-->
ಜಡ್ಜ್ ಆಗಲು ವಕೀಲರಾಗೋದು ಕಡ್ಡಾಯವೇ..?- ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಿಮಗಿದು ಗೊತ್ತೇ..?

ಜಡ್ಜ್ ಆಗಲು ವಕೀಲರಾಗೋದು ಕಡ್ಡಾಯವೇ..?- ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಿಮಗಿದು ಗೊತ್ತೇ..?

ಜಡ್ಜ್ ಆಗಲು ವಕೀಲರಾಗೋದು ಕಡ್ಡಾಯವೇ..?- ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಿಮಗಿದು ಗೊತ್ತೇ..?





ನ್ಯಾಯಾಧೀಶರಾಗಲು ವಕೀಲ ವೃತ್ತಿ ಕೈಗೊಳ್ಳುವುದು ಕಡ್ಡಾಯವೇ?: ಶ್ರೀ ಪ್ರಕಾಶ್ ನಾಯಕ್ ಅಂಕಣ


ಭಾರತದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸವನ್ನು ಅವಲೋಕಿಸಿದಾಗ ಬ್ರಿಟಿಷರ ಆಳ್ವಿಕೆಯಲ್ಲಿ ನ್ಯಾಯಾಧೀಶರಾಗಲು ವಕೀಲ ವೃತ್ತಿ ನಿರ್ವಹಿಸುವುದು ಕಡ್ಡಾಯವಾಗಿರಲಿಲ್ಲ. ಭಾರತೀಯ ನಾಗರಿಕ ಸೇವೆಯ (ICS) ಪರೀಕ್ಷೆಯಲ್ಲಿ ಉತ್ತೀರ್ಣರಾದವರು ನ್ಯಾಯಾಧೀಶರಾಗಿ ನೇಮಕ ಹೊಂದುತ್ತಿದ್ದರು.

ಹಿಂದೆಲ್ಲ, ಸಾಮಾನ್ಯವಾಗಿ ಬ್ರಿಟಿಷ್ ಭಾರತದಲ್ಲಿ ಜಿಲ್ಲಾ ಕಲೆಕ್ಟರ್ ಗಳೇ ಜಿಲ್ಲಾ ನ್ಯಾಯಾಧೀಶರ ಹುದ್ದೆಯನ್ನು ನಿರ್ವಹಿಸುತ್ತಿದ್ದರು.


1858 ರಿಂದ 1947 ರ ವರೆಗೆ ಬ್ರಿಟಿಷ್ ಭಾರತದಲ್ಲಿ 52 ಮಂದಿ ಭಾರತೀಯರು I.C.S. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅವರಲ್ಲಿ ಬಹುತೇಕರು ಬಂಗಾಳಕ್ಕೆ ಸೇರಿದವರು.


ಕನ್ನಡಿಗರ ಪೈಕಿ ಈ ಸಾಧನೆಯನ್ನು ಮಾಡಿದವರೆಂದರೆ 1908 ರಲ್ಲಿ ICS ಪರೀಕ್ಷೆಯಲ್ಲಿ ಉತ್ತೀರ್ಣರಾದ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಮೇಧಾವಿ ಸಹೋದರರಾದ ಸರ್ ಬೆನಗಲ್ ನರಸಿಂಹ ರಾವ್ ಮತ್ತು ಸರ್ ಬೆನಗಲ್ ರಾಮ ರಾವ್ ಅವರು. ಈ ಸಾಧನೆಗೈದ ಬೇರೆ ಕನ್ನಡಿಗರ ಹೆಸರು ಇತಿಹಾಸದಲ್ಲಿ ಲಭ್ಯವಿಲ್ಲ.


ಬ್ರಿಟಿಷ್ ಭಾರತದಲ್ಲಿ 1855 ನೆಯ ಇಸವಿಯಲ್ಲಿ ಮುಂಬಯಿಯಲ್ಲಿ ಸ್ಥಾಪನೆಯಾದ ಗವರ್ಮೆಂಟ್ ಲಾ ಕಾಲೇಜ್ ಭಾರತದ ಪ್ರಥಮ ಕಾನೂನು ಕಾಲೇಜು ಆಗಿತ್ತು. ಆ ಕಾಲದಲ್ಲಿ ಕಾನೂನು ವ್ಯಾಸಂಗವನ್ನು ಪಡೆಯಬೇಕಾದರೆ ಇಂಗ್ಲೆಂಡಿಗೆ ತೆರಳಬೇಕಿತ್ತು. ಕಾನೂನು ವ್ಯಾಸಾಂಗ ಪೂರೈಸಿ ಬ್ಯಾರಿಸ್ಟರ್ ಪದವಿ ಪಡೆದವರಿಗೆ ಭಾರತದಲ್ಲಿ ಅಪಾರ ಗೌರವ ಆದರಗಳು ಸಿಗುತ್ತಿದ್ದವು.

ಭಾರತದ ಪ್ರಸ್ತುತ ವ್ಯವಸ್ಥೆಯಲ್ಲಿ ತಳಹಂತದ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ವಕೀಲ ವೃತ್ತಿಯನ್ನು ಕೈಗೊಳ್ಳುವ ಅವಶ್ಯಕತೆ ಇಲ್ಲ. ಕಾನೂನು ಪದವಿ ಹೊಂದಿದ್ದಲ್ಲಿ ಸಿವಿಲ್ ಜಡ್ಜ್ ಹುದ್ದೆಗೆ ಸ್ಪರ್ಧಿಸಲು ಅವಕಾಶವಿದೆ.


ಜಿಲ್ಲಾ ನ್ಯಾಯಾಧೀಶರಾಗಲು ಏಳು ವರ್ಷ ವಕೀಲ ವೃತ್ತಿ ನಿರ್ವಹಿಸಿದ ಅನುಭವ ಇರಬೇಕು. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗ ಬೇಕಾಗಿದ್ದಲ್ಲಿ ಹತ್ತು ವರ್ಷಗಳ ಕಾಲ ಹೈಕೋರ್ಟ್ನಲ್ಲಿ ವಕೀಲ ವೃತ್ತಿ ನಿರ್ವಹಿಸಿದ ಅನುಭವವಿರಬೇಕು.


ನ್ಯಾಯಾಧೀಶರಾಗಲು ವಕೀಲರ ವೃತ್ತಿ ಕೈಗೊಳ್ಳುವುದು ಕಡ್ಡಾಯವೇ ಎಂಬ ಪ್ರಶ್ನೆಗೆ ನಿವೃತ್ತ ನ್ಯಾಯಾಧೀಶರೊಬ್ಬರ ಉತ್ತರ ಭಾಗಶಃ ಸಕಾರಾತ್ಮಕವಾಗಿತ್ತು. ಮುಂದುವರಿದು ಅವರು ಹೇಳಿದ ಮಾತುಗಳು ಆಶ್ಚರ್ಯಕರ ವಾಗಿದ್ದವು. ತಾನು ಕಾನೂನು ಪದವಿ ಪಡೆದಿದ್ದರೂ ವಕೀಲನಾಗಿ ನೋಂದಾಯಿಸಿ ವಕೀಲ ವೃತ್ತಿ ಕೈಗೊಂಡಿಲ್ಲ.


ಸಿವಿಲ್ ನ್ಯಾಯಧೀಶರ ಹುದ್ದೆಗೆ ನೇಮಕಗೊಂಡು ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತನಾದೆನು ಎಂಬುದಾಗಿ ಅವರು ನುಡಿದ ಮಾತುಗಳ ಬಗ್ಗೆ ಆಳವಾಗಿ ವಿಶ್ಲೇಷಿಸಿದಾಗ ಕೆಲವು ಕುತೂಹಲಕಾರಿ ಅಂಶಗಳು ತಿಳಿದು ಬಂದವು.


1985 ರ ವರೆಗೆ ನ್ಯಾಯಾಂಗ ಇಲಾಖೆಯಲ್ಲಿ ಸೇವೆಯಲ್ಲಿರುವ ನೌಕರರು ಕಾನೂನು ಪದವೀಧರರಾಗಿದ್ದಲ್ಲಿ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಸ್ಪರ್ಧಿಸುವ ಅವಕಾಶವನ್ನು ಹೊಂದಿದ್ದರು. 1985 ರಲ್ಲಿ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಕಾನೂನು ಮಂತ್ರಿಗಳಾಗಿದ್ದ ಪ್ರೊಫೆಸರ್ ಲಕ್ಷ್ಮೀಸಾಗರ್ ಅವರು ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುವ ನೌಕರರು ನ್ಯಾಯಾಧೀಶರಾಗಲು ಸಕ್ಷಮರಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದರು. ಇದರಿಂದ ಸಿವಿಲ್ ಜಡ್ಜ್ ಹುದ್ದೆಗೆ ಸ್ಪರ್ಧಿಸುವ ಅವಕಾಶದಿಂದ ನ್ಯಾಯಾಂಗ ನೌಕರರು ವಂಚಿತರಾದರು.


ಪ್ರಥಮ ರಾಷ್ಟ್ರೀಯ ನ್ಯಾಯಿಕ ವೇತನ ಆಯೋಗದ (FNJPC) ಅಧ್ಯಕ್ಷರಾದ ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ ಅವರು 2003 ರಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ಕಾನೂನು ಪದವಿ ಪಡೆದ ನ್ಯಾಯಾಂಗ ನೌಕರರು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಸ್ಪರ್ಧಿಸಬಹುದು. ವಕೀಲರಾಗಿ ಸೇವೆ ಸಲ್ಲಿಸುವ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಅಂತೆಯೇ ಕರ್ನಾಟಕ ರಾಜ್ಯದಲ್ಲಿ ಸಿವಿಲ್ ಜಡ್ಜ್ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಸೇವಾನಿರತ ನ್ಯಾಯಾ೦ಗ ನೌಕರರು ಕಾನೂನು ಪದವಿ ಹೊಂದಿದ್ದಲ್ಲಿ ಅಂತಹ ನೌಕರರಿಗೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಸ್ಪರ್ಧಿಸಲು ಅವಕಾಶವನ್ನು ನೀಡಲಾಯಿತು. ಆದರೆ ನ್ಯಾಯಾ೦ಗ ಇಲಾಖೆಯನ್ನು ಹೊರತುಪಡಿಸಿ ಬೇರೆ ಸರಕಾರಿ ಇಲಾಖೆಯ ನೌಕರರು ಕಾನೂನು ಪದವಿ ಹೊಂದಿದ್ದರೂ ಅವರಿಗೆ ನ್ಯಾಯಾಧೀಶರ ಹುದ್ದೆಗೆ ಸ್ಪರ್ಧಿಸಲು ನಿಯಮಗಳಲ್ಲಿ ಅವಕಾಶ ಇಲ್ಲ. ನ್ಯಾಯಾಂಗ ನೌಕರರನ್ನು ಹೊರತುಪಡಿಸಿ ಇತರ ಕಾನೂನು ಪದವೀಧರರಿಗೆ ವಕೀಲರಾಗಿ ನೋಂದಾಯಿಸಿಕೊಳ್ಳುವುದು ಈಗಿನ ನಿಯಮಾವಳಿಗಳ ಅನುಸಾರ ಅವಶ್ಯಕವಾಗಿದೆ.


ಇತ್ತೀಚೆಗೆ ಮಧ್ಯಪ್ರದೇಶ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ನೇಮಕಾತಿಗೆ ತಿದ್ದುಪಡಿ ತಂದಿದೆ. ಮೂರು ವರ್ಷಗಳ ಕಾಲ ವಕೀಲ ವೃತ್ತಿಯನ್ನು ಅಭ್ಯಾಸ ಮಾಡಿದ ಅಭ್ಯರ್ಥಿಗಳು ಮಾತ್ರ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಸ್ಪರ್ಧಿಸಲು ಅರ್ಹತೆ ಹೊಂದಿರುತ್ತಾರೆ ಎಂದು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.


ಎಪ್ಪತ್ತು ಹಾಗೂ ಎಂಬತ್ತರ ದಶಕಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಯುತ ಶಂಕರನಾರಾಯಣ ಭಟ್; ಶ್ರೀ ವಿ.ಪಿ. ಕೆದಿಲಾಯ ಮತ್ತು ಶ್ರೀ ಹರಿಯಪ್ಪ ಗೌಡ ಇವರು ಸಿವಿಲ್ ನ್ಯಾಯಾಧೀಶರಾಗಿ (ಹಿಂದಿನ ಹೆಸರು ಮುನ್ಸಿಫ್) ನೇಮಕಗೊಂಡು ಜಿಲ್ಲಾ ನ್ಯಾಯಾಧೀಶರ ಹುದ್ದೆಯಲ್ಲಿ ನಿವೃತ್ತರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.


ಮಾಹಿತಿ/ಲೇಖನ: ಪ್ರಕಾಶ್ ನಾಯಕ್, ಶಿರಸ್ತೇದಾರರು, ನ್ಯಾಯಾಂಗ ಇಲಾಖೆ ಮಂಗಳೂರು

Photo: Sri Prakash Nayak, Mangaluru    


Ads on article

Advertise in articles 1

advertising articles 2

Advertise under the article