ಸೆಕ್ಷನ್ 304A, ನಿರ್ಲಕ್ಷ್ಯದ ಚಾಲನೆ: ಅಪರಾಧಿಕ ಹಿನ್ನೆಲೆ ಇಲ್ಲದಿದ್ದರೆ ಶಿಕ್ಷೆಗಿಂತ ವಾಗ್ದಂಡನೆ ಸೂಕ್ತ- ಸುಪ್ರೀಂ ಕೋರ್ಟ್
ಸೆಕ್ಷನ್ 304A, ನಿರ್ಲಕ್ಷ್ಯದ ಚಾಲನೆ: ಅಪರಾಧಿಕ ಹಿನ್ನೆಲೆ ಇಲ್ಲದಿದ್ದರೆ ಶಿಕ್ಷೆಗಿಂತ ವಾಗ್ದಂಡನೆ ಸೂಕ್ತ- ಸುಪ್ರೀಂ ಕೋರ್ಟ್
ತಮಿಳುನಾಡು ಸಾರಿಗೆ ಸಂಸ್ಥೆಯ ಚಾಲಕ ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಚಾಲಕನ ಅಪರಾಧವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದರೂ ಆತನಿಗೆ ವಿಧಿಸಿದ್ದ ಮೂರು ತಿಂಗಳ ಶಿಕ್ಷೆಯನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
ನ್ಯಾ. ಅನಿರುದ್ಧ ಬೋಸ್, ನ್ಯಾ. ಪಿ.ವಿ. ಸಂಜಯ್ ಕುಮಾರ್ ಮತ್ತು ನ್ಯಾ. ಎಸ್.ವಿ.ಎನ್. ಭಟ್ಟಿ ಅವರಿದ್ದ ಸುಪ್ರೀಂ ಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಅಪರಾಧಿಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಆತನ ನಿರ್ಲಕ್ಷ್ಯದ ಚಾಲನೆ ಮಾಡಿದ್ದರೂ ಆತನ ಪಾತ್ರದ ಬಗ್ಗೆ ಯಾವುದೇ ಪ್ರತಿಕೂಲ ವರದಿ ಇಲ್ಲ ಎಂಬುದನ್ನು ಗಮನಿಸಿದ ನ್ಯಾಯಪೀಠ, ಶಿಕ್ಷೆಗೆ ಬದಲು ವಾಗ್ದಂಡನೆ ಮತ್ತು ಎಚ್ಚರಿಕೆಯ ಶಿಕ್ಷೆ ವಿಧಿಸಿ ಆರೋಪಿಯನ್ನು ಬಿಡುಗಡೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 337 ಮತ್ತು ಸೆಕ್ಷನ್ 304 A ಅಡಿ ಶಿಕ್ಷೆ ಪ್ರಕಟಿಸುವ ಬದಲು ತಮ್ಮ ವೃತ್ತಿ ಜೀವನದಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವಾಗ ಅತ್ಯಂತ ಜಾಗರೂಕತೆಯಿಂದ ಚಾಲನೆ ಮಾಡಬೇಕು ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ನ್ಯಾಯಪೀಠ ಹೇಳಿತು.