PSI ನೇಮಕಾತಿ ಹಗರಣ ಸಮಾಜದ ಮೇಲಿನ ದಾಳಿ: ಗಂಭೀರ ಆತಂಕ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್
PSI ನೇಮಕಾತಿ ಹಗರಣ ಸಮಾಜದ ಮೇಲಿನ ದಾಳಿ: ಗಂಭೀರ ಆತಂಕ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್
PSI ನೇಮಕಾತಿ ಹಗರಣ ಒಂದು ಕೊಲೆ ಪ್ರಕರಣಕ್ಕಿಂತಲೂ ಭೀಕರವಾಗಿದೆ. ಕೊಲೆಯಲ್ಲಿ ಒಂದಿಬ್ಬರು ಬಾಧಿತರಾಗುತ್ತಾರೆ. ಆದರೆ. ಈ ಪ್ರಕರಣದಲ್ಲಿ ಇಡೀ ಸಮಾಜವೇ ಬಾಧೆಗೊಳಗಾಗಿದೆ. ಈ ರೀತಿ ಅಕ್ರಮವಾಗುತ್ತಿದ್ದಾಗ ನ್ಯಾಯಪೀಠ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
PSI ಪ್ರಕರಣದ ಅರೋಪಿಗಳ ಜಾಮೀನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ನೇತೃತ್ವದ ಏಕಸದಸ್ಯ ಪೀಠ ಈ ಗಂಭೀರ ಟಿಪ್ಪಣಿ ಮಾಡಿದೆ.
"PSI ನೇಮಕಾತಿ ಹಗರಣ ಕೊಲೆಗಿಂತಲೂ ಭೀಕರ.. ಕೊಲೆ ತರಹದ ಅಪರಾಧ ಎಸಗುವುದಕ್ಕಿಂತಲೂ ಇದು ಭಿನ್ನವಾಗಿದೆ. ಹಿಂದಿನ ಆದೇಶದಲ್ಲಿ, ಈ ಪ್ರಕರಣದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಉಲ್ಲೇಖಿಸಿದ್ದೇನೆ. ಹಾಗಾಗಿ, ಇದು ಸಮಾಜದ ಮೇಲಿನ ದಾಳಿ. ಹಗರಣದಿಂದ ಸಮಾಜಕ್ಕೆ ಧಕ್ಕೆಯಾಗಿದೆ. ಈ ರೀತಿ ಎಲ್ಲಾ ನೇಮಕಾತಿಗಳಲ್ಲೂ ಪರೀಕ್ಷೆ ನಡೆಸಲು ಬಿಟ್ಟು ನ್ಯಾಯಪೀಠ ಕಣ್ಮುಚ್ಚಿ ಕೂರಬೇಕೇ..?” ಎಂದು ಕಟು ಶಬ್ಧಗಳಲ್ಲಿ ನ್ಯಾಯಪೀಠ ಪ್ರಶ್ನಿಸಿದೆ.
ಜಾಮೀನು ಅರ್ಜಿಗೆ ಒಂದು ಗಂಟೆ ವಾದ ಮಾಡಿದ ವಕೀಲರು
ಆರೋಪಿಯ ಪರ ವಾದ ಮಂಡಿಸಿದ ವಕೀಲರು ಆರೋಪಿಗೆ ಜಾಮೀನು ನೀಡಬೇಕು ಎಂದು ಕೋರಿ ಒಂದು ಗಂಟೆಯ ವಾದ ಮಂಡಿಸಿದರು. ಇದನ್ನೂ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಇಷ್ಟೊಂದು ಸುದೀರ್ಘ ವಾದ ಅಗತ್ಯವಿತ್ತೇ..? ಜಾಮೀನು ಮಂಜೂರು ಮಾಡಲು ಆಧಾರಗಳೇನು ಎಂದು ಹೇಳಬೇಕು ಅಷ್ಟೇ.. ನಾವು ಮಧ್ಯಪ್ರವೇಶಿಸಿದರೆ ನಿಮ್ಮ ವಿಚಾರಗಳಿಗೆ ತಡೆಯಾಗುತ್ತದೆ ಎಂಬ ಕಾರಣಕ್ಕೆ ನಾವು ಸುಮ್ಮನೆ ಕೂರಬೇಕಾಯಿತು ಎಂದು ಸಂದೇಶ್ ವಕೀಲರಿಗೆ ಮಾತಿನಲ್ಲೇ ಚುಚ್ಚಿದರು.
ಅರ್ಜಿದಾರ ಆರೋಪಿಗಳ ಪರ ವಕೀಲರು ಜಾಮೀನು ಕೋರಿ ಸುದೀರ್ಘ ವಾದ ಮಂಡಿಸಿದರು. ಇದಕ್ಕೆ ನ್ಯಾಯಪೀಠವು ಮೇಲಿನಂತೆ ಹೇಳಿತು. ಜಾಮೀನು ಕೋರಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಒಂದು ಗಂಟೆ ವಾದ ಮಂಡಿಸುವುದು ಅಗತ್ಯವೇ? ಜಾಮೀನು ನೀಡಲು ಆಧಾರಗಳನ್ನು ಮಂಡಿಸಬೇಕು ಅಷ್ಟೆ. ನ್ಯಾಯಾಲಯ ಏನಾದರೂ ಪ್ರಶ್ನೆ ಹಾಕಿದರೆ ನಿಮ್ಮ ವಿಚಾರಗಳಿಗೆ ತೊಡಕಾಗುತ್ತದೆ ಎಂದು ನಾನು ಸುಮ್ಮನೆ ಕುಳಿತುಕೊಳ್ಳಬೇಕಾಯಿತು ಎಂದು ಅರ್ಜಿದಾರರ ಪರ ವಕೀಲರನ್ನು ಪೀಠವು ಛೇಡಿಸಿತು.
ಪ್ರಕರಣದಲ್ಲಿ, ಆರೋಪಿಗಳಿಂದ ಇದುವರೆಗೆ ಸುಮಾರು 2.5 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರಿ ವಕೀಲರು ನೀಡಿದರು.