ನಿದ್ದೆ ಬಿಡಿ, ತನಿಖೆ ಪೂರ್ಣಗೊಳಿಸಿ: ಲೋಕಾಯುಕ್ತ ಪೊಲೀಸರಿಗೆ ಚಾಟಿ ಬೀಸಿದ ಕರ್ನಾಟಕ ಹೈಕೋರ್ಟ್
ನಿದ್ದೆ ಬಿಡಿ, ತನಿಖೆ ಪೂರ್ಣಗೊಳಿಸಿ: ಲೋಕಾಯುಕ್ತ ಪೊಲೀಸರಿಗೆ ಚಾಟಿ ಬೀಸಿದ ಕರ್ನಾಟಕ ಹೈಕೋರ್ಟ್
ಭ್ರಷ್ಟಾಚಾರ ಪ್ರಕರಣಗಳ ಅಂತಿಮ ವರದಿ ಸಲ್ಲಿಸುವಲ್ಲಿ ಲೋಕಾಯುಕ್ತ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ಕಲ್ಲಪ್ಪ ಅವರು ತಮ್ಮ ವಿರುದ್ಧ ದಾಖಲಾದ ಅಕ್ರಮ ಆಸ್ತಿ ಗಳಿಕೆಯ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಕರ್ನಾಟಕ ಹೈಕೋರ್ಟ್‌ನ ಧಾರವಾಡದ ನ್ಯಾಯಪೀಠ ಈ ಆಕ್ರೋಶ ವ್ಯಕ್ತಪಡಿಸಿದೆ.
ಯಾವುದೇ ಪ್ರಕರಣದ ತನಿಖೆಯನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಆರೋಪಿ ಸ್ಥಾನದಲ್ಲಿ ಇರುವ ಸರ್ಕಾರಿ ಸೇವಕರ ನೆತ್ತಿಯ ಮೇಲೆ ಪ್ರಾಸಿಕ್ಯೂಷನ್ ತೂಗುಕತ್ತಿ ತೂಗುತ್ತಿರುತ್ತದೆ. ಇದರಿಂದ ಅವರ ಹಕ್ಕುಗಳು ಮೊಟಕುಗೊಂಡಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬ್ಯಾಂಕ್ ಖಾತೆಯ ವಿವರ ಸಲ್ಲಿಸಲು ಅರ್ಜಿದಾರರಿಂದ ವಿಳಂಬವಾಗಿದೆ. ಇದರಿಂದ ಲೋಕಾಯುಕ್ತ ತನಿಖೆಯೂ ತಡವಾಗಿದೆ. ಹಾಗಾಗಿ, ಅರ್ಜಿದಾರರ ಮನವಿ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಿತು.
ಇದೇ ವೇಳೆ, ಅರ್ಜಿದಾರರ ವಿರುದ್ಧದ ತನಿಖೆಯ ಅಂತಿಮ ವರದಿಯನ್ನು ಎರಡು ತಿಂಗಳಲ್ಲಿ ಸಲ್ಲಿಸಬೇಕು ಎಂದು ಲೋಕಾಯುಕ್ತಕ್ಕೆ ನಿರ್ದೇಶನ ನೀಡಿದೆ.
ಒಂದು ವೇಳೆ, ಅಂತಿಮ ವರದಿ ಸಲ್ಲಿಸದಿದ್ದರೆ ಲೋಕಾಯುಕ್ತರ ವಿರುದ್ಧ ಪ್ರತಿಕೂಲ ತೀರ್ಮಾನ ತೆಗೆದುಕೊಳ್ಳಲು ನ್ಯಾಯಾಲಯ ಸ್ವತಂತ್ರವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅನೇಕ ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸ್ ತನಿಖೆಯು ದಶಕಗಳ ಕಾಲ ನಡೆದಿದೆ. ಹಲವು ಪ್ರಕರಣಗಳಲ್ಲಿ ಇನ್ನೂ ಅಂತಿಮ ವರದಿ ಸಲ್ಲಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ತನಿಖೆ ಪೂರ್ಣಗೊಳಿಸಲು ಲೋಕಾಯುಕ್ತ ಪೊಲೀಸರಿಗೆ ಇಚ್ಚಾಶಕ್ತಿ ಇಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಲೋಕಾಯುಕ್ತ ಇನ್ನೂ ನಿದ್ದೆ ಮಾಡುವುದು ಸರಿಯಲ್ಲ. ಎರಡು ತಿಂಗಳ ಕಾಲಮಿತಿಯಲ್ಲಿ ತನಿಖಾ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ನಿರ್ದೇಶಿಸಿದೆ.