-->
ಅಗತ್ಯ ಕಾನೂನಿನ ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧ: ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ

ಅಗತ್ಯ ಕಾನೂನಿನ ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧ: ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ

ಅಗತ್ಯ ಕಾನೂನಿನ ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧ: ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ





* ಪಡೀಲ್‌ನಲ್ಲಿ ಕಾನೂನು ನೆರವು ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟನೆ


* ನವೆಂಬರ್ 1ರಿಂದ 13ರ ವರೆಗೆ ನಡೆಯುತ್ತಿರುವ ಕಾನೂನು ಜಾಗೃತಿ ಅಭಿಯಾನ



ನಾಗರಿಕ ಜೀವನದಲ್ಲಿ ಕಾನೂನು ವ್ಯವಸ್ಥೆ ಅತಿ ಅಗತ್ಯ. ಕಾನೂನು ಸಮುದ್ರದ ಹಾಗೆ. ಹೊಸ ಕಾನೂನುಗಳ ಜಾರಿ ಹಾಗೂ ಈಗಿರುವ ಕಾನೂನುಗಳ ತಿದ್ದುಪಡಿ ನಿರಂತರ ಪ್ರಕ್ರಿಯೆ. ಇದರ ಜೊತೆಗೆ ನಾವೂ ಕಾನೂನಿನ ಅರಿವು ಪಡೆದು ಜಾಗೃತ ನಾಗರಿಕರಾಗುವ ಅಗತ್ಯವಿದೆ ಎಂದು ಮಂಗಳೂರಿನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಇದರ ಮುಖ್ಯ ನ್ಯಾಯಾಧೀಶರಾದ ಶ್ರೀಮತಿ ಪ್ರತಿಭಾ ಅವರು ಕಿವಿಮಾತು ಹೇಳಿದರು.






ಮಂಗಳೂರಿನ ಪಡೀಲ್‌ನಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಯೂತ್ ಸೆಂಟರ್ ರಿ. ಇದರ ನೇತೃತ್ವದಲ್ಲಿ ನಡೆದ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.





ಕರ್ನಾಟಕದಲ್ಲಿ ಎಲ್ಲೂ ಅಷ್ಟಾಗಿ ಪರಿಚಿತವಲ್ಲದ 'ಅಳಿಯ ಸಂತಾನ' ಮತ್ತು 'ಮೂಲಗೇಣಿ ಕಾನೂನು' ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಜಾರಿಯಲ್ಲಿದೆ. ಅದೇ ರೀತಿ, ನೂರಾರು ಹೊಸ ಕಾನೂನುಗಳು ಜಾರಿಯಾಗುತ್ತವೆ. ಎಲ್ಲ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು ಅಸಾಧ್ಯವಾದರೂ ಸಾಮಾನ್ಯ ಕಾನೂನಿನ ತಿಳುವಳಿಕೆ ಮಾಡಿಕೊಳ್ಳುವುದು ನಮ್ಮಲ್ಲರ ಅಗತ್ಯವಾಗಿದೆ ಎಂದು ಅವರು ಹೇಳಿದರು.



ಶಿಕ್ಷಣ, ಆರೋಗ್ಯ ಎಲ್ಲರಿಗೂ ಬೇಕಾಗಿದೆ. ಅದೇ ರೀತಿ, ಅಗತ್ಯ ಇರುವವರಿಗೆ ಕಾನೂನು ನೆರವು ನೀಡಲು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಸಿದ್ಧವಾಗಿದೆ. ಆ ಕಾರಣಕ್ಕಾಗಿಯೇ ದೇಶಾದ್ಯಂತ 13 ದಿನಗಳ ಕಾಲ ಈ ಬೃಹತ್ ಅಭಿಯಾನ ನಡೆಯುತ್ತಿದೆ ಎಂದು ಹೇಳಿದ ಅವರು, ಪ್ರಾಧಿಕಾರ ಸೇವೆಗಳ ಬಗ್ಗೆ ವಿವರ ನೀಡಿದರು.






ಕಾರ್ಯಕ್ರಮದಲ್ಲಿ ಕೌಟುಂಬಿಕ ದೌರ್ಜನ್ಯಗಳ ಕಾಯ್ದೆ ಬಗ್ಗೆ ಪ್ಯಾನೆಲ್ ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಕಂದಾಯ, ಭೂ ದಾಖಲೆಗಳ ಬಗ್ಗೆ ಪ್ಯಾನೆಲ್ ವಕೀಲರಾದ ಹರೀಶ್ಚಂದ್ರ ಅವರು ವಿವರಿಸಿದರು.



ಯೂತ್ ಸೆಂಟರ್ ರಿ. ಇದರ ಅಧ್ಯಕ್ಷರಾದ ಉದಯ್ ಕೆ.ಪಿ. ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಳೀಯ ಕಾರ್ಪೊರೇಟರ್ ಶೋಭಾ ಪೂಜಾರಿ, ಪ್ಯಾನೆಲ್ ವಕೀಲರಾದ ಅಶ್ವಿನಿ ಸಂತೋಷ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಯೂತ್ ಸೆಂಟರ್‌ನ ಕಾರ್ಯದರ್ಶಿ ಸುಧೀರ್ ನಾಯರ್ ಸ್ವಾಗತಿಸಿದರು. ಯೂತ್ ಮಹಿಳಾ ಮಂಡಳದ ಸಂಚಾಲಕರಾದ ಶಕುಂತಳಾ ಗಟ್ಟಿ ಧನ್ಯವಾದ ಸಮರ್ಪಿಸಿದರು.


Ads on article

Advertise in articles 1

advertising articles 2

Advertise under the article