ಪೋಕ್ಸೋ ಆರೋಪಿಗೆ ನೆರವಾದ ಆಧಾರ್: ಟ್ರಯಲ್ ಕೋರ್ಟ್ ತೀರ್ಪಿಗೆ ಹೈಕೋರ್ಟ್ ಅಸ್ತು!
ಪೋಕ್ಸೋ ಆರೋಪಿಗೆ ನೆರವಾದ ಆಧಾರ್: ಟ್ರಯಲ್ ಕೋರ್ಟ್ ತೀರ್ಪಿಗೆ ಹೈಕೋರ್ಟ್ ಅಸ್ತು
ಪೋಕ್ಸೋ ಪ್ರಕರಣದ ಆರೋಪಿಗೆ ಸಂತ್ರಸ್ತೆಯ ಆಧಾರ್ ಕಾರ್ಡ್ ಮಾಹಿತಿ ನೆರವಿಗೆ ಬಂದಿದ್ದ, ಆರೋಪಿಯ ಖುಲಾಸೆಗೆ ಕಾರಣವಾಗಿದೆ. ಈ ಬಗ್ಗೆ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ದೆಹಲಿ ಹೈಕೋರ್ಟ್ ಕೂಡ ಮಾನ್ಯ ಮಾಡಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ ಕಾಯ್ದೆ)ಯ ಆರೋಪಿಯನ್ನು ಬಿಡುಗಡೆ ಮಾಡಲು ಆಧಾರ್ ಕಾರ್ಡ್‌ನಲ್ಲಿ ಉಲ್ಲೇಖಿಸಲಾಗಿದ್ದ ಜನ್ಮ ದಿನಾಂಕವನ್ನು ಅವಲಂಬಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾ. ದಿನೇಶ್ ಕುಮಾರ್ ಶರ್ಮಾ ಅವರಿದ್ದ ನ್ಯಾಯಪೀಠ ತಿರಸ್ಕರಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು.
ಪ್ರಕರಣದಲ್ಲಿ ಬಾಲಕಿಯ ವಯಸ್ಸು ಆಧಾರ್ ಪ್ರಕಾರ 21 ಎಂದು ನಮೂದಿಸಲಾಗಿತ್ತು. ಆದರೆ, ಪೊಲೀಸರು ಸಲ್ಲಿಸಿದ ಎಫ್‌ಐಆರ್, ಸಂತ್ರಸ್ತೆಯ ತಾಯಿ ನೀಡಿದ ದೂರಿನಲ್ಲಿ ಆಕೆಯ ವಯಸ್ಸು 16 ಎಂದಾಗಿತ್ತು.
ವಿಚಾರಣೆ ವೇಳೆ, ಸಂತ್ರಸ್ತೆಯ ಜನ್ಮ ದಿನಾಂಕವನ್ನು ಉಲ್ಲೇಖಿಸಿದ್ದ ಶಾಲಾ ದಾಖಲೆಯನ್ನು ಮಾನ್ಯ ನ್ಯಾಯಾಲಯಕ್ಕೆ ನೀಡಲಾಗಿತ್ತು. ಆದರೆ, ಅದನ್ನು ಅನುಮೋದಿಸುವ ಯಾಔಉದೇ ಪ್ರಮಾಣ ಪತ್ರ ಅಥವಾ ಸ್ಥಳೀಯ ಸಂಸ್ಥೆ ನೀಡುವ ಸಂಬಂಧಿತ ದಾಖಲೆಗಳು ಇರಲಿಲ್ಲ. ಈ ಅಂಶವನ್ನು ಗಮನಿಸಿ ವಿಚಾರಣಾ ನ್ಯಾಯಾಲಯ ಆರೋಪಿ ಪರ ತೀರ್ಪು ನೀಡಿತ್ತು.
ಜನ್ಮ ದಿನಾಂಕವನ್ನು ಉಲ್ಲೇಖಿಸಿದ ಬೇರೆ ದಾಖಲೆಗಳು ಇಲ್ಲದಿದ್ದಾಗ ಸಂತ್ರಸ್ತೆಯ ವಯಸ್ಸು ನಿರ್ಧಾರವನ್ನು ಆಧಾರ್ ಕಾರ್ಡ್ ನ್ನು ಅವಲಂಬಿಸಿದ್ದು ಸೂಕ್ತವಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
ಸಂತ್ರಸ್ತೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಆರೋಪಿಯನ್ನು ಮದುವೆಯಾಗುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣದ ದಾಖಲಿಸಲಾಗಿತ್ತು.
ಆದರೆ, ಪ್ರಕರಣ ಆರೋಪಿಯು ದೂರಿನಲ್ಲಿ ಹೇಳಿದಂತೆ ಅಪಹರಣ ಅಥವಾ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ಬಾಲಕಿ ನಿರಾಕರಿಸಿದ್ದಳು.