ಲಂಚಕ್ಕೆ ಬೇಡಿಕೆ: ಭ್ರಷ್ಟಾಚಾರದಲ್ಲಿ ಸಾಬೀತಾಗಬೇಕಾದ ಮಹತ್ವದ ಅಂಶ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಲಂಚಕ್ಕೆ ಬೇಡಿಕೆ: ಭ್ರಷ್ಟಾಚಾರದಲ್ಲಿ ಸಾಬೀತಾಗಬೇಕಾದ ಮಹತ್ವದ ಅಂಶ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಲಂಚಕ್ಕೆ ಬೇಡಿಕೆ ಇಟ್ಟ ಅಂಶ ವಿಚಾರಣೆಯಲ್ಲಿ ಸಾಬೀತಾಗದೆ ಇದ್ದಲ್ಲಿ ಆರೋಪಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಶಿಕ್ಷೆ ವಿಧಿಸುವಂತಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 7 ರಡಿ ಕಾಣಿಸಲಾದ ಆರೋಪಗಳು ಲಂಚಕ್ಕೆ ಬೇಡಿಕೆ ಹಾಗೂ ಲಂಚ ಸ್ವೀಕಾರಕ್ಕೆ ಸಂಬಂಧಪಟ್ಟದ್ದಾಗಿದೆ. ಲಂಚಕ್ಕೆ ಸಂಬಂಧಿಸಿದೆ ಎಂದು ಹೇಳಲಾದ ಹಣವು ಆರೋಪಿಯ ಅಭಿರಕ್ಷೆಯಲ್ಲಿದ್ದರೂ ಆರೋಪಿಯು ಲಂಚಕ್ಕೆ ಬೇಡಿಕೆ ಇಟ್ಟ ಅಂಶ ವಿಚಾರಣೆಯಲ್ಲಿ ಸಾಬೀತಾಗದೆ ಇದ್ದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಆರೋಪಿಗೆ ಶಿಕ್ಷೆ ವಿಧಿಸುವಂತಿಲ್ಲ ಎಂದು ಮಾನ್ಯ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಎಂ.ಆರ್. ಪುರುಷೋತ್ತಮ್ Vs ಕರ್ನಾಟಕ ರಾಜ್ಯ ಸರಕಾರ ಪ್ರಕರಣದಲ್ಲಿ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿತ್ತು.
ಮಾನ್ಯ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬೆಳಕಿನಲ್ಲಿ "ಲಂಚಕ್ಕೆ ಬೇಡಿಕೆ" ಇಟ್ಟ ಅಂಶ ಸಾಬೀತಾಗಿಲ್ಲ ಎಂಬ ನೆಲೆಯಲ್ಲಿ ಎನ್. ತೇಜಸ್ ಕುಮಾರ್ VS ಕರ್ನಾಟಕ ಸರಕಾರ ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಿಸಲಾದ ಪ್ರಕರಣ (FIR)ವನ್ನು ಮಾನ್ಯ ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೆ. ನಟರಾಜನ್ ಅವರ ಏಕ ಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣ: ಎನ್. ತೇಜಸ್ ಕುಮಾರ್ VS ಕರ್ನಾಟಕ ಸರಕಾರ
ಕರ್ನಾಟಕ ಹೈಕೋರ್ಟ್, ರಿಟ್ ಪಿಟಿಷನ್ 915/2022 ದಿನಾಂಕ 21.3.2022
ಎಮ್.ಆರ್. ಪುರುಷೋತ್ತಮ್ Vs ಕರ್ನಾಟಕ ಸರಕಾರ ಈ ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ನಾಗಮಂಗಲದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭೂಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಎಂ.ಆರ್. ಪುರುಷೋತ್ತಮ್ ಅವರು ಭೂಮಾಪನ ನಕ್ಷೆ ನೀಡಲು 500 ರೂಪಾಯಿ ನೀಡಬೇಕೆಂಬ ಬೇಡಿಕೆ ಮಂಡಿಸಿದ್ದಾರೆ ಎಂಬುದಾಗಿ ಫಿರ್ಯಾದುದಾರ ಶ್ರೀ ರಮೇಶ್ ಎಂಬವರು ನೀಡಿದ ದೂರು. ಈ ದೂರಿನ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಡ್ಯದ ಲೋಕಾಯುಕ್ತ ಪೊಲೀಸರು ಪ್ರಕರಣ ಸಂಖ್ಯೆ 1/2000 ರಲ್ಲಿ ಪ್ರಕರಣವನ್ನು ದಾಖಲಿಸಿದರು.
ಫಿನಾಪ್ತಲಿನ್ ಪೌಡರ್ ಸವರಿದ ನೂರು ರೂಪಾಯಿಗಳ ಐದು ನೋಟುಗಳನ್ನು ದೂರುದಾರ ರಮೇಶ್ ಅವರಿಗೆ ನೀಡಿ ವಹಿಸಿಕೊಡುವ ಮಹಜರರನ್ನು ಸಿದ್ಧಪಡಿಸಲಾಯಿತು. ಸರಕಾರಿ ನೌಕರರಾದ ಶ್ರೀಧರ್ ಮತ್ತು ಕುಮಾರಸ್ವಾಮಿ ಎಂಬವರನ್ನು ಮಹಜರಿಗೆ ಪಂಚರನ್ನಾಗಿಸಿ ಆರೋಪಿಯನ್ನು ಬಲೆಗೆ ಬೀಳಿಸುವ ಕಾರ್ಯಾಚರಣೆ ಸಿದ್ಧಪಡಿಸಲಾಯಿತು.
ಲಂಚದ ಹಣವನ್ನು ನೀಡಲು ದೂರುದಾರ ರಮೇಶ್ ಅವರು ಆರೋಪಿಯ ಮನೆಗೆ ತೆರಳಿದಾಗ ಆರೋಪಿಯು ಸದರಿ ಹಣವನ್ನು ತನ್ನ ಬಲಗೈಯಲ್ಲಿ ಸ್ವೀಕರಿಸಿ ಮೇಜಿನ ಮೇಲಿಟ್ಟರು. ರಮೇಶ್ ಅವರು ಆರೋಪಿಯ ಮನೆಯ ಹೊರಗೆ ಬಂದು ನೀಡಿದ ಸಂಕೇತದಂತೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಮತ್ತು ಪಂಚರಾದ ಶ್ರೀಧರ್ ಅವರು ಮನೆಯೊಳಗೆ ತೆರಳಿ ಆರೋಪಿಯ ಬಲಗೈ ಬೆರಳುಗಳನ್ನು ಸೋಡಿಯಂ ಕಾರ್ಬೋನೇಟ್ ದ್ರಾವಣದಲ್ಲಿ ಮುಳುಗಿಸಿದಾಗ ದ್ರಾವಣ ಗುಲಾಬಿ ಬಣ್ಣಕ್ಕೆ ಪರಿವರ್ತಿತವಾಯಿತು. ಮೇಜಿನ ಮೇಲಿಟ್ಟ ಹಣವನ್ನು ವಶಪಡಿಸಿ ಸ್ವಾಧೀನತಾ ಮಹಜರ್ ಸಿದ್ಧಪಡಿಸಲಾಯಿತು. ಸದರಿ ಮಹಜರು ವಹಿಸಿ ಕೊಡುವ ಮಹಜರಿಗೆ ತಾಳೆಯಾಯಿತು.
ಇದನ್ನೂ ಓದಿ
ಅತ್ಯಂತ ಭ್ರಷ್ಟ ಎನಿಸಿದ್ದ ತಹಶೀಲ್ದಾರ್ ಜೈಲಿಗೆ: ಸ್ಟೇಟಸ್ ಹಾಕಿಕೊಂಡು ಸಂಭ್ರಮ ಪಟ್ಟ ಮಂಗಳೂರು ವಕೀಲರು
ತನಿಖೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ಪಡೆದು ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 7,13 (1) (ಡಿ) ಮತ್ತು 13(2) ರಡಿ ದೋಷಾರೋಪಣ ಪತ್ರ ಸಿದ್ಧಪಡಿಸಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ದೂರುದಾರ ರಮೇಶ್ ಅವರು 500/- ರೂಪಾಯಿ ಲಂಚ ನೀಡಬೇಕೆಂಬ ಬೇಡಿಕೆ ತನ್ನಲ್ಲಿ ಮಂಡಿಸಿಲ್ಲ ಎಂಬುದಾಗಿ ವಿಚಾರಣಾ ನ್ಯಾಯಾಲಯದ ಸಮಕ್ಷಮ ಸಾಕ್ಷಿ ನುಡಿದ ಆಧಾರದಲ್ಲಿ ಆರೋಪಗಳನ್ನು ಸಾಬೀತು ಪಡಿಸಲು ಅಭಿಯೋಗ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬಂದ ವಿಚಾರಣಾ ನ್ಯಾಯಾಲಯವು ಆರೋಪಿ ಶ್ರೀ ಎಂ. ಆರ್. ಪುರುಷೋತ್ತಮ್ ಅವರನ್ನು ಆರೋಪಗಳಿಂದ ದೋಷ ಮುಕ್ತನೆಂದು ಘೋಷಿಸಿ ಬಿಡುಗಡೆಗೊಳಿಸಿತು
ವಿಚಾರಣಾ ನ್ಯಾಯಾಲಯದ ಆದೇಶವನ್ನು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿ ಕಾಯ್ದೆಯ ಕಲಂ 7 ರಡಿ ಆರೋಪ ಸಾಬೀತಾಗದೆ ಇದ್ದರೂ ಕಲಂ 13(1) (ಡಿ) 13 (2)ರಡಿ ಆರೋಪಗಳು ಸಾಬೀತಾಗಿವೆ ಎಂಬ ನಿಷ್ಕರ್ಷಗೆ ಬಂದ ಮಾನ್ಯ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13(1)(ಡಿ) 13(2) ರಡಿ ಎಸಗಿದ ಶಿಕ್ಷಾರ್ಹ ಅಪರಾಧಕ್ಕಾಗಿ ಒಂದು ವರ್ಷದ ಸಾದಾ ಸಜೆ ಮತ್ತು 5000 ರೂಪಾಯಿ ದಂಡ ವಿಧಿಸಿತು. ದಂಡ ತರಲು ತಪ್ಪಿದ್ದಲ್ಲಿ ಮೂರು ತಿಂಗಳ ಸಾದಾ ಸಜೆಯನ್ನು ಅನುಭವಿಸಬೇಕೆಂಬ ಶಿಕ್ಷೆ ವಿಧಿಸಲಾಯಿತು.
ಮಾನ್ಯ ಹೈಕೋರ್ಟಿನ ಆದೇಶದಿಂದ ಬಾಧಿತರಾದ ಶ್ರೀ ಎಂ. ಆರ್. ಪುರುಷೋತ್ತಮ್ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಬಿ ಜಯರಾಜ್ VS ಆಂಧ್ರಪ್ರದೇಶ ಸರಕಾರ ಈ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಲಾಯಿತು. ಸದರಿ ಪ್ರಕರಣದಲ್ಲಿ ಆರೋಪಿಯು ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಎಂಬುದಾಗಿ ದೂರುದಾರರು ಸಾಕ್ಷಿ ನುಡಿದಿದ್ದರು.
ವಶಪಡಿಸಿಕೊಂಡ ಹಣ ತನ್ನ ಸ್ವಾಧೀನದಲ್ಲಿತ್ತು ಎಂಬುದಾಗಿ ಆರೋಪಿಯು ಒಪ್ಪಿಕೊಂಡಿದ್ದರು. ಆದರೆ ಹಣವನ್ನು ಆರೋಪಿಯ ಸ್ವಾಧೀನತೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂಬ ಕಾರಣಕ್ಕೆ ದೋಷಾರೋಪಣೆ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬರುವಂತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಆರೋಪಿ ಬಿ. ಜಯರಾಜ್ ಅವರನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿತು.
ಜಯರಾಜ್ ವಿರುದ್ಧ ಆಂಧ್ರಪ್ರದೇಶ ಸರಕಾರ ಈ ಪ್ರಕರಣದ ಸಂಗತಿಗಳು ಹಾಗೂ ತಮ್ಮ ಪ್ರಕರಣದ ಸಂಗತಿಗಳು ಒಂದೇ ರೀತಿ ಇರುವುದರಿಂದ ಸದರಿ ಸಿದ್ದ ನಿರ್ಣಯದ ಆಧಾರದಲ್ಲಿ ಆರೋಪಿಯನ್ನು ದೋಷ ಮುಕ್ತಗೊಳಿಸಬೇಕೆಂಬ ಆರೋಪಿ ಪರ ವಕೀಲರ ವಾದವನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಮತ್ತು ಸಿ.ನಾಗಪ್ಪನ್ ಇವರನ್ನು ಒಳಗೊಂಡ ವಿಭಾಗಿಯ ಪೀಠವು ಕರ್ನಾಟಕ ಹೈಕೋರ್ಟ್ ನ ತೀರ್ಪನ್ನು ರದ್ದುಪಡಿಸಿ ಆರೋಪಿ/ಮೇಲ್ಮನವಿದಾರ ಶ್ರೀ ಎಂ.ಆರ್. ಪುರುಷೋತ್ತಮ್ ಅವರನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿತು.
ಮೇಲ್ಕಾಣಿಸಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬೆಳಕಿನಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಕೆ.ನಟರಾಜನ್ ಇವರ ಏಕ ಸದಸ್ಯ ನ್ಯಾಯ ಪೀಠವು ಎನ್. ತೇಜಸ್ ಕುಮಾರ್ ವಿರುದ್ಧ ಕರ್ನಾಟಕ ಸರಕಾರ ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹದಳವು ಚಿಕ್ಕಬಳ್ಳಾಪುರದಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ಎನ್. ತೇಜಸ್ ಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 7(ಎ) ಮತ್ತು 12 ರಡಿ ದಾಖಲಿಸಿದ ಪ್ರಥಮ ವರ್ತಮಾನ ವರದಿಯನ್ನು (FIR) ರದ್ದು ಪಡಿಸಿ ದಿನಾಂಕ 21.3.2022ರಂದು ಮಹತ್ವದ ತೀರ್ಪನ್ನು ನೀಡಿದೆ.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ
ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೈಕೋರ್ಟ್ ತೀರ್ಪು: ಎನ್. ತೇಜಸ್ ಕುಮಾರ್ VS ಕರ್ನಾಟಕ ಸರಕಾರ
ಸುಪ್ರೀಂ ಕೋರ್ಟ್ ತೀರ್ಪು: ಎಂ. ಆರ್. ಪುರುಷೋತ್ತಮ್ VS ಕರ್ನಾಟಕ ರಾಜ್ಯ ಸರಕಾರ