ವಕೀಲರ ಸಂಘದ ಸರ್ಟಿಫಿಕೇಟ್‌ಗೆ ನ್ಯಾಯಾಂಗ ಪ್ರಾಧಿಕಾರದ ಸರ್ಟಿಫಿಕೇಟ್‌ನಷ್ಟೇ ಮಾನ್ಯತೆ
ವಕೀಲರ ಸಂಘದ ಸರ್ಟಿಫಿಕೇಟ್‌ಗೆ ನ್ಯಾಯಾಂಗ ಪ್ರಾಧಿಕಾರದ ಸರ್ಟಿಫಿಕೇಟ್‌ನಷ್ಟೇ ಮಾನ್ಯತೆ
ವಕೀಲರ ಸಂಘ ತನ್ನ ಸದಸ್ಯ ವಕೀಲರಿಗೆ ನೀಡುವ ವೃತ್ತಿ ಅನುಭವದ ಸರ್ಟಿಫಿಕೇಟ್‌ಗೆ ಯಾವುದೇ ನ್ಯಾಯಾಂಗ ಪ್ರಾಧಿಕಾರ ನೀಡುವ ಸರ್ಟಿಫಿಕೇಟ್‌ನಷ್ಟೇ ಮಾನ್ಯತೆ ಇದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಕೀಲರ ಸಂಘದ ವೃತ್ತಿ ಅನುಭವ ಕುರಿತ ಸರ್ಟಿಫಿಕೇಟ್ ಇದ್ದರೆ ಸಾಕು. ಇನ್ನು ಇದಕ್ಕೆ ಸಂಬಂಧಿಸಿದ ಬೇರೆ ಯಾವುದೇ ಸರ್ಟಿಫಿಕೇಟ್ ಅಗತ್ಯವಿಲ್ಲ. ಇದಕ್ಕೆ ನ್ಯಾಯಿಕ ಪ್ರಾಧಿಕಾರಗಳು ನೀಡುವ ಪ್ರಮಾಣಪತ್ರದಷ್ಟೇ ಮೌಲ್ಯ ಇದೆ ಎಂದು ನ್ಯಾ. ಸಂಜೀವ್ ಪ್ರಕಾಶ್ ಶರ್ಮಾ ಅವರಿದ್ದ ನ್ಯಾಯಪೀಠ ತೀರ್ಪು ನೀಡಿದೆ.
ವಕೀಲರು ತಾನು ಬಾರ್ ಕೌನ್ಸಿಲ್ ಸದಸ್ಯರಾಗಿ ನೋಂದಾಯಿಸಿಕೊಂಡ ಸಂದರ್ಭದಲ್ಲೇ ಅವರು ವಕೀಲರಾಗಿ ವೃತ್ತಿ ಆರಂಭಿಸಿದ್ದಾರೆ ಎಂದೇ ಅರ್ಥ. ವಕೀಲರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಆ ವಕೀಲರ ಸಂಘಗಳೇ ಸೂಕ್ತ ಸರ್ಟಿಫಿಕೇಟ್ ನೀಡಬಹುದು. ಅದನ್ನು ಹೊರತುಪಡಿಸಿ, ಅವರು ಕಾರ್ಯನಿರ್ವಹಿಸಿದ ನ್ಯಾಯಾಲಯಗಳು, ಇಲ್ಲವೇ ಸಕ್ಷಮ ನ್ಯಾಯಾಂಗ ಪ್ರಾಧಿಕಾರಿಗಳು ನೀಡಬಹುದಾಗಿದೆ.
ಆದರೆ, ಈ ಎಲ್ಲ ನ್ಯಾಯಾಲಯಗಳು ಇಲ್ಲವೇ ನ್ಯಾಯಿಕ ಪ್ರಾಧಿಕಾರಿಗಳು ನೀಡುವ ಸರ್ಟಿಫಿಕೇಟ್‌ಗಳಷ್ಟೇ ವಕೀಲರ ಸಂಘ ನೀಡುವ ಸರ್ಟಿಫಿಕೇಟ್ ಮೌಲ್ಯಯುತವಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಕೀಲರು ಕೋರ್ಟ್ ರೂಂ ಹೊರತಾಗಿಯೂ ಕಾರ್ಯನಿರ್ವಹಣೆ ಮಾಡಬಹುದು. ವೃತ್ತಿಪರರಾಗಿ ಅವರು ಆರ್ಬಿಟ್ರೇಷನ್, ನ್ಯಾಯಮಂಡಳಿ ಯಾ ಅಥವಾ ಇತರ ನ್ಯಾಯಿಕ ಪ್ರಾಧಿಕಾರದ ಮುಂದೆ ತಮ್ಮ ಕಕ್ಷಿದಾರರ ಪರವಾಗಿ ವಕೀಲ ವೃತ್ತಿ ನಡೆಸಬಹುದಾಗಿದೆ. ಇದನ್ನೂ ವೃತ್ತಿಯ ಅನುಭವ ಎಂದೇ ಪರಿಗಣಿಸಬಹುದಾಗಿದೆ.
ಕೋರ್ಟ್ ಕಲಾಪಕ್ಕೆ ಮಾತ್ರ ವಕೀಲರು ಸೀಮಿತವಾಗಿರಬೇಕಾಗಿಲ್ಲ. ಕೇವಲ ನ್ಯಾಯಾಲಯದ ಸರ್ಟಿಫಿಕೇಟ್ ನೀಡಬೇಕು ಎಂದು ಆಗ್ರಹಿಸುವುದು ವಕೀಲರನ್ನು ಕೋರ್ಟ್ ಕಲಾಪಕ್ಕೆ ಸೀಮಿತಗೊಳಿಸಿದಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಹಾಯಕ ಜಿಲ್ಲಾ ಅಟಾರ್ನಿ ಮತ್ತು ಹೆಚ್ಚುವರಿ ಜಿಲ್ಲಾ ಅಟಾರ್ನಿ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಿದ್ದ ಸಕ್ಷಮ ಪ್ರಾಧಿಕಾರ ವಕೀಲರಿಗೆ ವೃತ್ತಿ ಅನುಭವಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೇಟ್‌ನ್ನು ಕೋರಿತ್ತು. ಇದನ್ನು ನ್ಯಾಯಾಲಯದಿಂದಲೇ ಪಡೆದುಕೊಳ್ಳುವಂತೆ ಸೂಚಿಸಲಾಗಿತ್ತು. ಈ ಸೂಚನೆಯನ್ನು ಪ್ರಶ್ನಿಸಿ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ: ಜ್ಯೋತ್ಸ್ನಾ ರಾವತ್ ಮತ್ತು ಇತರರು Vs ಪಂಜಾಬ್ ಸರ್ಕಾರ ಮತ್ತು ಇತರರು