PC Guidelines | ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಆರೋಪ: ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಮಾರ್ಗಸೂಚಿ
ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಆರೋಪ: ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಮಾರ್ಗಸೂಚಿ
ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಆರೋಪದ ಕುರಿತಂತೆ ನ್ಯಾಯಾಲಯಗಳಲ್ಲಿ ದಾಖಲಾಗುವ ಖಾಸಗಿ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡು ಎಫ್‌ಐಆರ್ ದಾಖಲಿಸಲು ಆದೇಶ ಮಾಡುವ ಮುನ್ನ ಕೆಲವೊಂದು ಅಂಶಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ಸೂಚನೆ ನೀಡಿದೆ.
ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ಹೊರಡಿಸಿದ್ದು, ರಾಜ್ಯದ ಎಲ್ಲ ಸೆಷನ್ಸ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಈ ನಿರ್ದೇಶನ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಭ್ರಷ್ಟಾಚಾರ ನಿಷೇಧ ಕಾಯ್ದೆಯ ಸೆಕ್ಷನ್ 17A ಅಡಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕು. ಈ ಪೂರ್ವಾನುಮತಿ ನೀಡಿರುವುದಕ್ಕೆ ದಾಖಲೆಯನ್ನು ಖಾಸಗಿ ದೂರು ದಾಖಲಿಸುವವರೇ ಒದಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದರ ಜೊತೆಗೆ, ಕರ್ನಾಟಕ ಲೋಕಾಯುಕ್ತದ ಮುಂದೆ ದಾಖಲಿಸಲು ದೂರುದಾರರು ಮಾಡಿರುವ ಪ್ರಯತ್ನಗಳು ಮತ್ತು ಅದಕ್ಕೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ದೂರಿನಲ್ಲಿ ವಿವರಣೆ ಸಹಿತ ದಾಖಲಿಸಬೇಕು ಎಂದು ತಿಳಿಸಿರುವ ಆದೇಶ, ಖಾಸಗಿ ದೂರಿನ ಜೊತೆಗೆ ಸಾಕ್ಷಿಗಳು, ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಇದು ಬರೀ ಹೇಳಿಕೆಯ ಉಲ್ಲೇಖ ಮಾಡುವುದಕ್ಕೆ ಸೀಮಿತವಾಗಬಾರದು ಎಂದು ಸ್ಪಷ್ಟಪಡಿಸಿದೆ.
ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಯಾಗಿದ್ದ ಡಾ. ವಿ. ಅಶೋಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಚಿಕ್ಕಬಳ್ಳಾಪುರ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು.
ಈ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್ 200ರಡಿ ಖಾಸಗಿ ದೂರನ್ನು ದಾಖಲಿಸಲಾಗಿದೆ. ತನಿಖಾ ಸಂಸ್ಥೆಯ ಪೊಲೀಸ್ ವಿಭಾಗದಲ್ಲಿ ಯಾವುದೇ ದೂರನ್ನು ದಾಖಲಿಸಿಲ್ಲ. ಈ ಖಾಸಗಿ ದೂರನ್ನು ಪರಿಗಣಿಸಿದ ವಿಚಾರಣಾ ನ್ಯಾಯಾಲಯ, ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.