-->
ಹಿಂದೂ ಉತ್ತರಾಧಿಕಾರ ಕಾಯಿದೆ 1956: ಹೆಣ್ಮಕ್ಕಳಿಗೂ ಪಾಲು- ಒಂದು ವಿಶ್ಲೇಷಣೆ

ಹಿಂದೂ ಉತ್ತರಾಧಿಕಾರ ಕಾಯಿದೆ 1956: ಹೆಣ್ಮಕ್ಕಳಿಗೂ ಪಾಲು- ಒಂದು ವಿಶ್ಲೇಷಣೆ

ಹಿಂದೂ ಉತ್ತರಾಧಿಕಾರ ಕಾಯಿದೆ 1956: ಹೆಣ್ಮಕ್ಕಳಿಗೂ ಪಾಲು- ಒಂದು ವಿಶ್ಲೇಷಣೆ





ಹಿಂದೂ ಉತ್ತರಾಧಿಕಾರ ಕಾಯಿದೆ, 1956 ('ಆಕ್ಟ್') ಹಿಂದೂ ಸಮುದಾಯದಲ್ಲಿ ಉತ್ತರಾಧಿಕಾರದ ಕಾನೂನನ್ನು ಹೇಳುತ್ತದೆ. 2005ರಲ್ಲಿ, ಕಾಯಿದೆಯ ಸೆಕ್ಷನ್ 6 ಅನ್ನು ಹಿಂದೂ ಅವಿಭಜಿತ ಕುಟುಂಬದಲ್ಲಿ ('HUF') ಗಂಡು ಮಕ್ಕಳಿಗೆ ಸಮಾನವಾಗಿ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಪಾಲು ನೀಡಬೇಕು ಎಂಬ ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಯ ನಂತರ, ನ್ಯಾಯಾಲಯದ ಮುಂದೆ ಇನ್ನೊಂದು ಪ್ರಶ್ನೆ ಎದುರಾಯಿತು. ಅದೇನೆಂದರೆ, ಕಾಯಿದೆಯ ಸೆಕ್ಷನ್ 6ನ್ನು ಹಿಂದಿನಿಂದ (retrospectively) ಅನ್ವಯ ಮಾಡಬಹುದೇ?



ಈ ನಿಟ್ಟಿನಲ್ಲಿ 11-08-2020ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ಬರೆಯಿತು. ವಿನೀತಾ ಶರ್ಮಾ Vs ರಾಕೇಶ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್. ಅಬ್ದುಲ್ ನಜೀರ್ ಮತ್ತು ಎಂ.ಆರ್. ಶಾ ಅವರ ತ್ರಿಸದಸ್ಯ ಪೀಠ ಈ ವಿಷಯವನ್ನು ಸ್ಪಷ್ಟಪಡಿಸಲು ಮತ್ತು ಈ ವಿಷಯದ ಕುರಿತು ಬಾಕಿ ಉಳಿದಿರುವ ಪ್ರಕರಣಗಳಿಗೆ ದಾರಿ ಮಾಡಿಕೊಡಲು ಪ್ರಯತ್ನ ನಡೆಸಿತು.


ಸಮಸ್ಯೆಗಳು ಮತ್ತು ಪೂರ್ವನಿದರ್ಶನ

ಈ ವಿಷಯದ ಕಾನೂನು ಇಲ್ಲಿಯವರೆಗೆ ಅಸ್ಪಷ್ಟ ಮತ್ತು ವಿರೋಧಾತ್ಮಕವಾಗಿದೆ. ಪ್ರಕಾಶ್ Vs ಫೂಲವತಿ (2016) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಏಕಸದಸ್ಯ ಪೀಠವು 2005 ರಲ್ಲಿ ಮಾಡಿದ ತಿದ್ದುಪಡಿಯು ತೀರ್ಪಿನ ಜಾರಿಯನ್ನು ಪೂರ್ವಾವಧಿಗೆ (retrospectively) ಅನ್ವಯವಾಗದು ಎಂಬ ಸಂದೇಶ ನೀಡಿತು. ಆದ್ದರಿಂದ, 9-11-2005ರಂದು ತಂದೆ ಮತ್ತು ಅವರ ಮಗಳು ಇಬ್ಬರೂ ಜೀವಂತವಾಗಿರುವ ಪ್ರಕರಣಗಳಿಗೆ ಮಾತ್ರ ಫೂಲವತಿ ಪ್ರಕರಣವು ಅನ್ವಯಿಸುತ್ತದೆ.

2008: ದಾನಮ್ಮ @ ಸುಮನ್ ಸುರ್ಪುರ್ VS ಅಮರ್ ಪ್ರಕರಣದಲ್ಲಿ 1-02-2018ರಂದು ಸುಪ್ರೀಂ ಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಮತ್ತೊಂದು ಮಹತ್ವದ ತೀರ್ಪು ನೀಡಿತು.



ಈ ಪ್ರಕರಣದಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ತಂದೆ ಮೃತಪಟ್ಟ ಪ್ರಕರಣದಲ್ಲಿಯೂ ಹೆಣ್ಣು ಮಗಳೂ ತನ್ನ ಸಂಪೂರ್ಣ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಹೇಳಿತು.



ದಾನಮ್ಮ ಪ್ರಕರಣ: ಹಿಂದೂ ಅವಿಭಜಿತ ಕುಟುಂಬದ ಮುಖ್ಯಸ್ಥರಾದ ಗುರುಲಿಂಗಪ್ಪ ಸವದಿ 2001ರಲ್ಲಿ ತಮ್ಮ ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಅಗಲುತ್ತಾರೆ. ವಿಜಯ್ ಮತ್ತು ಅರುಣಕುಮಾರ್ ಎಂಬ ಇಬ್ಬರು ಗಂಡು ಮಕ್ಕಳು ಮತ್ತು ದಾನಮ್ಮ ಮತ್ತು ಮಹಾನಂದ ಎಂಬ ಇಬ್ಬರು ಹೆಣ್ಣುಮಕ್ಕಳು. 2002 ರಲ್ಲಿ, ಅರುಣ್ ಕುಮಾರ್ ಅವರ ಮಗ ಅಮರ್ ವಿಭಜನಾ ಪತ್ರ ಮತ್ತು ಅವಿಭಕ್ತ ಕುಟುಂಬದ ಆಸ್ತಿಯ ಪ್ರತ್ಯೇಕ ಸ್ವಾಧೀನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ. ಸವದಿ ಅವರ ಹೆಣ್ಣುಮಕ್ಕಳು ಕಾಯಿದೆ ಜಾರಿಗೆ ಬರುವ ಮೊದಲು ಜನಿಸಿದ ಕಾರಣ ಮತ್ತು ಮದುವೆಯ ಸಮಯದಲ್ಲಿ ಅವರು ವರದಕ್ಷಿಣೆ ಪಡೆದಿದ್ದರಿಂದ ಅವರಿಗೆ ಯಾವುದೇ ಪಾಲನ್ನು ನೀಡಲು ನಿರಾಕರಿಸಿದ್ದರು.



ಆದರೆ, ಸುಪ್ರೀಂ ಕೋರ್ಟ್ ಸದ್ರಿ ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟಿಸಿದ್ದು, ತಂದೆ ಮರಣ ಹೊಂದಿದ ಹೊರತಾಗಿಯೂ ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಬಹುದು ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿತು.



ಇನ್ನು, 11-08-2020ರಂದು ವಿನೀತಾ ಶರ್ಮಾ VS ರಾಕೇಶ್ ಶರ್ಮಾ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿನ ಪಾಲು ಕುರಿತಂತೆ ಅಲ್ಲಿಯ ವರೆಗಿನ ಎಲ್ಲ ಗೊಂದಲಗಳು, ಪ್ರಶ್ನೆಗಳು ಅಥವಾ ವಿವಾದಗಳನ್ನು ಸ್ಪಷ್ಟವಾಗಿ ಬಗೆಹರಿಸಿತು.


ಪೂರ್ವಾವಧಿಗೂ ವಿಸ್ತರಿಸಬಹುದಾದ (Retrospective Application) ತೀರ್ಪುಗಳು ಅನಿಶ್ಚಿತತೆ ಮತ್ತು ಅಸ್ಥಿರತೆಯನ್ನು ಉಂಟುಮಾಡುತ್ತದೆ ಎಂದು ಕೇಂದ್ರ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್, ಈ ಕಾಯಿದೆಯು ಪೂರ್ವಾವಲೋಕನವಲ್ಲ(retrospective), ಆದರೆ ಪೂರ್ವಾನ್ವಯವಾಗಿದೆ(retroactive) ಎಂದು ಹೇಳಿದರು.


ಈ ಪ್ರಕರಣದಲ್ಲಿ, ಹಿರಿಯ ವಕೀಲ ಆರ್.ವೆಂಕಟರಮಣಿ ಅವರು ಅಮಿಕಸ್ ಕ್ಯೂರಿಯಾಗಿ ವಾದ ಮಂಡಿಸಿದರು. ತಿದ್ದುಪಡಿಗೆ ಹಿಂದಿನ ಅಧಿಕಾರವನ್ನು ನೀಡುವುದು ಕಾನೂನಿನಲ್ಲಿ ಹೆಚ್ಚಿನ ಅನಿಶ್ಚಿತತೆ ಮತ್ತು ಅಸ್ಥಿರತೆಯನ್ನು ಪರಿಚಯಿಸುತ್ತದೆ. ಶಾಸಕಾಂಗದ ಉದ್ದೇಶವನ್ನು ಸರಿಯಾಗಿ ಅರ್ಥೈಸಲು ಮತ್ತು ತಿದ್ದುಪಡಿಯನ್ನು ಮುಂದಾಲೋಚನೆಯ ಭಾಗವಾಗಿ ಪರಾಮರ್ಶಿಸಬೇಕು. ಇಲ್ಲದಿದ್ದರೆ ಅದು ತೊಡಕುಗಳನ್ನು ಉಂಟುಮಾಡುತ್ತದೆ ಮತ್ತು ನ್ಯಾಯಾಲಯಗಳಲ್ಲಿ ಹೆಚ್ಚಿನ ದಾವೆಗಳನ್ನು ಕಾಣಲು ಕಾರಣವಾಗುತ್ತದೆ ಎಂದು ಹೇಳಿದರು.


ವಕೀಲ ಶ್ರೀಧರ್ ಪೋತರಾಜು 'ಒಬ್ಬ ಕೊಪರ್ಸೆನರಿಯ ಮಗಳು' ಎಂದರೆ ತಿದ್ದುಪಡಿಯ ಸಮಯದಲ್ಲಿ ಕೊಪರ್ಸೆನರಿ ಸ್ಥಾನಮಾನವನ್ನು ಹೊಂದಿದ್ದ ಜೀವಂತ ವ್ಯಕ್ತಿಯ ಮಗಳು ಎಂದು ಮಾತ್ರ ಅರ್ಥೈಸಬಹುದು ಎಂದು ವಾದಿಸಿದರು.


ಹಿಂದೂ ಉತ್ತರಾಧಿಕಾರ ಕಾಯ್ದೆಯ Sec 6 ಕುರತ ವಿನೀತ್ ಶರ್ಮಾ ತೀರ್ಪು ಸಮಾನತೆಯನ್ನು ಸಾಧಿಸಲು ಪೂರ್ವಾವಧಿಗೂ ವಿಸ್ತರಿಸಬಹುದಾದಂತೆ (retroactivity) ಅನ್ವಯಿಸಬೇಕು ಎಂದು ವಾದಿಸಿದ ಹಿರಿಯ ವಕೀಲ ಅಮಿತ್ ಪೈ, ಇಂತಹ ಕಾಳಜಿಗಳಿಂದ ಮಗಳು ಸಮಾನತೆಯ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳಬಾರದು ಮತ್ತು ವಂಚಿತರಾಗಬಾರದು ಮತ್ತು ಸಂಬಂಧಿತ ತಿದ್ದುಪಡಿಯನ್ನು ಪೂರ್ಣ ಮತ್ತು ಅನಿಯಂತ್ರಿತ ಪರಿಣಾಮವನ್ನು ನೀಡಬೇಕು ಎಂದು ವಾದಿಸಿದರು.



ಈ ಹಿನ್ನೆಲೆಯಲ್ಲಿ ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ನ್ಯಾಯಪೀಠ, ಅನಿಶ್ಚಿತತೆ ಅಥವಾ ಅಸ್ಥಿರತೆಯ ಸಮಸ್ಯೆಯನ್ನು ಸ್ಪಷ್ಟವಾಗಿ ಬಗೆಹರಿಸಿತು. ಮಿತಾಕ್ಷರ ಸಂಹಿತೆಯಲ್ಲಿ ಹೇಳಲಾದ ಕಾನೂನಿನ ಆಧಾರವು ದಾಯಾದಿಗಳಲ್ಲಿ ಪಿತ್ರಾರ್ಜಿತ ಆಸ್ತಿಯ ಹಕ್ಕಿನ ಕುರಿತ ಕಾನೂನು ಅಸ್ಥಿರವಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.



ನಿಜವಾದ ವಿಭಜನೆ ಆಗುವವರೆಗೆ ಪಾಲು ಅನಿಶ್ಚಿತವಾಗಿರುತ್ತದೆ. ಆದ್ದರಿಂದ ಅನಿಶ್ಚಿತತೆ ಕಾನೂನಿನ ಅಂತರ್ಗತ ಭಾಗವಾಗಿರುತ್ತದೆ. ಸಮಾನತೆ, ಅದರ ವ್ಯಾಖ್ಯಾನ ಅಥವಾ ಜಾರಿಯಲ್ಲಿ ಯಾವುದೇ ಅನಿಶ್ಚಿತತೆ ಇಲ್ಲ ಎಂದು ಹೇಳಿತು.


ಅಂತಿಮವಾಗಿ, ತೀರ್ಪಿನ ಪ್ರಮುಖ ಆಧಾರಗಳು ಸಮಾನತೆಯ ವಿಷಯದ ಮೇಲೆ ಆಧಾರಿತವಾಗಿದೆ. ಈ ತಿದ್ದುಪಡಿಯ ಉದ್ದೇಶವು ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟಿರುವ ಲಿಂಗ ಸಮಾನತೆಯನ್ನು ಖಚಿತಪಡಿಸುವುದೇ ಆಗಿದೆ ಎಂದು ತೀರ್ಪು ಸ್ಪಷ್ಟಪಡಿಸಿತು.

Ads on article

Advertise in articles 1

advertising articles 2

Advertise under the article