-->
Karnataka HC Judgement- ರಸ್ತೆ ಅಪಘಾತ ಪ್ರಕರಣ: ಸರ್ಕಾರಿ ನೌಕರನಿಗೆ ಶಿಕ್ಷೆಯಾದರೆ ಸೇವಾ ಜೀವನಕ್ಕೆ ಬಾಧಕವೇ...?

Karnataka HC Judgement- ರಸ್ತೆ ಅಪಘಾತ ಪ್ರಕರಣ: ಸರ್ಕಾರಿ ನೌಕರನಿಗೆ ಶಿಕ್ಷೆಯಾದರೆ ಸೇವಾ ಜೀವನಕ್ಕೆ ಬಾಧಕವೇ...?

ರಸ್ತೆ ಅಪಘಾತ ಪ್ರಕರಣ: ಸರ್ಕಾರಿ ನೌಕರನಿಗೆ ಶಿಕ್ಷೆಯಾದರೆ ಸೇವಾ ಜೀವನಕ್ಕೆ ಬಾಧಕವೇ...?
ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ಶಿಕ್ಷೆಗೆ ಒಳಪಟ್ಟ ಸರಕಾರಿ ನೌಕರನಿಗೆ ನೀಡುವ ಶಿಕ್ಷೆಯು ಆತನ ಸೇವಾ ಜೀವನವನ್ನು ಬಾಧಿಸದಂತಿರಲಿ -- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಇತ್ತೀಚಿನ ದಿನಗಳಲ್ಲಿ ಬಹುತೇಕ ಸರಕಾರಿ ನೌಕರರು ತಮ್ಮ ದೈನಂದಿನ ಓಡಾಟಕ್ಕೆ ಸ್ವಂತ ವಾಹನವನ್ನು ಅವಲಂಬಿಸಿರುತ್ತಾರೆ. ಕೆಲವು ನೌಕರರು ಸರಕಾರಿ ಇಲಾಖೆಗಳಲ್ಲಿ; ನಿಗಮ; ಮಂಡಳಿಗಳಲ್ಲಿ ವಾಹನ ಚಾಲಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಸರಕಾರಿ ನೌಕರರು ಚಲಾಯಿಸುವ ವಾಹನವು ಅಪಘಾತಕ್ಕೆ ಒಳಪಟ್ಟು ವಾಹನ ಚಲಾಯಿಸುತ್ತಿದ್ದ ಸರಕಾರಿ ನೌಕರನ ವಿರುದ್ಧ ಕ್ರಿಮಿನಲ್ ಪ್ರಕರಣ ನ್ಯಾಯಾಲಯದಲ್ಲಿ ದಾಖಲಾಗಿ ಸದರಿ ಸರಕಾರಿ ನೌಕರನ ವಿರುದ್ಧದ ಆರೋಪಗಳು ಸಾಬೀತಾಗಿ ಶಿಕ್ಷೆಗೆ ಒಳಪಟ್ಟ ಪ್ರಸಂಗಗಳನ್ನು ನಾವು ಕಾಣುತ್ತೇವೆ.ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟ ಸರಕಾರಿ ನೌಕರನನ್ನು ಕೂಡಲೇ ಸೇವೆಯಿಂದ ವಜಾ ಮಾಡತಕ್ಕದ್ದು ಎಂದು ಸೇವಾ ನಿಯಮಗಳಲ್ಲಿ ತಿಳಿಸಲಾಗಿದೆ. ಆದರೆ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ಒಳಗೊಂಡು ಶಿಕ್ಷೆಗೊಳಪಡುವ ಸರಕಾರಿ ನೌಕರನಿಗೆ ನೀಡುವ ಶಿಕ್ಷೆಯು ಆತನ ಸೇವಾ ಜೀವನವನ್ನು ಬಾಧಿಸದಂತಿರಲಿ ಎಂಬುದಾಗಿ ಮಾನ್ಯ ಕರ್ನಾಟಕ ಹೈಕೋರ್ಟ್ ದೇವೆಂದ್ರಪ್ಪ ವಿರುದ್ಧ ರಾಜ್ಯ ಸರಕಾರ ಈ ಪ್ರಕರಣದಲ್ಲಿ ಮಹತ್ವದ ತೀರ್ಪನ್ನು ನೀಡಿದೆ.


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ದೇವೇಂದ್ರಪ್ಪ ಎಂಬವರು ಚಲಾಯಿಸುತ್ತಿದ್ದ ಬಸ್ಸು ದಿನಾಂಕ 14.8.2014ರಂದು ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಗೆ ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಚಾಲಕ ದೇವೇ೦ದ್ರಪ್ಪ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಬೆಳ್ತಂಗಡಿಯ ಜೆ .ಎಂ .ಎಫ .ಸಿ. ನ್ಯಾಯಾಲಯದಲ್ಲಿ ದೋಷಾರೋಪಣ ಪತ್ರ ಸಲ್ಲಿಸಿದರು.ಸದರಿ ಪ್ರಕರಣದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು ಚಾಲಕ ದೇವೆಂದ್ರಪ್ಪ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ದೇವೇಂದ್ರಪ್ಪ ಅವರು ಭಾರತೀಯ ದಂಡ ಸಂಹಿತೆಯ ಕಲಂ 279 ರಡಿ ಎಸಗಿದ ಶಿಕ್ಷಾರ್ಹ ಅಪರಾಧಕ್ಕಾಗಿ 2 ತಿಂಗಳ ಸಾದಾ ಸಜೆ ಮತ್ತು₹ 1000 ದಂಡ ಹಾಗೂ ಕಲಂ 337 ರಡಿ ಎಸಗಿದ ಶಿಕ್ಷಾರ್ಹ ಅಪರಾಧ ಕ್ಕೆ 2 ತಿಂಗಳ ಸಾದಾ ಸಜೆ ಮತ್ತು₹500 ದಂಡ ವಿಧಿಸಿತ್ತು. ದಂಡದ ಹಣ ಕಟ್ಟಲು ತಪ್ಪಿದಲ್ಲಿ 15 ದಿನಗಳ ಕಾರಾಗೃಹ ವಾಸದ ಶಿಕ್ಷೆ ನೀಡಿ ತೀರ್ಪು ಘೋಷಿಸಿತ್ತು. ಸದರಿ ತೀರ್ಪಿನ ವಿರುದ್ಧ ಮಂಗಳೂರಿನ ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸೆಷನ್ಸ್ ನ್ಯಾಯಾಲಯವು ವಜಾಗೊಳಿಸಿತ್ತು. ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ದೇವೇಂದ್ರಪ್ಪ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಕ್ರಿಮಿನಲ್ ರಿವಿಜನ್ ಪಿಟಿಷನ್ ದಾಖಲಿಸಿದರು.


ಅರ್ಜಿದಾರ ದೇವೇಂದ್ರಪ್ಪ ಪರ ವಕೀಲರು ಹಾಗೂ ರಾಜ್ಯ ಸರಕಾರದ ಪರ ವಕೀಲರುಗಳ ವಾದವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಆಲಿಸಿದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಏಕಸದಸ್ಯ ನ್ಯಾಯಪೀಠವು ನ್ಯಾಯಾಲಯವು ನೀಡುವ ಶಿಕ್ಷೆಯು ವಾಹನ ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ಯ ಸಾರಿಗೆ ಸಂಸ್ಥೆ ನೌಕರನ ಉದ್ಯೋಗಕ್ಕೆ ಹಾಗೂ ಸೇವಾ ಜೀವನಕ್ಕೆ ಯಾವುದೇ ರೀತಿಯಲ್ಲಿ ಬಾಧಿಸಬಾರದು ಎಂಬ ಅಭಿಪ್ರಾಯದೊಂದಿಗೆ ವಿಚಾರಣಾ ನ್ಯಾಯಾಲಯವು ಆರೋಪಿ ಚಾಲಕನಿಗೆ ವಿಧಿಸಿದ ಕಾರಾಗೃಹ ವಾಸದ ಶಿಕ್ಷೆಯನ್ನು ರದ್ದುಪಡಿಸಿ ದಂಡದ ಹಣವನ್ನು ಪಾವತಿಸುವಂತೆ ಆದೇಶಿಸಿ ಪ್ರಕರಣವನ್ನು ಇತ್ಯರ್ಥಪಡಿಸಿತು.ಚಾಲಕ ದೇವೆಂದ್ರಪ್ಪ ವಿರುದ್ಧ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯ ಆರೋಪ ಹೊರಿಸಲಾಗಿದ್ದು ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರು ಹಾಗು ಖಾಸಗಿ ಬಸ್ಸಿನ ಚಾಲಕ ನೀಡಿದ ಸಾಕ್ಷ್ಯಗಳ ಆಧಾರದಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿ ಚಾಲಕನನ್ನು ದೋಷಿ ಎಂದು ತೀರ್ಮಾನಿಸಿ ಶಿಕ್ಷೆಯನ್ನು ಘೋಷಿಸಿತು.
ಮೊದಲನೆಯ ಮೇಲ್ಮನವಿ ನ್ಯಾಯಾಲಯವು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ಸಾಕ್ಷಗಳಲ್ಲಿ ವಿರೋಧಾಭಾಸದ ಹೊರತು ಕ್ರಿಮಿನಲ್ ರಿವಿಜನ್ ಪಿಟಿಷನ್ ನಲ್ಲಿ ವಿಚಾರಣೆಯನ್ನು ಮರುಪರಿಶೀಲಿಸುವ ಅವಕಾಶ ಇಲ್ಲದೇ ಇರುವುದರಿಂದ ವಿಚಾರಣೆ ಹಾಗೂ ಮೇಲ್ಮನವಿ ನ್ಯಾಯಾಲಯಗಳ ತೀರ್ಪನ್ನು ಒಪ್ಪುವುದು ಅನಿವಾರ್ಯ ವೆಂಬ ನಿಷ್ಕರ್ಷೆಗೆ ಬಂದ ಹೈಕೋರ್ಟ್ ಅರ್ಜಿದಾರರಿಗೆ ಕಾರಾಗೃಹ ವಾಸದ ಶಿಕ್ಷೆ ನೀಡಿದಲ್ಲಿ ಆತನ ಸೇವಾ ಜೀವನ ಮುಕ್ತಾಯಗೊಳ್ಳುವುದು ಎಂಬ ಅಂಶವನ್ನು ಪರಿಗಣಿಸಿ ಸೇವೆಗೆ ತೊಂದರೆ ಉಂಟಾಗಬಾರದೆಂಬ ಉದ್ದೇಶದಿಂದ ದಂಡ ವಿಧಿಸಿ ಪ್ರಕರಣವನ್ನು ಇತ್ಯರ್ಥಪಡಿಸಿತು .
ಏಕಸದಸ್ಯ ನ್ಯಾಯಪೀಠವು ರಾಜ್ ಬೀರ್ ವಿರುದ್ಧ ಹರಿಯಾಣ ಸರಕಾರ ಈ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಹಾಗೂ ಜಿ. ಟಿ. ರವೀಂದ್ರ ವಿರುದ್ಧ ಕರ್ನಾಟಕ ರಾಜ್ಯ ಈ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ಸದರಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸರಕಾರಿ ನೌಕರರ ಸೇವಾ ಜೀವನಕ್ಕೆ ತೊಂದರೆಯಾಗಬಾರದು ಎಂಬ ಅಭಿಪ್ರಾಯವನ್ನು ಸಾಂವಿಧಾನಿಕ ನ್ಯಾಯಾಲಯಗಳು ವ್ಯಕ್ತಪಡಿಸಿರುವುದನ್ನು ಪರಿಗಣಿಸಿ ಚಾಲಕ ದೇವೇಂದ್ರಪ್ಪ ಅವರ ಸೇವಾ ಜೀವನಕ್ಕೆ ನ್ಯಾಯಾಲಯ ಹೊರಡಿಸಿದ ಆದೇಶದಿಂದ ತೊಂದರೆ ಉಂಟಾಗಬಾರದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.ಕರ್ನಾಟಕ ಪೊಲೀಸ್ ಕಾಯ್ದೆಯಡಿ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಪೊಲೀಸರು ದಾಖಲಿಸುವ ಲಘು ಪ್ರಕರಣಗಳಲ್ಲಿ ಸರ್ಕಾರಿ ನೌಕರನು ತಪ್ಪಿತಸ್ಥನ ನೆಲೆಯಲ್ಲಿ ದಂಡ ಪಾವತಿಸದ್ದಲ್ಲಿ ಆತನ ಸೇವಾ ಜೀವನಕ್ಕೆ ಯಾವುದೇ ತೊಂದರೆ ಉಂಟಾಗದು. ಆದರೆ ಭಾರತೀಯ ದಂಡಸಂಹಿತೆಯಡಿ ಎಸಗಿದ ಶಿಕ್ಷಾರ್ಹ ಅಪರಾಧ ಗಳಿಗಾಗಿ ಆತನ ವಿರುದ್ಧ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ದೋಷಿಯೆಂದು ತೀರ್ಮಾನವಾದಲ್ಲಿ ಸರಕಾರಿ ನೌಕರಿಗೆ ಕುತ್ತು ಬಾರದ ರೀತಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ ಎಂಬುದೇ ಸಾಂವಿಧಾನಿಕ ನ್ಯಾಯಾಲಯಗಳು ನೀಡಿದ ತೀರ್ಪಿನ ಸಾರಾಂಶವಾಗಿದೆ.
✍ ಪ್ರಕಾಶ್ ನಾಯಕ್, ಶಿರಸ್ತೇದಾರರು, ಜುಡೀಷಿಯಲ್ ಸೆಂಟರ್, ಕೋರ್ಟ್ ಕಾಂಪ್ಲೆಕ್ಸ್, ಮಂಗಳೂರು

Ads on article

Advertise in articles 1

advertising articles 2

Advertise under the article