ಆನ್‌ಲೈನ್ ವಂಚನೆ: ರಿವ್ಯೂ ಟಾಸ್ಕ್ ನೀಡಿ ಕಮಿಷನ್ ಆಮಿಷ- 2.79 ಲಕ್ಷ ಗುಳುಂ...!
ಆನ್‌ಲೈನ್ ವಂಚನೆ: ರಿವ್ಯೂ ಟಾಸ್ಕ್ ನೀಡಿ ಕಮಿಷನ್ ಆಮಿಷ- 2.79 ಲಕ್ಷ ಗುಳುಂ...!
ಆನ್‌ಲೈನ್ ಗೂಗಲ್ ರಿವ್ಯೂ ಟಾಸ್ಕ್ ಮಾಡಿದರೆ ಕೈತುಂಬಾ ಕಮಿಷನ್ ನೀಡುವುದಾಗಿ ವಂಚಿಸಿ ಕರಾವಳಿ ಮೂಲದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 2.79 ಲಕ್ಷ ರೂ. ವಂಚಿಸಿದ್ದಾರೆ.
ಜೂನ್ 7ರಂದು ವಾಟ್ಸ್‌ಆಪ್ ಮೂಲಕ ಅಪರಿಚಿತರೊಬ್ಬರು ಟೆಲಿಗ್ರಾಂ ಲಿಂಕ್ ಕಳಿಸಿದ್ದರು. ಈ ಲಿಂಕ್ ಮೂಲಕ ಟಾಸ್ಕ್‌ವೊಂದನ್ನು ನೀಡಿ ಅದನ್ನು ಪೂರ್ಣಗೊಳಿಸಿದರೆ ಪ್ರತಿ ರಿವ್ಯೂಗೆ ರೂ. 50 ರಂತೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಟಾಸ್ಕ್ ಪೂರ್ತಿಗೊಳಿಸಿದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿ ಸಂತ್ರಸ್ತರ ಖಾತೆಗೆ ರೂ. 300 ವರ್ಗಾಯಿಸಿದ್ದರು.
ಆ ನಂತರ ಬೇರೆ ರೀತಿಯ ಗೂಗಲ್ ರಿವ್ಯೂ ಟಾಸ್ಕ್ ಮಾಡಿದರೆ ಹೆಚ್ಚಿನ ಕಮಿಷನ್ ಕೈತುಂಬಾ ಆದಾಯ ಎಂದು ನಂಬಿಸಿದ ಅಪರಿಚಿತ ವಂಚಕ ಆಕರ್ಷಕ ಮಾತುಗಳಿಂದ ಸಮ್ಮೋಹನ ಮಾಡಿದ್ದ.
ಅದರಂತೆ ಜೂನ್ 8ರಂದು ದೂರುದಾರರು ರೂ. 9000/- ಮೊತ್ತವನ್ನು ಪೇಟಿಎಂ ಆಪ್ ಮೂಲಕ ಅಪರಿಚಿತ ವಂಚಕನಿಗೆ ಕಳುಹಿಸಿದ್ದಾರೆ. ನಂತರ ಹಂತ ಹಂತವಾಗಿ ಅಪರಿಚಿತ ವಂಚಕನ ಖಾತೆಗೆ 2.59 ಲಕ್ಷ ರೂ. ಪಾವತಿಸಿದ್ದಾರೆ.
ಇನ್ನೂ ಹೆಚ್ಚಿನ ಹಣ ನೀಡುವಂತೆ ವಂಚಕ ಬೇಡಿಕೆ ಸಲ್ಲಿಸಿದ್ದ. ಆದರೆ ಆಗ ತಮಗಾದ ಮೋಸದ ಅರಿವಾದ ಸಂತ್ರಸ್ತರು ಕೂಡಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಮಂಗಳೂರು ಸೈಬರ್ ಕ್ರೈಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.