ಸೇವೆಗೆ ಮರಳಿದ ಉದ್ಯೋಗಿ "ಬ್ಯಾಕ್ ವೇಜ್"ಗೆ ಅರ್ಹನೇ..?: ಇದು ಸುಪ್ರೀಂ ಕೋರ್ಟ್ ತೀರ್ಪು
ಸೇವೆಗೆ ಮರಳಿದ ಉದ್ಯೋಗಿ "ಬ್ಯಾಕ್ ವೇಜ್"ಗೆ ಅರ್ಹನೇ..?: ಇದು ಸುಪ್ರೀಂ ಕೋರ್ಟ್ ತೀರ್ಪು
ಸೇವೆಯಿಂದ ವಜಾಗೊಂಡಿದ್ದ ನೌಕರನೊಬ್ಬ ಮರಳಿ ಸೇವೆಗೆ ಮರಳಿದಾಗ ಆತ ಹಿಂದಿನ ಅವಧಿಯ ವೇತನ (ಬ್ಯಾಕ್ ವೇಜಸ್)ಕ್ಕೆ ಅರ್ಹನೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಉದ್ಯೋಗಿಯು ಮರಳಿ ಸೇವೆಗೆ ಸೇರ್ಪಡೆಯಾದಾಗ, 'ಮರಳಿ ಸೇವೆಗೆ ಪಡೆಯಬೇಕು' ಎಂಬ ನೀಡಲಾದ ಆದೇಶದಿಂದ ಆ ಉದ್ಯೋಗಿ ಸ್ವಯಂಚಾಲಿತವಾಗಿ ಬ್ಯಾಕ್ ವೇಜಸ್‌ಗೆ ಅರ್ಹ ಎಂದರ್ಥವಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.
ರಮೇಶ್ ಚಂದ್ Vs ದೆಹಲಿ ಸಾರಿಗೆ ನಿಗಮ ಪ್ರಕರಣದಲ್ಲಿ ನಿವೃತ್ತ ನಿರ್ವಾಹಕರೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಭಯ ಶ್ರೀನಿವಾಸ್ ಓಕಾ ಮತ್ತು ನ್ಯಾ. ರಾಜೇಶ್ ಬಿಂದಾಲ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಉದ್ಯೋಗಕ್ಕೆ ಮರಳಿದ ವ್ಯಕ್ತಿ, ತಾನು ಹಿಂದಿನ ಅವಧಿಯಲ್ಲಿ ಲಾಭಕರ ರೀತಿಯಲ್ಲಿ ಕೆಲಸ ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಆಗ ಮಾತ್ರ ಆ ಉದ್ಯೋಗಿ ಹಿಂದಿನ ಅವಧಿಯ ವೇತನಕ್ಕೆ ಅರ್ಹನಾಗುತ್ತಾನೆ ಎಂದು ನ್ಯಾಯಪೀಠ ವಿವರಿಸಿದೆ.
ಈ ಬಗ್ಗೆ ಈಗಾಗಲೇ ಕಾನೂನು ಸ್ಪಷ್ಟವಾಗಿದೆ. ಉದ್ಯೋಗಿಗೆ ಮರಳಿ ಸೇವೆಗೆ ಸೇರಲು ಆದೇಶ ಇದ್ದರೂ ಆತ ಹಿಂದಿನ ವೇತನ ಪಡೆಯಲು ಹಕ್ಕುದಾರ ಎಂಬರ್ಥವಲ್ಲ. ಆಯಾ ಪ್ರಕರಣದ ಸನ್ನಿವೇಶಕ್ಕೆ ಅವಲಂಬಿಸಿರುತ್ತದೆ ಎಂದು ತೀರ್ಪು ಹೇಳಿದೆ.
ಪ್ರಕರಣದ ವಿವರ:
1992ರಲ್ಲಿ ದೆಹಲಿಯಲ್ಲಿ ನಡೆದ ಘಟನೆಯೊಂದರಲ್ಲಿ ಪ್ರಯಾಣಿಕರಿಬ್ಬರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ದೆಹಲಿ ಸಾರಿಗೆ ಸಂಸ್ಥೆ ಆರೋಪಿ ನಿರ್ವಾಹಕರೊಬ್ಬರನ್ನು ಸೇವೆಯಿಂದ ವಜಾಗೊಳಿಸಿತ್ತು. ವಿಚಾರಣೆ ಮುಗಿದು ಈ ತೀರ್ಪು ಬಂದದ್ದು 1996ರಲ್ಲಿ. ಈ ಆದೇಶವನ್ನು ನಿರ್ವಾಹಕರು ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.
ಮಾನ್ಯ ನ್ಯಾಯಾಲಯ 2009ರಲ್ಲಿ ಅವರನ್ನು ಮತ್ತೆ ಸೇವೆಗೆ ಸೇರ್ಪಡೆಗೊಳಿಸುವಂತೆ ತೀರ್ಪು ನೀಡಿತು. ಆದರೂ, ಸಾರಿಗೆ ನಿಗಮದಲ್ಲಿ ಕೆಲಸ ಮಾಡದ ಅವಧಿಯಲ್ಲಿ ಉದ್ಯೋಗಿ ವೇತನ ಪಡೆಯಲು ಅರ್ಹರಲ್ಲ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ದೆಹಲಿ ನ್ಯಾಯಾಲಯ ಕೂಡ ಎತ್ತಿ ಹಿಡಿದಿತ್ತು. ಈ ಮಧ್ಯೆ 2020ರಲ್ಲಿ ಅವರು ಸೇವೆಯಿಂದ ನಿವೃತ್ತರಾದರು.
ವಜಾಗೊಂಡ ಬಳಿಕ ತಾವು ಹಲವಾರು ವರ್ಷಗಳ ಕಾಲ ಯಾವುದೇ ಅನ್ಯ ಉದ್ಯೋಗವಿಲ್ಲದೆ ಕಷ್ಟಪಟ್ಟಿರುತ್ತೇನೆ ಎಂಬುದನ್ನು ಮೇಲ್ಮನವಿದಾರರು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಸುಪ್ರೀಂ ನ್ಯಾಯಪೀಠ, ಭಾಗಶಃ ವೇತನ ಪರಿಹಾರಕ್ಕೆ ಮೇಲ್ಮನವಿದಾರರು ಹಕ್ಕುದಾರರು ಎಂದು ಪರಿಗಣಿಸಿ ವೇತನದ ಆದೇಶಕ್ಕೆ ಹೆಚ್ಚುವರಿಯಾಗಿ ಮೂರು ಲಕ್ಷ ರೂ. ಸೇರಿಸಿ ನೀಡುವಂತೆ ಸಾರಿಗೆ ನಿಗಮಕ್ಕೆ ಆದೇಶ ನೀಡಿತು.