-->
ನ್ಯಾಯಾಂಗ ಇಲಾಖೆ ನೌಕರರ ಸ್ಪೆಷಾಲಿಟಿ ಏನು..? ಅವರಿಗೂ ಸರ್ಕಾರಿ ನೌಕರರಿಗೂ ಇರುವ ವ್ಯತ್ಯಾಸವೇನು..?

ನ್ಯಾಯಾಂಗ ಇಲಾಖೆ ನೌಕರರ ಸ್ಪೆಷಾಲಿಟಿ ಏನು..? ಅವರಿಗೂ ಸರ್ಕಾರಿ ನೌಕರರಿಗೂ ಇರುವ ವ್ಯತ್ಯಾಸವೇನು..?

ನ್ಯಾಯಾಂಗ ಇಲಾಖೆ ನೌಕರರ ಸ್ಪೆಷಾಲಿಟಿ ಏನು..? 

ಅವರಿಗೂ ಸರ್ಕಾರಿ ನೌಕರರಿಗೂ ಇರುವ ವ್ಯತ್ಯಾಸವೇನು..?


ನೂತನವಾಗಿ ಸೇವೆಗೆ ಸೇರಿದ ನ್ಯಾಯಾಂಗ ನೌಕರ ಬಾಂಧವರಿಗೆ ಸೇವಾ ಸಂಬಂಧಿತ ಕೆಲವು ಟಿಪ್ಸ್ / ಸಲಹೆಗಳು




ತರಬೇತಿ


ಇತರ ಇಲಾಖೆಗಳಲ್ಲಿ ನೂತನವಾಗಿ ಸೇವೆಗೆ ಸೇರಿದ ಸರಕಾರಿ ನೌಕರರಿಗೆ ಆಯಾ ಜಿಲ್ಲಾ ಕೇಂದ್ರದಲ್ಲಿರುವ ತರಬೇತಿ ಕೇಂದ್ರದಲ್ಲಿ ಸೇವೆಗೆ ಸಂಬಂಧಪಟ್ಟಂತೆ ಸಮಗ್ರ ತರಬೇತಿಯನ್ನು ನೀಡಲಾಗುತ್ತದೆ. ಆಡಳಿತ ವಿಭಾಗ; ನಗದು ವಿಭಾಗ ಹಾಗೂ ಕಂಪ್ಯೂಟರ್ ಸಾಕ್ಷರತಾ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ನೀಡಲಾಗುತ್ತದೆ. ಆದರೆ ನ್ಯಾಯಾಂಗ ಇಲಾಖಾ ನೌಕರರಿಗೆ ಉಳಿದ ಇಲಾಖೆಗಳ ಸರಕಾರಿ ನೌಕರರಿಗೆ ಇರುವಂತೆ ಸೇವೆಗೆ ಸೇರಿದ ಕೂಡಲೇ ಜಿಲ್ಲಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವ ಅವಕಾಶವಿರುವುದಿಲ್ಲ. ಕೆಲವು ವರ್ಷ ಕಳೆದ ಬಳಿಕ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಇರುವ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವ ಅವಕಾಶವಿದೆ.


ಸ್ವಯಂ ಪರಿಶ್ರಮ


ನ್ಯಾಯಾ೦ಗ ಇಲಾಖೆಯ ನೌಕರರು ಸ್ವಯಂ ಪರಿಶ್ರಮದಿಂದ ಇಲಾಖೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳನ್ನು ಕಲಿಯಬೇಕು. ತಮ್ಮ ತಮ್ಮ ವಿಭಾಗಕ್ಕೆ ಸಂಬಂಧಪಟ್ಟಂತೆ ಹಿಂದಿನ ಕಡತಗಳನ್ನು ಮತ್ತು ಕಾಗದ ಪತ್ರಗಳನ್ನು ಪರಿಶೀಲಿಸಿ ಅಧ್ಯಯನ ಮಾಡಿ ಸೇವೆಗೆ ಸಂಬಂಧಪಟ್ಟ ಕೆಲಸವನ್ನು ತಾವೇ ಕಲಿತು ಬೆಳೆಯಬೇಕಾಗಿದೆ. ಇಲಾಖೆಯ ಅನುಭವಿ ಹಿರಿಯ ನೌಕರರು ಕೂಡ ಸೇವೆಗೆ ಸೇರಿದಾಗ ಇದೇ ರೀತಿಯಲ್ಲಿ ಕೆಲಸಗಳನ್ನು ಕಲಿತು ಪರಿಪಕ್ವತೆ ಹೊಂದಿರುತ್ತಾರೆ. ಆದರೆ ಈಗ ಪೀಳಿಗೆಯ ಅಂತರ (Generation gap) ಕಂಡುಬರುತ್ತದೆ. ಏಕೆಂದರೆ ಹಿಂದಿನ ಪೀಳಿಗೆಯವರು ಸೇವೆಗೆ ಸೇರಿದಾಗ ನೂತನ ತಂತ್ರಜ್ಞಾನದ ಆವಿಷ್ಕಾರ ವಾಗಿರಲಿಲ್ಲ. ಕಾಯ್ದೆಗಳು; ಸೇವಾ ನಿಯಮಗಳು; ಸರಕಾರಿ ಆದೇಶ ಮುಂತಾದವುಗಳನ್ನು ಸ್ವತಃ ಅಧ್ಯಯನ ಮಾಡಿ ಭೌತಿಕವಾಗಿ ಸಂಗ್ರಹಿಸಿಡಬೇಕಾಗುತ್ತಿತ್ತು. ಕೈ ಬರವಣಿಗೆಯಲ್ಲಿ ಕೆಲಸವನ್ನು ನಿರ್ವಹಿಸಬೇಕಾಗಿತ್ತು. ಆದರೆ ಈಗಿನ ಪೀಳಿಗೆಯ ನೌಕರರಿಗೆ ಯಾವುದೇ ಮಾಹಿತಿ ಕೂಡ ಬೆರಳ ತುದಿಯಲ್ಲಿ ಲಭ್ಯವಿದೆ. ನೂತನ ತಂತ್ರಜ್ಞಾನ ದೈನಂದಿನ ಕೆಲಸ ಕಾರ್ಯಗಳು ಹಗುರವಾಗಿದೆ. ನೂತನವಾಗಿ ಸೇವೆಗೆ ಸೇರಿದ ನೌಕರರು HRMS/CIS ತಂತ್ರಜ್ಞಾನದಲ್ಲಿ ಹೆಚ್ಚಿನ ಪಾ೦ಡಿತ್ಯ ಪಡೆಯುವುದರಿಂದ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದು.


ಸಮಯ ಪರಿಪಾಲನೆ


ಕಚೇರಿ ಕೆಲಸಕ್ಕೆ ಕ್ಲಪ್ತ ಕಾಲದಲ್ಲಿ ಆಗಮಿಸುವುದು ನೂತನವಾಗಿ ಸೇವೆಗೆ ಸೇರಿದ ನೌಕರನ ಪ್ರಥಮ ಆದ್ಯತೆಯಾಗಬೇಕು. ಹಾಗೆ ಕಚೇರಿಯ ಅವಧಿ ಮುಗಿದ ನಂತರವೇ ಕಚೇರಿಯಿಂದ ತೆರಳಬೇಕು ಇದನ್ನು ಪಾಲಿಸಿದಲ್ಲಿ ಮಾತ್ರ ಆತನ ಜೀವನದಲ್ಲಿ ಸಮಯ ಪರಿಪಾಲನೆಯ ಶಿಸ್ತು ಮಾಡುವುದು.


ಮೇಲಧಿಕಾರಿಗಳಿಗೆ ಗೌರವ ನೀಡುವುದು


ನ್ಯಾಯಾಧೀಶರು ಕಚೇರಿಯ ಮುಖ್ಯಸ್ಥರಾಗಿರುತ್ತಾರೆ. ಅವರ ನಂತರದ ಸ್ಥಾನ ಮುಖ್ಯ ಲಿಪಿಕ ಅಧಿಕಾರಿಯವರದ್ದು. ಬಳಿಕ ಆಯಾ ವಿಭಾಗದ ಮುಖ್ಯಸ್ಥರು ಇರುತ್ತಾರೆ. ದಿನದ ಪ್ರಾರಂಭದಲ್ಲಿ ಪ್ರಥಮ ಭೇಟಿಯಾದಾಗ ಕಚೇರಿಯ ಮೇಲಧಿಕಾರಿಗಳಿಗೆ ವ೦ದಿಸುವುದು ಆದ್ಯ ಕರ್ತವ್ಯವಾಗಿದೆ. ಕಿರಿಯ ಸಹೋದ್ಯೋಗಿಗಳ ವಂದನೆಗೆ ಸ್ಪಂದಿಸುವುದು ಕೂಡ ಶಿಷ್ಟಾಚಾರದ ಲಕ್ಷಣವಾಗಿದೆ.



ಕಚೇರಿಯ ಹಿರಿಯ ಕಿರಿಯ ಸಿಬ್ಬಂದಿಗಳ ಜತೆಗೆ ಉತ್ತಮ ಸೌಹಾರ್ದಯುತ ಸಂಬಂಧವನ್ನು ಬೆಳೆಸಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಗುಣವನ್ನು ಬೆಳೆಸಿಕೊಂಡಿರುವ ನೌಕರರು ತಮಗೆ ತಿಳಿಯದ ವಿಷಯಗಳನ್ನು ಹಿರಿಯ ಸಹೋದ್ಯೋಗಿಗಳ ಜೊತೆ ಚರ್ಚಿಸಿದಾಗ ಅವರು ಸೌಜನ್ಯ ಪೂರಿತವಾಗಿ ಸ್ಪಂದಿಸಿ ತಮಗೆ ಗೊತ್ತಿರುವ ವಿಷಯಗಳನ್ನು ಕಿರಿಯ ಸಹೋದ್ಯೋಗಿಗಳಿಗೆ ತಿಳಿಹೇಳುತ್ತಾರೆ.





ಮೇಲಧಿಕಾರಿಗಳ ನಿರ್ದೇಶನಗಳನ್ನು ಪಾಲಿಸುವುದು


ಕಚೇರಿಯ ಮೇಲಧಿಕಾರಿಗಳು ನೀಡಿರುವ ನಿರ್ದೇಶನಗಳನ್ನು ಪಾಲಿಸುವುದು ಪ್ರತಿಯೊಬ್ಬ ನೌಕರನ ಆದ್ಯ ಕತ೯ವ್ಯವಾಗಿದೆ. ಕೆಲವೊಮ್ಮೆ ಹೇಳಿದ ಕೆಲಸ ಮರೆತು ಹೋಗುವ ಸಾಧ್ಯತೆ ಇರುವುದರಿಂದ ಒಂದು ಪುಸ್ತಕದಲ್ಲಿ ಅಂದು ಮಾಡಬೇಕಾದ ಕೆಲಸವನ್ನು ಬರೆದಿಟ್ಟುಕೊಳ್ಳುವುದು ಉತ್ತಮ ಹವ್ಯಾಸವಾಗಿದೆ. ಈ ರೀತಿ ಬರೆದಿಟ್ಟು ಕೊಳ್ಳುವುದರಿಂದ ಕೆಲಸದ ದಿನಚರಿ (Work load diary) ನಿರ್ವಹಿಸಲು ಸಹಕಾರಿಯಾಗುವುದು.


ಸೇವಾ ವಹಿ/HRMS ಗೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡುವುದು


ನೂತನವಾಗಿ ಸೇವೆಗೆ ಸೇರಿದ ಸರಕಾರಿ ನೌಕರರು ತಮ್ಮ ವೈಯಕ್ತಿಕ ವಿವರಗಳನ್ನು ಸೇವಾ ವಹಿಯಲ್ಲಿ/HRMS ದಾಖಲಿಸತಕ್ಕದ್ದಾಗಿದೆ. ತಮ್ಮ ವೈಯಕ್ತಿಕ ವಿವರಗಳ ಜೊತೆಗೆ ನಾಮನಿರ್ದೇಶನ, ಸ್ವಂತ ಊರು, ಸಂಗಾತಿಯ ಹೆಸರು, ಕುಟುಂಬದ ಸದಸ್ಯರ ಹೆಸರು ಮುಂತಾದವುಗಳನ್ನು ಅವಶ್ಯವಾಗಿ ನೀಡಬೇಕಾಗುತ್ತದೆ. ಒಂದು ವೇಳೆ ಈ ವಿವರಗಳು ಲಭ್ಯವಾಗದಿದ್ದರೆ ಸೇವಾ ಜೀವನದಲ್ಲಿ ಕೆಲವೊಂದು ಸಂದರ್ಭದಲ್ಲಿ ಅನುಚಿತ ಘಟನೆಗಳು ನಡೆದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.


ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು


ಸೇವೆಗೆ ಸೇರಿದ ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯಲ್ಲಿ ಹುದ್ದೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗ ಬೇಕಾಗಿದೆ. ಈಗ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಕೂಡ ಕಡ್ಡಾಯವಾಗಿ ಉತ್ತೀರ್ಣ ವಾಗಬೇಕಾಗಿದೆ. ಆದುದರಿಂದ ಈ ಪರೀಕ್ಷಾರ್ಥ ಅವಧಿಯಲ್ಲಿ ಏಕಾಗ್ರತೆ ಮತ್ತು ಸಮರ್ಪಣಾ ಭಾವದಿಂದ ಅದ್ಯಯನ ನಡೆಸಿದಲ್ಲಿ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಿದೆ.


ಅನಧಿಕೃತ ಗೈರುಹಾಜರಿ


ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಅಥವಾ ನೇಮಕಾತಿ ನಿಯಮಗಳ ಮೂಲಕ ಆಯ್ಕೆಗೊಂಡು ನೂತನವಾಗಿ ಸೇವೆಗೆ ಸೇರಿದ ನ್ಯಾಯಾಂಗ ನೌಕರರು ತಮ್ಮ ಸ್ವಂತ ಜಿಲ್ಲೆಯನ್ನು ಬಿಟ್ಟು ಹೊರಗಿನ ಜಿಲ್ಲೆಯಲ್ಲಿ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಇಂತಹ ನೌಕರರು ಕೆಲವೊಮ್ಮೆ ತಮ್ಮ ಸ್ವಂತ ಊರಿಗೆ ಹೋಗಿ ಮರಳಿ ಬರುವಾಗ ಅನಿವಾರ್ಯ ಕಾರಣಗಳಿಂದ ಕ್ಲಪ್ತ ಕಾಲಕ್ಕೆ ಕಚೇರಿ ಕರ್ತವ್ಯಕ್ಕೆ ಹಾಜರಾಗಲು ಅನುಕೂಲವಾಗಬಹುದು. ಇಂತಹ ಸಂದರ್ಭದಲ್ಲಿ ಕಚೇರಿ ಮುಖ್ಯಸ್ಥರಿಗೆ ಮುಂಗಡವಾಗಿ ದೂರವಾಣಿ ಮೂಲಕ ಮಾಹಿತಿ ನೀಡತಕ್ಕದ್ದು. ಪರೀಕ್ಷಾರ್ಥ ಅವಧಿಯಲ್ಲಿ ವೇತನ ರಹಿತ ರಜೆ ಬಳಸಿದ್ದಲ್ಲಿ ಪರೀಕ್ಷಾರ್ಥ ಅವಧಿಯು ಮುಂದೂಡಲ್ಪಡುವುದು.


ವಕೀಲರೊಂದಿಗೆ ಸೌಹಾರ್ದಯುತ ವ್ಯವಹರಣೆ


ವಕೀಲರು ಕೂಡ ನ್ಯಾಯಾಲಯದ ಅಧಿಕಾರಿಗಳೆಂಬ ವಿಷಯ ಬಹುತೇಕ ವಕೀಲರಿಗೂ ಗೊತ್ತಿಲ್ಲ; ನೌಕರರಿಗೂ ಗೊತ್ತಿಲ್ಲ. ನ್ಯಾಯಾಂಗ ನೌಕರರು ಕಾನೂನು ಪದವಿ ಹೊಂದಿದ್ದಲ್ಲಿ ವಕೀಲರ ಸ್ಥಾನಮಾನ ಪಡೆಯುತ್ತಾರೆ. ಅಂಥ ನೌಕರರು ಯಾವುದೇ ಹುದ್ದೆಯನ್ನು ಹೊಂದಿರಲಿ ಅವರಿಗೆ ನ್ಯಾಯಾಧೀಶರ ಹುದ್ದೆಗೆ ಸ್ಪರ್ಧಿಸುವ ಅವಕಾಶ ಲಭ್ಯವಿದೆ. 



ಈ ಸೌಲಭ್ಯ ಕನಾ೯ಟಕ ಲೋಕಸೇವಾ ಆಯೋಗದಿ೦ದ ಆಯ್ಕೆಯಾದ ಹಾಗೂ ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ದೊರೆಯುವುದಿಲ್ಲ. ಕಾನೂನು ಪದವಿ ಪಡೆದಿರುವ ಜವಾನ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೂ ನ್ಯಾಯಾಧೀಶರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ. ನೌಕರರು ವಕೀಲರೊಂದಿಗೆ ಗೌರವಯುತವಾಗಿ ವರ್ತಿಸಬೇಕು. ಉದ್ಧಟತನ ಹಾಗೂ ರೋಷಾವೇಷದ ವರ್ತನೆ ತೋರಿಸಬಾರದು. ಕಾಯ್ದೆ; ನಿಯಮಗಳನ್ನು ಸಮರ್ಪಕವಾಗಿ ತಿಳಿದುಕೊಂಡಿರುವ ನೌಕರರಿಗೆ ವಕೀಲರು ಸದಾ ಗೌರವವನ್ನು ನೀಡುತ್ತಾರೆ.


ನಡತೆ ನಿಯಮಗಳನ್ನು ( Conduct Rules) ಅಧ್ಯಯನ ಮಾಡಿ ಪಾಲಿಸುವುದು


ನೂತನವಾಗಿ ಸೇವೆಗೆ ಸೇರಿದ ನೌಕರರು ಯಾವ ಕಾರ್ಯವನ್ನು ಮಾಡಬೇಕು ಯಾವ ಕಾರ್ಯಗಳನ್ನು ಮಾಡಬಾರದು (DOs & DONTs) ಎಂಬ ವಿಷಯಗಳನ್ನು ತಿಳಿಯಬೇಕಾದರೆ ನಡತೆ ನಿಯಮ (KCS Conduct Rules) ಗಳನ್ನು ಓದಬೇಕು. ಸದರಿ ನಿಯಮಗಳನ್ನು ಓದಿ ಅದರಲ್ಲಿ ಹೇಳಿದ ನಿಯಮಗಳನ್ನು ಮನದಟ್ಟು ಮಾಡಿಕೊಂಡು ಸೇವಾ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.


ನ್ಯಾಯಾಂಗ ಇಲಾಖೆಯು ಯೋಜನೇತರ (Non scheme) ಇಲಾಖೆಯಾಗಿದೆ


ನ್ಯಾಯಾಂಗ ಇಲಾಖೆ ಸ್ವತಂತ್ರ ಇಲಾಖೆಯಾಗಿದ್ದು ಸರಕಾರದ ಯಾವುದೇ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ನ್ಯಾಯಾಂಗ ನೌಕರರಿಗೆ ಇರುವುದಿಲ್ಲ. ಬದಲಿಗೆ ನ್ಯಾಯಾಲಯವು ಹೊರಡಿಸಿದ ಆದೇಶಗಳನ್ನು ನಿಯಮಾನುಸಾರ ಪಾಲಿಸಿ ಜಾರಿಗೊಳಿಸುವುದು ನೌಕರರ ಹೊಣೆಗಾರಿಕೆಯಾಗಿದೆ. 


 ತಮ್ಮ ಕರ್ತವ್ಯ ಲೋಪ/ ನಿರ್ಲಕ್ಷ್ಯತೆಯಿಂದಾಗಿ ನ್ಯಾಯವನ್ನು ಅಪೇಕ್ಷಿಸಿ ನ್ಯಾಯಾಲಯಕ್ಕೆ ಬಂದಿರುವ ಜನಸಾಮಾನ್ಯರು ನ್ಯಾಯದಿ೦ದ ವಂಚಿತರಾಗಬಾರದು ಎಂಬ ವಿಷಯವನ್ನು ನೂತನವಾಗಿ ಸೇವೆಗೆ ಸೇರಿದ ನೌಕರರು ಸದಾ ಮನದಲ್ಲಿಟ್ಟುಕೊಳ್ಳಬೇಕು.


ತಮಗೆ ವಹಿಸಿಕೊಟ್ಟ ವಿಭಾಗಕ್ಕೆ ಸಂಬಂಧಪಟ್ಟಂತೆ ಕಾಯ್ದೆ; ನಿಯಮಗಳನ್ನು ತಿಳಿದುಕೊಳ್ಳುವುದು


ಆಡಳಿತಾತ್ಮಕವಾಗಿ ನ್ಯಾಯಾಂಗ ಇಲಾಖೆಯ ಕೆಲಸ ಕಾರ್ಯಗಳನ್ನು ಸ್ಥೂಲವಾಗಿ ಆರು ವಿಭಾಗಗಳಲ್ಲಿ ವಿ೦ಗಡಿಸಲಾಗಿದೆ.


1) ಆಡಳಿತ ವಿಭಾಗ

2) ನಗದು ವಿಭಾಗ

3) ಸಿವಿಲ್ ವಿಭಾಗ

4) ಕ್ರಿಮಿನಲ್ ವಿಭಾಗ

5) ಪ್ರೋಸೆಸ್‌ ವಿಭಾಗ

6) ರೆಕಾರ್ಡ್ಸ್ ಮತ್ತು ನಕಲು ವಿಭಾಗ


ನ್ಯಾಯಾಂಗ ನೌಕರರು ಕೆಳಗಿನ ಕಾಯ್ದೆಗಳ ಪುಸ್ತಕಗಳನ್ನು ಕರತಲಾಮಲಕ ಮಾಡಿಕೊಳ್ಳುವುದು ಅವಶ್ಯಕವಾಗಿದೆ.


KCSR; KFC; KTC; MCE; BUDGET MANNUAL: Karnataka Stamp Act.; Handbook on administration; Karnataka state subordinate courts Account Rules; Karnataka Registration Act and Rules; Karnataka Court fee and Suit valuation Act; CPC; IPC Cr.PC; Evidence Act; Karnataka Civil Rules of Practice; Karnataka Criminal Rules of practice; P.C.ACT; K.P.Act; RTI Act; M.V.Act & Rules; Limitation Act; J.J.Act; KCS (Conduct) rules; CCA Rules; probation Rules; General recruitment rules; Seniority rules; subordinate courts recruitment rules; C & R Rules etc.


ಬರವಣಿಗೆಯ ಕಲೆ (Drafting Skill)


ವಿಚಾರಣಾ ನ್ಯಾಯಾಲಯಗಳ (ಈ ಹಿಂದೆ ಇದನ್ನು ಅದೀನ ನ್ಯಾಯಾಲಯ ಎಂದು ಕರೆಯಲಾಗುತ್ತಿತ್ತು) ಅಧಿಕೃತ ಆಡಳಿತ ಭಾಷೆ ಕನ್ನಡವಾಗಿದ್ದರೂ ನ್ಯಾಯಾಂಗ ಇಲಾಖೆಯಲ್ಲಿ ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಪತ್ರ ವ್ಯವಹಾರಗಳನ್ನು ನಡೆಸಲಾಗುತ್ತದೆ. ಆದೇಶಿಕೆಗಳನ್ನು ಕೂಡ ಆಂಗ್ಲ ಭಾಷೆಯಲ್ಲಿ ಕಳುಹಿಸುತ್ತಾರೆ. ಆಂಗ್ಲ ಭಾಷೆಯಲ್ಲಿ ಪ್ರಭುತ್ವ ವುಳ್ಳವರು ಈ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ.



ಆಂಗ್ಲ ಭಾಷೆಯಲ್ಲಿ ಪ್ರಭುತ್ವ ಉಳ್ಳವರು ಕೂಡಾ ನ್ಯಾಯಾಲಯದ ಅಧಿಕೃತ ಭಾಷೆಯಾದ ಕನ್ನಡವನ್ನು ದೈನಂದಿನ ವ್ಯವಹಾರಗಳಲ್ಲಿ ಬಳಸಬಹುದು. ಕನ್ನಡವನ್ನು ನ್ಯಾಯಾಲಯದ ಆಡಳಿತದಲ್ಲಿ ಬಳಸಬೇಕೆಂದು ಮಾನ್ಯ ಹೈಕೋರ್ಟ್ ಹಲವು ಸುತ್ತೋಲೆಗಳನ್ನು ಕಳುಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು.


ಯಾವುದೇ ಸರಕಾರಕ್ಕೆ ನ್ಯಾಯಾಂಗ ನೌಕರರ ಮೇಲೆ ಆಡಳಿತಾತ್ಮಕ ನಿಯಂತ್ರಣ ಇಲ್ಲ


ನ್ಯಾಯಾಂಗ ಇಲಾಖೆಗೆ ಸೇರಿದ ಗ್ರೂಪ್ ಸಿ ಮತ್ತು ಡಿ ನೌಕರರು ಒಂದು ಜಿಲ್ಲಾ ಘಟಕದಲ್ಲಿ ಸೇವೆಯನ್ನು ಪ್ರಾರಂಭಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಅಥವಾ ನೇಮಕಾತಿ ಪ್ರಾಧಿಕಾರಗಳ ಮುಖಾಂತರ ನಡೆಯುವ ನೇಮಕಾತಿಗಳಲ್ಲಿ ಅಂತರ್ ಜಿಲ್ಲಾ ನೌಕರರ ನೇಮಕಾತಿ ಹೆಚ್ಚಾಗಿರುವುದು ಕಂಡು ಬರುತ್ತದೆ. ಈ ರೀತಿಯಲ್ಲಿ ನೇಮಕಾತಿ ಹೊಂದಿರುವ ನೌಕರರು ತಮ್ಮ ಸ್ವಂತ ಊರಿಗೆ ಹೋಗಬೇಕಿದ್ದಲ್ಲಿ ಅಂತರ್ಜಿಲ್ಲಾ ವರ್ಗಾವಣೆ ಕೋರಿ ಮಾನ್ಯ ಹೈಕೋರ್ಟ್ ಗೆ ಅಜಿ೯ ಸಲ್ಲಿಸಬೇಕು. ಏಕೆಂದರೆ ನ್ಯಾಯಾ೦ಗ ನೌಕರರಿಗೆ ಸಂಬಂಧಪಟ್ಟಂತೆ ವರ್ಗಾವಣೆ ಇತ್ಯಾದಿ ಯಾವುದೇ ಆಡಳಿತಾತ್ಮಕ ವಿಷಯಗಳ ಮೇಲೆ ಸರಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ. ಹೈಕೋರ್ಟ್  ನಿಯಂತ್ರಣಕ್ಕೆ ಒಳಪಟ್ಟಿದೆ. ವರ್ಗಾವಣೆ ಪಡೆಯಲು ಸರಕಾರದ ಹಂತದಲ್ಲಿ ಅಥವಾ ಮಂತ್ರಿಗಳಿಂದ ಶಿಫಾರಸು ಮಾಡಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದಲ್ಲಿ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ. 


ಆದುದರಿಂದ 5 ವರ್ಷ ಪೂರೈಸಿದ ನ್ಯಾಯಾಂಗ ನೌಕರರು ತಾವು ಕೆಲಸ ನಿರ್ವಹಿಸುತ್ತಿರುವ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಲ್ಲಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ನಿವೇದಿಸಿ ಸಮುಚಿತ ಹಾದಿಯಲ್ಲಿ ತಮ್ಮ ಮನವಿಯನ್ನು ಅಥವಾ ಅರ್ಜಿಗಳನ್ನು ಮಾನ್ಯ ಹೈಕೋರ್ಟಿಗೆ ಕಳುಹಿಸಬೇಕಾಗುತ್ತದೆ.


ಸುಸ್ಥಿರ ಆರೋಗ್ಯ ಕಾಪಾಡಿಕೊಳ್ಳುವುದು


ನೂತನವಾಗಿ ಸೇವೆಗೆ ಸೇರಿದ ನ್ಯಾಯಾಂಗ ನೌಕರರು ತಮ್ಮ ಪ್ರಾದೇಶಿಕ ಸಂಸ್ಕೃತಿ; ಭಾಷೆ; ಆಚರಣೆ; ಆಹಾರ ಪದ್ಧತಿ ಇವೆಲ್ಲವುಗಳಿಂದ ಅತೀತವಾದ ತಮಗೆ ಹೊಸತೆನಿಸಿರುವ ವಾತಾವರಣದಲ್ಲಿ ಕೆಲಸ ಮಾಡುವಾಗ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಿ.ಜಿ. ಹಾಸ್ಟೆಲ್ಗಳಲ್ಲಿ ವಾಸವಾಗಿರುವ ನೌಕರರು ಮುಖ್ಯವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯದಷ್ಟು ದೊಡ್ಡ ಸಂಪತ್ತು ಬೇರೆ ಯಾವುದೂ ಇಲ್ಲ ಎಂಬುದನ್ನು ಮೊದಲು ಮನಗಾಣಬೇಕು.


ದುರ್ವ್ಯಸನ; ದುರ್ವಿಚಾರ; ಮತ್ತು ಆಕರ್ಷಣೆಗಳಿಂದ ದೂರವಿರುವುದು


ನೂತನವಾಗಿ ಸೇವೆಗೆ ಸೇರಿದ ನೌಕರರು ಮನೆಯಿಂದ ದೂರ ಏಕಾಂಗಿಯಾಗಿ ಹೊಸ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ವಿವಿಧ ರೀತಿಯ ಆಸೆ; ಆಮಿಷಗಳಿಗೆ ಮತ್ತು ಆಕರ್ಷಣೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟು ತಮ್ಮ ಉತ್ತಮ ಭವಿಷ್ಯದ ಬಗ್ಗೆ ಮಾತ್ರ ಚಿಂತಿಸಿ ಯಾವುದೇ ದುರ್ವ್ಯಸನಗಳಿಗೆ ಬಲಿಯಾಗದೆ ಕರ್ತವ್ಯ ನಿರ್ವಹಿಸಬೇಕು.


ಇತರ ಇಲಾಖೆಗಳ ನೌಕರರೊಂದಿಗೆ ಹೋಲಿಕೆ ಬೇಡ


ನೂತನವಾಗಿ ನ್ಯಾಯಾಂಗ ಇಲಾಖೆಗೆ ಸೇರಿದ ನೌಕರರಲ್ಲಿ ಕೆಲವರು ಇತರ ಇಲಾಖೆಯ ನೌಕರರೊಂದಿಗೆ ತಮ್ಮನ್ನು ಹೋಲಿಸಿಕೊಂಡು ಯಾಕಪ್ಪಾ ಈ ಇಲಾಖೆಗೆ ಸೇರಿಕೊಂಡೆ ಎಂದು ಉದ್ಘರಿಸುವುದನ್ನು ನಾವು ಕೇಳಬಹುದು.

ಆದರೆ, ನ್ಯಾಯಾಂಗ ಇಲಾಖೆಯ ನೌಕರರಿಗೆ ರಾಜಕಾರಣಿಗಳ ಹಾಗೂ ಜನಪ್ರತಿನಿಧಿಗಳ ಒತ್ತಡವಿಲ್ಲ. ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ಯಾವುದೇ ಒತ್ತಡಕ್ಕೆ ತಲೆಬಾಗುವ ಅವಶ್ಯಕತೆ ಇಲ್ಲ. ಸಮಾಜದಲ್ಲಿ ನ್ಯಾಯಾಂಗ ಇಲಾಖೆಯ ನೌಕರರಿಗೆ ಉಳಿದ ಇಲಾಖೆಯ ನೌಕರರಿಗಿಂತ ಗೌರವ ಜಾಸ್ತಿ ಇದೆ. ಯಾವುದೇ ರೀತಿಯ ಆಸೆ ಆಮಿಷಗಳಿಗೆ ಒಳಗಾಗದೆ; ಕಂಡ ಕಂಡವರ ಬಾಲ ಹಿಡಿಯದೆ; ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುವ ನ್ಯಾಯಾಂಗ ನೌಕರರು ಇತರ ಇಲಾಖೆಯ ನೌಕರರಿಗೆ ಯಾವತ್ತೂ ಮಾದರಿಯೆನಿಸಿದ್ದಾರೆ.


ಡಿ ಗ್ರೂಪ್ ನೌಕರರ ಪಾತ್ರ


ಇತ್ತೀಚಿನ ದಿನಗಳಲ್ಲಿ ಹೊಸದಾಗಿ ನ್ಯಾಯಾಂಗ ಇಲಾಖೆಗೆ ಸೇವೆಗೆ ಸೇರಿದ 'ಡಿ' ಗ್ರೂಪ್ ನೌಕರರಲ್ಲಿ ಬಹುತೇಕ ನೌಕರರು ಪದವೀಧರರಾಗಿರುವುದರಿಂದ ಸಾಮಾನ್ಯವಾಗಿ ತಮ್ಮ ದೈನಂದಿನ ಕರ್ತವ್ಯದಲ್ಲಿ ಕೀಳರಿಮೆ ಭಾವನೆಯನ್ನು ಹೊಂದಿರುವುದು ಕಂಡು ಬರುತ್ತದೆ. ಆದರೆ ಯಾವುದೇ ಹುದ್ದೆಯನ್ನು ಮನಃಪೂರ್ವಕವಾಗಿ ನಿರ್ವಹಿಸಿದ್ದಲ್ಲಿ ದೇವರ ಅನುಗ್ರಹ ಸದಾ ನಮ್ಮ ಮೇಲಿರುತ್ತದೆ ಎಂದು ಅರಿತುಕೊಂಡು ತಮ್ಮ ಕರ್ತವ್ಯ ನಿರ್ವಹಿಸಿದಲ್ಲಿ ಮಾನಸಿಕವಾಗಿ ನೆಮ್ಮದಿ ಕಂಡುಕೊಳ್ಳಬಹುದು.


ಡಿ ಗ್ರೂಪ್ ನೌಕರರಲ್ಲಿ ಹೆಚ್ಚಿನವರು ಬಡ್ತಿಯ ಸಂದರ್ಭದಲ್ಲಿ ಆದೇಶಿಕೆ ಜಾರಿಕಾರ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಮನೋಭಾವನೆ ಬದಲಾಗಬೇಕು. ದ್ವಿತೀಯ ದರ್ಜೆ ಸಹಾಯಕ ಹುದ್ದೆಯನ್ನು ಆಯ್ಕೆ ಮಾಡಿದ್ದಲ್ಲಿ ಸೇವಾ ಜೀವನದಲ್ಲಿ ಹೆಚ್ಚಿನ ಮುಂಬಡ್ತಿ ದೊರೆತು ಪತ್ರಾಂಕಿತ ಹುದ್ದೆಯಲ್ಲಿ ನಿವೃತ್ತನಾಗುವ ಅವಕಾಶವಿದೆ ಎಂಬುದನ್ನು ತಿಳಿದುಕೊಳ್ಳಬೇಕು.


ಸೇವಾ ಕಾನೂನುಗಳು; ನಿಯಮಾವಳಿಗಳು; ಸರಕಾರಿ ಆದೇಶಗಳಲ್ಲಿ ಪಾಂಡಿತ್ಯವುಳ್ಳ ನೌಕರರು ಯಾವುದೇ ಹುದ್ದೆಯಲ್ಲಿರಲಿ ಇಡೀ ಕಚೇರಿಯನ್ನು ನಿರ್ವಹಿಸಬಲ್ಲ ಶಕ್ತಿಯನ್ನು ಹೊಂದಿರುತ್ತಾರೆ ಎಂಬುದು ಸರ್ವಸಮ್ಮತ ವಿಚಾರವಾಗಿದೆ. ಆದುದರಿಂದ ಸಾಧ್ಯವಾದಷ್ಟು ಕಾಯ್ದೆ; ನಿಯಮ; ಸರಕಾರಿ ಆದೇಶಗಳನ್ನು ಕರತಲಾಮಲಕ ಮಾಡಿಕೊಂಡಲ್ಲಿ ಒತ್ತಡ ರಹಿತ ಸೇವಾ ಜೀವನವನ್ನು ನೆಮ್ಮದಿಯಿಂದ ಸಾಗಿಸಬಹುದು.


✍ಪ್ರಕಾಶ್ ನಾಯಕ್; ಶಿರಸ್ತೇದಾರರು; ನ್ಯಾಯಾಂಗ ಇಲಾಖೆ; ಮಂಗಳೂರು


Ads on article

Advertise in articles 1

advertising articles 2

Advertise under the article