ಅನಧಿಕೃತ ಗೈರು: ಶಿಸ್ತು ಕ್ರಮ ಜರುಗಿಸದಿದ್ದರೆ ಉದ್ಯೋಗಿಯ ಗೈರು ಅನಧಿಕೃತ ಎಂದು ಹೇಳಲಾಗದು- ಹೈಕೋರ್ಟ್
ಅನಧಿಕೃತ ಗೈರು: ಶಿಸ್ತು ಕ್ರಮ ಜರುಗಿಸದಿದ್ದರೆ ಉದ್ಯೋಗಿಯ ಗೈರು ಅನಧಿಕೃತ ಎಂದು ಹೇಳಲಾಗದು- ಹೈಕೋರ್ಟ್
ಉದ್ಯೋಗಿಯು ಅನಧಿಕೃತ ಗೈರು ಹಾಜರಾಗಿರುವ ಅವಧಿಗೆ ಸಕ್ಷಮ ಪ್ರಾಧಿಕಾರ ಶಿಸ್ತು ಕ್ರಮ ಕೈಗೊಳ್ಳದೇ ಇದ್ದರೆ ಆಗ ಉದ್ಯೋಗಿಯ ಗೈರುಹಾಜರಿಯನ್ನು ಅನಧಿಕೃತ ಎಂದು ಹೇಳಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರಿನ ಭಗಿನಿ ನಿವೇದಿತಾ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕ ಕಾಂತರಾಜು ಅನಧಿಕೃತವಾಗಿ ರಜೆ ಹಾಕಿದ್ದು, ಅವರ ಅಕ್ರಮ ರಜೆಯ ಅವಧಿಗೆ ವೇತನ ಪಾವತಿಸಲು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ.
ಅರ್ಜಿದಾರರನ್ನು ಶಿಕ್ಷಣ ಇಲಾಖೆ ರಾಘವೇಂದ್ರ ಆಶ್ರಮ ಶಾಲೆಗೆ ವರ್ಗಾಯಿಸಿತ್ತು. 2009ರ ಫೆಬ್ರವರಿ 2ರಿಂದ 2010ರ ಫೆಬ್ರವರಿ 15 ರ ವರೆಗೆ ಸುಮಾರು ಒಂದು ವರ್ಷಗಳ ಕಾಲ ಅವರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಬಳಿಕ ಉದ್ಯೋಗಕ್ಕೆ ಮರಳಿದ್ದರು.
2014ರ ಮಾರ್ಚ್ 14 ಮತ್ತು ಸೆಪ್ಟೆಂಬರ್ 30ರಂದು ಡಿಡಿಪಿಐ ಮತ್ತು ಬಿಇಓ ಅವರಿಗೆ ಮನವಿ ಪತ್ರ ಸಲ್ಲಿಸಿದ್ದ ಕಾಂತರಾಜು, ತಾವು ಅನಧಿಕೃತ ಗೈರಯ ಹಾಜಾಗಿರುವ ಅವಧಿಯ ವೇತನ ನೀಡಿಲ್ಲ ಎಂದು ಪತ್ರದಲ್ಲಿ ವಿನಂತಿಸಿದ್ದರು. ವೇತನ ಮತ್ತು ಭತ್ಯೆ ಪಾವತಿಸಲು ಆದೇಶಿಸುವಂತೆ ಕೋರಿದ್ದರು. ಈ ಮನವಿ ಪತ್ರ ಪರಿಗಣಿಸದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಹೇಳಿದ್ದೇನು..?
ಶಿಕ್ಷಕ ಗೈರು ಹಾಜರಾಗಿರುವ ಅವಧಿಯಲ್ಲಿ ರಾಘವೇಂದ್ರ ಆಶ್ರಮ ಶಾಲೆಯ ಮುಖ್ಯ ಶಿಕ್ಷಕರು ಶಿಸ್ತು ಕ್ರಮ ಜರುಗಿಸಬೇಕಿತ್ತು. ಆ ಬಗ್ಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅರ್ಜಿದಾರರು ಗೈರು ಹಾಜರಾಗಿದ್ದ ಸಂಬಂಧ ಕೇವಲ ಎರಡು ತಿಂಗಳ ಅವಧಿಗಷ್ಟೇ ಬಿಲ್ ನೀಡಿದ್ದಾರೆ. ಉಳಿದ ದಿನಗಳ ಬಿಲ್ ಸೃಜನ್ ಮತ್ತು ರಜೆ ಮಂಜೂರಾತಿ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ. ಇದು ಮುಖ್ಯ ಶಿಕ್ಷಕರ ಕಡೆಯಿಂದ ಆಗಿರುವ ಕರ್ತವ್ಯ ಲೋಪ. ಈ ಹಿನ್ನೆಲೆಯಲ್ಲಿ ಶೇ. 8ರ ಬಡ್ಡಿ ದರದಲ್ಲಿ ಕಾಂತರಾಜು ಅವರಿಗೆ ವೇತನ ಪಾವತಿಸುವಂತೆ ಮುಖ್ಯ ಶಿಕ್ಷಕರಿಗೆ ಹೈಕೋರ್ಟ್ ಆದೇಶ ನೀಡಿತ್ತು. 2-12-2020ರಂದು ಈ ಬಗ್ಗೆ ಆದೇಶ ಹೊರಡಿಸಿತ್ತು.
ವಿಭಾಗೀಯ ಪೀಠ ನೀಡಿದ ತೀರ್ಪು ಇದು..
ಇದನ್ನು ಮುಖ್ಯ ಶಿಕ್ಷಕರು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ವಿಭಾಗೀಯ ಪೀಠ, ಅನಧಿಕೃತ ಗೈರು ಅವಧಿಗೆ ಸಂಬಂಧಿಸಿದಂತೆ ಶಿಸ್ತು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅದನ್ನು ಅನಧಿಕೃತ ಗೈರು ಎಂದು ಪರಿಗಣಿಸಲಾಗದು ಎಂದು ಹೇಳಿ ಕಾಂತರಾಜು ಅವರಿಗೆ ವೇತನ ಪಾವತಿಸಬೇಕು ಎಂದು ನಿರ್ದೇಶಿಸಿದೆ.