗಿ, ದುರ್ಬಲನ ಮೇಲೆ ಮಾತ್ರ ಬಿಗಿಯಾಗಿ ಚಲಾಯಿಸುವ ಕಾನೂನು ವ್ಯವಸ್ಥೆ ಎಲ್ಲರೂ ಕಾನೂನು ಮುಂದೆ ಸಮಾನರು ಎನ್ನುವ ಘೋಷಣೆ ಅರ್ಥಹೀನ ಅಂತ ಸ್ಪಷ್ಟ.



ಪ್ರಜಾಪ್ರಭುತ್ವ ಎಂದರೆ ಜನರಿಂದ ಜನರಿಗಾಗಿ ಇರುವ ಜನರ ಸರಕಾರ. ಇಲ್ಲಿ ಜನರಿಂದ ಆಯ್ಕೆಯಾದ ಶಾಸಕರು ಕಾನೂನು ಪ್ರಕಾರ ಆಡಳಿತ ನಡೆಸುವುದು. ಶಾಸನ ಮಾಡುವ ಶಾಸಕರು, ಜಾರಿ ಮಾಡುವ ಅಧಿಕಾರಿಗಳು ಮತ್ತು ಪ್ರಜಾಪ್ರಭುತ್ವ ಜೀವಾಳ ಮತದಾರರು ಎಲ್ಲರೂ ಕಾನೂನಿಗೆ ಗೌರವ ಕೊಡದೇ ಹೋದರೆ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ. ಅರಾಜಕತೆ ತಾಂಡವ ನೃತ್ಯ ಆಡುತ್ತದೆ. ಈಗಾಗಲೇ ಅಯೋಮಯ ಸ್ಥಿತಿ ಉಂಟಾಗಿದೆ. ಇನ್ನೂ ಹದಗೆಡುವ ಮೊದಲು ತಿದ್ದಿಕೊಳ್ಳುವುದು ಕ್ಷೇಮ.



ಎಸ್. ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ.


Ads on article

Advertise in articles 1

advertising articles 2

Advertise under the article