33 ವರ್ಷ ಹಳೆಯ ಪ್ರಕರಣ: ವಾದಿಸಿ.. ಇಲ್ಲವೇ ಲಕ್ಷ ರೂ. ವೆಚ್ಚ ಕಟ್ಟಿ- ವಕೀಲರಿಗೆ ತಾಕೀತು ಮಾಡಿದ ಹೈಕೋರ್ಟ್
33 ವರ್ಷ ಹಳೆಯ ಪ್ರಕರಣ: ವಾದಿಸಿ.. ಇಲ್ಲವೇ ಲಕ್ಷ ರೂ. ವೆಚ್ಚ ಕಟ್ಟಿ- ವಕೀಲರಿಗೆ ತಾಕೀತು ಮಾಡಿದ ಹೈಕೋರ್ಟ್
ವಾಯಿದೆ ಕೊಡಲ್ಲ. ಒಂದೋ ವಾದಿಸಿ ಇಲ್ಲವೇ ಒಂದು ಲಕ್ಷ ರೂ. ವೆಚ್ಚ ಕಟ್ಟಿ... ಇದು ಗುಜರಾತ್ ಹೈಕೋರ್ಟ್ ಪ್ರಕರಣವೊಂದರಲ್ಲಿ ವಾದ ಮಂಡಿಸದ ವಕೀಲರಿಗೆ ನೀಡಿದ ಕಟ್ಟಾಜ್ಞೆ...
ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಅಶುತೋಷ್ ಶಾಸ್ತ್ರಿ ಅವರ ವಿಭಾಗೀಯ ಪೀಠದ ಕಲಾಪದಲ್ಲಿ.
ವಿಭಾಗೀಯ ಪೀಠದ ಮುಂದೆ ಈ ಪ್ರಕರಣ 33 ವರ್ಷಗಳಿಂದ ಬಾಕಿ ಉಳಿದಿದೆ. ಪ್ರತಿ ಬಾರಿ ವಕೀಲರು ವಾಯಿದೆ ಪಡೆದುಕೊಳ್ಳುತ್ತಿದ್ದರು. ಆದರೆ, ಈ ಬಾರಿ ಹಾಗಾಗಲಿಲ್ಲ...
ತಾವು ಈ ಪ್ರಕರಣದಲ್ಲಿ ಮೊದಲ ಬಾರಿಗೆ ಹಾಜರಾಗುತ್ತಿದ್ದೇನೆ ಎಂಬುದನ್ನು ವಕೀಲ ಆದಿತ್ಯ ಭಟ್ ವಿಭಾಗೀಯ ಪೀಠದ ಮುಂದೆ ಮನವಿ ಮಾಡಿದರು. ಈ ಕಾರಣಕ್ಕೆ ಪ್ರಕರಣವನ್ನು ಮುಂದೂಡುವಂತೆ ಪೀಠಕ್ಕೆ ಮನವಿ ಮಾಡಿದರು.
"ದಯವಿಟ್ಟು ಈ ಪ್ರಕರಣವನ್ನು ಮುಂದೂಡುವಂತೆ ನಾನು ಕೈಮುಗಿದು ವಿನಂತಿಸುತ್ತೇನೆ" ಎಂದು ವಕೀಲರು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ಅರವಿಂದ ಕುಮಾರ್, "ನಾವೂ ಕೈ ಜೋಡಿಸುತ್ತಿದ್ದೇವೆ. ದಯವಿಟ್ಟು ವಿಷಯವನ್ನು ಮುಂದುವರಿಸಿ" ಎಂದರು. ಆದಿತ್ಯ ಭಟ್ ಮತ್ತೊಮ್ಮೆ ವಾಯಿದೆ ಕೇಳಿದಾಗ, ಒಂದೋ ವಾದಿಸಿ.. ಇಲ್ಲವೇ ಲಕ್ಷ ರೂ. ವೆಚ್ಚ ಪಾವತಿಸಿ ಎಂದು ನ್ಯಾಯಪೀಠ ಒಂದು ಲಕ್ಷ ರೂ. ವೆಚ್ಚ ವಿಧಿಸುವ ಎಚ್ಚರಿಕೆ ನೀಡಿತು.
"ವಾಯಿದೆ ನೀಡುವುದರಲ್ಲಿ ನಾವು ತುಂಬಾ ಲಿಬರಲ್ ಆಗಿದ್ದೇವೆ. ಆದರೆ 33 ವರ್ಷಗಳಿಂದ ಬಾಕಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣದಲ್ಲಿ ಮುಂದೂಡುವುದಿಲ್ಲ. ಒಂದೋ ನೀವು ವಾದಿಸಿ ಅಥವಾ ನಾವು ₹ 1 ಲಕ್ಷ ವೆಚ್ಚವನ್ನು ವಿಧಿಸುತ್ತೇವೆ, "ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
"ನೀವು ಇನ್ನೂ ಒತ್ತಾಯಿಸಿದರೆ, ನಾವು ನಿಮ್ಮ ಪ್ರಕರಣವನ್ನು ತಿರಸ್ಕರಿಸುತ್ತೇವೆ. ನಂತರ ಸುಪ್ರೀಂ ಕೋರ್ಟ್‌ಗೆ ಹೋಗಿ ಮತ್ತು ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವರಿಗೆ ತಿಳಿಸಿ. ಕಳೆದ 33 ವರ್ಷಗಳಿಂದ ಮೇಲ್ಮನವಿ ಅರ್ಜಿ ಬಾಕಿ ಉಳಿದಿದೆ. ಏಕೆಂದರೆ ವಕೀಲರು ಪ್ರಕರಣವನ್ನು ವಾದಿಸುತ್ತಿಲ್ಲ. ಇದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದಿಲ್ಲ" ಎಂದು ಸಿಜೆ ಅರವಿಂದ ಕುಮಾರ್ ಕಠಿಣ ಶಬ್ದಗಳಲ್ಲಿ ಗದರಿದರು.
ನೀವು ಬೇಕಾದರೆ ನಮಗೆ ಶಾಪ ಹಾಕಿ. ಆದರೆ, ದಯವಿಟ್ಟು ವಾದ ಮಾಡಿ ಎಂದು ಒಂದು ಹಂತದಲ್ಲಿ ನ್ಯಾಯಪೀಠ ಹಾಸ್ಯಚಟಾಕಿ ಹಾರಿಸಿತು. ಅದಕ್ಕೆ ಉತ್ತರಿಸಿದ ವಕೀಲ ಆದಿತ್ಯ ಭಟ್, ನ್ಯಾಯಪೀಠವನ್ನು ಶಪಿಸುವುದು ಯೋಚಿಸಲೂ ಅಸಾಧ್ಯ ಎಂದರು. ಮುಂದುವರಿದು, ಶಪಿಸುವುದಲ್ಲ, ನಿಮ್ಮ ಆಶೀರ್ವಾದ ಬೇಕು ಎಂದು ಹೇಳಿದರು.
ಅದಕ್ಕೆ ಉತ್ತರಿಸಿದ ಸಿಜೆ ಅರವಿಂದ ಕುಮಾರ್, ಆಶೀರ್ವಾದ ಬೇಕಾದರೆ ವಾದ ಮಂಡಿಸಿ... ಎಂದರು. ತಮ್ಮಲ್ಲಿ ಪ್ರಕರಣದ ಫೈಲ್ ಇಲ್ಲ. ಕೇಸ್ ಫೈಲ್ ಬಿಟ್ಟು ಬಂದಿರುತ್ತೇನೆ ಎಂದು ವಕೀಲರು ಮತ್ತೊಂದು ವರಸೆ ಶುರು ಮಾಡಿದರು. ಅದಕ್ಕೂ ಜಗ್ಗದ ನ್ಯಾಯಪೀಠ, ಪೇಪರ್, ಫೈಲ್ ನಾವೇ ನೀಡುತ್ತೇವೆ. ಜೊತೆಗೆ ಒಂದು ಗಂಟೆ ಕಾಲಾವಕಾಶವನ್ನೂ ನೀಡುತ್ತೇವೆ. ಕೋರ್ಟ್ ಹಾಲ್‌ನಲ್ಲೇ ಕುಳಿತು ಅಧ್ಯಯನ ಮಾಡಿ ವಾದ ಮಂಡಿಸಿ ಎಂದು ತಿರುಗೇಟು ನೀಡಿತು.
"ಇಪ್ಪತ್ತೈದು ವರ್ಷ ಮತ್ತು ಅದಕ್ಕೂ ಹಳೆಯದಾದ ಪ್ರಕರಣಗಳನ್ನು ವಿಲೇವಾರಿ ಮಾಡಲು ಹೈಕೋರ್ಟ್ ಹೆಚ್ಚಿನ ಗಮನ ನೀಡುತ್ತದೆ. ಈ ಪ್ರಕರಣಗಳ ಅಧ್ಯಯನಕ್ಕೆ ಎಲ್ಲಾ ನ್ಯಾಯಾಧೀಶರನ್ನು ವಿನಂತಿಸಿದ್ದೇನೆ. ಅವರೆಲ್ಲರೂ ಅದನ್ನು ಮಾಡುತ್ತಿದ್ದಾರೆ ಆದ್ದರಿಂದ ನಾನು ನಿಮ್ಮ ವಿಚಾರದಲ್ಲೂ ಇದೇ ಮನವಿಯನ್ನು ಯಾಕೆ ಮಾಡಬಾರದು?" ಎಂದು ಸಿಜೆ ಅರವಿಂದ ಕುಮಾರ್ ಪ್ರಶ್ನಿಸಿದರು.
ಇದನ್ನೂ ಓದಿ:
ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು