ವರ್ಷದೊಳಗೆ ವಿಚ್ಚೇದನ ಅರ್ಜಿಗಳ ವಿಲೇವಾರಿ: ಕೌಟುಂಬಿಕ ನ್ಯಾಯಾಲಯಗಳಿಗೆ ಹೈಕೋರ್ಟ್ ನಿರ್ದೇಶನ
ವರ್ಷದೊಳಗೆ ವಿಚ್ಚೇದನ ಅರ್ಜಿಗಳ ವಿಲೇವಾರಿ: ಕೌಟುಂಬಿಕ ನ್ಯಾಯಾಲಯಗಳಿಗೆ ಹೈಕೋರ್ಟ್ ನಿರ್ದೇಶನ
ವಿವಾಹ ವಿಚ್ಚೇದನ ಕೋರಿ ಕೌಟುಂಬಿಕ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗುವ ಅರ್ಜಿಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.
ಬೆಂಗಳೂರಿನ ರಾಜೀವ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಮನುಷ್ಯದ ಬದುಕು ಅತ್ಯಲ್ಪ. ಅದು ಕಳೆದು ಹೋಗಬಾರದು. ಹೀಗಾಗಿ, ವಿವಾಹ ವಿಚ್ಚೇದನ ಕೋರಿ ಅರ್ಜಿಗಳನ್ನು ಸಲ್ಲಿಸಿದಾಗ ನ್ಯಾಯಾಲಯಗಳು ಯುದ್ಧೋಪಾದಿಯಲ್ಲಿ ವಿಚಾರಣೆ ನಡೆಸಿ ಅದನ್ನು ಅತಿ ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಇಂತಹ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸದಿದ್ದರೆ ಪಕ್ಷಕಾರರಿಗೆ ತಮ್ಮ ಜೀವನ ಕಟ್ಟಿಕೊಳ್ಳಲು ಅಡ್ಡಿಯಾಗುತ್ತದೆ ಹಾಗೂ ದಂಪತಿಗಳಿಬ್ಬರ ಜೀವನದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರ ರಾಜೀವ್ ಅವರು 2016ರಲ್ಲಿ ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದು, ಮುಂದಿನ ಮೂರು ತಿಂಗಳಲ್ಲಿ ಈ ಅರ್ಜಿಯನ್ನು ವಿಲೇ ಮಾಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದ್ದು, ಆದೇಶದ ಪ್ರತಿಯನ್ನು ರಾಜ್ಯದ ಎಲ್ಲ ಕೌಟುಂಬಿಕ ನ್ಯಾಯಾಲಯಗಳಿಗೆ ರವಾನಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚನೆ ನೀಡಿದೆ.