ಜಾಮೀನು ಅರ್ಜಿಯಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅನುಮತಿ ಇಲ್ಲ: ಸುಪ್ರೀಂ ಕೋರ್ಟ್
ಜಾಮೀನು ಅರ್ಜಿಯಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅನುಮತಿ ಇಲ್ಲ: ಸುಪ್ರೀಂ ಕೋರ್ಟ್
ಯಾರೋ ಒಬ್ಬರ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ವೀಡಿಯೋಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಅವರ ಮಧ್ಯಂತರ ಜಾಮೀನು ನೀಡುವ ಬಾಂಬೆ ಹೈಕೋರ್ಟ್ ತೀರ್ಪು ವಿರುದ್ಧ ಘನಶ್ಯಾಮ್ ಉಪಾದ್ಯಾಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮಾಡಿದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಸಿಜೆಐ ಡಿ.ವೈ. ಚಂದ್ರಚೂಡ್, ನ್ಯಾ. ಪಿ ಎಸ್ ನರಸಿಂಹ ಮತ್ತು ನ್ಯಾ. ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು ಅರ್ಜಿಯನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲೇ ಅದನ್ನು ಪರಿಗಣಿಸಲು ನ್ಯಾಯಪೀಠದ ಅಸಮ್ಮತಿಯನ್ನು ವ್ಯಕ್ತಪಡಿಸಿತು.
ಯಾರೊಬ್ಬರ ಜಾಮೀನು ಅರ್ಜಿಯಲ್ಲಿ ಮೂರನೇ ವ್ಯಕ್ತಿಗೆ ಮಧ್ಯಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿತು.
"ಯಾರೊಬ್ಬರ ಜಾಮೀನು ಅರ್ಜಿಯಲ್ಲಿ ನೀವು ಏಕೆ ಹಸ್ತಕ್ಷೇಪ ಮಾಡುತ್ತೀರಿ? ಜಾಮೀನಿಗಾಗಿ ಯಾರೊಬ್ಬರ ಅರ್ಜಿಯಲ್ಲಿ ನೀವು ಹೇಗೆ ಮೂಗುತೂರಿಸುತ್ತೀರಿ..? ಕೋರ್ಟ್ ತಪ್ಪಾಗಿ ಜಾಮೀನು ನೀಡಿದ್ದರೆ, ಪ್ರಭುತ್ವ ಮೇಲ್ಮನವಿ ಸಲ್ಲಿಸುತ್ತದೆ. ಆದರೆ ಖಾಸಗಿ ಪಕ್ಷಕ್ಕೆ ಹೇಗೆ ಅವಕಾಶ ನೀಡಬಹುದು?" ಎಂದು ಸಿಜೆಐ ಡಿವೈ ಚಂದ್ರಚೂಡ್ ಅವರು ಅರ್ಜಿದಾರ ಪರ ವಕೀಲರನ್ನು ಪ್ರಶ್ನಿಸಿದರು.
ಇದೊಂದು ಆರ್ಥಿಕ ಅಪರಾಧ. ಈ ಪ್ರಕರಣದಲ್ಲಿ ಸಿಬಿಐ ವಾದ ಮಾಡಬಹುದಿತ್ತು. ಅವರನ್ನು ಪಕ್ಷಕಾರರನ್ನಾಗಿಯೂ ಮಾಡಲಾಗಿದೆ. ಅವರಿಗೆ ಅರ್ಜಿ ಪ್ರತಿಯನ್ನೂ ಒದಗಿಸಲಾಗಿದೆ. ಆದರೂ ಸಿಬಿಐ ವಾದ ಮಾಡಲು ಮುಂದಾಗಲಿಲ್ಲ ಎಂದು ನ್ಯಾಯಪೀಠ ಹೇಳಿತು.