-->
Birth & Death : ಜನನ ಪ್ರಮಾಣಪತ್ರದಲ್ಲಿ ಕೇವಲ ತಾಯಿ ಹೆಸರು: ಮಗುವಿನ ಮೂಲಭೂತ ಹಕ್ಕು ಎಂದ ಕೇರಳ ಹೈಕೋರ್ಟ್‌

Birth & Death : ಜನನ ಪ್ರಮಾಣಪತ್ರದಲ್ಲಿ ಕೇವಲ ತಾಯಿ ಹೆಸರು: ಮಗುವಿನ ಮೂಲಭೂತ ಹಕ್ಕು ಎಂದ ಕೇರಳ ಹೈಕೋರ್ಟ್‌

ಜನನ ಪ್ರಮಾಣಪತ್ರದಲ್ಲಿ ಕೇವಲ ತಾಯಿ ಹೆಸರನ್ನು ಮಾತ್ರ ಸೇರಿಸುವುದೂ ಮಗುವಿನ ಮೂಲಭೂತ ಹಕ್ಕು: ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು





ತನ್ನ ಜನನ ಪ್ರಮಾಣ ಪತ್ರದಲ್ಲಿ ಕೇವಲ ತಾಯಿಯ ಹೆಸರನ್ನು ಮಾತ್ರ ನಮೂದಿಸುವ ಹಕ್ಕನ್ನು ಪ್ರತಿಯೊಬ್ಬ ಭಾರತೀಯನೂ ಹೊಂದಿದ್ದಾನೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಏಕ ಪೋಷಕಿ, ಅವಿವಾಹಿತ ತಾಯಿ ಅಥವಾ ಅತ್ಯಾಚಾರ ಸಂತ್ರಸ್ತೆಯ ಮಗು ಕೂಡ ದೇಶದ ಅಧಿಕಾರಯುತ ಪ್ರಜೆಯಾಗಿದ್ದು, ಆ ಮಗುವಿನ ಮೂಲಭೂತ ಹಕ್ಕನ್ನು ಯಾರೂ ಮೊಟಕುಗೊಳಿಸಲಾಗದು ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.


ಪ್ರಕರಣ: XXX ಮತ್ತಿತರರು VS ಪಟ್ಟಣಂತಿಟ್ಟ ಜನನ ಮರಣ ನೋಂದಣಾಧಿಕಾರಿ ಮತ್ತಿತರರು

ಕೇರಳ ಹೈಕೋರ್ಟ್(ಎರ್ನಾಕುಲಂ ಪೀಠ) WP(c) No. 4262/2022 Dated 19-07-2022


ವಿವಾಹೇತರ ಸಂಬಂಧ, ವಿವಾಹಪೂರ್ವದ ಪ್ರಸವ ಯಾ ಅತ್ಯಾಚಾರದ ಸಂತ್ರಸ್ತರು ಅಥವಾ ಗುರುತಿಸಲಾಗದ ವ್ಯಕ್ತಿಯಿಂದ ಗರ್ಭ ಧರಿಸಿದವರನ್ನು ಮತ್ತು ಅವರ ಖಾಸಗಿತನ, ಘನತೆ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಯಾರೂ ಉಲ್ಲಂಘಿಸಲಾಗದು ಎಂದು ಕೇರಳ ಹೈಕೋರ್ಟ್‌ ನ್ಯಾಯಪೀಠ ತಿಳಿಸಿದೆ.


ತೀರ್ಪು ನೀಡುವಾದ ನ್ಯಾ. ಪಿ ವಿ ಕುಂಞಿಕೃಷ್ಣನ್ ಪೌರಾಣಿಕ ಕಥೆ ಕರ್ಣಶಪಥಂ ಭಾಗವನ್ನು ಉಲ್ಲೇಖಿಸಿದರು. ಕರ್ಣ ತನ್ನ ಜೀವಮಾನವಿಡೀ ಅನುಭವಿಸಿದ ಯಾತನೆ, ಸಂಕಟ ಮತ್ತು ಅಪಮಾನ ಯಾರಿಗೂ ಬರಬಾರದು. ತಂದೆ ಯಾರು ಎಂದು ಗೊತ್ತಿಲ್ಲದೆ ಕರ್ಣ ಪಡಬಾರದ ನೋವು ಅನುಭವಿಸಿದ ಎಂದು ಅವರು ತೀರ್ಪಿನಲ್ಲಿ ಉದ್ದರಿಸಿದರು.


ಇದೇ ವೇಳೆ, ಸುಪ್ರೀಂ ಕೋರ್ಟ್‌ Suchita Srivastava and Another v. Chandigarh Administration (AIR 2010 SC 235) ಪ್ರಕರಣದಲ್ಲಿ ನೀಡಿದ ಮಹತ್ವದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಸಂವಿಧಾನದ ಆರ್ಟಿಕಲ್ 21ರ ಪ್ರಕಾರ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಗೆ ಹಲವು ಆಯಾಮಗಳಿವೆ ಎಂಬುದನ್ನು ಸ್ಪಷ್ಟಪಡಿಸಿತು.


ತಂದೆಯ ಹೆಸರನ್ನು ನಮೂದಿಸದೆ ಕೇವಲ ತಾಯಿಯ ಹೆಸರನ್ನು ಮಾತ್ರ ನಮೂದಿಸಬೇಕು ಎಂದು ಕೋರಿ ಸಲ್ಲಿಸಲಾದ ಪ್ರಕರಣದ ಅರ್ಜಿ ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.


ನಾಗರಿಕ ಸಮಾಜದಲ್ಲಿ ಹೆಣ್ಣಿನ ಪಾತ್ರ ಮಹತ್ವದ್ದು ಮತ್ತು ಅತಿ ಸೂಕ್ಷ್ಮವಾದದ್ದು. ಅತ್ಯಾಚಾರಕ್ಕೊಳಗಾದವರ, ಅವಿವಾಹಿತ ತಾಯಂದಿರೂ ದೇಶದ ಪ್ರಜೆಗಳೇ. ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಯಾರೂ ಉಲ್ಲಂಘಿಸಲಾಗದು. ಜನನ ಪ್ರಮಾಣಪತ್ರ, ಗುರುತಿನ ಪ್ರಮಾಣಪತ್ರಗಳು ಮತ್ತಿತರ ದಾಖಲೆಗಳಲ್ಲಿ ತನ್ನ ತಾಯಿಯ ಹೆಸರನ್ನಷ್ಟೇ ಸೇರಿಸುವುದು ವ್ಯಕ್ತಿಯ ಹಕ್ಕು ಎಂದು ನ್ಯಾಯಪೀಠ ತೀರ್ಪು ನೀಡಿತು.


ಅಂತಹ ವ್ಯಕ್ತಿಗಳ "ಗುರುತು ಮತ್ತು ಗೌಪ್ಯತೆ" ಬಹಿರಂಗಪಡಿಸದೆ ಇತರೆ ನಾಗರಿಕರಿಗೆ ಸಮನಾಗಿ ರಕ್ಷಣೆಯನ್ನು ಪ್ರಭುತ್ವ ನೀಡಬೇಕು. ಅವರ ವೈಯಕ್ತಿಕ ಜೀವನಕ್ಕೆ ಯಾರೂ ಅಡ್ಡಿಪಡಿಸಬಾರದು. ಈ ಹಕ್ಕಿಗೆ ಧಕ್ಕೆಯಾದರೆ, ನಮ್ಮ ನೆಲದ ಕಾನೂನು ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ. 'ಮಹಿಳೆ'ಯ ಸಂತಾನೋತ್ಪತ್ತಿ ಆಯ್ಕೆಯು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.



Judgement Copy:

XXX ಮತ್ತಿತರರು VS ಪಟ್ಟಣಂತಿಟ್ಟ ಜನನ ಮರಣ ನೋಂದಣಾಧಿಕಾರಿ ಮತ್ತಿತರರು

Ads on article

Advertise in articles 1

advertising articles 2

Advertise under the article