ಅಕ್ರಮ ಸಂಬಂಧದ ಮಗುವಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಅಧಿಕಾರ: ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ಮಹತ್ವದ ತೀರ್ಪು
ಅಕ್ರಮ ಸಂಬಂಧದ ಮಗುವಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಅಧಿಕಾರ: ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ಮಹತ್ವದ ತೀರ್ಪು
ವಿವಾಹೇತರ ಸಂಬಂಧ ಅಥವಾ ಅಕ್ರಮ ಸಂಬಂಧದ ಮೂಲಕ ಜನಿಸಿದ ಮಗುವಿಗೂ ಪೋಷಕರಿಗೆ ಸೇರಿದ ಎಲ್ಲ ಆಸ್ತಿಯಲ್ಲಿ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆ ಅನ್ವಯ ಇಂತಹ ಮಕ್ಕಳಿಗೂ ಆಸ್ತಿಯಲ್ಲಿ ಅಧಿಕಾರ ಇರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
2011ರ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಈ ಮೂಲಕ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅಕ್ರಮ ಸಂಬಂಧದ ಮಗುವಿಗೆ ಪೋಷಕರು ಸಂಪಾದಿಸಿದ ಆಸ್ತಿಯಲ್ಲಿ ಮಾತ್ರ ಹಕ್ಕು ಇದೆ. ಆದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ಈ ತೀರ್ಪಿನಿಂದಾಗಿ ಹೈಕೋರ್ಟ್ ತೀರ್ಪು ರದ್ದಾಗಿದೆ.
ಮಗುವಿಗೆ ತಂದೆ-ತಾಯಿ ಸಂಪಾದಿಸಿದ ಆಸ್ತಿಗಳ ಮೇಲೂ ಸಮಾನ ಹಕ್ಕು ಇರಲಿದೆ. ಈ ಅಧಿಕಾರ ಹಿಂದೂ ಉತ್ತರಾಧಿಕಾರ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ಮಗುವಿಗೆ ಲಭಿಸಲಿದೆ. ಮಗುವಿಗೆ ಕಾನೂನುಬದ್ಧ ಸ್ಥಾನಮಾನವನ್ನೇ ನೀಡಲಾಗುತ್ತದೆ ಎಂದು ತೀರ್ಪು ಹೇಳುತ್ತದೆ.
ಇದರೊಂದಿಗೆ ಅಕ್ರಮ ಸಂಬಂಧಕ್ಕೆ ಜನಿಸಿದ ಮಗುವಿನ ಆಸ್ತಿ ಹಕ್ಕು ಲಭಿಸುತ್ತದೆಯೇ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಸ್ಪಷ್ಟ ಉತ್ತರ ನೀಡಿದೆ.