15 ವಕೀಲರು ಸಸ್ಪೆಂಡ್: ತಕ್ಷಣದಿಂದ ಜಾರಿಗೆ ಬರುವಂತೆ ವಕೀಲರ ಪರಿಷತ್ತು ಆದೇಶ
15 ವಕೀಲರು ಸಸ್ಪೆಂಡ್: ತಕ್ಷಣದಿಂದ ಜಾರಿಗೆ ಬರುವಂತೆ ವಕೀಲರ ಪರಿಷತ್ತು ಆದೇಶ
ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ವಕೀಲರ ಪರಿಷತ್ತು ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದ 15 ವಕೀಲರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿದೆ.
ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಸಂಕೀರ್ಣದಲ್ಲಿ ಹಿಂಸಾತ್ಮಕ ಘರ್ಷಣೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ದೆಹಲಿ ವಕೀಲರ ಪರಿಷತ್ತು ಈ ದಿಟ್ಟ ಕ್ರಮ ಕೈಗೊಂಡಿದೆ.
ಇತ್ತೀಚೆಗೆ ವೈರಲ್ ಆಗಿದ್ದ ಹಿಂಸಾಚಾರ ವೀಡಿಯೋ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಅಮಾನತು ಆಗಿರುವ ವಕೀಲರು ದೃಶ್ಯಾವಳಿಯಲ್ಲಿ ಗುರುತಿಸಲ್ಪಟ್ಟಂತೆ ಗುಂಡು ಹಾರಾಟ, ಕಲ್ಲು ತೂರಾಟ ಮತ್ತು ನಿಂದನೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಈ ಘಟನೆಯಲ್ಲಿ ಭಾಗಿಯಾಗಿರುವ ವಕೀಲರನ್ನು ಗುರುತಿಸಲು ವಕೀಲರ ಪರಿಷತ್ತು ಸತ್ಯಶೋಧನಾ ಸಮಿತಿಯನ್ನು ರಚಿಸಿತ್ತು. ತೀಸ್ ಹಜಾರಿ ವಕೀಲರ ಸಂಘದ ಸದಸ್ಯರೊಂದಿಗೆ ಚರ್ಚಿಸಿ ವೀಡಿಯೋ ಪರಿಶೀಲಿಸಿದ ಬಳಿಕ ದೆಹಲಿ ವಕೀಲರ ಪರಿಷತ್ತು ಈ ಕ್ರಮ ಕೈಗೊಂಡಿದೆ.
ಅಮಾನತು ಆಗಿರುವ ವಕೀಲರಿಗೆ ಲಿಖಿತ ವಿವರಣೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ, ಹಿಂಸಾಚಾರದ ಆರೋಪ ಹೊತ್ತ ಮೂವರು ವಕೀಲರನ್ನು ದೆಹಲಿ ನ್ಯಾಯಾಲಯದ ನಿರ್ದೇಶನದ ಪ್ರಕಾರ ಪೊಲೀಸರು ಬಂಧಿಸಿದ್ದರು.