-->
How to obtain Certified Copy from Court- ಕೋರ್ಟ್‌ ಕೇಸುಗಳ ದಾಖಲೆ ಪಡೆಯುವುದು ಹೇಗೆ..? ಖಾಸಗಿ ದಾಖಲೆಯ ದೃಢೀಕೃತ ನಕಲು ಸಿಗುತ್ತಾ..?

How to obtain Certified Copy from Court- ಕೋರ್ಟ್‌ ಕೇಸುಗಳ ದಾಖಲೆ ಪಡೆಯುವುದು ಹೇಗೆ..? ಖಾಸಗಿ ದಾಖಲೆಯ ದೃಢೀಕೃತ ನಕಲು ಸಿಗುತ್ತಾ..?

ಕೋರ್ಟ್‌ ಕೇಸುಗಳ ದಾಖಲೆ ಪಡೆಯುವುದು ಹೇಗೆ..? ಖಾಸಗಿ ದಾಖಲೆಯ ದೃಢೀಕೃತ ನಕಲು ಸಿಗುತ್ತಾ..?


ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪಕ್ಷಕಾರರು ಹಾಜರು ಪಡಿಸಿದ ಯಾವುದೇ ಸ್ವರೂಪದ ದಸ್ತಾವೇಜುಗಳ ದೃಢೀಕೃತ ನಕಲನ್ನು ನೀಡಬಹುದೇ? 





ನ್ಯಾಯಾಲಯದ ದೈನಂದಿನ ವ್ಯವಹಾರಗಳಲ್ಲಿ ನಕಲು ವಿಭಾಗದ ಪಾತ್ರ ಮಹತ್ತರವಾದದ್ದು. ನ್ಯಾಯಾಲಯದ ಆದೇಶಗಳ ದೃಢೀಕೃತ ನಕಲುಗಳನ್ನು ಪಕ್ಷಕಾರರಿಗೆ ನೀಡುವ ಮಹತ್ವದ ಜವಾಬ್ದಾರಿ ನಕಲು ವಿಭಾಗಕ್ಕೆ ಇದೆ.


ನ್ಯಾಯಾಲಯದ ಆದೇಶಗಳ ದೃಢೀಕೃತ ನಕಲುಗಳನ್ನು ಒದಗಿಸುವುದರ ಜೊತೆಗೆ ಪಕ್ಷಕಾರರು ಹಾಜರುಪಡಿಸಿದ ದಸ್ತಾವೇಜುಗಳನ್ನು ಕೋರಿ ಅರ್ಜಿ ಸಲ್ಲಿಸಿದಾಗ ಸದರಿ ದಸ್ತಾವೇಜುಗಳ ದೃಢೀಕೃತ ನಕಲುಗಳನ್ನು ಪಕ್ಷಕಾರರಿಗೆ ಒದಗಿಸಬಹುದೇ? ಬೇಡವೇ? ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರುಗಳ ನಡುವೆ ಆಗಾಗ ವಾದ-ವಿವಾದಗಳು ನಡೆಯುತ್ತಿರುವುದನ್ನು ನಾವು ಕಾಣಬಹುದು.


ಸಾಮಾನ್ಯವಾಗಿ ದಾಖಲೆಗಳನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು.

೧) ಸಾರ್ವಜನಿಕ ದಾಖಲೆಗಳು.

೨) ಖಾಸಗಿ ದಾಖಲೆಗಳು.

ಸರಕಾರದ ವಿವಿಧ ಇಲಾಖೆಗಳಲ್ಲಿ ತಯಾರಾದ ದಾಖಲೆಗಳು ಸಾರ್ವಜನಿಕ ದಾಖಲೆಗಳಾಗಿವೆ. ಹಾಗೆಯೇ ಖಾಸಗಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಸಂಬಂಧ ಪಟ್ಟ ದಾಖಲೆಗಳು ಖಾಸಗಿ ದಾಖಲೆಗಳಾಗಿವೆ.


ಹಾಗೆಯೇ ದಾಖಲೆಗಳ ಸ್ವರೂಪವನ್ನು ಪರಿಶೀಲಿಸಿದಾಗ ಮೂಲ ದಾಖಲೆಗಳು ಮತ್ತು ದೃಢೀಕೃತ ದಾಖಲೆಗಳು ಎಂಬುದಾಗಿ ದಾಖಲೆಗಳನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು.


ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯವು ಸಿವಿಲ್ ಪ್ರಕರಣದಲ್ಲಿ ರಚಿಸಿದ ವಿವಾದಾಂಶಗಳು, ಪಕ್ಷಕಾರರು ನೀಡಿದ ಸಾಕ್ಷ್ಯ, ಸಾಕ್ಷಿ ವಿಚಾರಣೆಯ ಸಂದರ್ಭದಲ್ಲಿ ಗುರುತಿಸಲಾದ ನಿಶಾನೆಗಳು, ಕೋರ್ಟು ಕಮಿಷನರ್ ನೀಡಿದ ವರದಿ, ನ್ಯಾಯಾಲಯವು ನೀಡಿದ ತೀರ್ಪು ಇತ್ಯಾದಿಗಳು ನ್ಯಾಯಾಲಯದ ದಾಖಲೆಗಳಾಗಿವೆ. ಹಾಗೆಯೇ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ದೋಷಾರೋಪಣೆ, ಆರೋಪಿಯ ಹೇಳಿಕೆ, ಸಾಕ್ಷಿಗಳು ನೀಡಿದ ಸಾಕ್ಷ್ಯ, ನ್ಯಾಯಾಲಯ ನೀಡಿದ ತೀರ್ಪು ಇತ್ಯಾದಿ ಎಲ್ಲಾ ದಾಖಲೆಗಳು ನ್ಯಾಯಾಲಯದ ದಾಖಲೆಗಳಾಗಿವೆ. ನ್ಯಾಯಾಲಯದ ದಾಖಲೆಗಳು ಕೂಡ ಕೂಡ ಸಾರ್ವಜನಿಕ ದಾಖಲೆಗಳಾಗಿರುತ್ತವೆ. ಸದರಿ ದಾಖಲೆಗಳ ದೃಢೀಕೃತ ಪ್ರತಿಗಳನ್ನು ನಿಯಮಾನುಸಾರ ನಕಲು ಅರ್ಜಿ ಸಲ್ಲಿಸಿ ಪಡೆಯಲು ಪಕ್ಷಕಾರರಿಗೆ ಅವಕಾಶವಿದ.


ಪ್ರಕರಣದಲ್ಲಿ ಹಾಜರುಪಡಿಸಲಾದ ಆದರೆ ನಿಶಾನೆಯಾಗಿ ಗುರುತಿಸಲ್ಪಡದ ದಾಖಲೆಗಳ ದೃಢೀಕೃತ ನಕಲುಗಳನ್ನು ಪಡೆಯಲು ಪಕ್ಷಗಾರರಿಗೆ ಅವಕಾಶವಿದೆಯೇ? ಪ್ರಕರಣದಲ್ಲಿ ನಿಶಾನೆಯಾಗಿ ಗುರುತಿಸಲ್ಪಡದ ದಸ್ತಾವೇಜುಗಳು ನ್ಯಾಯಾಲಯದ ದಸ್ತಾವೇಜುಗಳಲ್ಲ. ಆದುದರಿಂದ ಸದರಿ ದಸ್ತಾವೇಜುಗಳ ದೃಢೀಕೃತ ನಕಲುಗಳನ್ನು ಸದರಿ ದಸ್ತಾವೇಜುಗಳು ಯಾವ ಕಚೇರಿಯಲ್ಲಿ ತಯಾರಾಗಿವೆಯೋ ಆ ಕಚೇರಿಯಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಪಡೆಯಬೇಕಾದದ್ದು ಸೂಕ್ತ ಕ್ರಮವಾಗಿದೆ.


ಆದರೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾದ ಹಾಗೂ ನಿಶಾನೆಯಾಗಿ ಗುರುತಿಸಲ್ಪಡದ ದಸ್ತಾವೇಜುಗಳ ದೃಢೀಕೃತ ನಕಲುಗಳನ್ನು ಕೋರಿ ಅರ್ಜಿಗಳನ್ನು ಸಲ್ಲಿಸಿದ ಸಂದರ್ಭದಲ್ಲಿ ಸದರಿ ದಸ್ತಾವೇಜುಗಳು ನ್ಯಾಯಾಲಯದ ದಸ್ತಾವೇಜುಗಳು ಅಲ್ಲ. ಹಾಗಾಗಿ ಸದರಿ ದಸ್ತಾವೇಜುಗಳ ದೃಢೀಕೃತ ನಕಲುಗಳನ್ನು ನೀಡಲು ಅಸಾಧ್ಯ ಎಂಬ ಹಿಂಬರದೊಂದಿಗೆ ನಕಲು ಅರ್ಜಿಯನ್ನು ತಿರಸ್ಕರಿಸಿದ ಹಲವಾರು ನಿದರ್ಶನಗಳು ಇವೆ.


ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಜರುಪಡಿಸಲಾದ ದಸ್ತಾವೇಜುಗಳು ಮೂಲ ದಸ್ತಾವೇಜುಗಳು ಆಗಿರದೆ ದೃಢೀಕೃತ ನಕಲುಗಳಾಗಿದ್ದಲ್ಲಿ ಅಥವಾ ಜೆರಾಕ್ಸ್ ಪ್ರತಿಗಳಾಗಿದ್ದಲ್ಲಿ ಅಂತಹ ದಸ್ತಾವೇಜುಗಳ ದೃಢೀಕೃತ ನಕಲುಗಳನ್ನು ನೀಡಬಹುದೇ ಎಂಬ ಬಗ್ಗೆ ಕೂಡ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರುಗಳ ನಡುವೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಭಾರತೀಯ ಸಾಕ್ಷ ಅಧಿನಿಯಮದ ಪ್ರಕಾರ ಯಾವುದೇ ದಸ್ತಾವೇಜು ದೃಢೀಕೃತ ನಕಲು ಆಗಿದ್ದಲ್ಲಿ ಸದರಿ ದಸ್ತಾವೇಜಿನ ದೃಢೀಕೃತ ನೀಡಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆ.


ದೃಢೀಕೃತ ನಕಲುಗಳನ್ನು ಕೋರಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿದ ಮೂರು ಪ್ರಕರಣಗಳು ಮಾನ್ಯ ಕರ್ನಾಟಕ ಹೈಕೋರ್ಟ್ ನ ಮೆಟ್ಟಲೇರಿದ್ದು ಸದರಿ ಪ್ರಕರಣಗಳಲ್ಲಿ ನೀಡಿದ ತೀರ್ಪು ಅರ್ಜಿದಾರರ ಪರವಾಗಿದ್ದು ಪ್ರಸ್ತುತ ಅರ್ಜಿದಾರರು ಕೋರಿದ ಯಾವುದೇ ಸ್ವರೂಪದ ದಸ್ತಾವೇಜುಗಳ ದೃಢೀಕೃತ ನಕಲುಗಳನ್ನು ನ್ಯಾಯಾಲಯ ನೀಡತಕ್ಕದ್ದಾಗಿದೆ.


1) J.R.R.Naidu v/s Registrar City Civil Court (Karnataka High Court)


ಈ ಪ್ರಕರಣದಲ್ಲಿ ವಾದಪತ್ರದೊಂದಿಗೆ ಸಲ್ಲಿಸಲಾದ ದಾಖಲೆಗಳ ದೃಢೀಕೃತ ನಕಲುಗಳನ್ನು ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಸಲ್ಲಿಸಲಾದ ನಕಲು ಅರ್ಜಿಯನ್ನು ದಾಖಲೆಗಳು ನಿಶಾನೆಯಾಗಿ ಗುರುತಿಸಲ್ಪಟ್ಟಿಲ್ಲ ಎಂಬ ಕಚೇರಿ ಆಕ್ಷೇಪಣೆಯೊಂದಿಗೆ ತಿರಸ್ಕರಿಸಲಾಗಿತ್ತು. ಸದರಿ ಆದೇಶವನ್ನು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು. ಗೌರವಾನ್ವಿತ ನ್ಯಾಯಮೂರ್ತಿ ಎಸ್. ರಾಜೇಂದ್ರ ಬಾಬು ಅವರ ನ್ಯಾಯಪೀಠದ ಸಮಕ್ಷಮ ಈ ಬಗ್ಗೆ ವಿಚಾರಣೆ ನಡೆದು ವಾದಪತ್ರಕ್ಕೆ ಸಂಬಂಧಪಟ್ಟ ದಾಖಲೆಗಳ ದೃಢೀಕೃತ ನಕಲುಗಳನ್ನು ಪಕ್ಷಕಾರರಿಗೆ ನೀಡಲು ಕರ್ನಾಟಕ ಸಿವಿಲ್ ರೂಲ್ಸ್ ಆಫ್ ಪ್ರಾಕ್ಟೀಸ್‌ನ ನಿಯಮ 230 ರಡಿ ಯಾವುದೇ ತೊಡಕು ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಮಾನ್ಯ ಹೈಕೋರ್ಟ್ ಅರ್ಜಿದಾರರು ಕೋರಿದ ದಸ್ತಾವೇಜುಗಳ ದೃಢೀಕೃತ ನಕಲನ್ನು ನೀಡುವಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನ ವಿಲೇಖನಾಧಿಕಾರಿಗಳಿಗೆ ಆದೇಶಿಸಿತು.


2) A.A.Kilachand v/s State of Karnataka (Karnataka High Court)


ಈ ಪ್ರಕರಣದ ಸಾರಾಂಶವೇನೆಂದರೆ ಕ್ರಿಮಿನಲ್ ಪ್ರಕರಣದಲ್ಲಿ ಹಾಜರುಪಡಿಸಲಾದ ದಸ್ತಾವೇಜುಗಳ ದೃಢೀಕೃತ ನಕಲನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ಸದರಿ ದಸ್ತಾವೇಜು ನಿಶಾನೆಯಾಗಿ ಗುರುತಿಸಲ್ಪಟ್ಟಿಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಲಾಗಿತ್ತು. ಸದರಿ ಆದೇಶದಿಂದ ಬಾದಿತರಾದ ಅರ್ಜಿದಾರರು ಹೈಕೋರ್ಟ್ ನಲ್ಲಿ ಕ್ರಿಮಿನಲ್ ಪಿಟಿಷನ್ ಸಂಖ್ಯೆ 1440/1991 ರಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದರು. ಗೌರವಾನ್ವಿತ ನ್ಯಾಯಮೂರ್ತಿ ಹನುಮಂತಪ್ಪ ಅವರು ನ್ಯಾಯಪೀಠವು ವಿಚಾರಣೆ ನಡೆಸಿ ಕ್ರಿಮಿನಲ್ ರೂಲ್ಸ್ ಆಫ್ ಪ್ರಾಕ್ಟೀಸ್ ನ ಅಧ್ಯಾಯ 14 ನಿಯಮ 2 ರ ಪ್ರಕಾರ ದೃಢೀಕೃತ ನಕಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಕೋರಿರುವ ದಸ್ತಾವೇಜಿನ ದೃಢೀಕೃತ ನಕಲುಗಳನ್ನು ಪಕ್ಷಕಾರರಿಗೆ ನೀಡುವಂತೆ ಆದೇಶಿಸಿದರು.


3) S.Sathish Kumar v/s The Registrar (Karnataka High Court)


ಈ ಪ್ರಕರಣದಲ್ಲಿ ಖಾಸಗಿ ದೂರಿನ ಜೊತೆಗೆ ಸಲ್ಲಿಸಲಾದ ದಾಖಲೆಗಳ ದೃಡೀಕೃತ ನಕಲುಗಳನ್ನು ಕೋರಿ ಅರ್ಜಿ ಸಲ್ಲಿಸಲಾಗಿತ್ತು ಸದರಿ ದಸ್ತಾವೇಜುಗಳು ಛಾಯಾಪ್ರತಿಗಳು (Xerox) ಆಗಿರುವುದರಿಂದ ದೃಢೀಕೃತ ನಕಲನ್ನು ನೀಡಲು ಸಾಧ್ಯವಿಲ್ಲ ಎಂಬ ಹಿಂಬರಹದೊಂದಿಗೆ ನಕಲು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಸದರಿ ಆದೇಶದಿಂದ ಬಾಧಿತರಾದ ಅರ್ಜಿದಾರರು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಿದ ರಿಟ್ ಅರ್ಜಿ 40684/2017 ಅನ್ನು ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಮೂರ್ತಿ ಎ. ಎಸ್. ಬೋಪಣ್ಣ ಇವರ ನ್ಯಾಯ ಪೀಠವು ಕೋರಿರುವ ದಾಖಲೆಗಳು ಛಾಯಾಪ್ರತಿಯಾಗಿದ್ದರೂ ಸದರಿ ದಾಖಲೆಗಳು ಪ್ರಕರಣದಲ್ಲಿ ಆರೋಪಿಯಾಗಿರುವ ಅರ್ಜಿದಾರರಿಗೆ ಅವಶ್ಯಕವಾಗಿರುವುದರಿಂದ ದೃಢೀಕೃತ ನಕಲನ್ನು ನೀಡುವಂತೆ ಆದೇಶಿಸಿದರು. ಆದರೆ ಧೃಢೀಕೃತ ನಕಲನ್ನು ನೀಡುವಾಗ ಅವು ಛಾಯಾ ಪ್ರತಿಗಳ ದೃಢೀಕೃತ ನಕಲುಗಳು ಎಂಬುದನ್ನು ನಮೂದಿಸ ತಕ್ಕದ್ದು ಎಂದು ಆದೇಶಿಸಿದರು.


ಮಾನ್ಯ ಕರ್ನಾಟಕ ಹೈಕೋರ್ಟ್ ಮೇಲ್ಕಾಣಿಸಿದ ಮೂರು ಪ್ರಕರಣಗಳಲ್ಲಿ ನೀಡಿರುವ ಆದೇಶವನ್ನು ಅವಲೋಕಿಸಿದಾಗ ಕಂಡುಬರುವ ಮುಖ್ಯ ಅಂಶವೇನೆಂದರೆ ಯಾವುದೇ ಸ್ವರೂಪದ ದಸ್ತಾವೇಜುಗಳೇ ಆಗಿರಲಿ ಸದರಿ ದಸ್ತಾವೇಜುಗಳ ದೃಢೀಕೃತ ನಕಲುಗಳನ್ನು ನೀಡಲು ಯಾವುದೇ ತೊಡಕಿಲ್ಲ‌. ಆದರೆ ಛಾಯಾ ಪ್ರತಿಗಳ (Xerox) ದೃಢೀಕೃತ ನಕಲನ್ನು ನೀಡುವಾಗ ಅವು ಮೂಲ ದಾಖಲೆಗಳಲ್ಲ, ಛಾಯಾ ಪ್ರತಿಗಳು ಎಂಬ ಬಗ್ಗೆ ಹಿಂಬರಹವನ್ನು ದೃಢೀಕೃತ ನಕಲಿನಲ್ಲಿ ನಮೂದಿಸತಕ್ಕದ್ದು.


ಲೇಖನ: ಪ್ರಕಾಶ್ ನಾಯಕ್, ಶಿರಸ್ತೇದಾರರು, ನ್ಯಾಯಾಂಗ ಇಲಾಖೆ ಮಂಗಳೂರು


Photo: Sri Prakash Nayak, Mangaluru


Ads on article

Advertise in articles 1

advertising articles 2

Advertise under the article