-->
Guest Column | ಪ್ರಮಾದದಿಂದ ನೀಡಿದ ನೌಕರನ ಹೆಚ್ಚುವರಿ ವೇತನ ವಸೂಲಿ ಮಾಡುವಂತಿಲ್ಲ: ಸುಪ್ರೀಂ ಮಹತ್ವದ ತೀರ್ಪು

Guest Column | ಪ್ರಮಾದದಿಂದ ನೀಡಿದ ನೌಕರನ ಹೆಚ್ಚುವರಿ ವೇತನ ವಸೂಲಿ ಮಾಡುವಂತಿಲ್ಲ: ಸುಪ್ರೀಂ ಮಹತ್ವದ ತೀರ್ಪು

ಪ್ರಮಾದದಿಂದ ನೀಡಿದ ನೌಕರನ ಹೆಚ್ಚುವರಿ ವೇತನ ವಸೂಲಿ ಮಾಡುವಂತಿಲ್ಲ: ಸುಪ್ರೀಂ ಮಹತ್ವದ ತೀರ್ಪು

ಬರಹ: ಪ್ರಕಾಶ್ ನಾಯಕ್, ಶಿರಸ್ತೇದಾರರು, ನ್ಯಾಯಿಕ ಕೇಂದ್ರ, ಮಂಗಳೂರು ಕೋರ್ಟ್ ಕಾಂಪ್ಲೆಕ್ಸ್ (courtbeatnews@gmail.com)ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ಯಾವುದೇ ಸರಕಾರಿ ನೌಕರರಿಗೆ ಪಾವತಿಸಲಾದ ಹೆಚ್ಚುವರಿ ಮೊತ್ತವನ್ನು ಆತನಿಂದ ಮರಳಿ ವಸೂಲಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.ಥಾಮಸ್ ಡೇನಿಯಲ್ ವಿರುದ್ಧ ಕೇರಳ ರಾಜ್ಯ ಮತ್ತಿತರರು ಪ್ರಕರಣದಲ್ಲಿ ಈ ಮಹತ್ವದ ತೀರ್ಪನ್ನು ನೀಡಿದೆ.


ಪ್ರಕರಣ: ಥಾಮಸ್ ಡೇನಿಯಲ್ Vs ಕೇರಳ

ಸುಪ್ರೀಂ ಕೋರ್ಟ್, Civil appeal 7115/2010 - Dated 2.5.2022


ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ಮೇಲ್ಮನವಿದಾರ ಥಾಮಸ್ ಡೇನಿಯಲ್ ಅವರು ವಾರ್ಷಿಕ ವೇತನ ಬಡ್ತಿ ಬಾಬ್ತು ಹಾಗು ವೇತನ ರೂಪದಲ್ಲಿ ತಮಗೆ ಪಾವತಿಸಿದ ಹೆಚ್ಚುವರಿ ಮೊತ್ತವನ್ನು ಮರು ಪಾವತಿಸಬೇಕೆಂಬ ಕೇರಳ ರಾಜ್ಯ ಸರಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಆಲಿಸಿದ ಸುಪ್ರೀಂಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಝೀರ್ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ವಿಭಾಗಿಯ ನ್ಯಾಯಪೀಠ ಮೇಲ್ಮನವಿಯನ್ನು ಪುರಸ್ಕರಿಸಿ ಈ ಮಹತ್ವದ ತೀರ್ಪನ್ನು ಘೋಷಿಸಿತು.


ಪ್ರಕರಣದ ವಿವರ:

ಪ್ರಕರಣದ ಮೇಲ್ಮನವಿದಾರ ಥಾಮಸ್ ಡೇನಿಯಲ್ ಎಂಬವರು ಪ್ರೌಢಶಾಲಾ ಶಿಕ್ಷಕರಾಗಿ 1966ರಲ್ಲಿ ಕೊಲ್ಲಂನ ಕ್ರೇವನ್ ಅನುದಾನಿತ ಪ್ರೌಢ ಶಾಲೆಯಲ್ಲಿ ಸೇವೆಗೆ ಸೇರಿದರು. ರಸಾಯನ ಶಾಸ್ತ್ರದಲ್ಲಿ ಎಂ. ಎಸ್ಸಿ. ಸ್ನಾತಕೋತ್ತರ ಪದವಿ ವ್ಯಾಸಂಗವನ್ನು ಮುಂದುವರಿಸಲು ದಿನಾಂಕ 20.10.1972 ರಿಂದ 31.3.1973 ರ ವರೆಗೆ ಹಾಗೂ ದಿನಾಂಕ 2.7.1973 ರಿಂದ 28.3.1974 ರ ವರೆಗೆ ವೇತನ ರಹಿತ ರಜೆ ಪಡೆದಿದ್ದರು. ದಿನಾಂಕ 1.6.1989 ರಂದು ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ಪಡೆದರು. ಬಳಿಕ ಹಿರಿಯ ವೇತನ ಶ್ರೇಣಿಯಲ್ಲಿ ಕಾಲಬದ್ಧ ವೇತನ ಬಡ್ತಿ ಪಡೆದರು.ದಿನಾಂಕ 9.10.1997 ರಂದು ಕೇರಳ ರಾಜ್ಯ ಮಹಾಲೇಖಪಾಲರ ಕಚೇರಿಯ ಲೆಕ್ಕಪರಿಶೋಧನಾ ವರದಿಯನ್ನು ಲಗತ್ತಿಸಿ ಕೊಲ್ಲಂನ ಜಿಲ್ಲಾ ಶಿಕ್ಷಣಾಧಿಕಾರಿ ಅವರು ಉನ್ನತ ವ್ಯಾಸಂಗಕ್ಕಾಗಿ ಪಡೆದ ವೇತನ ರಹಿತ ರಜೆಯ ಅವಧಿಯನ್ನು ಸೇವಾವಧಿ ಎಂದು ಪರಿಗಣಿಸಿ ವಾರ್ಷಿಕ ವೇತನ ಬಡ್ತಿ ನೀಡಿರುವುದು ನಿಯಮಾನುಸಾರ ಸರಿಯಲ್ಲ. ಸದರಿ ಅವಧಿಯನ್ನು ಅರ್ಹತಾ ಸೇವೆಯಲ್ಲಿ ಸೇರಿಸುವಂತಿಲ್ಲ. ಹಾಗಾಗಿ ಈಗಾಗಲೇ ಹೆಚ್ಚುವರಿಯಾಗಿ ಪಾವತಿಸಲಾದ ವೇತನ ಮತ್ತು ವೇತನ ಭಡ್ತಿಯನ್ನು ಮರು ಪಾವತಿ ಮಾಡತಕ್ಕದ್ದು ಎಂಬುದಾಗಿ ಥಾಮಸ್ ಡೇನಿಯಲ್ ಅವರಿಗೆ ನೋಟಿಸ್ ನೀಡಿದರು.


ಈ ಮಧ್ಯೆ, ಡೇನಿಯಲ್ ಥಾಮಸ್ ದಿನಾಂಕ 31.3.1999 ರಂದು ಸೇವೆಯಿಂದ ನಿವೃತ್ತರಾದರು. ಆದರೆ ಅವರಿಗೆ ಸಿಗತಕ್ಕ ನಿವೃತ್ತಿವೇತನ; ಉಪಾದಾನ ಮುಂತಾದ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯಲಾಯಿತು. ಇಲಾಖೆಯ ಅಧಿಕಾರಿಗಳಿಗೆ ಅವರು ಸಲ್ಲಿಸಿದ ಮನವಿಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ಅಂತಿಮವಾಗಿ ದಿನಾಂಕ 25.5.2000 ದಂದು ಮೇಲ್ಮನವಿದಾರರು ವಸೂಲಾತಿ ನಡವಳಿಯನ್ನು ಪ್ರಶ್ನಿಸಿ ಕೇರಳ ರಾಜ್ಯ ಮುಖ್ಯಮಂತ್ರಿಗಳ ಸಾರ್ವಜನಿಕ ಕುಂದುಕೊರತೆ ಪರಿಹಾರ ವಿಭಾಗಕ್ಕೆ ದೂರು ಅರ್ಜಿ ಸಲ್ಲಿಸಿದರು.


ವೇತನ ರಹಿತ ರಜೆಯನ್ನು ಅರ್ಹತಾ ಸೇವೆಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಹಾಗೂ ಕೇರಳ ಸೇವಾ ನಿಯಮ 91A ಭಾಗ 1ರಡಿ ಎಂಎಸ್ಸಿ ಸ್ನಾತಕೋತ್ತರ ವ್ಯಾಸಂಗವು ಸಾರ್ವಜನಿಕ ಸೇವೆಗೆ ಉಪಯುಕ್ತವಲ್ಲ ಎಂಬ ಕಾರಣ ನೀಡಿ ಸರಕಾರವು ದೂರು ಅರ್ಜಿಯನ್ನು ತಿರಸ್ಕರಿಸಿತು.ಕೇರಳ ಸರಕಾರದ ಆದೇಶದಿಂದ ಬಾಧಿತರಾದ ಮೇಲ್ಮನವಿದಾರರು ಸದರಿ ಆದೇಶದ ವಿರುದ್ಧ ಕೇರಳ ಹೈಕೋರ್ಟಿನಲ್ಲಿ ರಿಟ್ ದಾಖಲಿಸಿದರು.ಕೇರಳ ಹೈಕೋರ್ಟಿನ ಏಕಸದಸ್ಯ ನ್ಯಾಯಪೀಠವು ವೇತನರಹಿತ ಅವಧಿಯನ್ನು ಅರ್ಹತಾ ಸೇವೆಗೆ ಸೇರಿಸುವಂತಿಲ್ಲ ಎಂಬ ಸರಕಾರದ ವಾದವನ್ನು ಎತ್ತಿ ಹಿಡಿದು ದಿನಾಂಕ 5.1.2006 ರಂದು ರಿಟ್ ಅರ್ಜಿಯನ್ನು ವಜಾಗೊಳಿಸಿತು. ಸದರಿ ಆದೇಶದ ವಿರುದ್ಧ ಸಲ್ಲಿಸಲಾದ ರಿಟ್ ಅಪೀಲನ್ನು ದಿನಾಂಕ 2.3.2009 ರಂದು ವಿಭಾಗೀಯ ಪೀಠವು ವಜಾಗೊಳಿಸಿ ಏಕಸದಸ್ಯ ಪೀಠದ ಆದೇಶವನ್ನು ಸಮರ್ಥಿಸಿತು. ಸರಕಾರಕ್ಕೆ ಪಾವತಿಸತಕ್ಕ ಹಣವನ್ನು ಅರ್ಜಿದಾರರ ಉಪದಾನದ (ಡಿ ಸಿ.ಆರ್.ಜಿ) ಮೊತ್ತದಿಂದ ವಸೂಲು ಮಾಡತಕ್ಕದ್ದು ಎಂಬ ಆದೇಶ ನೀಡಿತು.ಕೇರಳ ಹೈಕೋರ್ಟಿನ ಆದೇಶದಿಂದ ಬಾಧಿತರಾದ ಥಾಮಸ್ ಡೇನಿಯಲ್ ಅವರು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಸಿವಿಲ್ ಅಪೀಲ್ ಸಂಖ್ಯೆ 7115/2010 ಪ್ರಕಾರ ಮೇಲ್ಮನವಿ ಸಲ್ಲಿಸಿದರು.


ಮೇಲ್ಮನವಿದಾರರ ಪರ ವಕೀಲರು ಮಂಡಿಸಲಾದ ವಾದದ ಪ್ರಕಾರ ಅರ್ಜಿದಾರರು ಮೋಸದಿಂದ ಅಥವಾ ತಪ್ಪು ಮಾಹಿತಿ ನೀಡಿ ಸರಕಾರವನ್ನು ವಂಚಿಸಿ ಹೆಚ್ಚುವರಿ ಹಣವನ್ನು ಪಡೆದಿಲ್ಲ. ಕೇರಳ ರಾಜ್ಯ ಸೇವಾ ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದ ಪರಿಣಾಮವಾಗಿ ಈ ಪ್ರಮಾದ ಉಂಟಾಗಿದೆ. ಅರ್ಜಿದಾರರು ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದಾರೆ. ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು ಬೈಪಾಸ್ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದಾರೆ. ಸಾಕಷ್ಟು ಮನವಿಗಳನ್ನು ಸಲ್ಲಿಸಿದ ಬಳಿಕ ಉಪದಾನದ ಮೊತ್ತವನ್ನು ಬಿಡುಗಡೆಗೊಳಿಸಲಾಗಿದೆ. ಅರ್ಜಿದಾರರ ಸಂಕಷ್ಟವನ್ನು ಪರಿಗಣಿಸಿ ಮೇಲ್ಮನವಿಯನ್ನು ಪುರಸ್ಕರಿಸಬೇಕೆಂದು ಅರ್ಜಿದಾರರ ಪರವಾಗಿ ಪ್ರಾರ್ಥಿಸಲಾಯಿತು. 


ಕೇರಳ ಸರಕಾರದ ಪರ ವಕೀಲರು ಕೇರಳ ಹೈಕೋರ್ಟ್ ನೀಡಿದ ಆದೇಶವು ನಿಯಮಾನುಸಾರ ಸಮರ್ಪಕವಾಗಿದ್ದು ಮೇಲ್ಮನವಿಯನ್ನು ತಿರಸ್ಕರಿಸಬೇಕೆಂದು ಪ್ರಾರ್ಥಿಸಿದರು.


ಉಭಯ ಪಕ್ಷಕಾರರು ವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ಈ ಕೆಳಗಿನ ಅಭಿಪ್ರಾಯವನ್ನು ವ್ಯಕ್ತ ಪಡಿಸಿತು.


ಮೇಲ್ಮನವಿದಾರರು ಮೋಸದಿಂದ ಅಥವಾ ತಪ್ಪು ಮಾಹಿತಿ ನೀಡಿ ಸರಕಾರವನ್ನು ವಂಚಿಸಿ ಹೆಚ್ಚುವರಿ ಮೊತ್ತವನ್ನು ಪಡೆದಿಲ್ಲ. ನಿರ್ದಿಷ್ಟ ನಿಯಮವನ್ನು ತಪ್ಪಾಗಿ ವ್ಯಾಖ್ಯಾನಿಸಿ ಮಾಡಲಾದ ಪಾವತಿಯನ್ನು ಹಲವು ವರ್ಷಗಳ ಬಳಿಕ ನಿಯಮಬಾಹಿರವಾಗಿ ಮಾಡಲಾದ ಪಾವತಿ ಎಂದು ತೀರ್ಮಾನಿಸಿ ವಸೂಲು ಮಾಡುವಂತಿಲ್ಲ. ಈ ಆದೇಶವನ್ನು ಸರಕಾರಿ ನೌಕರರು ತಮ್ಮ ಹಕ್ಕು ಎಂದು ಪರಿಗಣಿಸುವಂತಿಲ್ಲ. ಆದರೆ ನ್ಯಾಯ ಹಾಗೂ ಸಮಾನತೆ ದೃಷ್ಟಿಯಿಂದ ಮತ್ತು ನ್ಯಾಯಿಕ ವಿವೇಚನೆಯ ಅಧಿಕಾರವನ್ನು ಚಲಾಯಿಸಿ ಮೇಲ್ಮನವಿದಾರನ ಸಂಕಷ್ಟವನ್ನು ಮನಗಂಡು ಈ ಆದೇಶ ನೀಡಲಾಗಿದೆ.


ಆದೇಶದಲ್ಲಿ ಕೆಲವೊಂದು ಮಹತ್ವದ ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ. ಅವುಗಳೆಂದರೆ,

1. ಸಾಹಿಬ್ ರಾಮ್ VS ಹರಿಯಾಣ ರಾಜ್ಯ

2. ಕರ್ನಲ್ ಬಿ.ಜೆ. ಅಕ್ಕಾರ (ನಿ) VS ಭಾರತ ಸರಕಾರ

3. ಸೈಯದ್ ಅಬ್ದುಲ್ ಖಾದರ್ VS ಬಿಹಾರ ರಾಜ್ಯ

4. ಪಂಜಾಬ್ ರಾಜ್ಯ VS ರಫೀಕ್ ಮಾಸಿಹ್


ಕೆಳಹಂತದ ಉದ್ಯೋಗಿಯಾಗಿ ಸೇವೆ ಸಲ್ಲಿಸುವ ಸರಕಾರಿ ನೌಕರರು ತಮಗೆ ದೊರೆತ ಯಾವುದೇ ಹೆಚ್ಚುವರಿ ಪಾವತಿಯನ್ನು ನ್ಯಾಯಯುತವಾಗಿ ತಮಗೆ ಸಲ್ಲತಕ್ಕ ಆರ್ಥಿಕ ಸೌಲಭ್ಯ ಎಂದು ಭಾವಿಸಿ ತಮ್ಮ ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ಖರ್ಚು ಮಾಡಿರುತ್ತಾರೆ. ಎಷ್ಟೋ ಸಮಯದ ಬಳಿಕ ಸದರಿ ಮೊತ್ತ ಹೆಚ್ಚುವರಿಯೆಂದು ಕಂಡುಬಂದಲ್ಲಿ ಅದನ್ನು ಮರು ಪಾವತಿಸಲು ಸರಕಾರಿ ನೌಕರರು ಬಹಳಷ್ಟು ಕಷ್ಟಪಡಬೇಕಾಗುತ್ತದೆ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಪರಿಗಣಿಸಿದೆ.ಒಂದು ವೇಳೆ, ತಮಗೆ ಹೆಚ್ಚುವರಿಯಾಗಿ ಪಾವತಿಯಾದ ಹಣ ತಪ್ಪಾಗಿ ಪಾವತಿಯಾದ ಹಣ ಎಂಬ ಸಂಗತಿಯು ಸರಕಾರಿ ನೌಕರನ ಗಮನಕ್ಕೆ ಆ ಕೂಡಲೇ ಬಂದಲ್ಲಿ ಅಥವಾ ಹೆಚ್ಚುವರಿ ಪಾವತಿಯ ವಸೂಲಾತಿಗೆ ಸಕ್ಷಮ ಪ್ರಾಧಿಕಾರವು ಶೀಘ್ರ ಕ್ರಮ ಕೈಗೊಂಡಲ್ಲಿ ನ್ಯಾಯಾಲಯಗಳು ವಸೂಲಾತಿ ಆದೇಶವನ್ನು ಸಮರ್ಥಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಅಭಿಪ್ರಾಯಪಡಲಾಗಿದೆ.


ಮೇಲ್ಮನವಿದಾರರು ಸೇವೆಯಿಂದ ನಿವೃತ್ತರಾಗಿ 10 ವರ್ಷಗಳು ಕಳೆದಿವೆ. ಈಗ ವಸೂಲಾತಿ ಪ್ರಕ್ರಿಯೆ ಆರಂಭಿಸುವುದು ಸಮರ್ಥನೀಯವಲ್ಲ ಎಂಬ ಅಭಿಪ್ರಾಯದೊಂದಿಗೆ ಸುಪ್ರೀಂಕೋರ್ಟ್ ಮೇಲ್ಮನವಿಯನ್ನು ಪುರಸ್ಕರಿಸಿ ಕೇರಳ ರಾಜ್ಯ ಮುಖ್ಯಮಂತ್ರಿಗಳ ಸಾರ್ವಜನಿಕ ಕುಂದುಕೊರತೆ ಪರಿಹಾರ ವಿಭಾಗದ ಆದೇಶವನ್ನು ಹಾಗೂ ಕೇರಳ ಹೈಕೋರ್ಟಿನ ಏಕಸದಸ್ಯ ಮತ್ತು ವಿಭಾಗೀಯ ಪೀಠದ ಆದೇಶಗಳನ್ನು ರದ್ದುಪಡಿಸಿತು.


for Judgement, Click here;

ಥಾಮಸ್ ಡೇನಿಯಲ್ Vs ಕೇರಳ
Photo: Prakash Nayak, Mangaluru (Ph- 9844898381)

Ads on article

Advertise in articles 1

advertising articles 2

Advertise under the article