ನ್ಯಾಯಾಧೀಶರ "EDITED PHOTO" ವೈರಲ್: 'ತಿರುಚಿದ' ಚಿತ್ರ ತೆಗೆದುಹಾಕಲು ಸಮೂಹ ಮಾಧ್ಯಮಕ್ಕೆ ಕೋರ್ಟ್ ನಿರ್ದೇಶನ
ನ್ಯಾಯಾಧೀಶರ "EDITED PHOTO" ವೈರಲ್: 'ತಿರುಚಿದ' ಚಿತ್ರ ತೆಗೆದುಹಾಕಲು ಸಮೂಹ ಮಾಧ್ಯಮಕ್ಕೆ ಕೋರ್ಟ್ ನಿರ್ದೇಶನ
ಎಡಪಂಥೀಯ ನಾಯಕರ ಜೊತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರು ಡೈನಿಂಗ್ ಮಾಡಿದ್ದಾರೆ ಎಂಬಂತೆ ಬಿಂಬಿಸುವ "ತಿರುಚಿದ" ಚಿತ್ರವನ್ನು ವೈರಲ್ ಮಾಡಿದ ಚಿತ್ರವನ್ನು ತೆಗೆದುಹಾಕುವಂತೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.
"ಮೈಂಡ್ ಎಸ್ಕೇಪ್ಸ್" ಕ್ಲಬ್ ಮಾಲೀಕರಾದ ದೀಪಾಲಿ ಸಿಕಂದ್ ಸಲ್ಲಿಸಿದ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 12ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಕೆ ಎನ್ ಗಂಗಾಧರ್ ಅವರು ಈ ಆದೇಶ ಮಾಡಿದ್ದಾರೆ.
"ಮೈಂಡ್ ಎಸ್ಕೇಪ್ಸ್" ಕ್ಲಬ್‌ನಲ್ಲಿ ಆಯ್ದ ಅತಿಥಿಗಳ ಜೊತೆ ತೆಗೆದಿರುವ ಫೋಟೋಗಳನ್ನು ತಿರುಚಿ ಮಾನಹಾನಿಕರ ವಿಚಾರಗಳನ್ನು ಪ್ರಕಟಿಸಿದ್ದು, ಅದನ್ನು ತೆಗೆದು ಹಾಕುವಂತೆ 'ಫೇಸ್‌ಬುಕ್', 'ಲಿಂಕ್ಡ್‌ಇನ್', 'ಟ್ವಿಟರ್' ಮತ್ತು 'ವಾಟ್ಯಾಪ್' ಕಂಪೆನಿಗಳಗೆ ಕೋರ್ಟ್ ಆದೇಶಿಸಿದೆ. ಇಂತಹ ಮಾನಹಾನಿಕರ ಸಂಗತಿಗಳನ್ನು ಪ್ರಕಟಿಸದಂತೆ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಿದೆ.
ಹಿಂದೂ ಸಮೂಹ ಸಂಸ್ಥೆಯ ಹಿರಿಯ ಪತ್ರಕರ್ತ ಎನ್ ರಾಮ್ ಮತ್ತು ಅವರ ಪತ್ನಿ ಮರಿಯಮ್ ಅವರು ತಮಿಳುನಾಡಿನ ಕ್ಲಬ್‌ನಲ್ಲಿ ಭೋಜನ ಕೂಟ ಆಯೋಜಿಸಿದ್ದರು. ಇದರಲ್ಲಿ ತಮಿಳುನಾಡಿನ ವಿತ್ತ ಸಚಿವ ಡಾ. ಪಳನಿವೇಲ್ ತ್ಯಾಗರಾಜನ್, ಸಿಪಿಐಎಂ ನಾಯಕರಾದ ಪ್ರಕಾಶ್ ಕಾರಟ್, ಬೃಂದಾ ಕಾರಟ್, NDTVಯ ರಾಧಿಕಾ ಮತ್ತು ಪ್ರಣಯ್ ರಾಯ್ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ತೆಗೆದ ಚಿತ್ರವನ್ನು ಸಿಕಂದ್ ಫೇಸ್‌ಬುಕ್ ಮತ್ತು ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಕೆಲ ದಿನಗಳ ಹಿಂದೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯ ಪೀಠವು ವಿವಾದಿತ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ಮೌಖಿಕವಾಗಿ ಕಟು ಟೀಕೆ ಮಾಡಿತ್ತು. ಅದರ ಬೆನ್ನಲ್ಲೇ ನ್ಯಾಯಮೂರ್ತಿಗಳನ್ನು ಗುರಿಯಾಗಿರಿಸಿ ಅವಹೇಳನ ಮಾಡುವ ತಿರುಚಿದ ಚಿತ್ರಗಳನ್ನು ವೈರಲ್ ಮಾಡಲಾಗಿತ್ತು. ಇದರ ವಿರುದ್ಧ ಸಿಕಂದ್ ಸಿಟಿ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
"ಮಾನ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಪರ್ದಿವಾಲಾ ಅತಿಥಿಗಳ ಗುಂಪಿನಲ್ಲಿ ಇರುವ ಇಬ್ಬರು ಎಂದು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್ ಪೋಸ್ಟ್‌ಗಳನ್ನು ಶೇರ್ ಮಾಡಿರುವುದು ಆಘಾತಕಾರಿ. ಇದನ್ನು ವಾಟ್ಸಾಪ್ ಗುಂಪುಗಳ ಮೂಲಕ ಹಲವರಿಗೆ ಹಂಚಿಕೆ ಮಾಡಲಾಗಿದೆ" ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ತಿರುಚಿದ ಚಿತ್ರದಲ್ಲಿ ಇರುವವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಲ್ಲ ಎಂದು ಕೆಲವು ಜವಾಬ್ದಾರಿಯುತ ಸುದ್ದಿಸಂಸ್ಥೆಗಳು ಸ್ಪಷ್ಟನೆ ನೀಡಿದ್ದರೂ ಸುಳ್ಳು ಸುದ್ದಿಯು ಕಾಳ್ಗಿಚ್ಚಿನಂತೆ ಹಬ್ಬಿತ್ತು. ಈ ತಿರುಚಿದ ಫೋಟೋಗಳನ್ನು ಶೇರ್ ಮಾಡಿದ್ದ ಜಗದೀಶ್ ಲಕ್ಷ್ಮಣ್ ಸಿಂಗ್, ಸಿದ್ಧಾರ್ಥ್ ಡೇ ಮತ್ತು ಸೋನಾಲಿಕಾ ಕುಮಾರ್ ಅವರು ಪ್ರಕರಣದ ಪ್ರತಿವಾದಿಗಳಾಗಿದ್ದಾರೆ.