ವಕೀಲರ ವಂಚನೆ ಪ್ರಕರಣ- RTC ತಿದ್ದುಪಡಿ ನೆಪದಲ್ಲಿ ದಲಿತ ಮಹಿಳೆಗೆ ವಂಚಿಸಿ ಕ್ರಯಪತ್ರ ನೋಂದಣಿ !
ವಕೀಲರ ವಂಚನೆ ಪ್ರಕರಣ- RTC ತಿದ್ದುಪಡಿ ನೆಪದಲ್ಲಿ ದಲಿತ ಮಹಿಳೆಗೆ ವಂಚಿಸಿ ಕ್ರಯಪತ್ರ ನೋಂದಣಿ!
RTC ತಿದ್ದುಪಡಿ ನೆಪದಲ್ಲಿ ನೋಂದಣಿ ಕಚೇರಿಗೆ ಕರೆಸಿ ದಲಿತ ಮಹಿಳೆಯ ಜಾಗವನ್ನು ನಜೀರ್ʼಗೆ ಮಾರಾಟ ಆರೋಪ – ಬೆಳ್ತಂಗಡಿಯ ಹಿಂದೂ ಮುಖಂಡ ಹಾಗೂ ಖ್ಯಾತ ನ್ಯಾಯವಾದಿ ಸಹಿತ 7 ಮಂದಿಯ ವಿರುದ್ದ ವಂಚನೆ ಪ್ರಕರಣ
ಪಹಣಿ ಪತ್ರ ತಿದ್ದುಪಡಿ ಮಾಡಿಕೊಡುತ್ತೇನೆ ಎಂದು ಉಪಾಯವಾಗಿ ನೋಂದಣಿ ಕಚೇರಿಗೆ ಕರೆಸಿ ತನ್ನ ಜಮೀನನ್ನು ಮತ್ತೊಬ್ಬರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ದಲಿತ ಮಹಿಳೆಯೊಬ್ಬರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರು ನೀಡಿದ ದೂರಿನಂತೆ ಖ್ಯಾತ ವಕೀಲರು ಸೇರಿದಂತೆ 7 ಮಂದಿಯ ವಿರುದ್ದ ಕೇಸು ದಾಖಲಾಗಿದೆ.
ಬೆಳ್ತಂಗಡಿಯ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡರೂ ಆದ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬೆಳ್ತಂಗಡಿ ತಹಶೀಲ್ದಾರರು, ಕರಾಯ ಧನಲಕ್ಷ್ಮೀ ನಿಲಯದ ಗಿರೀಶ, ಸುರೇಶ, ಶೇಖರ ಹಾಗೂ ತಣ್ಣೀರುಪಂಥ ಗ್ರಾಮದ ಅಳಕೆಯ ನಝೀರ್ ಮತ್ತು ಬೆಳ್ತಂಗಡಿಯ ನೋಂದಣಾಧಿಕಾರಿ ನಾಗರಾಜ್ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ದ IPC 1860 ( U / s 465, 468, 471, 420) ಅಡಿಯಲ್ಲಿ FIR ದಾಖಲಾಗಿದೆ.
ಇಲ್ಲಿನ ಕರಾಯ ಗ್ರಾಮದ ಕೆರೆಕೋಡಿಯ ನಾರಾಯಣ ನಾಯ್ಕ ಎಂಬವರ ಪತ್ನಿ ವಾರಿಜ ಅವರು ಈ ದೂರು ನೀಡಿದ್ದಾರೆ. ತಮ್ಮ ತಂದೆ ಬಾಬು ನಾಯ್ಕ ರವರಿಗೆ LRY 9/74-75ರಂತೆ (ಭೂ ನ್ಯಾಯ ಮಂಡಳಿ) ಆದೇಶದ ಪ್ರಕಾರ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದಲ್ಲಿ ವಿವಿಧ ಸರ್ವೆ ನಂಬರ್‌ನಲ್ಲಿ 2 ಎಕ್ರೆಗೂ ಹೆಚ್ಚು ವಿಸ್ತೀರ್ಣದ ಜಮೀನು ಮಂಜೂರು ಮಾಡಿತ್ತು. ತಂದೆ ಹಾಗೂ ತಾಯಿಯ ನಿಧನ ನಂತರ ಅದನ್ನು ವಿಭಜಿಸಿ ಕೊಡಬೇಕು ಎಂದು ಬೆಳ್ತಂಗಡಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅದಕ್ಕೆ ಮಧ್ಯಂತರ ನಿರ್ಬಂಧಕಾಜ್ಞೆ ಪಡೆದಿರುತ್ತಾರೆ.
ಪ್ರಕರಣ ತನಿಖಾ ಹಂತದಲ್ಲಿತ್ತು. ಈ ಮಧ್ಯೆ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಜಮೀನು ವಿವಾದ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಮಧ್ಯಸ್ತಿಕೆ ವಹಿಸಲು ಮುಂದಾಗಿದ್ದು, ಎಲ್ಲಾ ದಾಖಲೆಗಳನ್ನು ನಾನೇ ಮಾಡಿಕೊಡುತ್ತೇನೆ ಎಂದು ನಂಬಿಸಿ ತನ್ನನ್ನು ಕಚೇರಿಗೆ ಬರ ಹೇಳಿದ್ದರು.
ಕಚೇರಿಗೆ ಹೋದಾಗ, ಪಕ್ಕದ ಜಮೀನಿನ ಪಹಣಿಯಲ್ಲಿ ಕೆಲವೊಂದು ವ್ಯತ್ಯಾಸಗಳಿದ್ದು, ಅದನ್ನು ಸರಿ ಮಾಡಲು ತಾವು ರಿಜಿಸ್ತ್ರಿ ಕಚೇರಿಗೆ ಬರುವಂತೆ ವಕೀಲ ಅಗರ್ತ ಹೇಳಿದರು. ಅದರಂತೆ, ನೋಂದಣಿ ಕಚೇರಿಯಲ್ಲಿ ಕೆಲ ಕಾಗದ ಪತ್ರಗಳಿಗೆ ವಕೀಲರು ಸಹಿ ಹಾಕಿಸಿಕೊಂಡರು ಎಂದು ವಾರಿಜರವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಸ್ವಲ್ಪ ದಿನ ಕಳೆದ ಮೇಲೆ ನೆರೆಯ ತಣ್ಣೀರು ಪಂತ ಗ್ರಾಮದ ನಜೀರ್ ಭೇಟಿ ಮಾಡಿ, ನಿಮ್ಮ ಜಮೀನು ನಾನು ಖರೀದಿಸಿದ್ದೇನೆ ಎಂದು ತಿಳಿಸಿದಾಗ ತಮಗೆ ಮೋಸ ಆಗಿರುವುದು ತಿಳಿಯಿತು. ದಾಖಲೆ ಪರಿಶೀಲಿಸಿದಾಗ ನಜೀರ್ ಗೆ ಜಮೀನು ಮಾರಿದಂತೆ ನಕಲಿ ದಾಖಲೆ ಸೃಷ್ಟಿ ಆಗಿರುವುದು ಗೊತ್ತಾಯಿತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿಗಳಾದ ಕರಾಯ ಧನಲಕ್ಷ್ಮೀ ನಿಲಯದ ಗಿರೀಶ, ಸುರೇಶ, ಶೇಖರ ಜಮೀನು ಖರೀದಿ ಮಾಡುವ ನಾಟಕ ಮಾಡಿದ್ದು ಈ ಮೋಸದಲ್ಲಿ ಆರೋಪಿ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತರವರು ಪ್ರಮುಖ ಪಾತ್ರಧಾರಿ ಎಂದು ಆರೋಪಿಸಲಾಗಿದೆ.
ಬೆಳ್ತಂಗಡಿ ತಹಶೀಲ್ದಾರ್ ರವರು LRY 9/74-75 ಎಂದು ಪಹಣಿಯಲ್ಲಿ ಇದ್ದುದನ್ನು ಕಳಚಿ LRY 12/74-75 ಎಂದು ಸೇರಿಸಿ ಸುಳ್ಳು ದಾಖಲೆ ಸೃಷ್ಟಿಸಿ ಸಹಕರಿಸಿದ್ದಾರೆ. ಈ ದಾಖಲೆ ಪರಿಶೀಲಿಸದೇ ಬೆಳ್ತಂಗಡಿ ರಿಜಿಸ್ಟ್ರಾರ್ ನಾಗರಾಜ್ ಕ್ರಯಪತ್ರ ನೊಂದಣಿ ಮಾಡಿಕೊಟ್ಟಿದ್ದಾರೆ ಎಂದು ವಾರಿಜ ದೂರಿನಲ್ಲಿ ಆರೋಪಿಸಿದ್ದಾರೆ.