-->
ಜಸ್ಟೀಸ್ ಕೆ.ಜಗನ್ನಾಥ ಶೆಟ್ಟಿ | ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ

ಜಸ್ಟೀಸ್ ಕೆ.ಜಗನ್ನಾಥ ಶೆಟ್ಟಿ | ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ

ಜಸ್ಟೀಸ್ ಕೆ.ಜಗನ್ನಾಥ ಶೆಟ್ಟಿ | ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ





ಜಸ್ಟೀಸ್ ಕೆ.ಜಗನ್ನಾಥ ಶೆಟ್ಟಿ


ಜಡ್ಜ್ ; ಸುಪ್ರೀಂ ಕೋರ್ಟ್ ಆಫ್ ಇಂಡಿಯಾ


ನ್ಯಾಯಮೂರ್ತಿ ಕಲ್ಮಂಜೆ ಜಗನ್ನಾಥ ಶೆಟ್ಟಿಯವರು ಉಡುಪಿ ತಾಲ್ಲೂಕಿನ ಅಂಬಲಪಾಡಿಯಲ್ಲಿ ಪ್ರತಿಷ್ಠಿತ ಬಂಟ ಸಮುದಾಯದ ಮನೆತನದಲ್ಲಿ ದಿನಾಂಕ 15.12.1926 ರಂದು ಜನಿಸಿದರು.


ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಉಡುಪಿಯಲ್ಲಿ ಪಡೆದರು. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗವನ್ನು ಮಾಡಿ ವಿಜ್ಞಾನ ಪದವಿಯನ್ನು ಪಡೆದರು. ಹೈದರಾಬಾದಿನಲ್ಲಿ ಕಾನೂನು ವ್ಯಾಸಂಗವನ್ನು ಮುಂದುವರಿಸಿದ ಇವರು ಒಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿಯನ್ನು ಪಡೆದರು.


ದಿನಾಂಕ14.7.1954 ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ದಿನಾಂಕ 16.8.1955 ರಂದು ಹೈಕೋರ್ಟ್ ಆಫ್ ಜುಡಿಕೇಚರ್ ಹೈದರಾಬಾದ್ ನ ಅಡ್ವೋಕೇಟ್ ಆಗಿ ನೋಂದಾಯಿಸಿಕೊಂಡರು. 1956 ರ ವರೆಗೆ ಹೈದರಾಬಾದಿನಲ್ಲಿ ವಕೀಲ ವೃತ್ತಿಯನ್ನು ನಿರ್ವಹಿಸಿದರು. ಈ ಅವಧಿಯಲ್ಲಿ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಸ೦ಪಾದಿಸಿದರು.


1956 ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾಗಿ ನೂತನ ಮೈಸೂರು ರಾಜ್ಯ ಉದಯವಾದ ಬಳಿಕ ತಮ್ಮ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದರು.


ತಮ್ಮ ವೃತ್ತಿ ಜೀವನದಲ್ಲಿ ಕಾನೂನಿನ ಎಲ್ಲ ಶಾಖೆಗಳಲ್ಲಿ ಮುಖ್ಯವಾಗಿ ಸಿವಿಲ್(Civil); ಸೇವೆಗೆ ಸಂಬಂಧಿತ (Service)ಹಾಗೂ ಸಾಂವಿಧಾನಿಕ (Constitutional) ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹತ್ತು ವರ್ಷಗಳ ಕಾಲ ಬೆಂಗಳೂರಿನ ಗವರ್ನಮೆಂಟ್ ಲಾ ಕಾಲೇಜಿನಲ್ಲಿ ಅಂಶಕಾಲಿಕ ಕಾನೂನು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಕೆಲ ಕಾಲ ಕಾನೂನಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿದ್ದರು. ಎರಡು ಅವಧಿಗೆ ಮೈಸೂರು *ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾಗಿ* ಸೇವೆ ಸಲ್ಲಿಸಿದರು.


ದಿನಾಂಕ 25.6.1970 ರ೦ದು ಮೈಸೂರು ಹೈಕೋರ್ಟಿನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಒಂದು ವರ್ಷದ ಅವಧಿಯು ಕಳೆದ ಬಳಿಕ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ದಿನಾಂಕ 24.10.1985 ರಿಂದ 27.8.1986 ರ ವರೆಗೆ ಕರ್ನಾಟಕ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿದ್ದರು.


ದಿನಾಂಕ 1.10.1986 ರಂದು ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದರು.


ದಿನಾಂಕ 1.11.1987 ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ದಿನಾಂಕ 14.12.1991 ರಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾದರು.


ಅಖಿಲ ಭಾರತ ನ್ಯಾಯಾಧೀಶರ ಸಂಘವು ನ್ಯಾಯಾಧೀಶರ ಸೇವಾ ಸ್ಥಿತಿಗತಿಗಳು ಹಾಗೂ ವೇತನ ಮತ್ತಿತರ ಸೌಲಭ್ಯಗಳ ಸುಧಾರಣೆಗಳ ಕುರಿತು ಭಾರತ ಸರಕಾರದ ವಿರುದ್ಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಸಂವಿಧಾನದ ವಿಧಿ 32 ರಡಿ ಸಲ್ಲಿಸಿದ ರಿಟ್ ಪಿಟಿಷನ್ 1052/89ರಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನ್ವಯ ದಿನಾಂಕ 21.3.1996 ರಂದು ರಚಿಸಲ್ಪಟ್ಟ ಪ್ರಥಮ ರಾಷ್ಟ್ರೀಯ ವೇತನ ಆಯೋಗದ (FNJPC) ಅಧ್ಯಕ್ಷರಾಗಿ ನ್ಯಾಯಮೂರ್ತಿ ಕೆ ಜಗನ್ನಾಥ ಶೆಟ್ಟಿಯವರು ದಿನಾಂಕ 1.6.1996 ರ೦ದು ಅಧಿಕಾರ ಸ್ವೀಕರಿಸಿದರು ಆಯೋಗದ ಕಚೇರಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದಲ್ಲಿ ತೆರೆಯಲಾಯಿತು.


ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿರುವ ನ್ಯಾಯಾ೦ಗ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಅಹವಾಲುಗಳನ್ನು ವೈಯಕ್ತಿಕವಾಗಿ ಆಲಿಸಿದರು. ದಿನಾಂಕ 10.12.1998 ರಂದು ಕರ್ನಾಟಕ ರಾಜ್ಯ ನ್ಯಾಯಾ೦ಗ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ವೈಯಕ್ತಿಕ ಅಹವಾಲುಗಳನ್ನು ಆಲಿಸಲಾಯಿತು.


ಈತನ್ಮಧ್ಯೆ ಅಖಿಲ ಭಾರತ ನ್ಯಾಯಾಂಗ ನೌಕರರ ಒಕ್ಕೂಟವು (AIJEC) ತನ್ನನ್ನು ನ್ಯಾಯಾಂಗ ಅಧಿಕಾರಿಗಳ ಸಂಘವು ದಾಖಲಿಸಿದ್ದ ರಿಟ್ ಪಿಟಿಷನ್ ನಲ್ಲಿ ಪಕ್ಷಕಾರನ್ನಾಗಿ ಸೇರ್ಪಡೆಗೊಳಿಸಿ ಅಧೀನ ನ್ಯಾಯಾಲಯಗಳ ನೌಕರರ ಸೇವಾ ಸ್ಥಿತಿಗತಿಗಳ ಸುಧಾರಣೆಗಳ ಕುರಿತು ಅದ್ಯಯನ ನಡೆಸಿ ವರದಿ ನೀಡುವ೦ತೆ ಪ್ರಥಮ ರಾಷ್ಟ್ರೀಯ ನ್ಯಾಯಿಕ ವೇತನ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ W.P.1022/89 ರಲ್ಲಿ ಮಧ್ಯಂತರ ಅರ್ಜಿಯನ್ನು ದಾಖಲಿಸಿತು. ಸದರಿ ಅರ್ಜಿಯನ್ನು ಪುರಸ್ಕರಿಸಿದ ಮಾನ್ಯ ಸುಪ್ರೀಂ ಕೋರ್ಟ್ ಅಧೀನ ನ್ಯಾಯಾಲಯಗಳ ನೌಕರರು ಕೂಡ ನ್ಯಾಯಾಂಗದ ಅವಿಭಾಜ್ಯ ಅಂಗವಾಗಿದ್ದು ಅವರ ಸೇವಾ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಆಯೋಗದ ಅಧ್ಯಕ್ಷರಿಗೆ ನಿರ್ದೇಶನ ನೀಡಿತು.


ದಿನಾಂಕ 2.4.1999ರಂದು ಮಂಗಳೂರಿನ ಸರ್ಕಿಟ್ ಹೌಸ್‌ನಲ್ಲಿ ನ್ಯಾಯಾಂಗ ಇಲಾಖಾ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿಯವರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ನೌಕರರ ಸಂಘದ ಪದಾಧಿಕಾರಿಗಳ ಬೇಡಿಕೆಯನ್ನು ಸಹಾನುಭೂತಿಯಿಂದ ಆಲಿಸಿದರು. ನೌಕರರ ವೇತನವನ್ನು ಪರಿಷ್ಕರಿಸುವ ಕೆಲಸ ಆಯಾ ರಾಜ್ಯ ಸರಕಾರದ್ದು. ನೌಕರರ ಸೇವಾ ಸ್ಥಿತಿಗತಿಗಳ ಸುಧಾರಣೆ ಬಗ್ಗೆ ವರದಿ ನೀಡುವಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ತನಗೆ ನಿದೇ೯ಶಿಸಿದೆ ಎಂದು ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿಯವರು ನೌಕರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು. ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ನೌಕರರು ನ್ಯಾಯಮೂರ್ತಿಗಳ ಸಮಕ್ಷಮ ಮಂಡಿಸಿದರು


1) ನ್ಯಾಯಾಂಗ ನೌಕರರು ಅತೀವ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು


2) ಕಾನೂನು ಪದವಿ ಹೊಂದಿರುವ ನ್ಯಾಯಾಂಗ ನೌಕರರಿಗೆ ಸಿವಿಲ್ ಜಡ್ಜ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನೀಡಬೇಕು


3) ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಬಡ್ತಿ ಪಡೆಯಲು ಪದವಿ ಕಡ್ಡಾಯ ಎಂಬ ಶರ್ತವನ್ನು ಕೈಬಿಡಬೇಕು


4) ಶಿರಸ್ತೇದಾರ್ ಮತ್ತು ಸಿಎಒ ಹುದ್ದೆಗಳ ನಡುವೆ ಸೀನಿಯರ್ ಶಿರಸ್ತೇದಾರ್ ಅಥವಾ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಎಂಬ ಪತ್ರಾ೦ಕಿತ ಹುದ್ದೆಯನ್ನು ರಚಿಸಬೇಕು.


5) ತೀರ್ಪು ಬರಹಗಾರರ (Judgement Writers) ಹುದ್ದೆಯನ್ನು ಉನ್ನತೀಕರಿಸಿ ಪತ್ರಾಂಕಿತ ಹುದ್ದೆಯನ್ನಾಗಿ ಪರಿವರ್ತಿಸಬೇಕು.


ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ ಅವರು ನೌಕರರ ಎಲ್ಲಾ ಪ್ರಮುಖ ಬೇಡಿಕೆಗಳು ನ್ಯಾಯಯುತವಾದುದು ಎಂದು ಮನಗಂಡು ಅವುಗಳನ್ನು ಈಡೇರಿಸಬೇಕೆಂದು ತಮ್ಮ ವರದಿಯಲ್ಲಿ ಶಿಫಾರಸು ಮಾಡಿದರು. ಅಂತೆಯೇ ಆಯಾ ರಾಜ್ಯ ಸರಕಾರಗಳು ಆಯೋಗದ ಶಿಫಾರಸಿನಂತೆ ನೌಕರರ ಎಲ್ಲ ಪ್ರಮುಖ ಬೇಡಿಕೆಗಳನ್ನು ಈಡೇರಿಸಿರುವುದು ಅತ್ಯಂತ ಸ್ತುತ್ಯಾರ್ಹವಾಗಿದೆ.


ಮಂಗಳೂರಿನಲ್ಲಿ ನ್ಯಾಯಾಂಗ ನೌಕರರ ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದ ವಿಷಯವನ್ನು ವರದಿಯ ಪ್ರಮುಖ ಘಟನೆಗಳಲ್ಲಿ ನಮೂದಿಸಿರುವುದು ಕೂಡ ನೌಕರರ ಪಾಲಿಗೆ ಅಭಿಮಾನದ ಸಂಗತಿಯಾಗಿದೆ.


FNJPC ವರದಿಯ ಬಳಿಕ ನ್ಯಾಯಾಧೀಶರುಗಳ ವೇತನ ಮತ್ತು ಇತರ ಸೌಲಭ್ಯಗಳಲ್ಲಿ ಭಾರೀ ಹೆಚ್ಚಳ ಉಂಟಾಯಿತು. ತಳಹಂತದ ಸಿವಿಲ್ ಜಡ್ಜ್ ಅವರ ಪ್ರಾರಂಭಿಕ ಮೂಲ ವೇತನವು IAS ಅಧಿಕಾರಿಯ ಮೂಲ ವೇತನಕ್ಕಿಂತ ಅಧಿಕವಾಯಿತು. Home orderly allowance; Petrol allowance; Sumptuary allowance; Robe allowance; Electricity and water charges allowance ಮುಂತಾದ ಸೌಲಭ್ಯಗಳನ್ನು (perquisites) ಹೊಸತಾಗಿ ನೀಡುವ ಮೂಲಕ ಪ್ರತಿಭಾನ್ವಿತರು ಹೆಚ್ಚಿನ ಸಂಖ್ಯೆಯಲ್ಲಿ ಆಕಷಿ೯ತರಾಗಿ ನ್ಯಾಯಾಂಗ ಸೇವೆಗೆ ಸೇರುವಂತಾಗಬೇಕು ಎಂಬ ಉದಾತ್ತ ಉದ್ದೇಶವನ್ನು ನಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ ಅವರು ತಮ್ಮ ವರದಿಯಲ್ಲಿ ವ್ಯಕ್ತಪಡಿಸಿದರು.


ಆಯೋಗವು 1999 ರಲ್ಲಿ ನ್ಯಾಯಾಂಗ ಅಧಿಕಾರಿಗಳ ಸೇವಾ ಸುಧಾರಣೆಗಳ ಕುರಿತ ತನ್ನ ವರದಿಯನ್ನು ಮಾನ್ಯ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿತು. 2003 ರಲ್ಲಿ ನ್ಯಾಯಾಂಗ ನೌಕರರ ಸೇವಾ ಸುಧಾರಣೆಗಳ ಕುರಿತು ವರದಿಯನ್ನು ಮಾನ್ಯ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿತು.


FNJPC ವರದಿಯು ದೇಶಾದ್ಯಂತ ಎಲ್ಲಾ ರಾಜ್ಯಗಳ ನ್ಯಾಯಾಂಗ ಅಧಿಕಾರಿಗಳಿಗೆ ಏಕರೂಪದ ವೇತನವನ್ನು ನಿಗದಿಪಡಿಸಿತು. ಆದರೆ ನ್ಯಾಯಾಂಗ ನೌಕರರಿಗೆ ವೇತನವನ್ನು ನಿಗದಿಪಡಿಸುವ ಅಧಿಕಾರವನ್ನು ಆಯಾ ರಾಜ್ಯಗಳ ಸರಕಾರಕ್ಕೆ ನೀಡಿತು. ನೌಕರರಿಗೆ ಕೂಡ ರಾಷ್ಟ್ರವ್ಯಾಪಿ ಏಕರೂಪದ ವೇತನ ನಿಗದಿಯಾಗಬೇಕೆ೦ದು 2017 ರಲ್ಲಿ ಅಖಿಲ ಭಾರತ ನ್ಯಾಯಾಂಗ ನೌಕರರ ಒಕ್ಕೂಟವು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ನಂಬ್ರ 1047/2017 ಅನ್ನು ದಾಖಲಿಸಿದ್ದು ಅದು ವಿಚಾರಣೆಯಲ್ಲಿದೆ.


ಪ್ರಥಮ ರಾಷ್ಟ್ರೀಯ ವೇತನ ಆಯೋಗದ(FNJPC) ಅಧ್ಯಕ್ಷರಾಗಿ ಅತ್ಯುತ್ಕೃಷ್ಟ ವರದಿಯನ್ನು ನೀಡುವ ಮೂಲಕ ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿಯವರು ನ್ಯಾಯಾಂಗ ಅಧಿಕಾರಿಗಳ ಹಾಗೂ ನೌಕರರ ಮನದಲ್ಲಿ ಸ್ಥಿರವಾಗಿ ನೆಲೆಸಿದ್ದಾರೆ.


✍️ ಪ್ರಕಾಶ್ ನಾಯಕ್, ಶಿರಸ್ತೇದಾರ್, ನ್ಯಾಯಾಂಗ ಇಲಾಖೆ, ಮಂಗಳೂರು.




Ads on article

Advertise in articles 1

advertising articles 2

Advertise under the article