ಇಬ್ಬರು ಜಡ್ಜ್‌ಗಳ ಪ್ರಮಾಣ ಸ್ವೀಕಾರ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೇರಿಕೆ
ಇಬ್ಬರು ಜಡ್ಜ್‌ಗಳ ಪ್ರಮಾಣ ಸ್ವೀಕಾರ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೇರಿಕೆ
ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ್ದ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಎಸ್.ವಿ. ಭಟ್ಟಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಮತ್ತೆ 32ಕೇರಿದೆ.
ಸುಪ್ರೀಂ ಕೋರ್ಟ್‌ನ ಒಟ್ಟು ಸಂಖ್ಯಾ ಬಲ 34. ಈಗಿನ ಸಂಖ್ಯಾ ಬಲ 30 ಇತ್ತು. ಜುಲೈ 7ರಂದು ನ್ಯಾಯಮೂರ್ತಿ ಕೃಷ್ಣ ಮುರಾರಿ ನಿವೃತ್ತರಾಗಿದ್ದರು. ಇದೀಗ, ಮತ್ತಿಬ್ಬರು ನ್ಯಾಯಮೂರ್ತಿಗಳ ಸೇರ್ಪಡೆಯೊಂದಿಗೆ ಸುಪ್ರೀಂ ಕೋರ್ಟ್‌ನ ಸಂಖ್ಯಾಬಲ 32ಕ್ಕೇರಿದ್ದು, ಇನ್ನೆರಡು ಸ್ಥಾನ ಖಾಲಿ ಇವೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಈ ಇಬ್ಬರು ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು.
ನ್ಯಾ. ಭುಯಾನ್ ಈ ಹಿಂದೆ ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ನ್ಯಾ. ಭಟ್ಟಿ ಅವರು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.
ನ್ಯಾ. ಭುಯಾನ್ ಅವರು ತೆರಿಗೆ ಕಾನೂನಿನಲ್ಲಿ ವಿಶೇಷವಾದ ಹಾಗೂ ಆಳವಾದ ಜ್ಞಾನ ಇದೆ. ಮುಂಬೈ ಹೈಕೋರ್ಟ್ ನ್ಯಾಯಮೂರ್ತಿಯಾಗಿ ತೆರಿಗೆ ಸೇರಿದಂತೆ ವಿವಿಧ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. ಅವರ ತೀರ್ಪುಗಳು ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ವ್ಯಾಪಕ ವಿಚಾರವನ್ನು ಒಳಗೊಂಡಿವೆ. ಭುಯಾನ್ ಅವರು ಪ್ರಾಮಾಣಿಕತೆ ಮತ್ತು ಸಾಮರ್ಥ್ಯಕ್ಕೆ ಹೆಸರಾಗಿದ್ದರು.
ನ್ಯಾ. ಭಟ್ಟಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದರು. ಈ ಹಿಂದೆ, 2013ರ ಎಪ್ರಿಲ್ 12ರಂದು ಆಂಧ್ರ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಆಂಧ್ರ ಹಾಗೂ ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸುದೀರ್ಘ ಅವಧಿಯ ಅನುಭವದಲ್ಲಿ ಕಾನೂನು ಅಗಾಧವಾದ ಪಾಂಡಿತ್ಯ, ಚಾತುರ್ಯ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಕಾನೂನಿನ ವಿವಿಧ ಶಾಖೆಗಳ ಗಣನೀಯ ಅನುಭವ ಅವರಲ್ಲಿದೆ. ಜ್ಞಾನ ಮತ್ತು ಅನುಭವದ ದೃಷ್ಟಿಯಿಂದ ನ್ಯಾಯಪೀಠಕ್ಕೆ ಹೆಚ್ಚಿನ ಮೌಲ್ಯವರ್ಧನೆ ಆಗಲಿದೆ ಎಂದು ಹೇಳಲಾಗಿದೆ.