-->
ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರ ಪರಿಚಯ ಮಾಲಿಕೆ : ಜಸ್ಟೀಸ್ ಅಮ್ಮೆಂಬಳ ನಾರಾಯಣ ಪೈ

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರ ಪರಿಚಯ ಮಾಲಿಕೆ : ಜಸ್ಟೀಸ್ ಅಮ್ಮೆಂಬಳ ನಾರಾಯಣ ಪೈ

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರ ಪರಿಚಯ ಮಾಲಿಕೆ 



ಜಸ್ಟೀಸ್ ಅಮ್ಮೆಂಬಳ ನಾರಾಯಣ ಪೈ

ಚೀಫ್ ಜಸ್ಟೀಸ್  ; ಹೈಕೋರ್ಟ್ ಆಫ್‌ ಮೈಸೂರು


ನ್ಯಾಯಮೂರ್ತಿ  ಅಮ್ಮೆಂಬಳ ನಾರಾಯಣ ಪೈ  ಇವರು ದಿನಾಂಕ 8.6.1911 ರಂದು ಮಂಗಳೂರಿನ ಪ್ರತಿಷ್ಠಿತ ಗೌಡ ಸಾರಸ್ವತ ಬ್ರಾಹ್ಮಣ   ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ್ ಪೈ ಅವರು ಮಂಗಳೂರಿನಲ್ಲಿ ಖ್ಯಾತ ವಕೀಲರಾಗಿದ್ದರು. ಶ್ರೀನಿವಾಸ್ ಪೈ ಯವರ ಸಹೋದರ  ಕೀರ್ತಿ ಶೇಷ ಅಮ್ಮೆಂಬಳ ಸುಬ್ಬರಾವ್ ಪೈ ಅವರು ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕಿನ ಸಂಸ್ಥಾಪಕರು. ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದ ಇವರು ಮದರಾಸಿನಲ್ಲಿ   ತಮ್ಮ ಪದವಿಯ ವ್ಯಾಸಂಗವನ್ನು ಪೂರೈಸಿದರು. ಮದರಾಸ್ ವಿಶ್ವ  ವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು.


 1935 ನೆಯ ಇಸವಿಯಲ್ಲಿ   ಮದ್ರಾಸ್ ಹೈಕೋರ್ಟಿನ ವಕೀಲರಾಗಿ ನೋಂದಾಯಿಸಿಕೊಂಡು 1956 ರ ವರೆಗೆ ಮದರಾಸಿನಲ್ಲಿ ತಮ್ಮ  ವಕೀಲ ವೃತ್ತಿಯನ್ನು ನಿರ್ವಹಿಸಿದರು.


ರಾಜ್ಯ ಪುನವಿ೯೦ಡಣೆಯ ಬಳಿಕ ಉದಯವಾದ ನೂತನ ಮೈಸೂರು ರಾಜ್ಯದಲ್ಲಿ ತಮ್ಮ ವಕೀಲ ವೃತ್ತಿಯ ಸೇವೆಯನ್ನು ಮುಂದುವರಿಸಲು ಇಚ್ಛಿಸಿದ ಇವರು  1956 ರಲ್ಲಿ ಬೆಂಗಳೂರಿಗೆ ತಮ್ಮ ಕಚೇರಿಯನ್ನು ಸ್ಥಳಾಂತರಿಸಿದರು. 


 1958 ರಲ್ಲಿ  ಮೈಸೂರು ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣ  ವಚನ ಸ್ವೀಕರಿಸಿದರು. ಒಂದು ವರ್ಷದ ಬಳಿಕ   ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.


 ಹೈಕೋರ್ಟ್ ನ್ಯಾಯಾಧೀಶರಾಗಿ ತಮ್ಮ ಅಧಿಕಾರಾವಧಿಯಲ್ಲಿ ಸೇವೆಗೆ ಸ೦ಬ೦ಧಿಸಿದ (Service Matters) ಪ್ರಕರಣಗಳಲ್ಲಿ ಇವರು ನೀಡಿದ ತೀರ್ಪುಗಳು ನೌಕರರಿಗೆ ಬಹಳಷ್ಟು  ಉಪಯುಕ್ತವಾಗಿವೆ. 


*ದಿನಾಂಕ  17.9.1970 ರ೦ದು ಮೈಸೂರು ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡರು.*


ನ್ಯಾಯಮೂರ್ತಿ ಎ. ನಾರಾಯಣ ಪೈಯವರು  ತಮ್ಮ ಅಧಿಕಾರಾವಧಿಯಲ್ಲಿ ನ್ಯಾಯಾ೦ಗ ಇಲಾಖೆಯಲ್ಲಿ ಮಾಡಿದ ಆಡಳಿತಾತ್ಮಕ ಸುಧಾರಣೆಗಳಿ೦ದಾಗಿ ನೌಕರರ ಮನದಲ್ಲಿ ಸ್ಥಿರವಾಗಿ ನೆಲೆಸಿದ್ದಾರೆ.  


1972 ರಲ್ಲಿ ರಾಜ್ಯಾದ್ಯಂತ ನ್ಯಾಯಾಲಯಗಳಲ್ಲಿ  ವಿಚಾರಣೆಗೆ ಬಾಕಿ ಇರುವ   ಪ್ರಕರಣಗಳ ಕುರಿತು ಅಂಕಿ ಅಂಶಗಳನ್ನು ಸ್ವತಃ ಅಧ್ಯಯನ ಮಾಡಿ ಸರಕಾರದ ಮೇಲೆ ಒತ್ತಡ ತಂದುದರಿ೦ದ    ನೂತನ ಹೆಚ್ಚುವರಿ ನ್ಯಾಯಾಲಯಗಳು ರಾಜ್ಯಾದ್ಯಂತ ಸ್ಥಾಪಿಸಲ್ಪಟ್ಟವು.


 ನೌಕರರಿಗೆ  ಸಂಬಂಧಪಟ್ಟಂತೆ *1972 ರಲ್ಲಿ  ವೃಂದ ಮತ್ತು ನೇಮಕಾತಿ ನಿಯಮಗಳನ್ನು (Cadre & Recruitment Rules)* ಹೊಸತಾಗಿ ರಚಿಸಿ ನೂತನವಾಗಿ ಹೆಚ್ಚುವರಿ ಹುದ್ದೆಗಳನ್ನು ಸೃಜಿಸಿದರು. ಇದರಿಂದಾಗಿ ನೌಕರರಿಗೆ ಬಡ್ತಿಯ ಅವಕಾಶ ಹೆಚ್ಚಾಯಿತು.  *ಹ್ಯಾಂಡ್ ಬುಕ್ ಆನ್ ಅಡ್ಮಿನಿಸ್ಟ್ರೇಷನ್ ಅಂಡ್ ಇನ್ಸ್ಪೆಕ್ಷನ್* ಎಂಬ ನಿಯಮಾವಳಿ ಪುಸ್ತಕ ಇವರ ಅವಧಿಯಲ್ಲಿ ರಚಿಸಲ್ಪಟ್ಟು  ಆಡಳಿತದಲ್ಲಿ ದಕ್ಷತೆ ತರುವ ನಿಟ್ಟಿನಲ್ಲಿ  ಮೂರನೇ ಶನಿವಾರದ ತಪಾಸಣೆ ಎಂಬ ನೂತನ ಕ್ರಮ ಆರ೦ಭವಾಯಿತು. 


Karnataka State Subordinate Courts Accounts Rules 1969;

Karnataka civil rules of practice; 

Karnataka criminal rules of practice 

ನಿಯಮಗಳಿಗೆ ಅಮೂಲಾಗ್ರ ತಿದ್ದುಪಡಿ ತಂದು ಹೊಸದಾಗಿ ರಚಿಸಲಾಯಿತು. ಸದರಿ ನಿಯಮಾವಳಿಗಳು ರಚಿಸಲ್ಪಟ್ಟು *ಐವತ್ತು ವರ್ಷಗಳು ಕಳೆದರೂ ಯಾವುದೇ ಮಹತ್ವದ ತಿದ್ದುಪಡಿ ಆಗಿರುವುದಿಲ್ಲ.* ಪ್ರಸ್ತುತ ನ್ಯಾಯಾಂಗ ಆಡಳಿತದಲ್ಲಿ ನೂತನ ತಂತ್ರಜ್ಞಾನ ವ್ಯವಸ್ಥೆಯು ಮಹತ್ತರ ಪಾತ್ರ ವಹಿಸಿರುವ  ಈ ಕಾಲಘಟ್ಟದಲ್ಲಿ ಸದರಿ ನಿಯಮಾವಳಿಗಳಿಗೆ ಅಮೂಲಾಗ್ರ ತಿದ್ದುಪಡಿ ತರುವ ಅವಶ್ಯಕತೆ ಇದೆ.   


ಇವರು ನೀಡಿದ ಹಲವಾರು ತೀರ್ಪುಗಳು Mysore Law Journal ನಲ್ಲಿ ಮತ್ತು Karnataka Law Journal ನಲ್ಲಿ  ಪ್ರಕಟವಾಗಿವೆ. 


  ದಿನಾಂಕ 7.6.1973 ರಂದು ಮೈಸೂರು  ಹೈಕೋರ್ಟಿನ ಮುಖ್ಯ  ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾದ ಬಳಿಕ ಆಗಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ್ ಅರಸ್ ಅವರ ಸರಕಾರವು ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಸೇವಾ ಸ್ಥಿತಿಗತಿಗಳ ಸುಧಾರಣೆಗಾಗಿ ನ್ಯಾಯಮೂರ್ತಿ ಎ. ನಾರಾಯಣ ಪೈ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ದಿನಾಂಕ 13.8.1974 ರ೦ದು ರಚಿಸಿತು.


*ದೇಶದಲ್ಲೇ ಮೊತ್ತ ಮೊದಲ ಬಾರಿಗೆ ವೈಜ್ಞಾನಿಕವಾಗಿ ನೌಕರರ ವೇತನವನ್ನು ಪರಿಷ್ಕರಿಸಿದ ಕೀರ್ತಿ ನ್ಯಾಯಮೂರ್ತಿ ಎ.  ನಾರಾಯಣ ಪೈ ಆಯೋಗಕ್ಕೆ ಸಲ್ಲುತ್ತದೆ.*  ನೂತನವಾಗಿ Master Scale  ರಚಿಸಲಾಯಿತು. ವಾಷಿ೯ಕ ವೇತನ ಭಡ್ತಿ  ( Annual increment) ದರವನ್ನು ಸರಿಯಾಗಿ ಅರ್ಥೈಸಿ ಉತ್ತಮ ಪಡಿಸಲಾಯಿತು. ನೌಕರರ ವಿದ್ಯಾರ್ಹತೆಗೆ ಅನುಗುಣವಾಗಿ ಹೆಚ್ಚುವರಿ ವೇತನ ಬಡ್ತಿಗಳನ್ನು (Graduation increment) ನೀಡಲಾಯಿತು. ತಾಂತ್ರಿಕ ಜ್ಞಾನ ಇರುವ ನೌಕರರಿಗೆ ನೀಡಬೇಕಾದ ವಿಶೇಷ ವೇತನದ ಬಗ್ಗೆ ಶಿಫಾರಸು ಮಾಡಿದ ಆಯೋಗವು ನೌಕರರ *ಮೂಲ ವೇತನವನ್ನು ಮೂರು ಪಟ್ಟು* ಹೆಚ್ಚಿಸುವ ಶಿಫಾರಸಿನೊ೦ದಿಗೆ  ದಿನಾಂಕ 8.3.1976 ರ೦ದು ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು.

ನಾರಾಯಣ ಪೈ ಆಯೋಗದ ವರದಿಯಲ್ಲಿ ಕೆಳಕಂಡ ಪ್ರಮುಖ ಶಿಫಾರಸುಗಳಿದ್ದವು.

ಸರಕಾರದಲ್ಲಿನ ಎಲ್ಲಾ ಹುದ್ದೆಗಳನ್ನು ಎಂಟು ಪ್ರವರ್ಗಗಳಲ್ಲಿ ವರ್ಗೀಕರಿಸಲಾಯಿತು.

 ಪ್ರತಿಯೊಂದು ಪ್ರವರ್ಗದ ಪ್ರಾರಂಭಿಕ ಹಂತದಲ್ಲಿ ಏಕರೂಪದ ವೇತನ ಶ್ರೇಣಿಯನ್ನು ನಿಗದಿಪಡಿಸಲಾಯಿತು. 

ವೇತನ ಶ್ರೇಣಿಗಳ ಸಂಖ್ಯೆಯನ್ನು 15ಕ್ಕೆ ಇಳಿಸಲಾಯಿತು. 

ಕನಿಷ್ಠ ವೇತನವನ್ನು ರೂಪಾಯಿ 65 ರಿಂದ 250 ಕ್ಕೆ ಏರಿಸುವುದು ಮತ್ತು ಕನಿಷ್ಠ ವೇತನವನ್ನು ರೂಪಾಯಿ 2750 ಕ್ಕೆ ನಿಗದಿಪಡಿಸಲಾಯಿತು.

ವೇತನ ಶ್ರೇಣಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಯಿತು.

ಎ) ಮೂಲವೇತನ

ಬಿ) ಸಾಮಾನ್ಯೋದ್ದೇಶ ವೇತನ

ನ್ಯಾಯಮೂರ್ತಿ ಎ. ನಾರಾಯಣ ಪೈ ವೇತನ ಆಯೋಗದ ವರದಿಯು ಅನುಷ್ಠಾನಗೊಂಡಲ್ಲಿ ಸರ್ಕಾರಕ್ಕೆ  ಉಂಟಾಗಬಹುದಾದ  ಹೆಚ್ಚುವರಿ  ಆರ್ಥಿಕ ಹೊರೆಯ ಬಗ್ಗೆ ಅದ್ಯಯನ ನಡೆಸಲು ಅಧಿಕಾರಿ ವೇತನ ಸಮಿತಿಯನ್ನು ರಚಿಸಿದ ಸರಕಾರವು  ಅಂತಿಮವಾಗಿ ಅಮ್ಮೆಂಬಳ  ನಾರಾಯಣ ಪೈ ವೇತನ ಆಯೋಗದ ವರದಿಯನ್ನು ದಿನಾಂಕ 1.1.1977 ರ೦ದು ಅಂಗೀಕರಿಸಿತು. 

ಮುಖ್ಯ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಘಟಕದ ಅಧಿಕೃತ  ಭೇಟಿಯ ಸ೦ದಭ೯ ಹಳೆಯ ಕಟ್ಟಡದಲ್ಲಿರುವ ಜಿಲ್ಲಾ ನ್ಯಾಯಾಲಯದ  ನ್ಯಾಯಾ೦ಗಣದಲ್ಲಿ ವಕೀಲರೊ೦ದಿಗೆ ಸೌಹಾರ್ದಯುತ ಸ೦ವಹನ ಕಾರ್ಯಕ್ರಮದಲ್ಲಿ   ಪಾಲ್ಗೊಂಡಿದ್ದರು. 


ಹೈಕೋರ್ಟಿನಲ್ಲಿ  ವಕೀಲ ವೃತ್ತಿಯನ್ನು ಮುಂದುವರಿಸಿದಲ್ಲಿ  ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಬೆಳವಣಿಗೆಗಳನ್ನು ಕಂಡುಕೊಳ್ಳಬಹುದು ಎಂಬ ನ್ಯಾಯಮೂರ್ತಿ  ಅಮ್ಮೆಂಬಳ  ನಾರಾಯಣ ಪೈ ಯವರ ಪ್ರೋತ್ಸಾಹದ ನುಡಿಗಳಿ೦ದ ಪ್ರೇರಿತರಾದ ಮ೦ಗಳುಾರಿನ   ಕೆಲವು ವಕೀಲರು ತಮ್ಮ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದರು.

ನ್ಯಾಯಾಂಗ ನೌಕರರ ಹಾಗೂ ರಾಜ್ಯ ಸರಕಾರಿ ನೌಕರರ ವೇತನ ಮತ್ತು ಸೇವಾ ಸ್ಥಿತಿಗತಿಗಳ ಬಗ್ಗೆ  ಸುಧಾರಣೆಯನ್ನು ತಂದ ನ್ಯಾಯಮೂರ್ತಿ ಅಮ್ಮೆಂಬಳ  ನಾರಾಯಣ ಪೈ ಅವರ ಹೆಸರು  ನೌಕರರ ಮನದಲ್ಲಿ ಹಸಿರಾಗಿ ನೆಲೆಸಿದೆ.

✍️ ಪ್ರಕಾಶ್ ನಾಯಕ್

Ads on article

Advertise in articles 1

advertising articles 2

Advertise under the article