-->
ಕೋರ್ಟ್ ಸಿಬ್ಬಂದಿ 'ಫೈಲ್ ಮೇಲೆ ಬರೆದ ಟಿಪ್ಪಣಿ' ಮೇಲೆ ನ್ಯಾಯಾಧೀಶರು ಆದೇಶ ಮಾಡಬಹುದೇ..?: ಹೈಕೋರ್ಟ್ ಮಹತ್ವದ ತೀರ್ಪು

ಕೋರ್ಟ್ ಸಿಬ್ಬಂದಿ 'ಫೈಲ್ ಮೇಲೆ ಬರೆದ ಟಿಪ್ಪಣಿ' ಮೇಲೆ ನ್ಯಾಯಾಧೀಶರು ಆದೇಶ ಮಾಡಬಹುದೇ..?: ಹೈಕೋರ್ಟ್ ಮಹತ್ವದ ತೀರ್ಪು

ಕೋರ್ಟ್ ಸಿಬ್ಬಂದಿ 'ಫೈಲ್ ಮೇಲೆ ಬರೆದ ಟಿಪ್ಪಣಿ' ಮೇಲೆ ನ್ಯಾಯಾಧೀಶರು ಆದೇಶ ಮಾಡಬಹುದೇ..?: ಹೈಕೋರ್ಟ್ ಮಹತ್ವದ ತೀರ್ಪು






ನ್ಯಾಯಾಂಗ ಸಿಬ್ಬಂದಿಯ ಕಚೇರಿ ಟಿಪ್ಪಣಿ ಯಾ ಲಿಖಿತ ಸಲಹೆಯ ಮೇಲೆ ನ್ಯಾಯಾಧೀಶರು ನ್ಯಾಯಾಂಗ ಆದೇಶ ಹೊರಡಿಸುವಂತಿಲ್ಲ-- ಕೇರಳ ಹೈಕೋರ್ಟ್ ಮಹತ್ವದ ತೀರ್ಪು


ನ್ಯಾಯಾಂಗ ಆದೇಶ ಹೊರಡಿಸುವಂತೆ ನ್ಯಾಯಾಲಯದ ಸಿಬ್ಬಂದಿ ಯಾವುದೇ ಲಿಖಿತ ಸಲಹೆ ಯಾ ಕಚೇರಿ ಟಿಪ್ಪಣಿ ಮಂಡಿಸುವಂತಿಲ್ಲ ಹಾಗೂ ಸದರಿ ಟಿಪ್ಪಣಿ ಯಾ ಸಲಹೆಯ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಆದೇಶ ಹೊರಡಿಸುವಂತಿಲ್ಲ ಎಂಬುದಾಗಿ ಸ್ಮಿತಾ ವಿರುದ್ಧ ಕೇರಳ ರಾಜ್ಯ ಈ ಪ್ರಕರಣದಲ್ಲಿ ಕೇರಳ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿ ಕೆ. ಹರಿಪಾಲ್ ನೇತೃತ್ವದ ಏಕ ಸದಸ್ಯ ನ್ಯಾಯಪೀಠ ದಿನಾಂಕ 27.1.2022 ರಂದು ಮಹತ್ವದ ತೀರ್ಪು ನೀಡಿದೆ.



ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ:


ಶ್ರೀಮತಿ ಸ್ಮಿತಾ ಎಂಬವರ ಪತಿ ತಂಕಚ್ಚನ್ ಎಂಬವರು ದಿನಾಂಕ 16.10.2021 ರಂದು ವಾಹನ ಅಪಘಾತದಲ್ಲಿ ಗಾಯಗೊಂಡಿದ್ದರು. ತಕ್ಷಣ ಗಾಯಾಳುವನ್ನು ಎಡಪಳ್ಳಿಯ ಎಂಎಜೆ ಆಸ್ಪತ್ರೆಗೆ ಸಾಗಿಸಲಾಯಿತು. ಸದರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಎಲಮಕ್ಕರ ಪೊಲೀಸ್ ಠಾಣೆಗೆ ಅಪಘಾತ ಪ್ರಕರಣದ ಮಾಹಿತಿ ಕಳುಹಿಸಿದ್ದರು‌. ಸದರಿ ಠಾಣೆಯ ಠಾಣಾಧಿಕಾರಿಯವರು ಅಪರಾಧ ಪ್ರಕರಣ ದಾಖಲಿಸಿಲ್ಲವಾದ್ದರಿಂದ ಫಿರ್ಯಾದುದಾರರ ಪತ್ನಿ ಸ್ಮಿತಾ ಅವರು ದಿನಾಂಕ 11.11.2021 ರಂದು ಎರ್ನಾಕುಲಂ ನಗರದ ಪೊಲೀಸ್ ಕಮಿಷನರ್ ಗೆ ದೂರು ನೀಡಿದರು. ಸದರಿ ದೂರಿಗೂ ಯಾವುದೇ ಸ್ಪಂದನೆ ಸಿಗದ ಕಾರಣ ದಿನಾಂಕ 19.11.2022 ರಂದು ಅಳುವಾ ಎಂಬಲ್ಲಿನ ಜೆಎಂಎಫ್‌ಸಿ ಎರಡನೇ ದರ್ಜೆ ನ್ಯಾಯಾಲಯಕ್ಕೆ ಸ್ಮಿತಾ ಅವರು ಖುದ್ದಾಗಿ ಹಾಜರಾಗಿ ತನ್ನ ಪತಿ ಅಪಘಾತದ ಗಾಯಗಳಿಂದ ಓಡಾಡುವ ಸ್ಥಿತಿಯಲ್ಲಿಲ್ಲದ ಕಾರಣ ಅವರ ಪರವಾಗಿ ಈ ದೂರನ್ನು ಸಲ್ಲಿಸಿರುವುದಾಗಿ ನಿವೇದಿಸಿದರು.


ಆದೇಶದ ಹಾಳೆಯಲ್ಲಿ ಈ ಕೆಳಗಿನ ಕಚೇರಿ ಟಿಪ್ಪಣಿಯನ್ನು ಮಂಡಿಸಲಾಗಿತ್ತು.


ಪರಿಶೀಲಿಸಲಾಗಿ, ನ್ಯಾಯಾಲಯದ ಅಧಿಕಾರ ವ್ಯಾಪ್ತಿಯೊಳಗೆ ಇದೆ. ಕಮಿಷನರ್ ಕಚೇರಿಯ ಸ್ವೀಕೃತಿ ಪತ್ರ ಹಾಜರುಪಡಿಸಿಲ್ಲ. ದೂರನ್ನು ಫಿರ್ಯಾದುದಾರರ ಪತ್ನಿ ದಾಖಲಿಸಿರುತ್ತಾರೆ. ಹಾಗಾಗಿ ಫಿರ್ಯಾದನ್ನು (ದೂರನ್ನು) ಮರಳಿಸಬಹುದಾಗಿದೆ.


ಆದೇಶದ ಹಾಳೆಯಲ್ಲಿ ನ್ಯಾಯಾಧೀಶರ ಆದೇಶ ಈ ಕೆಳಗಿನಂತಿತ್ತು.


"ಮರಳಿಸಲಾಗಿದೆ"


ಪಿರ್ಯಾದನ್ನು (ದೂರನ್ನು) ಸ್ಮಿತಾ ಅವರಿಗೆ ಮರಳಿಸುವಂತೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.


ಫಿರ್ಯಾದುದಾರನ ಪತ್ನಿ ದೂರನ್ನು ಸಲ್ಲಿಸಿರುವುದರಿಂದ ದೂರನ್ನು ಮರಳಿಸಲಾಗಿದೆ ಎಂಬುದು ಆದೇಶದ ತಾತ್ಪರ್ಯವಾಗಿತ್ತು.


ಸದರಿ ಆದೇಶದಿಂದ ಬಾಧಿತರಾದ ಸ್ಮಿತಾ ಅವರು ಆದೇಶವನ್ನು ಪ್ರಶ್ನಿಸಿ, ಕೇರಳ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿದರು.


ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವ ವ್ಯಕ್ತಿಯೂ ಕೂಡ ಪಿರ್ಯಾದು (ದೂರು) ಯಾ ಪ್ರಥಮ ಮಾಹಿತಿ/ವರದಿ ಸಲ್ಲಿಸಬಹುದು. ಮೊಕದಮ್ಮೆ ಹೂಡುವ ಹಕ್ಕು (Locus standi) ಕ್ರಿಮಿನಲ್ ನ್ಯಾಯಶಾಸ್ತ್ರಕ್ಕೆ ಅನ್ವಯಿಸುವುದಿಲ್ಲ. ದಂಡ ಪ್ರಕ್ರಿಯ ಸಂಹಿತೆ 190 ರಡಿ ಯಾವ ವ್ಯಕ್ತಿಯು ಕೂಡ ಮ್ಯಾಜಿಸ್ಟ್ರೇಟ್ ಸಮಕ್ಷಮ ದೂರು ಸಲ್ಲಿಸಬಹುದು ಎಂಬುದಾಗಿ "ಎ.ಆರ್. ಅಂತುಳೆ Vs ರಾಮದಾಸ್ ಶ್ರೀನಿವಾಸ್ ನಾಯಕ್" ಪ್ರಕರಣದಲ್ಲಿ ಮಾನ್ಯ ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿರುವ ವಿಷಯವನ್ನು ಮಾನ್ಯ ಕೇರಳ ಹೈ ಕೋರ್ಟ್ ಉಲ್ಲೇಖಿಸಿತು.


ಸಾಮಾನ್ಯವಾಗಿ ಸಿವಿಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾದಾಗ ನ್ಯಾಯಾಲಯದ ಲಿಪಿಕ ಸಿಬ್ಬಂದಿ (ministerial staff) ಕರ್ನಾಟಕ ಸಿವಿಲ್ ರೂಲ್ಸ್ ಆಫ್ ಪ್ರಾಕ್ಟೀಸ್ ಪ್ರಕಾರ ತಮಗೆ ಪ್ರದತ್ತವಾದ ಅಧಿಕಾರವನ್ನು ಬಳಸಿ ಪರಿಶೀಲನಾ ಪಟ್ಟಿ (check skip) ಪ್ರಕಾರ ಪರಿಶೀಲಿಸಿ ನಿಯಮಗಳಡಿ ಕಚೇರಿ ಆಕ್ಷೇಪಣೆಗಳನ್ನು ದಾಖಲಿಸಲು ಅಧಿಕಾರ ಹೊಂದಿರುತ್ತಾರೆ.


ಸಿವಿಲ್ ದಾವೆ/ಪ್ರಕರಣವನ್ನು ನೋಂದಾಯಿಸುವ ಮೊದಲು ಮುಖ್ಯವಾಗಿ ಈ ಕೆಳಗಿನ ಅಂಶಗಳನ್ನು ಪರಿಶೀಲಿಸತಕ್ಕದ್ದು.


1.ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಅಧಿಕಾರ ವ್ಯಾಪ್ತಿ ಇದೆಯೇ?


2. ಪಕ್ಷಕಾರರ ವಿಳಾಸದ ಕುರಿತು ದೃಢೀಕರಣ ನೀಡಲಾಗಿದೆಯೇ?


3. ಪರಿಶೀಲನಾ ಪ್ರಮಾಣ ಪತ್ರ ಸಲ್ಲಿಸಲಾಗಿದೆಯೇ?


4. ಎಚ್ಚರಿಕೆ ಅರ್ಜಿ (Caveat Petition) ದಾಖಲಾಗಿದೆಯೇ?


5. ನ್ಯಾಯಾಲಯದ ಶುಲ್ಕ (court fee) ಪಾವತಿಸಿರುವುದು ನಿಯಮಾನುಸಾರ ಸರಿಯಾಗಿದೆಯೇ?


6. ಕಾಲಮಿತಿಯೊಳಗೆ ದಾವೆಯನ್ನು ಹೂಡಲಾಗಿದೆಯೇ?


7. ವಾದ ಪತ್ರದ ಜೊತೆಗೆ ಹಾಜರುಪಡಿಸಿದ ದಸ್ತಾವೇಜುಗಳ ಸ್ಥಿತಿಗತಿ ಚೆನ್ನಾಗಿದೆಯೇ?


8. ದಾವೆಯನ್ನು ಹೂಡಲು ಯಾವುದೇ ಕಾನೂನಿನಡಿ ನಿಷೇಧ ಇದೆಯೇ?


ಈ ಮುಂತಾದ ಅಂಶಗಳ ಬಗ್ಗೆ ಪರಿಶೀಲನಾ ಅಧಿಕಾರಿಯ ಟಿಪ್ಪಣಿ ಹಾಗೂ ಸಹಿ ಅಗತ್ಯವಾಗಿರುತ್ತದೆ.


ವಿಚಾರಣಾ (ಅಧೀನ) ನ್ಯಾಯಾಲಯಗಳಲ್ಲಿ ಹೈಕೋರ್ಟಿನಲ್ಲಿರುವಂತೆ ಯಾವುದೇ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸುವ ಹಂತ (Admission Stage)ಇರುವುದಿಲ್ಲ. ಕೋರ್ಟ್ ಫೀ ಪಾವತಿಸದ, ಕಾಲಬಾಧಿತವಾದ ಅಥವಾ ಅಧಿಕಾರ ವ್ಯಾಪ್ತಿ ಇಲ್ಲದ ದಾವೆ/ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕರಣಗಳು ನೋಂದಾಯಿಸಲ್ಪಡುತ್ತವೆ.


ಆದರೆ ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯದ ಕಚೇರಿಯಲ್ಲಿ ಹಾಜರುಪಡಿಸುವ ಪದ್ಧತಿ ಇಲ್ಲ. ಖಾಸಗಿ ವ್ಯಕ್ತಿಗಳು ಸಲ್ಲಿಸುವ ಯಾವುದೇ ಪಿರ್ಯಾದು, ಪೊಲೀಸರು ದಾಖಲಿಸುವ ಪ್ರಥಮ ವರ್ತಮಾನ ವರದಿ, ದೋಷಾರೋಪಣಾ ಪತ್ರ, ಸೊತ್ತುಪಟ್ಟಿ, ನ್ಯಾಯಾಂಗ ಬಂಧನದ ಅರ್ಜಿ ಮತ್ತಿತರ ಯಾವುದೇ ವಿಷಯಗಳಾದರೂ ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸಿ ಅವರ ಸ್ವಹಸ್ತಾಕ್ಷರದಿಂದ ಆದೇಶ ಪಡೆಯಬೇಕಾಗಿದೆ.


ಒಂದು ವೇಳೆ ನ್ಯಾಯಾಧೀಶರು ಪೀಠಾಸೀನರಾಗಿದ್ದಲ್ಲಿ, ಇನ್ನಿತರ ಅನಿವಾರ್ಯ ಸಂದರ್ಭದಲ್ಲಿ ಪೊಲೀಸರು ನ್ಯಾಯಾಲಯದ ಕಚೇರಿಯಲ್ಲಿ ಯಾವುದೇ ದಸ್ತಾವೇಜನ್ನು ಸಲ್ಲಿಸಿದ್ದಲ್ಲಿ ಲಿಪಿಕ ಸಿಬ್ಬಂದಿಯವರು ಕೂಡಲೇ ಅದನ್ನು ನ್ಯಾಯಾಧೀಶರ ಅವಾಹನೆಗೆ ತರತಕ್ಕದ್ದಾಗಿದೆ.


ನ್ಯಾಯಾಲಯದ ಲಿಪಿಕ ಸಿಬ್ಬಂದಿಗಳಿಗೆ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಪಟ್ಟ ಯಾವುದೇ ಕಚೇರಿ ಟಿಪ್ಪಣಿ ಯಾ ಲಿಖಿತ ಸಲಹೆ ನೀಡುವ ಅಧಿಕಾರ ಇರುವುದಿಲ್ಲ. ನ್ಯಾಯಾಧೀಶರೇ ಸ್ವತಃ ಸದರಿ ದಾಖಲೆಗಳನ್ನು ಸ್ವೀಕರಿಸಿ ಅವಗಾಹನಿಸತಕ್ಕದ್ದಾಗಿದೆ. ಯಾವುದೇ ಖಾಸಗಿ ಕ್ರಿಮಿನಲ್ ದೂರನ್ನು ನ್ಯಾಯಾಲಯದ ಕಚೇರಿಯಲ್ಲಿ ಸಲ್ಲಿಸುವ ಪದ್ಧತಿ ಇಲ್ಲ. ನೇರವಾಗಿ ನ್ಯಾಯಾದೀಶರ ಸಮಕ್ಷಮ ಸಲ್ಲಿಸತಕ್ಕದ್ದು. ಅದನ್ನು ಸ್ವೀಕರಿಸಿದ ನ್ಯಾಯಾಧೀಶರು ಪರಿಶೀಲಿಸಿ, ಅವಗಾಹನಿಸಿ ಸೂಕ್ತ ಆದೇಶ ಹೊರಡಿಸತಕ್ಕದ್ದಾಗಿದೆ.


ದೂರನ್ನು ನೋಂದಾಯಿಸಬೇಕೆಂಬ ನಿಷ್ಕರ್ಷಕ್ಕೆ ನ್ಯಾಯಾಧೀಶರು ಬಂದಲ್ಲಿ ಖಾಸಗಿ ಫಿರ್ಯಾದು (private complaint) ಎಂದು ನೋಂದಾಯಿಸಿ ಆದೇಶದ ಹಾಳೆಯೊಂದಿಗೆ ನ್ಯಾಯಾಲಯದ ಸಮಕ್ಷಮ ಮಂಡಿಸುವಂತೆ ಕಚೇರಿ ಸಿಬ್ಬಂದಿಗೆ ನಿರ್ದೇಶನ ನೀಡತಕ್ಕದ್ದಾಗಿದೆ. ನ್ಯಾಯಾಧೀಶರ ಆದೇಶದಂತೆ ಖಾಸಗಿ ಪಿರ್ಯಾದಿಯನ್ನು ನೋಂದಾಯಿಸಿ ನ್ಯಾಯಾಲಯದ ಸಮಕ್ಷಮ ಮಂಡಿಸುವ ಕಾರ್ಯ ಲಿಪಿಕ ಸಿಬ್ಬಂದಿಗಳದ್ದಾಗಿದೆ. ಈ ವಿಷಯವನ್ನು ಹೊರತುಪಡಿಸಿ ಉಳಿದ ಯಾವುದೇ ರೀತಿಯ ಬರವಣಿಗೆ, ಸಲಹೆ ಅಥವಾ ಇದೇ ಪ್ರಕಾರ ನ್ಯಾಯಾಂಗ ಆದೇಶ ಹೊರಡಿಸುವಂತೆ ಕಚೇರಿ ಟಿಪ್ಪಣಿಯನ್ನು ಆದೇಶದ ಹಾಳೆಯಲ್ಲಿ ದಾಖಲಿಸುವ ಅಧಿಕಾರ ಲಿಪಿಕ ಸಿಬ್ಬಂದಿಗಳಿಗೆ ಇರುವುದಿಲ್ಲ.


ಕಾರ್ಯಾಂಗದ ಇತರ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳು ಕಚೇರಿ ಟಿಪ್ಪಣಿ ಮಂಡಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅಧಿಕಾರ ವ್ಯಾಪ್ತಿ ಹೊಂದಿರುತ್ತಾರೆ. ವಿಷಯ ನಿರ್ವಾಹಕರ ಕಚೇರಿ ಟಿಪ್ಪಣಿಯ ಮೇಲೆ ಕಚೇರಿ ಮುಖ್ಯಸ್ಥರು ಆದೇಶ ಹೊರಡಿಸುತ್ತಾರೆ. ಆದರೆ ನ್ಯಾಯಾಂಗ ಸಿಬ್ಬಂದಿಗಳಿಗೆ ನ್ಯಾಯಾಲಯವು ನೀಡಿದ ಆದೇಶವನ್ನು ನಿಯಮಾನುಸಾರ ಪಾಲಿಸುವ ಅಧಿಕಾರ ವ್ಯಾಪ್ತಿ ಮಾತ್ರ ಇದೆ. ಯಾವುದೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ವ್ಯಾಪ್ತಿ ಇರುವುದಿಲ್ಲ. ನ್ಯಾಯಾಂಗ ಇಲಾಖೆಯಲ್ಲಿ ಆಡಳಿತಾತ್ಮಕ ಮತ್ತು ನ್ಯಾಯಿಕ ಎರಡು ವಿಭಾಗಗಳಿಗೆ ನ್ಯಾಯಾಧೀಶರೇ ಮುಖ್ಯಸ್ಥರಾಗಿರುತ್ತಾರೆ. ಅವರಿಗೆ ಸಹಕರಿಸಲು ಮುಖ್ಯ ಆಡಳಿತ ಅಧಿಕಾರಿ, ಮುಖ್ಯ ಲಿಪಿಕಾಧಿಕಾರಿ ಮತ್ತು ಶಿರಸ್ತೆದಾರ ಮುಂತಾದ ನಾಮಾಂಕಿತ ಲಿಪಿಕ ಅಧಿಕಾರಿಗಳು ಇರುತ್ತಾರೆ.


ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ದಸ್ತಾವೇಜುಗಳನ್ನು ನ್ಯಾಯಾಧೀಶರೇ ಸ್ವತಃ ಸ್ವೀಕರಿಸಬೇಕು ಮತ್ತು ಯಾವುದೇ ಕಚೇರಿ ಟಿಪ್ಪಣಿ ಮಂಡಿಸಿದಾಗ ನ್ಯಾಯಾಧೀಶರು ಸದರಿ ಕಚೇರಿ ಟಿಪ್ಪಣಿಯನ್ನು ಅಂಗೀಕರಿಸಿ ನ್ಯಾಯಾಂಗ ಆದೇಶ ಮಾಡುವಂತಿಲ್ಲ. ಸ್ವಯಂ ವಿಶ್ಲೇಷಣೆ ನಡೆಸಿ ಅವಗಾಹನೆ ಮಾಡಿ ನ್ಯಾಯಾಂಗ ಆದೇಶ ಹೊರಡಿಸತಕ್ಕದ್ದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕೇರಳ ಹೈಕೋರ್ಟ್ ಸ್ಮಿತಾ ಅವರು ಸಲ್ಲಿಸಿದ ರಿಟ್ ಅರ್ಜಿಯನ್ನು ಪುರಸ್ಕರಿಸಿ ದೂರನ್ನು ಸ್ವೀಕರಿಸುವಂತೆ ಜೆ.ಎಂ.ಎಫ್.ಸಿ ನ್ಯಾಯಾಧೀಶರಿಗೆ ನಿರ್ದೇಶನ ನೀಡಿತು.



✍️ಪ್ರಕಾಶ್ ನಾಯಕ್. ಶಿರಸ್ತೇದಾರ್, ನ್ಯಾಯಾಂಗ ಇಲಾಖೆ, ಮಂಗಳೂರು.




ಪ್ರಕರಣದ ತೀರ್ಪಿಗೆ ಇಲ್ಲಿ ಕ್ಲಿಕ್ ಮಾಡಿ

ಸ್ಮಿತಾ Vs ಕೇರಳ ರಾಜ್ಯ- ಕೇರಳ ಹೈಕೋರ್ಟ್ Dated 27.1.2022


Ads on article

Advertise in articles 1

advertising articles 2

Advertise under the article