-->
Old Pension Scheme Reinstated in Rajasthan - ರಾಜಸ್ಥಾನ ಸರಕಾರದ ಐತಿಹಾಸಿಕ ನಿರ್ಣಯ: ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಮರುಸ್ಥಾಪನೆ

Old Pension Scheme Reinstated in Rajasthan - ರಾಜಸ್ಥಾನ ಸರಕಾರದ ಐತಿಹಾಸಿಕ ನಿರ್ಣಯ: ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಮರುಸ್ಥಾಪನೆ

ರಾಜಸ್ಥಾನ ಸರಕಾರದ ಐತಿಹಾಸಿಕ ನಿರ್ಣಯ: ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಮರುಸ್ಥಾಪನೆ





1.1.2004ರ ನಂತರ ರಾಜಸ್ತಾನ ರಾಜ್ಯದಲ್ಲಿ ಸರಕಾರಿ ಸೇವೆಗೆ ಸೇರಿದ ನೌಕರರಿಗೆ ಅನ್ವಯವಾಗುತ್ತಿದ್ದ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬಜೆಟ್ ಅಧಿವೇಶನದಲ್ಲಿ ಇ೦ದು ದಿನಾ೦ಕ 23.2.2022 ರ೦ದು ಘೋಷಿಸಿದ್ದಾರೆ.


2022-23 ನೇ ಸಾಲಿನ ಬಜೆಟನ್ನು ವಿಧಾನ ಸಭೆಯಲ್ಲಿ ಮ೦ಡಿಸಿದ ಮುಖ್ಯಮಂತ್ರಿಯವರು ಸರಕಾರಿ ನೌಕರರ ವೇತನ ಕಟಾವು ಮಾಡುವ 2017 ರ ನಿರ್ಣಯವನ್ನು ಸರಕಾರ ಹಿ೦ತೆಗೆದುಕೊಂಡಿದೆ ಎಂದು ಘೋಷಿಸಿದ ಸಂದರ್ಭದಲ್ಲಿ ವಿಧಾನಸಭೆಯ ಸದಸ್ಯರು ಕೈ ಚಪ್ಪಾಳೆಯೊಂದಿಗೆ ಮೇಜು ಗುದ್ದಿ ಹರ್ಷ ವ್ಯಕ್ತಪಡಿಸಿದರು.


ಈ ನಿರ್ಣಯದಿಂದ ಸರಕಾರಕ್ಕೆ 1000 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ. ಎಸಿಪಿ (ಕೆರಿಯರ್ ಪ್ರೊಗ್ರೆಶನ್ ಸ್ಕೀಮ್) ಯೋಜನೆಯನ್ನು ಮರು ಜಾರಿಗೊಳಿಸಲಾಗಿದೆ ಎ೦ದು ಮುಖ್ಯಮಂತ್ರಿಯವರು ಘೋಷಿಸಿದ್ದಾರೆ.


ಕೇಂದ್ರ ಸರ್ಕಾರವು ರಕ್ಷಣಾ ಇಲಾಖೆಯ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲಾ ಇಲಾಖೆಯ ನೌಕರರಿಗೆ 1.1.2004 ರಿಂದ ಅನ್ವಯವಾಗುವಂತೆ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತ್ತು. ಹಳೆಯ ನಿಶ್ಚಿತ ಪಿಂಚಣಿ ಯೋಜನೆಯಲ್ಲಿ ನೌಕರರ ವೇತನದಿಂದ ಪಿಂಚಣಿ ಉದ್ದೇಶಕ್ಕಾಗಿ ಯಾವುದೇ ಮೊತ್ತ ಕಟಾವಣೆ ಆಗುತ್ತಿರಲಿಲ್ಲ. ಆದರೆ ನೂತನ ಪಿಂಚಣಿ ಯೋಜನೆಯಲ್ಲಿ ನೌಕರರ ವೇತನದಿಂದ ನಿರ್ದಿಷ್ಟ ಮೊತ್ತವನ್ನು ಪಿಂಚಣಿಗಾಗಿ ಕಟಾವಣೆ ಮಾಡಲಾಗುತ್ತದೆ.


ರಾಜ್ಯಗಳ ಪೈಕಿ ದೇಶದಲ್ಲೇ ಪ್ರಪ್ರಥಮ ವಾಗಿ ತಮಿಳುನಾಡು ಸರಕಾರವು 2003 ರಲ್ಲಿಯೇ ನೂತನ ಪಿಂಚಣಿ ಪದ್ಧತಿಯನ್ನು ತನ್ನ ನೌಕರರಿಗೆ ಜಾರಿಗೊಳಿಸಿತು. ಇದನ್ನು ವಿರೋಧಿಸಿದ ತಮಿಳುನಾಡು ರಾಜ್ಯ ಸರಕಾರಿ ನೌಕರರು ನಡೆಸಿದ ಮುಷ್ಕರಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ಸರಕಾರಿ ಆಡಳಿತ ಯಂತ್ರ ಸ್ತಬ್ಧವಾದಾಗ ಆಗಿನ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ನೌಕರರ ವಿರುದ್ಧ ಎಸ್ಮಾ ಪ್ರಯೋಗಿಸಿ ಲಕ್ಷಾಂತರ ನೌಕರರನ್ನು ಸೇವೆಯಿಂದ ವಜಾ ಮಾಡಿದರು.


ಸದರಿ ಪ್ರಕರಣವು ಸುಪ್ರೀಂ ಕೋರ್ಟಿನ ಮೆಟ್ಟಲೇರಿತು. ನೌಕರರನ್ನು ವಜಾಗೊಳಿಸಿದ ಆದೇಶ ನಿಯಾಮಾನುಸಾರ ಸರಿಯಾಗಿದೆ. ನೌಕರರಿಗೆ ಮುಷ್ಕರ ಹೂಡುವ ಹಕ್ಕಿಲ್ಲ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿತು. ಅಂತಿಮವಾಗಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಘದ ಮಧ್ಯಪ್ರವೇಶದಿಂದ ಪ್ರಕರಣವು ಸುಖಾಂತ್ಯಗೊಂಡಿತು.


ಪ್ರಸ್ತುತ ನಮ್ಮ ದೇಶದಲ್ಲಿ ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ ಎಲ್ಲಾ ರಾಜ್ಯ ಸರಕಾರಗಳು ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿವೆ.


ಕರ್ನಾಟಕ ರಾಜ್ಯದಲ್ಲಿ 1.4.2006 ರ ನಂತರ ಸೇವೆಗೆ ಸೇರಿದ ನೌಕರರಿಗೆ ನೂತನ ಪಿಂಚಣಿ ಯೋಜನೆ ಅನ್ವಯವಾಗುತ್ತದೆ. ನೂತನ ಪಿಂಚಣಿ ಯೋಜನೆಯನ್ನು ವಿರೋಧಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ನೌಕರರು ಹಲವಾರು ಹೋರಾಟಗಳನ್ನು ಹಮ್ಮಿಕೊಂಡಿದ್ದು ಇದೀಗ ರಾಜಸ್ಥಾನ ಸರಕಾರವು ತೆಗೆದುಕೊಂಡ ಐತಿಹಾಸಿಕ ನಿರ್ಧಾರದಿಂದಾಗಿ ಕರ್ನಾಟಕ ರಾಜ್ಯದಲ್ಲಿ ನೂತನ ಪಿ೦ಚಣಿ ಯೋಜನೆ ರದ್ದತಿಗಾಗಿ ಹೋರಾಡುತ್ತಿರುವ ನೌಕರರ ಸಂಘಟನೆಗಳಿಗೆ 'ಭೀಮ ಬಲ' ಬಂದಂತಾಗಿದೆ.





ಮಾಹಿತಿ/ಲೇಖನ: ಪ್ರಕಾಶ್ ನಾಯಕ್; ಶಿರಸ್ತೆದಾರರು; ಜುಡಿಷಿಯಲ್ ಸರ್ವಿಸ್ ಸೆಂಟರ್ ಮಂಗಳೂರು

Ads on article

Advertise in articles 1

advertising articles 2

Advertise under the article