ಜನರ ತೆರಿಗೆ ಹಣದಿಂದ ಸರ್ಕಾರಿ ವಕೀಲರಿಗೆ ಸವಲತ್ತು: ಸರ್ಕಾರಿ ವಕೀಲರ ಕರ್ತವ್ಯ ದಕ್ಷತೆಗೆ ಸಿದ್ದರಾಮಯ್ಯ ಪಂಚಸೂತ್ರ
ಜನರ ತೆರಿಗೆ ಹಣದಿಂದ ಸರ್ಕಾರಿ ವಕೀಲರಿಗೆ ಸವಲತ್ತು: ಸರ್ಕಾರಿ ವಕೀಲರ ಕರ್ತವ್ಯ ದಕ್ಷತೆಗೆ ಸಿದ್ದರಾಮಯ್ಯ ಪಂಚಸೂತ್ರ
ಸರ್ಕಾರದ ಕೇಸುಗಳನ್ನು ಸರ್ಕಾರಿ ವಕೀಲರು ನಿರ್ಲಕ್ಷ್ಯ ಮಾಡಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ನೆರವು ದೊರಕಿಸಿಕೊಡುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಸರ್ಕಾರಿ ವಕೀಲರ ನೇಮಕ ನಿಷ್ಪ್ರಯೋಜಕವಾದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ವ್ಯಾಜ್ಯ ನಿರ್ವಹಣಾ ಅಧಿನಿಯಮ 2023ರ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಕರ್ನಾಟಕ ಕಾನೂನು, ಸಂಸದೀಯ ಸುಧಾರಣಾ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿತ್ತು.
ನ್ಯಾಯಾಂಗ ನಿಂದನೆ ಆಗದಂತೆ ವೃತ್ತಿಪರತೆ ಪ್ರದರ್ಶಿಸುವ ಹೊಣೆಗಾರಿಕೆ ಸರ್ಕಾರಿ ವಕೀಲರ ಮೇಲಿದೆ. ಸರ್ಕಾರವೇ ಕಕ್ಷಿದಾರ ಎನ್ನುವುದನ್ನು ವಕೀಲರು ಅರಿಯಬೇಕು. ಸರ್ಕಾರಿ ಆಸ್ತಿಯನ್ನು ಉಳಿಸುವ ಜವಾಬ್ದಾರಿಯನ್ನು ವಕೀಲರು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಅವರು ಸರ್ಕಾರಿ ವಕೀಲರಿಗೆ ಕಿವಿಮಾತು ಹೇಳಿದರು.
ಅನಗತ್ಯ ವಿಳಂಬ ಮಾಡದೆ, ಪ್ರತೀ ವಿಚಾರಣಾ ದಿನದಂದು ಆ ದಿನದ ಕಾನೂನು ಪ್ರಕ್ರಿಯೆಯನ್ನು ಸರ್ಕಾರಿ ವಕೀಲರ ಪೂರೈಸಬೇಕು. ವಾಯ್ದೆ ಪಡೆಯದೆ ಕ್ಷಿಪ್ರಗತಿಯ ನ್ಯಾಯದಾನಕ್ಕೆ ಸರ್ಕಾರಿ ವಕೀಲರ ಕೊಡುಗೆ ದೊರೆಯಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮಿನು ನೀಡುವುದನ್ನು ಪರಿಣಾಮಕಾರಿಯಾಗಿ ವಿರೋಧಿಸಬೇಕು. ಆಗ ಸಾರ್ವಜನಿಕ ವಲಯದಲ್ಲೂ ಸರ್ಕಾರಿ ಅಭಿಯೋಜನ ಇಲಾಖೆಗೆ ಮತ್ತು ಸರ್ಕಾರಿ ವಕೀಲರ ಸಮುದಾಯಕ್ಕೆ ಗೌರವ ದೊರೆಯುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆ, ಕರ್ತವ್ಯದ ಬದ್ಧತೆ, ಶಿಸ್ತು ಮತ್ತು ಧನ್ಯತೆಯೊಂದಿಗೆ ಸರ್ಕಾರಿ ವಕೀಲರು ಕೆಲಸ ಮಾಡಬೇಕು. ಜನರ ಹಣದಲ್ಲಿ ನಿಮಗೆ ಸವಲತ್ತು ಸಿಗುತ್ತದೆ ಎಂಬ ಅರಿವು ಎಲ್ಲರಲ್ಲೂ ಇರಬೇಕು. ಕೇಸಿನ ಬಗ್ಗೆ ಸಮರ್ಪಕ ಸಿದ್ಧತೆ ಮಾಡಬೇಕು. ಆಗ ಮಾತ್ರ ವೃತ್ತಿಗೆ ಘನತೆ ಮತ್ತು ಸರ್ಕಾರಕ್ಕೆ ಹೆಸರು ಬರುತ್ತದೆ ಎಂದು ಅವರು ಪ್ರತಿಪಾದಿಸಿದರು.