-->
OPS ಯೋಜನೆ ಮರು ಅಳವಡಿಸಿಕೊಂಡ ರಾಜ್ಯಗಳು ಎದುರಿಸುತ್ತಿರುವ ಪ್ರಾಯೋಗಿಕ ಸಮಸ್ಯೆಗಳು ಏನು ಗೊತ್ತೇ..?

OPS ಯೋಜನೆ ಮರು ಅಳವಡಿಸಿಕೊಂಡ ರಾಜ್ಯಗಳು ಎದುರಿಸುತ್ತಿರುವ ಪ್ರಾಯೋಗಿಕ ಸಮಸ್ಯೆಗಳು ಏನು ಗೊತ್ತೇ..?

OPS ಯೋಜನೆ ಮರು ಅಳವಡಿಸಿಕೊಂಡ ರಾಜ್ಯಗಳು ಎದುರಿಸುತ್ತಿರುವ ಪ್ರಾಯೋಗಿಕ ಸಮಸ್ಯೆಗಳು ಏನು ಗೊತ್ತೇ..?






ಪಿಂಚಣಿಯ ಹೊರೆಯಿಂದ ಮುಕ್ತಿ ಪಡೆವ ನಿಟ್ಟಿನಲ್ಲಿ ಎನ್ ಡಿ ಎ ಸರಕಾರದ ಅವಧಿಯಲ್ಲಿ ನೆಟ್ಟ ಎನ್ಪಿಎಸ್ ಎಂಬ ಸಸಿಯು ಯುಪಿಎ ಸರಕಾರದ ಅವಧಿಯಲ್ಲಿ ಉತ್ತಮ ರೀತಿಯ ಪಾಲನೆ ಪೋಷಣೆಗೆ ಒಳಪಟ್ಟು ಇದೀಗ ಹೆಮ್ಮರವಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿ ವ್ಯಾಪಿಸಿದೆ.


ಪ್ರಸ್ತುತ ಸರಕಾರದ ಎಲ್ಲಾ ಇಲಾಖೆಗಳನ್ನು ಜೊತೆಗೆ ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಎನ್‌ಪಿಎಸ್ ಯೋಜನೆ ಅಡಿ ತರಲಾಗಿದೆ. ‌ ಪ್ರಾರಂಭದಲ್ಲಿ ರಕ್ಷಣಾ ವಲಯದಲ್ಲಿ ಎನ್‌ಪಿಎಸ್ ಜಾರಿಗೊಳಿಸಿರುವುದಿಲ್ಲ. ಆದರೆ ಇದೀಗ ಅಗ್ನಿಪಥ್ ಯೋಜನೆ ಅಡಿಯಲ್ಲಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯಿಂದ ರಕ್ಷಣಾ ವಲಯವನ್ನು ಮುಕ್ತ ಗೊಳಿಸುವ ಕ್ರಮ ಆರಂಭವಾಗಿದೆ.


ಪ್ರಾರಂಭದಲ್ಲಿ ಎಡಪಂಥೀಯ ಸರಕಾರವನ್ನು ಹೊಂದಿರುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ ಹಾಗೂ ತ್ರಿಪುರಗಳಲ್ಲಿ ಎನ್ಪಿಎಸ್ ಯೋಜನೆ ಜಾರಿಗೆ ಆ ರಾಜ್ಯದ ಸರಕಾರಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ ಪ್ರಸ್ತುತ ಪಶ್ಚಿಮ ಬಂಗಾಳ ರಾಜ್ಯವನ್ನು ಹೊರತುಪಡಿಸಿ ಭಾರತದ ಎಲ್ಲಾ ರಾಜ್ಯಗಳಲ್ಲಿ ಎನ್ ಪಿ ಎಸ್ ಯೋಜನೆಯನ್ನು ಜಾರಿಗೊಳಿಸಲಾಗಿದೆ.


OPS ಯೋಜನೆಯನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಮರು ಅಳವಡಿಸಿಕೊಂಡಿರುವ ಕಾಂಗ್ರೆಸ್ ನೇತೃತ್ವದ ಆಡಳಿತಾರೂಢ ಸರಕಾರಗಳು ತಮ್ಮ ರಾಜ್ಯದ ನೌಕರರಿಗೆ ಒಪಿಎಸ್ ಅನ್ನು ಪರಿಣಾಮಕಾರಿಯಾಗಿ ಅನ್ವಯಿಸುವಲ್ಲಿ ಯಶಸ್ವಿಯಾಗಿವೆಯೇ? ಅವರು ಎದುರಿಸುತ್ತಿರುವ ಪ್ರಾಯೋಗಿಕ ಸಮಸ್ಯೆಗಳೇನು? 


 ಈ ಎಲ್ಲಾ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಕುರಿತು ಈ ಲೇಖನ.


ರಾಜಸ್ಥಾನ


ದೇಶದಲ್ಲಿ ಓಪಿಎಸ್ ಯೋಜನೆಯನ್ನು ಮರು ಅಳವಡಿಸಿಕೊಂಡ ಮೊತ್ತ ಮೊದಲ ರಾಜ್ಯವೆಂದರೆ ರಾಜಸ್ಥಾನ. ದಿನಾಂಕ 1.4.2022 ರಂದು ಒಪಿಎಸ್ ಯೋಜನೆಯನ್ನು ಘೋಷಿಸಿದ ರಾಜಸ್ಥಾನ ರಾಜ್ಯದ ಮುಖ್ಯಮಂತ್ರಿಗಳು ದಿನಾಂಕ 1.1.2004 ರಿಂದ ಎನ್ಪಿಎಸ್ ಯೋಜನೆ ಅಡಿ ಬರುವ ಎಲ್ಲಾ ರಾಜ್ಯ ಸರಕಾರಿ ನೌಕರರು ಒಪಿಎಸ್ ಅಡಿ ಬರಲಿದ್ದಾರೆ ಎಂದು ಘೋಷಿಸಿದರು. ಈತನ್ಮಧ್ಯೆ ದಿನಾಂಕ 1.4.2022 ರಿಂದ ಎನ್‌ಪಿಎಸ್ ಯೋಜನೆ ಅಡಿ ನಿವೃತ್ತರಾದ ನೌಕರರಿಗೆ ಪಿಂಚಣಿ ಸಹಿತ ಯಾವುದೇ ನಿವೃತ್ತಿ ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರವು ಅಸಮರ್ಥವಾಯಿತು. ಇದಕ್ಕೆ ಮುಖ್ಯ ಕಾರಣ ಎನ್ ಪಿ ಎಸ್ ಯೋಜನೆಯಡಿ ರಾಜ್ಯ ಸರಕಾರ ಹೂಡಿದ ವಂತಿಗೆ ಹಣವನ್ನು ಮರಳಿಸಲು ಪಿಎಫ್ಆರ್‌ಡಿಎ ನಿರಾಕರಿಸಿದುದೇ ಆಗಿದೆ.


ದಿನಾಂಕ 1.1.2004 ರಿಂದ ರಾಜ್ಯದಲ್ಲಿ 3454 ಎನ್ ಪಿ ಎಸ್ ನೌಕರರು ನಿವೃತ್ತರಾಗಿದ್ದಾರೆ. ಅವರಲ್ಲಿ 90 ಶೇಕಡಾ ಮಂದಿ ಎನ್‌ಪಿಎಸ್ ಯೋಜನೆಯಿಂದ ಲಾಭ ಪಡೆದವರು. ಅಂದರೆ ಹತ್ತು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಆದವರು. ಒಂದು ವೇಳೆ ಅವರೆಲ್ಲರೂ ಒಪಿಎಸ್ ಯೋಜನೆ ಅಡಿ ಬಂದರೆ ಅವರ ನಿವೃತ್ತಿ ಬದುಕು ನರಕವಾಗುವುದು. ಏಕೆಂದರೆ 10 ವರ್ಷಗಳಿಗಿಂತ ಕಡಿಮೆ ಅವಧಿಯ ಸೇವೆ ಸಲ್ಲಿಸಿದ ನೌಕರರಿಗೆ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳು ಒಪಿಎಸ್ ಯೋಜನೆಯಡಿ ಸಿಗುವುದಿಲ್ಲ. ರಾಜಸ್ಥಾನದಲ್ಲಿ ನೌಕರರಿಗೆ ಒಪಿಎಸ್ ಅಥವಾ ಎನ್‌ಪಿಎಸ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿರುವುದಿಲ್ಲ.


ರಾಜ್ಯ ಸರಕಾರದ ಹೇಳಿಕೆ ಪ್ರಕಾರ ಸುಮಾರು 41000 ಕೋಟಿ ರೂಪಾಯಿ ಸರಕಾರದ ವಂತಿಗೆಯ ಹಣ ಎನ್ಪಿಎಸ್ ನಿಧಿಯಲ್ಲಿ PFRDA ಯಲ್ಲಿ ಠೇವಣಿಯಾಗಿದೆ.


ಛತ್ತೀಸ್‌ಘಡ


ಎನ್ ಪಿ ಎಸ್ ನಿಧಿಯಲ್ಲಿರುವ ರಾಜ್ಯ ಸರಕಾರದ ವಂತಿಗೆ ಹಾಗೂ ಲಾಭಾಂಶವನ್ನು ರಾಜ್ಯ ಸರಕಾರಕ್ಕೆ ಮರಳಿಸಿದರೆ ಮಾತ್ರ ರಾಜ್ಯದಲ್ಲಿ ಓ ಪಿ ಎಸ್ ಜಾರಿಗೊಳಿಸಲಾಗುವುದು ಎಂಬುದಾಗಿ ಮುಖ್ಯಮಂತ್ರಿ ಶ್ರೀ ಭೂಪೇಶ್ ಬಗೇಲ ಅವರು ತಿಳಿಸಿದ್ದಾರೆ. ಎನ್ ಪಿ ಎಸ್ ನಿಧಿ ಪೈಕಿ ರಾಜ್ಯ ಸರಕಾರದ ವಂತಿಗೆ ಮತ್ತು ಲಾಭಾಂಶವನ್ನು ರಾಜ್ಯ ಸರಕಾರಕ್ಕೆ ಮರಳಿಸುತ್ತೇವೆ ಎಂದು ಎನ್ಪಿಎಸ್ ನೌಕರರು ಮುಚ್ಚಳಿಕೆ ಬರೆದುಕೊಟ್ಟಲ್ಲಿ ಮಾತ್ರ ಅವರನ್ನು ಒ ಪಿ ಎಸ್ ಯೋಜನೆಗೆ ಸ್ಥಾನಾಂತರಿಸಬಹುದು ಎಂಬುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಎನ್ಪಿಎಸ್ ನಿಧಿಯಲ್ಲಿ ರಾಜ್ಯ ಸರಕಾರ 17000 ಕೋಟಿ ಹೊಂದಿದೆ.


ತಮ್ಮ ಪಾಲಿನ ವಂತಿಗೆಯನ್ನು ಮರಳಿಸಬೇಕೆಂದು ಕೋರಿ ಛತ್ತೀಸ್ಗಡ ಸರಕಾರವು ಸಲ್ಲಿಸಿದ ಮನವಿಯನ್ನು ಪಿಎಫ್ಆರ್‌ಡಿಎ ತಿರಸ್ಕರಿಸಿದೆ. ಆದುದರಿಂದ ಓಪಿಎಸ್ ಅಥವಾ ಎನ್‌ಪಿಎಸ್ ಎರಡು ಯೋಜನೆಗಳಲ್ಲಿ ಯಾವುದಾದರು ಒಂದು ಯೋಜನೆಯನ್ನು ಆಯ್ಕೆ ಮಾಡುವ ಅವಕಾಶವನ್ನು ಛತ್ತೀಸ್ಗಡ ಸರಕಾರ ನೌಕರರಿಗೆ ನೀಡಿದೆ.


ಜಾರ್ಖಂಡ್


OPS ಅನ್ನು ತನ್ನ ರಾಜ್ಯದ ನೌಕರರಿಗೆ ಅನ್ವಯಿಸಿದ ಮೂರನೆಯ ರಾಜ್ಯ ಜಾರ್ಖಂಡ್ ಆಗಿರುತ್ತದೆ. ಅಲ್ಲಿಯೂ ಒಪಿಎಸ್ ನೌಕರರಿಗೆ ಪಿಂಚಣಿ ಪಾವತಿಯಾಗಿಲ್ಲ. ಜಾರ್ಖಂಡ್ ಸರಕಾರದ ವಿತ್ತ ಸಚಿವರಾಗಿರುವ ಡಾ. ರಾಮೇಶ್ವರ್ ಅರೋನ್ ರವರು ಹೇಳುವ ಪ್ರಕಾರ ರಾಜ್ಯದ ಭವಿಷ್ಯಕ್ಕೆ ಎನ್ ಪಿ ಎಸ್ ಉತ್ತಮ ಯೋಜನೆಯಾಗಿದೆ. ಆದರೆ ರಾಜಕೀಯ ಕಾರಣಗಳಿಗಾಗಿ ನಾವು ಒಪಿಎಸ್ ಜಾರಿಗೊಳಿಸಿದ್ದೇವೆ. ಕೇಂದ್ರ ಸರಕಾರವು ಎನ್‌ಪಿಎಸ್ ಯೋಜನೆ ಅಡಿ ರಾಜ್ಯ ಸರಕಾರದ ವಂತಿಗೆ ಹಣವನ್ನು ನೀಡಲು ಪಿ ಎಫ್ ಆರ್ ಡಿ ಏ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿರುವುದರಿಂದ ನಮಗೆಲ್ಲ ದೊಡ್ಡ ಸೋಲಾಗಿದೆ. ರಾಜ್ಯದ ಆದಾಯದ ಬಹುಪಾಲು ನೌಕರರ ವೇತನ ಮತ್ತು ಪಿಂಚಣಿಗೆ ಖರ್ಚಾಗುತ್ತಿದೆ. ರಾಜ್ಯಕ್ಕೆ ಆರ್ಥಿಕ ದುಸ್ಥಿತಿಯ ಸನ್ನಿವೇಶ ಎದುರಾಗಿದೆ.


ಪಂಜಾಬ್


ಪಂಜಾಬ್ ನ ಆಪ್ ಸರಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರಾಜ್ಯದ ಸರಕಾರಿ ನೌಕರರಿಗೆ ಓಪಿಎಸ್ ಅನ್ನು ಜಾರಿಗೊಳಿಸಿದೆ. ಆದರೆ ಮೊದಲೇ ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ರಾಜ್ಯ ಸರಕಾರವು ಒ ಪಿ ಎಸ್ ಯೋಜನೆಯಡಿ ನೌಕರರಿಗೆ ಪಿಂಚಣಿ ಹಾಗೂ ನಿವೃತ್ತ ಸೌಲಭ್ಯಗಳನ್ನು ನೀಡಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.


ಹಿಮಾಚಲ ಪ್ರದೇಶ


ಡಿಸೆಂಬರ್ 2022 ರಲ್ಲಿ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಸರಕಾರಿ ನೌಕರರಿಗೆ ಒಪಿಎಸ್ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಈ ರಾಜ್ಯದ ಆರ್ಥಿಕ ಪರಿಸ್ಥಿತಿಯೂ ದುಸ್ಥಿತಿಯಲ್ಲಿದೆ.


ಕೇಂದ್ರ ಸರಕಾರದ ನಿಲುವೇನು?


ರಾಜಸ್ಥಾನ, ಛತ್ತೀಸ್ಘಢ ಮತ್ತು ಜಾರ್ಖಂಡ್ ಸರಕಾರಗಳು ಎನ್ಪಿಎಸ್ ನಿಧಿಯಲ್ಲಿರುವ ಮೊತ್ತವನ್ನು ತಮಗೆ ಮರಳಿಸಬೇಕೆಂದು ಕೋರಿಕೆ ಸಲ್ಲಿಸಿದ್ದವು. ಆದರೆ ಕೇಂದ್ರ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಎನ್‌ಪಿಎಸ್ ನಿಧಿಯು ಸರಕಾರಿ ನೌಕರರಿಗೆ ಸೇರಿದ್ದು ಅದನ್ನು ರಾಜ್ಯ ಸರಕಾರಕ್ಕೆ ಮರಳಿಸುವ ಪ್ರಶ್ನೆಯೇ ಇಲ್ಲ ಎಂದು ಖಡಾ ಖಂಡಿತವಾಗಿ ತಿಳಿಸಿದ್ದಾರೆ. ಪಿಎಫ್ಆರ್‌ಡಿಎ ಕಾಯ್ದೆಯಲ್ಲಿಯೂ ಈ ರೀತಿ ನಿಧಿಯನ್ನು ವರ್ಗಾಯಿಸಲು ಅವಕಾಶವಿಲ್ಲ. ಏನೇ ಇದ್ದರೂ ಅವಧಿ ಮುಗಿದ ನಂತರ ಸದರಿ ನಿಧಿಯನ್ನು ನೌಕರರಿಗೆ PFRDA ಕಾಯ್ದೆಯ ನಿಯಮಾನುಸಾರ ನೀಡಲಾಗುವುದು.


NPS ರೀತಿಯಲ್ಲಿ ಬದಲಾವಣೆ ತರಲು ಮುಂದಾದ ಕೇಂದ್ರ ಸರಕಾರ


ಸೇವೆಯಲ್ಲಿರುವಾಗ ಮೃತರಾದ ಸರಕಾರಿ ನೌಕರರ ಕುಟುಂಬಕ್ಕೆ ಆಸರೆಯಾಗಲು ಹಾಗೂ ಒಪಿಎಸ್ ಯೋಜನೆಯವರಿಗೆ ಏನೆಲ್ಲಾ ಸವಲತ್ತುಗಳು ಸಿಗಲಿದೆಯೋ ಅದನ್ನು ಎನ್‌ಪಿಎಸ್ ನೌಕರರಿಗೆ ಅನ್ವಯಿಸಲು ಕೇಂದ್ರ ಸರಕಾರ ಮುಂದಾಗಿದೆ.


PFRDA ಕಾಯ್ದೆಯಲ್ಲಿನ ನಿಯಮಗಳು ತಮಗೆ ವಿರೋಧವಾಗಿರುವುದರಿಂದ ಬಾಧಿತ ರಾಜ್ಯಗಳು ನ್ಯಾಯಾಲಯಕ್ಕೆ ಮೊರೆ ಹೋಗಲು ಅವಕಾಶವಿದೆಯೇ?


ಯಾವುದೇ ರೀತಿಯ ವಿವಾದಗಳು ಉದ್ಭವಿಸಿದ್ದಲ್ಲಿ ಪಿಎಫ್ಆರ್‌ಡಿಎ ಕಾಯಿದೆಯಡಿ ನ್ಯಾಯಾಲಯಕ್ಕೆ ಮೊರೆ ಹೋಗಲು ಅವಕಾಶವಿಲ್ಲ. ಪಿಎಫ್ಆರ್ಡಿಎ ನೇಮಿಸುವ ಏಕ ಸದಸ್ಯ ಮದ್ಯಸ್ತಿಕೆದಾರರೇ (Sole Arbitrator) ವಿವಾದಗಳನ್ನು ಇತ್ಯರ್ಥ ಪಡಿಸಬೇಕು. ಸದರಿ ಪ್ರಕರಣದ ವಿಚಾರಣೆಯು ದೆಹಲಿಯಲ್ಲಿ ನಡೆಯಲಿದೆ. Arbitration and Reconciliation Act 1996 ಪ್ರಕಾರ ಆಂಗ್ಲ ಭಾಷೆಯಲ್ಲಿ ವಿಚಾರಣೆಯ ನಡವಳಿಗಳು ಜರಗಲಿವೆ.


ಭ್ರಮನಿರಸನಗೊಂಡ ರಾಜ್ಯ ಸರಕಾರಗಳು


ಓ ಪಿ ಎಸ್ ಯೋಜನೆಯನ್ನು ಜಾರಿಗೊಳಿಸಿದ್ದಲ್ಲಿ ಪ್ರತಿ ತಿಂಗಳು ಸರಕಾರಿ ನೌಕರರ ವೇತನಕ್ಕಾಗಿ ನೀಡುವ ತನ್ನ ಪಾಲಿನ 14 ಶೇಕಡಾ ಮೊತ್ತವನ್ನು ಉಳಿಸಬಹುದು. ಜೊತೆಗೆ ಇದುವರೆಗೆ ಸಂಗ್ರಹವಾದ ಎನ್ಪಿಎಸ್ ನಿಧಿಯನ್ನು ರಾಜ್ಯದ ಯೋಜನೆಗಳಿಗೆ ಬಳಸಿಕೊಳ್ಳಬಹುದು. ಮುಂದೆ ಬರುವ ಸರಕಾರಗಳಿಗೆ ಪಿಂಚಣಿ ಪಾವತಿಯ ಸಮಸ್ಯೆ ಎದುರಾಗುವುದು. 2034 ರ ಬಳಿಕ ಆಡಳಿತ ನಡೆಸುವ ಸರಕಾರಗಳಿಗೆ ಪಿಂಚಣಿ ಪಾವತಿಯ ಬಿಸಿ ತಟ್ಟಲಿದೆ ಇತ್ಯಾದಿ ಚಿಂತನೆಗಳಿಂದ ಸ್ಪೂರ್ತಿಗೊಂಡು ಓ ಪಿ ಎಸ್ ಯೋಜನೆಯನ್ನು ಜಾರಿಗೊಳಿಸಿದ ಸರಕಾರಗಳಿಗೆ ಇದೀಗ ಪಿಎಫ್ಆರ್‌ಡಿಎ ಕಾಯ್ದೆಯಡಿ ತಮಗೆ ಎನ್ಪಿಎಸ್ ನಿಧಿ ಪಡೆಯಲು ಅವಕಾಶವಿಲ್ಲವೆಂಬ ಸಂಗತಿ ತಿಳಿದು ಭ್ರಮನಿರಸನವಾಗಿದೆ.


✍️ ಪ್ರಕಾಶ್ ನಾಯಕ್ಮ ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ




ಇದನ್ನೂ ಓದಿ

20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ




ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು



ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ



ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!

2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ 100 ತೀರ್ಪುಗಳು- ಭಾಗ 1



2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ 100 ತೀರ್ಪುಗಳು- ಭಾಗ 2



2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ 100 ತೀರ್ಪುಗಳು- ಭಾಗ 3

Ads on article

Advertise in articles 1

advertising articles 2

Advertise under the article