PML Act: ಖಾಸಗಿ ದೂರನ್ನು ವಿಚಾರಣಾ ನ್ಯಾಯಾಲಯ ಯಾಕೆ ಪುರಸ್ಕರಿಸುವಂತಿಲ್ಲ?- ಹೈಕೋರ್ಟ್ ನೀಡಿದ ಕಾರಣವಿದು..!
PML Act: ಖಾಸಗಿ ದೂರನ್ನು ವಿಚಾರಣಾ ನ್ಯಾಯಾಲಯ ಯಾಕೆ ಪುರಸ್ಕರಿಸುವಂತಿಲ್ಲ?- ಹೈಕೋರ್ಟ್ ನೀಡಿದ ಕಾರಣವಿದು..!
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಒಂದು ವಿಶೇಷ ಕಾಯ್ದೆ. ಇದರ ಆಧಾರದಲ್ಲಿ ದಾಖಲಾಗುವ ದೂರನ್ನು ಅಪರಾಧಿಕ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ನಿಯಮಗಳ ಪ್ರಕಾರ ಯಥಾವತ್ತಾಗಿ ಅನ್ವಯಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 45ರ ಅನ್ವಯ ಸರ್ಕಾರದ ಸಕ್ಷಮ ಪ್ರಾಧಿಕಾರ ಅಥವಾ ಸಕ್ಷಮ ಅಧಿಕಾರಿಯಿಂದ ಬಂದ ಲಿಖಿತ ದೂರನ್ನು ಪುರಸ್ಕರಿಸಬಹುದು. ಆಧರೆ, ಖಾಸಗಿ ವ್ಯಕ್ತಿಗಳು ನೀಡುವ ದೂರನ್ನು ವಿಚಾರಣೆಗೆ ಪರಿಗಣಿಸಲಾಗದು ಎಂದು ತೀರ್ಪು ಸ್ಪಷ್ಟಪಡಿಸಿದೆ.
ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ ಮತ್ತು ಇತರರು ತಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ದಾಖಲಿಸಿದ್ದ ದೂರನ್ನು ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
2016ರಲ್ಲಿ ಒ.ಎಂ. ಮಹೇಶ್ ಮತ್ತು ಲಿಂಗನಗೌಡ ಅವರು ಮಂಗಳೂರಿನ ಮೂರನೇ ಹೆಚ್ಚುವರಿ ಮತ್ತು ವಿಶೇಷ ನ್ಯಾಯಾಲಯ ಅರ್ಜಿದಾರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಖಾಸಗಿ ದೂರು ದಾಖಲಿಸಿದ್ದರು. ಈ ಖಾಸಗಿ ದೂರನ್ನು ಪರಿಗಣಿಸಿ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿ ಅರ್ಜಿದಾರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಈ ಪ್ರಕರಣವನ್ನು ರದ್ದು ಮಾಡಬೇಕು ಎಂದು ಕೋರಿ ಪ್ರಕರಣದ ಆರೋಪಿಗರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ದಾಖಲಿಸುವ ಖಾಸಗಿ ವ್ಯಕ್ತಿಗಳ ದೂರನ್ನು ವಿಚಾರಣಾ ನ್ಯಾಯಾಲಯಗಳು ಪರಿಗಣಿಸುವಂತಿಲ್ಲ ಎಂದು ಆದೇಶ ನೀಡಿತು.
ಪ್ರಕರಣ: ಶಶಿಲ್ ಮತ್ತು ಇತರರು Vs O.H. ಅಮರೇಶ್
ಕರ್ನಾಟಕ ಹೈಕೋರ್ಟ್, CrlP 9071/2021 Dated 12-04-2022