-->
ಕನ್ನಡ ಬಾವುಟ ಅಧಿಕೃತವಲ್ಲ: ಹೈಕೋರ್ಟ್‌ ಮುಂದೆ ಹೇಳಿಕೆ ನೀಡಿದ ರಾಜ್ಯ ಸರ್ಕಾರ

ಕನ್ನಡ ಬಾವುಟ ಅಧಿಕೃತವಲ್ಲ: ಹೈಕೋರ್ಟ್‌ ಮುಂದೆ ಹೇಳಿಕೆ ನೀಡಿದ ರಾಜ್ಯ ಸರ್ಕಾರ

ಕನ್ನಡ ಬಾವುಟ ಅಧಿಕೃತವಲ್ಲ. ಮಾನ್ಯ ಉಚ್ಛ ನ್ಯಾಯಾಲಯದ ಸಮಕ್ಷಮ ಹೇಳಿಕೆ ನೀಡಿದ ಸರಕಾರ

ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಶುಭ ಸಂದರ್ಭದಲ್ಲಿ ಸರಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ; ಶಾಲೆ ಕಾಲೇಜುಗಳಲ್ಲಿ; ಸರಕಾರಿ ಕಚೇರಿಗಳಲ್ಲಿ ಹಾಗೂ ಕನ್ನಡಪರ ಹೋರಾಟಗಾರರು ಆಚರಿಸುವ ರಾಜ್ಯೋತ್ಸವ ಸಮಾರಂಭದಲ್ಲಿ ಕೆಂಪು ಹಾಗೂ ಹಳದಿ ಬಣ್ಣದ ನಡುವೆ ತಾಯಿ ಭುವನೇಶ್ವರಿಯ ಚಿತ್ರವಿರುವ ಕನ್ನಡ ಬಾವುಟವು ಬಾನಂಗಳದಲ್ಲಿ ರಾರಾಜಿಸುತ್ತಿತ್ತು.


ಈ ಕುರಿತು ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಬೆಂಗಳೂರಿನ ವಕೀಲರೊಬ್ಬರು ರಿಟ್ ಅರ್ಜಿ (ಯಾಚಿಕೆ) ದಾಖಲಿಸಿ ಸರಕಾರವನ್ನು ಹಾಗುಾ ಸರಕಾರದ ಇಲಾಖೆಗಳನು ಪಕ್ಷಕಾರರನ್ನಾಗಿ ಮಾಡಿ ಸದರಿ ಯಾಚಿಕೆಯಲ್ಲಿ ನಾಲ್ಕನೆಯ ಎದುರಾಳಿಯಾದ ಕನ್ನಡ ಪರ ಹೋರಾಟಗಾರ ಶ್ರೀ ಟಿ. ಎ. ನಾರಾಯಣಗೌಡ ಅವರು ತಮ್ಮ ಸಂಘಟನೆಯ ಪರವಾಗಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವ ಹಾಗೂ ಇತರ ಕನ್ನಡ ಪರ ಸಮಾರಂಭಗಳಲ್ಲಿ ಕನ್ನಡ ಬಾವುಟವನ್ನು ಬಳಸದಂತೆ ಅವರನ್ನು ನಿರ್ಬಂಧಿಸಬೇಕೆಂದು ಆದೇಶ ಕೋರಿದ್ದರು.


ಸದರಿ ಅರ್ಜಿಯ ಮೇಲೆ ವಿಚಾರಣೆ ನಡೆಸಿದ ಮಾನ್ಯ ಉಚ್ಛ ನ್ಯಾಯಾಲಯವು ಸರಕಾರದ ನಿಲುವು ಏನೆಂದು ಕೇಳಿದಾಗ ಸರಕಾರದ ಅನುಮತಿಯಂತೆ ಇದುವರೆಗೆ ಕನ್ನಡ ಬಾವುಟವನ್ನು ಸರಕಾರಿ ಕಾರ್ಯಕ್ರಮಗಳಲ್ಲಿ; ಶಾಲೆ ಕಾಲೇಜುಗಳಲ್ಲಿ; ಸರಕಾರಿ ಕಚೇರಿಗಳಲ್ಲಿ ಹಾರಿಸಲಾಗುತ್ತಿತ್ತು. ಆದರೆ ಸರಕಾರದ ಆದೇಶ KC 17 490 KASADHA 2012 ದಿನಾ೦ಕ 4.10.2012ರ ಪ್ರಕಾರ ಈ ಹಿಂದಿನ ಕ್ರಮವನ್ನು ಹಿಂತೆಗೆದುಕೊಳ್ಳಲಾಗಿದೆ. ಕನ್ನಡ ಧ್ವಜಕ್ಕೆ ಸರಕಾರ ಅಧಿಕೃತ ಸ್ಥಾನಮಾನ ನೀಡಿಲ್ಲ.


ಧ್ವಜ ಸಂಹಿತೆಯಲ್ಲಿ ಆಯಾಯ ರಾಜ್ಯಗಳ ರಾಜ್ಯೋತ್ಸವದಂದು ರಾಷ್ಟ್ರೀಯ ಧ್ವಜ ಹಾರಿಸಲು ನಿರ್ಬಂಧವಿಲ್ಲ. ರಾಷ್ಟ್ರಧ್ವಜವು ನಮ್ಮ ರಾಷ್ಟ್ರದ ಐಕ್ಯತೆ ಹಾಗೂ ಸಾರ್ವಭೌಮತೆಯ ಸಂಕೇತ. ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವುದು ರಾಷ್ಟ್ರ ಧ್ವಜದ ಪ್ರಾಮುಖ್ಯತೆಗೆ ಚ್ಯುತಿ ತರಬಹುದಲ್ಲದೆ ಸಂಕುಚಿತ ಪ್ರಾಂತೀಯ ಭಾವನೆಗೆ ಎಡೆ ಮಾಡಿಕೊಡಲಿದೆ. ಈ ರಾಷ್ಟ್ರದ ಏಕತೆ ಮತ್ತು ಸೌಹಾರ್ದತೆಗೆ ಧಕ್ಕೆ ಬರಲಿದೆ ಎಂಬುದು ಸರ್ಕಾರದ ನಿಲುವಾಗಿದೆ ಎಂಬ ಸರಕಾರದ ವಾದ ಆಲಿಸಿದ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಹಾಗೂ ಬಿ.ವಿ. ನಾಗರತ್ನ ಇವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿದಾರರ ಯಾಚಿಕೆ W.P.38019/2011 ಅನ್ನು ದಿನಾಂಕ 19.11.2012ರಂದು ನೀಡಿದ ಆದೇಶದ ಪ್ರಕಾರ ವಜಾಗೊಳಿಸಿತು.


ಕನ್ನಡ ಬಾವುಟದ ಇತಿಹಾಸದ ಬಗ್ಗೆ ಖ್ಯಾತ ಇತಿಹಾಸಕಾರ ಡಾ. ಸೂರ್ಯನಾಥ್ ಕಾಮತ್ ಅವರ ಅಭಿಪ್ರಾಯ ಈ ರೀತಿ ಇದೆ. ಕರ್ನಾಟಕದ ಉಜ್ವಲ ಇತಿಹಾಸವನ್ನು ಅವಲೋಕಿಸಿದಾಗ ಕನ್ನಡ ಬಾವುಟದ ಕಲ್ಪನೆ ಬಂದಿರುವುದು ಕೆಲವು ದಶಕಗಳಿಂದೀಚೆಗೆ. ಮೊದಲಿಗೆ ಕನ್ನಡ ಬಾವುಟವನ್ನು ರಚಿಸಿದವರು ಖ್ಯಾತ ಬರಹಗಾರ ಹಾಗೂ ಸಾಹಿತಿಗಳಾದ ಮಾ. ರಾಮಮೂರ್ತಿಯವರು. 1960ರಲ್ಲಿ ತಾವು ಸ್ಥಾಪಿಸಿದ ಕನ್ನಡ ಪಕ್ಷಕ್ಕೆ ಹಳದಿ ಬಣ್ಣದ ಬಾವುಟವನ್ನು ಬಳಸಿದರು. ಕಾಲಕ್ರಮೇಣ ಕೆಲವರು ಕೆಂಪು ಬಣ್ಣವನ್ನು ಬಾವುಟಕ್ಕೆ ಸೇರಿಸಿ ಮಧ್ಯದಲ್ಲಿ ದೇವಿ ಭುವನೇಶ್ವರಿಯ ಚಿತ್ರವನ್ನು ಚಿತ್ರಿಸಿದರು. ಈ ಬಾವುಟವೇ ಕನ್ನಡ ಬಾವುಟವೆಂಬ ಖ್ಯಾತಿ ಪಡೆಯಿತು.ಡಾ. ಕಾಮತ್ ಅವರ ಅಭಿಪ್ರಾಯವನ್ನು ಖ್ಯಾತ ಸಂಶೋಧಕರಾದ ಡಾ. ಚಿದಾನಂದ ಮೂರ್ತಿಯವರು ಕೂಡ ಸಮರ್ಥಿಸಿದ್ದಾರೆ.


✍️ ಪ್ರಕಾಶ್ ನಾಯಕ್; ಶಿರಸ್ತೆದಾರರು, ನ್ಯಾಯಾಂಗ ಇಲಾಖೆ, ಮಂಗಳೂರು.
Ads on article

Advertise in articles 1

advertising articles 2

Advertise under the article