ಅಧಿಕ ಲಾಭದ ಆಮಿಷ: ಬಣ್ಣದ ಮಾತಿಗೆ ಮರುಳಾಗಿ ಕ್ರಿಪ್ಟೋ ಕರೆನ್ಸಿಗೆ ಬಂಡವಾಳ ಮಾಡಿ ಕೋಟಿ ಕಳಕೊಂಡ ಹೂಡಿಕೆದಾರ !
ಅಧಿಕ ಲಾಭದ ಆಮಿಷ: ಬಣ್ಣದ ಮಾತಿಗೆ ಮರುಳಾಗಿ ಕ್ರಿಪ್ಟೋ ಕರೆನ್ಸಿಗೆ ಬಂಡವಾಳ ಮಾಡಿ ಕೋಟಿ ಕಳಕೊಂಡ ಹೂಡಿಕೆದಾರ !
ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಪಾರ ಪ್ರಮಾಣದಲ್ಲಿ ಲಾಭ ಮಾಡಬಹುದು ಎಂದು ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 1.15 ಕೋಟಿ ರೂಪಾಯಿ ಪಂಗನಾಮ ಹಾಕಿದ ಖತರ್ನಾಕ್ ಸುದ್ದಿ ಮಂಗಳೂರಿನಲ್ಲಿ ವರದಿಯಾಗಿದೆ.
ಮಂಗಳೂರಿನ ನಿವಾಸಿ ಜೀವನ್(ಹೆಸರು ಬದಲಾಯಿಸಲಾಗಿದೆ) ಹಣ ಕಳೆದುಕೊಂಡ ವ್ಯಕ್ತಿ. ಇವರಿಗೆ 2021ರ ಮಾರ್ಚ್‌ನಲ್ಲಿ ಸಹದ್ಯೋಗಿ ಮೂಲಕ ಕೇರಳದ ಜಿಜೊ ಜಾನ್ ಪುತ್ರನವಟಿಲ್ ಎಂಬವರ ಪರಿಚಯವಾಗುತ್ತದೆ. ತನ್ನನ್ನು ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂಬ ಪರಿಚಯಿಸಿಕೊಂಡ ಜಿಜೊ ಜಾನ್ ಕ್ರಿಪ್ಟೋ ಕರೆನ್ಸಿಗೆ ಹಣ ಹೂಡುವಂತೆ ತಿಳಿಸಿದ್ದ. ಅಲ್ಲದೆ, ಈ ಹೂಡಿಕೆಯಿಂದ ಅಪಾರ ಪ್ರಮಾಣದ ಆದಾಯ ಬರುತ್ತದೆ ಎಂದು ನಂಬಿಸಿದ್ದ.
2021ರ ಮಾರ್ಚ್‌ನಲ್ಲಿ ವಾಟ್ಸ್ಯಾಪ್ ಮೂಲಕ ಸಂದೇಶ ಕಳುಹಿಸಿ ಕ್ರಿಪ್ಟೋ ಆಂಡ್ ಕರೆನ್ಸಿ ಬಗ್ಗೆ ಮಾಹಿತಿ ನೀಡಿದ್ದ. ಇದಕ್ಕೆ ಹೂಡಿಕೆ ಮಾಡಿದರೆ ಶೇ. 10ರಷ್ಟು ಮಾಸಿಕ ರಿಟರ್ನ್ ಗ್ಯಾರೆಂಟಿ ಎಂದು ನಂಬಿಸಿದ್ದ.
ಇವರ ಬಣ್ಣದ ಮಾತಿಗೆ ಮರುಳಾದ ದೂರುದಾರರು ತಮ್ಮ ಬ್ಯಾಂಕ್ ಖಾತೆಯಿಂದ 2021ರ ಮಾರ್ಚ್ 23ರಿಂದ ಜೂನ್ 1ರ ವರೆಗೆ 41 ಲಕ್ಷ ರೂಪಾಯಿಯನ್ನು IMPS ಮತ್ತು NEFT ಮೂಲಕ ಹಣ ವರ್ಗಾವಣೆ ಮಾಡಿದ್ದರು. ಅಷ್ಟು ಸಾಲದು ಎಂಬಂತೆ, 2021ರ ಅಕ್ಟೋಬರ್‌ನಲ್ಲಿ ಮತ್ತೆ 60 ಲಕ್ಷ ರೂ.ಗಳನ್ನು IMPS ಮತ್ತು NEFT ಮೂಲಕ ಹಣ ವರ್ಗಾವಣೆ ಮಾಡಿದ್ದರು.
ಈ ಮಧ್ಯೆ ಆರೋಪಿಯು ಹೂಡಿಕೆಯ ರಿಟರ್ನ್ ಎಂದು ನಂಬಿಸಲು 9 ಲಕ್ಷ ರೂ.ಗಳನ್ನು ಹಾಕಿ ದೂರುದಾರರ ಅಂಗೈಗೆ ಬೆಲ್ಲ ಸವರಿ ನೆಕ್ಕುವಂತೆ ಮಾಡಿದ್ದ!
ಹೂಡಿಕೆ ಮಾಡಿದ ಹಣಕ್ಕೆ ಲಾಭ ಬರದೇ ಇದ್ದಾಗ ಅಸಲಿಗೇ ಕನ್ನ ಬಿತ್ತು ಎಂದು ಆತಂಕಗೊಂಡ ದೂರುದಾರರು ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದರು.
ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಕ್ರಿಪ್ಟೋ ಕರೆನ್ಸಿ ಹೂಡಿಕೆ ಎಂದು ಬಣ್ಣದ ಮಾತಿಗೆ ಮರುಳಾದ ದೂರುದಾರರು ಇದೀಗ ಇಂಗು ತಿಂದ ಮಂಗನಂತಾಗಿ ಪೇಚಿಗೆ ಸಿಲುಕಿದ್ದಾರೆ.