-->
Sullia : ಇಂಧನ ಸಚಿವರಿಗೆ ಫೋನ್‌ನಲ್ಲಿ ತರಾಟೆ ಪ್ರಕರಣ: ಸುಳ್ಯದ ವ್ಯಕ್ತಿಗೆ 2 ವರ್ಷ ಜೈಲು !

Sullia : ಇಂಧನ ಸಚಿವರಿಗೆ ಫೋನ್‌ನಲ್ಲಿ ತರಾಟೆ ಪ್ರಕರಣ: ಸುಳ್ಯದ ವ್ಯಕ್ತಿಗೆ 2 ವರ್ಷ ಜೈಲು !

ಇಂಧನ ಸಚಿವರಿಗೆ ಫೋನ್‌ನಲ್ಲಿ ತರಾಟೆ ಪ್ರಕರಣ: ಸುಳ್ಯದ ವ್ಯಕ್ತಿಗೆ 2 ವರ್ಷ ಜೈಲು !

2016ರಲ್ಲಿ ಆಗಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದ ಪ್ರಕರಣದಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ್‌ ರೈ ಎಂಬಾತನಿಗೆ ಸುಳ್ಯ ನ್ಯಾಯಾಲಯ 2 ಷರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಆಗಾಗ ನಡೆಯುತ್ತಿದ್ದ ವಿದ್ಯುತ್‌ ಕಣ್ಣಾಮುಚ್ಚಾಲೆಗೆ ಸಂಬಂಧಿಸಿದಂತೆ ಬೆಳ್ಳಾರೆಯ ಸಾಯಿ ಗಿರಿಧರ ರೈ, 2016 ಫೆಬ್ರವರಿ 28 ರಂದು ಆಗಿನ ವಿದ್ಯುತ್‌ ಸಚಿವ ಡಿ.ಕೆ. ಶಿವಕುಮಾರ್‌ಗೆ ಕರೆ ಮಾಡಿ ಆಕ್ರೋಶದಿಂದ ಮಾತನಾಡಿದ್ದರು.


ಸುಳ್ಯದ ವಿದ್ಯುತ್‌ ಸಮಸ್ಯೆ ನಿವೇದನೆ ಜೊತೆಗೆ ಸಚಿವರನ್ನು ಅವಾಚ್ಯವಾಗಿ ನಿಂದಿಸಿದ್ದರು. ಅಲ್ಲದೆ ಜೀವ ಬೆದರಿಕೆ ಹಾಕಿದ್ದರು. ಈ ಘಟನೆ ಹಿನ್ನೆಲೆಯಲ್ಲಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಡಿಕೆಶಿ ಪರವಾಗಿ ಮೆಸ್ಕಾಂ ಹಿರಿಯ ಅಧಿಕಾರಿಗಳು ಗಿರಿಧರ ರೈ ವಿರುದ್ಧ ದೂರು ನೀಡಿದ್ದರು.


ಕೇಸು ದಾಖಲಿಸಿಕೊಂಡ ಪೊಲೀಸರು ರಾತ್ರೋ ರಾತ್ರಿ ಆರೋಪಿ ಗಿರಿಧರ್‌ ರೈಯನ್ನು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್‌ ಅವರನ್ನೂ ಸಾಕ್ಷಿಯನ್ನಾಗಿ ಹೆಸರಿಸಲಾಗಿತ್ತು. ಅವರು ವಿಚಾರಣೆಗೆ ಹಾಜರಾಗದ ಕಾರಣ ಅವರಿಗೆ ವಾರೆಂಟ್‌ ಕೂಡ ಹೊರಡಿಸಲಾಗಿತ್ತು.


2021ರ ಅಕ್ಟೋಬರ್‌ 5ರಂದು ಡಿಕೆ ಶಿವಕುಮಾರ್‌ ಸುಳ್ಯಕ್ಕೆ ಬಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ಹೇಳಿದ್ದರು. ಆ ಬಳಿಕ, ವಿಚಾರಣೆ ಪೂರ್ಣಗೊಂಡು, ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಸೋಮಶೇಖರ್‌ ಎ. ರವರು ತೀರ್ಪು ಪ್ರಕಟಿಸಿದ್ದಾರೆ.


4 ಅಪರಾಧಗಳಲ್ಲಿಯೂ 2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಪ್ರಕರಣದಲ್ಲಿ 5 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದ್ದು, 4 ಅಪರಾಧಗಳ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ಇದೆ.


Ads on article

Advertise in articles 1

advertising articles 2

Advertise under the article