ಕೋರ್ಟ್ ರೂಮ್‌ನಲ್ಲಿ ಫೋನ್: ವಕೀಲರ ವರ್ತನೆಗೆ ಸಿಜೆಐ ಪ್ರತಿಕ್ರಿಯೆ ಹೇಗಿತ್ತು..?
ಕೋರ್ಟ್ ರೂಮ್‌ನಲ್ಲಿ ಫೋನ್: ವಕೀಲರ ವರ್ತನೆಗೆ ಸಿಜೆಐ ಪ್ರತಿಕ್ರಿಯೆ ಹೇಗಿತ್ತು..?
ಕೋರ್ಟ್ ರೂಮ್‌ನಲ್ಲಿ ಫೋನ್ ಬಳಕೆಗೆ ನಿರ್ಬಂಧವಿದೆ. ಇದು ಪ್ರಶಾಂತ ವಾತಾವರಣವನ್ನು ಕಲುಷಿತಗೊಳಿಸುತ್ತದೆ, ಸಮರ್ಪಕ ನ್ಯಾಯದಾನಕ್ಕೆ ಅಡ್ಡಿ ಉಂಟುಮಾಡುತ್ತದೆ. ಇದನ್ನು ವಕೀಲರು ಸಹಿತ ಕಕ್ಷಿದಾರರು, ನ್ಯಾಯಾಲಯ ಕಲಾಪದಲ್ಲಿ ಇರುವ ಎಲ್ಲರೂ ಪಾಲಿಸಬೇಕಾದ ನಿಯಮ.
ಆದರೆ, ಇದನ್ನು ಮೀರಿ ವಕೀಲರೇ ಫೋನ್ ಬಳಸಿದರೆ ಹೇಗೆ..? ಅದೂ ಸುಪ್ರೀಂ ಕೋರ್ಟ್‌ನ ನ್ಯಾಯಾಂಗಣದಲ್ಲಿ... ಇನ್ನು ಮುಂದುವರಿದು, ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಕಲಾಪದಲ್ಲೇ ಹೀಗಾದರೆ ಹೇಗೆ...?
ಇಂತಹ ಒಂದು ಪ್ರಸಂಗ ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಅವರ ಕೋರ್ಟ್ ಹಾಲ್‌ನಲ್ಲಿ ನಡೆಯಿತು. ಇದನ್ನು ಗಮನಿಸಿದ ಸಿಜೆಐ ನೀಡಿದ ಪ್ರತಿಕ್ರಿಯೆ ಹೀಗಿತ್ತು....
"ಇದೇನು ಸಂತೆಯೇ..? ನೀವು ಫೋನ್‌ನಲ್ಲಿ ಮಾತನಾಡುತ್ತಿದ್ದೀರಿ.." ಎಂದು ಹೇಳಿದ ಸಿಜೆಐ, ಸದ್ರಿ ವಕೀಲರ ಮೊಬೈಲ್ ಅನ್ನು ವಶಪಡಿಸಿಕೊಳ್ಳುವಂತೆ ನ್ಯಾಯಾಲಯದ ಸಿಬ್ಬಂದಿಗೆ ಆದೇಶ ನೀಡಿದರು.
ಕೋರ್ಟ್ ರೂಮ್‌ನಲ್ಲಿ ತಮಗೆ ಬಂದಿದ್ದ ಫೋನ್ ಕರೆಯನ್ನು ಸ್ವೀಕರಿಸಿ ಮಾತನಾಡಿದ ವಕೀಲರ ವರ್ತನೆಯಿಂದ ವಿಚಾರಣೆ ಕೆಲ ಕಾಲ ಸ್ಥಗಿತಗೊಂಡಿತು. ಇದರಿಂದ ಕೆಂಡಾಮಂಡಲರಾದ ಸಿಜೆಐ, ನಾವು ದಾಖಲೆಗಳನ್ನು ನೋಡುತ್ತಿದ್ದರೂ ನಮ್ಮ ಕಣ್ಣುಗಳು ಎಲ್ಲೆಡೆಯೂ ಇರುತ್ತವೆ ಎಂದು ಹೇಳಿದರು.
ಭವಿಷ್ಯದಲ್ಲಿ ಎಚ್ಚರಿಕೆಯಿಂದ ಇರಿ. ನ್ಯಾಯಾಧೀಶರು ಎಲ್ಲರನ್ನೂ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂಬುದನ್ನು ನೆನಪಿಡಿ ಎಂದು ವಕೀಲರಿಗೆ ಸ್ಪಷ್ಟವಾಗಿ ಹೇಳಿ, ಎಲ್ಲರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದರು.
ಸಿಜೆಐ ಜೊತೆಗೆ ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠದಲ್ಲಿ ಈ ಘಟನೆ ನಡೆಯಿತು.