ಮಹಿಳೆಗೆ ಮದುವೆಯಿಂದ ಜಾತಿ ಬದಲಾಗುವುದಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಮಹಿಳೆಗೆ ಮದುವೆಯಿಂದ ಜಾತಿ ಬದಲಾಗುವುದಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಮದುವೆಯ ಕಾರಣಕ್ಕೆ ಮಹಿಳೆಯ ಜಾತಿ ಬದಲಾಗುವುದಿಲ್ಲ. ಅನ್ಯ ಜಾತಿಯ ವರನನ್ನು ಮದುವೆಯಾದ ಕಾರಣಕ್ಕೆ ಪತಿಯ ಜಾತಿ ಮಹಿಳೆಗೆ ಬದಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ವಿವಾಹದ ನಂತರ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ. ತಂದೆಯ ಜಾತಿಯ ಆಧಾರದ ಮೇಲೆ ಮಕ್ಕಳ ಜಾತಿ ನಿರ್ಧಾರವಾಗುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಪ್ರಕರಣ: ಶ್ರೀಮತಿ ಅರ್ಚನಾ ಎಂ.ಜಿ. Vs. ಶ್ರೀಮತಿ ಅಭಿಲಾಷಾ
ಕರ್ನಾಟಕ ಹೈಕೋರ್ಟ್ (15-03-2022) ನ್ಯಾ. ಕೃಷ್ಣ ಧೀಕ್ಷಿತ್
ಶಿವಮೊಗ್ಗದ ಬಾಳೆಕೊಪ್ಪ ನಿವಾಸಿ ಎಂ.ಜಿ. ಅರ್ಚನಾ ಎಂಬವರು ತನ್ನ ಪತಿಯ ಜಾತಿಯನ್ನು ಆಧರಿಸಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದರು. ಇದನ್ನು ಅಭಿಲಾಷಾ ಅವರು ಶಿವಮೊಗ್ಗ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ವಿಚಾರಣಾ ನ್ಯಾಯಾಲಯ ಅರ್ಚನಾ ಅವರ ಆಯ್ಕೆಯನ್ನು ಅಸಿಂಧುಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅರ್ಚನಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಘಟನೆಯ ವಿವರ
ಅರ್ಚನಾ ಅವರು ಹುಟ್ಟಿನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯೊಬ್ಬರನ್ನು ಅವರು ಮದುವೆಯಾಗಿದ್ದರು. ಆ ಬಳಿಕ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದ್ದ ಕ್ಷೇತ್ರದಲ್ಲಿ ಕಳೆದ ವರ್ಷ ನಡೆದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಜಯಗಳಿಸಿದರು. ಅವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಚುನಾವಣಾ ತಕರಾರು ನ್ಯಾಯಾಧಿಕರಣಕ್ಕೆ ಅಭಿಲಾಶ ಎಂಬವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಶಿವಮೊಗ್ಗದ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಪುರಸ್ಕರಿಸಿತು. ಇದನ್ನು ಪ್ರಶ್ನಿಸಿ ಅರ್ಚನಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನನ್ನ ಪತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ ಹೀಗಾಗಿ ಅವರ ಜಾತಿ ತನಗೂ ಅನ್ವಯಿಸುತ್ತದೆ ಅದರಿಂದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಬೇಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಊರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಅರ್ಚನಾ ಅವರ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್ ಸಾಮಾನ್ಯವಾಗಿ ವ್ಯಕ್ತಿಯ ಜನ್ಮದಿಂದ ಜಾತಿ ನಿರ್ಧಾರವಾಗುತ್ತದೆ. ತಂದೆಯ ಜಾತಿಯ ಆಧಾರದ ಮೇಲೆ ಮಕ್ಕಳು ಜಾತಿ ಪಡೆಯುತ್ತಾರೆ. ಆದರೆ ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಹುಟ್ಟಿದವರು ಮಾತ್ರ ಜಾತಿಗೆ ಮೀಸಲಾಗಿರುವ ಕ್ಷೇತ್ರದಿಂದ ಸ್ಪರ್ಧಿಸಬಹುದಾಗಿದೆ. ಆದರೆ ಹುಟ್ಟಿನಿಂದ ಅರ್ಚನಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ. ಹೀಗಾಗಿ ಅವರು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿರುವುದನ್ನು ಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.