ಯೂ ಟರ್ನ್ ಹೊಡೆದ ACB ಎಡಿಜಿಪಿ- ಹೈಕೋರ್ಟ್‌ನಿಂದ ನ್ಯಾಯಾಧೀಶರ ವಿರುದ್ಧದ ಅರ್ಜಿ ಹಿಂತೆಗೆತ
ಯೂ ಟರ್ನ್ ಹೊಡೆದ ACB ಎಡಿಜಿಪಿ- ಹೈಕೋರ್ಟ್‌ನಿಂದ ನ್ಯಾಯಾಧೀಶರ ವಿರುದ್ಧದ ಅರ್ಜಿ ಹಿಂತೆಗೆತ
ಮಾನ್ಯ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ, ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಯೂಟರ್ನ್ ಹೊಡೆದಿದ್ದಾರೆ. ಮಾನ್ಯ ನ್ಯಾ. ಎಚ್.ಪಿ. ಸಂದೇಶ್ ಆದೇಶ ಹಾಳೆಯಲ್ಲಿ ಮಾಡಿರುವ ಉಲ್ಲೇಖ ಕೈಬಿಡಬೇಕು ಎಂದು ಸೀಮಂತ್ ಕುಮಾರ್ ಸಿಂಗ್ ವಿಭಾಗೀಯ ಪೀಠದ ಮುಂದೆ ಮೊರೆ ಹೋಗಿದ್ದರು.
ಇದೀಗ ಆ ಅರ್ಜಿಯನ್ನು ಹಿಂದಕ್ಕೆ ಪಡೆಯಲು ನ್ಯಾಯಪೀಠದ ಮುಂದೆ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಜ್ಞಾಪನ(ಮೆಮೊ) ಸಲ್ಲಿಸಿದ್ದು, ಈ ಅರ್ಜಿಯನ್ನು ನ್ಯಾಯಪೀಠ ಪರಿಗಣಿಸಿ ಅರ್ಜಿ ಹಿಂದಕ್ಕೆ ಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಿತು.
ರಾಷ್ಟ್ರದ ಗಮನ ಸೆಳೆದಿರುವ ಬೆಂಗಳೂರು ಡಿಸಿ ಲಂಚ ಪ್ರಕರಣದಲ್ಲಿ ಬಂಧಿತ ಉಪ ತಹಶೀಲ್ದಾರ್ ಪಿ ಎಸ್ ಮಹೇಶ್ ಜಾಮೀನು ಅರ್ಜಿ ವಿಚಾರಣೆ ವೇಳೆ, ನ್ಯಾ. ಎಚ್ ಪಿ ಸಂದೇಶ್, ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಬಗ್ಗೆ ಉಲ್ಲೇಖ ಮಾಡಿದ್ದರು. ತಮಗೆ ವರ್ಗಾವಣೆ ಬೆದರಿಕೆ ಹಾಕಲಾಗಿದೆ ಎಂಬುದನ್ನು ಪ್ರಸ್ತಾಪಿಸಿದ್ದ ಅವರು ಈ ಕುರಿತು ಆದೇಶದಲ್ಲಿ ಉಲ್ಲೇಖ ಮಾಡಿದ್ದರು. ಈ ಉಲ್ಲೇಖ ಮಾಡಿದ ಅಂಶಗಳನ್ನು ಕೈಬಿಡುವಂತೆ ಕೋರಿ ಸೀಮಂತ್ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಅದೇ ರೀತಿ, ಸುಪ್ರೀಂ ಕೋರ್ಟ್‌ನಲ್ಲೂ ಸೀಮಂತ್ ವಿಶೇಷ ಮನವಿಯನ್ನು ಸಲ್ಲಿಸಿದ್ದು, ಈ ಅರ್ಜಿ ಗುರುವಾರ ವಿಚಾರಣೆಗೆ ಬರಲಿದೆ.
ಹೈಕೋರ್ಟ್ ನ್ಯಾಯಪೀಠ ಮುಂದೆ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪಿಐಎಲ್‌ನಂತೆ ಪರಿಗಣಿಸಿ ವಿಚಾರಣೆ ನಡೆಸಿದೆ. ತಾನಾಗಲೀ, ಸಚಿವಾಲಯವಾಗಲೀ ಪ್ರತಿವಾದಿಗಳಲ್ಲ. ಇದರಲ್ಲಿ, ತಮ್ಮ ಹಾಗೂ ಎಸಿಬಿ ಸಂಸ್ಥೆಯ ಪ್ರಾಮಾಣಿಕತೆ, ಬದ್ಧತೆಯ ಬಗ್ಗೆ ಟೀಕೆ ಮಾಡಿದ್ದಾರೆ. ಅಲ್ಲದೆ, ತಮ್ಮ ಸರ್ವಿಲ್ ರಿಪೋರ್ಟ್ ಸಲ್ಲಿಸಲು ಕೋರಿದ್ದೂ ಜಾಮೀನು ಅರ್ಜಿಯ ವ್ಯಾಪ್ತಿಯ ಹೊರಗಿದೆ ಎಂದು ಸೀಮಂತ್ ತಮ್ಮ ಅರ್ಜಿಯಲ್ಲಿ ಆಕ್ಷೇಪಿಸಿದ್ದರು.
ಇದರ ಬೆನ್ನಲ್ಲೇ, ಜುಲೈ 7ರಂದು ವಿಚಾರಣೆ ವೇಳೆ ನ್ಯಾ. ಎಚ್ ಪಿ ಸಂದೇಶ್ ACB ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರ ಕುರಿತು ಅವಲೋಕನ ಮಾಡಿದ್ದರು.