-->
Advocate sent to Jail in a fraud case- ಕಕ್ಷಿದಾರರಿಗೆ ವಿಮಾ ಪರಿಹಾರ ವಂಚನೆ: ವಕೀಲನಿಗೆ ಜೀವಾವಧಿ ಶಿಕ್ಷೆ

Advocate sent to Jail in a fraud case- ಕಕ್ಷಿದಾರರಿಗೆ ವಿಮಾ ಪರಿಹಾರ ವಂಚನೆ: ವಕೀಲನಿಗೆ ಜೀವಾವಧಿ ಶಿಕ್ಷೆ

ಕಕ್ಷಿದಾರರಿಗೆ ವಿಮಾ ಪರಿಹಾರ ವಂಚನೆ: ವಕೀಲನಿಗೆ ಜೀವಾವಧಿ ಶಿಕ್ಷೆ



ಫೇಕ್ ವ್ಯಕ್ತಿಗಳು ಹಾಗೂ ನಕಲಿ ದಾಖಲೆ ಸೃಷ್ಟಿಸಿ ಮಾನ್ಯ ನ್ಯಾಯಾಲಯ ಮತ್ತು ಕಕ್ಷಿದಾರರನ್ನು ವಂಚಿಸಿದ ಉಡುಪಿಯ ವಕೀಲನಿಗೆ ಜೈಲು ಶಿಕ್ಷೆ ಪ್ರಾಪ್ತಿಯಾಗಿದೆ.



ಉಡುಪಿಯ ವಕೀಲ ಅಲೆವೂರು ಪ್ರೇಮರಾಜ ಕಿಣಿ ಈ ಕುಕೃತ್ಯ ನಡೆಸಿದ ಮಹಾನ್ ವಂಚಕ ವಕೀಲ. ಈತ ಬಡ ದಲಿತ ಕುಟುಂಬವೊಂದಕ್ಕೆ ಸಿಗಬೇಕಾಗಿದ್ದ 2.5 ಲಕ್ಷ ರೂ.ಗಳಿಗೂ ಅಧಿಕ ಅಪಘಾತ ವಿಮಾ ಪರಿಹಾರವನ್ನು ಕಬಳಿಸಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.



ಈ ವಂಚನೆ ಪ್ರಕರಣದ 2ನೇ ಆರೋಪಿ ವಿನಯಕುಮಾರ್ ಎಂಬಾತನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.






ಆರೋಪಿಗಳು 3ನೇ ಆರೋಪಿ ಹರಿಶ್ಚಂದ್ರ ಆಚಾರ್ಯ(ಈಗ ಮೃತರು) ಅವರೊಂದಿಗೆ ಸೇರಿ ಬೆಳ್ತಂಗಡಿ ತಾಲೂಕಿನ ನಾರಾವಿಯ ಬಡ ದಲಿತ ಕೂಲಿ ಕಾರ್ಮಿಕ ಸಾಧು ಮತ್ತು ಕುಟುಂಬಕ್ಕೆ ವಂಚಿಸಿ ಸುಮಾರು 2.5 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಅಪಘಾತ ವಿಮಾ ಪರಿಹಾರವನ್ನು ಕಬಳಿಸಿದ್ದರು.



ವಂಚನೆಗೊಳಗಾದ ಕುಟುಂಬದ ಪರವಾಗಿ ಉಡುಪಿಯ ದಸಂಸ ಜಯನ್ ಮಲ್ಪೆ ನೇತೃತ್ವದಲ್ಲಿ ಹೋರಾಟ ನಡೆದು, ಬಳಿಕ ಉಡುಪಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.


ಪ್ರಕರಣದ ವಿವರ


ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕು ನಾರಾವಿ ನಿವಾಸಿ ಚಂಬು ಅವರ ಪತ್ನಿ ಕುಂದಾದು 2002ರ ಮೇ 13ರಂದು ಕೊಲ್ಲೂರಿಗೆ ತೆರಳುತಿದ್ದಾಗ ಕಾರ್ಕಳ ಸಾಲ್ಮರದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ, ಅಪಘಾತ ವಿಮಾ ಪರಿಹಾರ ಕೋರಿ ಮೃತರ ಕುಟುಂಬ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.


ಉಡುಪಿ ಜಿಲ್ಲಾ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ 2003ರ ಆಗಸ್ಟ್‌ನಲ್ಲಿ 1,22,400ರೂ. ಪರಿಹಾರ ಹಾಗೂ ಬಡ್ಡಿ ಸೇರಿ ರೂ. 1,33,246 ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು. ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ಹೈಕೋರ್ಟ್‌ನಲ್ಲಿ ಸಂತ್ರಸ್ತರು ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್ ಪರಿಹಾರ ನೀಡುವಂತೆ ಆದೇಶ ನೀಡಿತ್ತು.



ಮಾನ್ಯ ಹೈಕೋರ್ಟ್ ಆದೇಶದಂತೆ ವಿಮಾ ಕಂಪೆನಿ 1,85,600 ರೂ. ಬಡ್ಡಿ ಸೇರಿ ಒಟ್ಟು 2,57,549 ರೂ.ಮೊತ್ತದ ಹಣವನ್ನು ನ್ಯಾಯಾಲಯದಲ್ಲಿ ಡೆಪಾಸಿಟ್ ಮಾಡಿತ್ತು. ಆದರೆ ಈ ಹಂತದಲ್ಲಿ ಆರೋಪಿ ವಕೀಲರು ವಂಚನೆ ಮಾಡಿದ್ದಾರೆ.





ನ್ಯಾಯಾಲಯ, ಬ್ಯಾಂಕ್ ಅಧಿಕಾರಿಗಳು ಹಾಗೂ ಫಿರ್ಯಾದುದಾರನ್ನು ವಂಚಿಸಿ ಸಂತ್ರಸ್ತ ಕುಟುಂಬಕ್ಕೆ ಸಿಗಬೇಕಿದ್ದ ಪರಿಹಾರ ಮೊತ್ತವನ್ನು ನಕಲಿ ದಾಖಲೆ ಹಾಗೂ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಪೂರ್ತಿ ಹಣವನ್ನು ಪಡೆದುಕೊಂಡಿದ್ದರು.



ನಕಲಿ ಅಧಿಕಾರ ಪತ್ರವನ್ನು ತಯಾರಿಸಿ ಆರೋಪಿಗಳು ಮೂಲ ಅರ್ಜಿದಾರರು, ಪಿರ್ಯಾದಿ, ನ್ಯಾಯಾಲಯ ಹಾಗೂ ಬ್ಯಾಂಕಿಗೆ ಮೋಸ, ವಂಚನೆ ಮಾಡಿದ್ದರು. ಇದು IPC ಕಲಂ 467ರಡಿ ಜೀವಾವಧಿ ಅಥವಾ 10 ವರ್ಷಗಳ ಶಿಕ್ಷೆಗೆ ಗುರಿಪಡಿಸುವ ಅಪರಾಧವಾಗಿದೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿಯೂ ಶಿಕ್ಷಾರ್ಹ ಅಪರಾಧವಾಗಿದೆ.



ಈ ಘಟನೆಗೆ ಸಂಬಂಧಿಸಿ ನೀಡಿದ ದೂರಿನ ಪ್ರಕಾರ 2011ರಲ್ಲಿ FIR ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.



ಈ ಪ್ರಕರಣದ ಬಗ್ಗೆ ನ್ಯಾಯಾಲಯ ವಿಚಾರಣೆಯನ್ನು ನಡೆಸಿತ್ತು. ಅಭಿಯೋಜನೆ ಪರ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ವಾದಿಸಿದ್ದರು.



ಪ್ರಕರಣದ ವಿಚಾರಣೆ ನಡೆಸಿ ವಾದ, ಪ್ರತಿವಾದ ಆಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎನ್. ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ ಗುರುವಾರ ತೀರ್ಪು ನೀಡಿದರು.



ಇದೀಗ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಾಧೀಶರು ಮೊದಲ ಆರೋಪಿ ಪ್ರೇಮರಾಜ ಕಿಣಿ ಅವರಿಗೆ ಜೀವಾವಧಿ ಶಿಕ್ಷೆ, ಎರಡನೇ ಆರೋಪಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿದರು. ಮೂರನೇ ಆರೋಪಿ ಈಗಾಗಲೇ ಮೃತಪಟ್ಟಿದ್ದಾರೆ. ಉಡುಪಿ ನ್ಯಾಯಾಲಯದಲ್ಲಿ ವಕೀಲರಾಗಿ ವೃತ್ತಿ ನಡೆಸುತಿದ್ದ ಅಲೆವೂರು ಪ್ರೇಮರಾಜ್ ಕಿಣಿಯನ್ನು ಪೊಲೀಸರು ಬಂಧಿಸಿದ್ದಾರೆ.





ತೀರ್ಪಿನ ಬಗ್ಗೆ ದಲಿತ ನಾಯಕರೂ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಪ್ರಾಮಾಣಿಕ ಹೋರಾಟಕ್ಕೆ ಸಂದ ಜಯ. ಈ ಪ್ರಕರಣದಲ್ಲಿ ಸಾಕಷ್ಟು ಆಮಿಷ ಮತ್ತು ಜೀವ ಬೆದರಿಕೆಗಳನ್ನು ಒಡ್ಡಲಾಗಿತ್ತು. ಆದರೂ ಅದನ್ನು ಲೆಕ್ಕಿಸದೇ ಕಾನೂನಾತ್ಮಕ ಹೋರಾಟ ನಡೆಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ನೀಡುವಲ್ಲಿ ಸರಕಾರ ವಿಶೇಷ ಸರಕಾರಿ ಅಭಿಯೋಜಕರಾದ ಶಿವಪ್ರಸಾದ್ ಆಳ್ವ ಶ್ರಮಿಸಿದ್ದಾರೆ. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಸಹಕರಿಸಿದ ಉಡುಪಿ ವಕೀಲರಿಗೆ, ಪೊಲೀಸರಿಗೆ ಕೃತಜ್ಞತೆಗಳು ಎಂದು ಜಯನ್ ಮಲ್ಪೆ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article