ದೂರವಾಣಿಯಲ್ಲಿ ಪೊಲೀಸರನ್ನು ನಿಂದಿಸಿದರೆ ಅದು ಅಶ್ಲೀಲತೆಯ ಅಪರಾಧವಲ್ಲ: ಹೈಕೋರ್ಟ್
ದೂರವಾಣಿಯಲ್ಲಿ ಪೊಲೀಸರನ್ನು ನಿಂದಿಸಿದರೆ ಅದು ಅಶ್ಲೀಲತೆಯ ಅಪರಾಧವಲ್ಲ: ಹೈಕೋರ್ಟ್
ಫೋನ್ ಮೂಲಕ ಪೊಲೀಸರಿಗೆ ಕರೆ ಮಾಡಿ ನಿಂದನೀಯ ಪದ ಬಳಕೆ ಮಾಡಿದರೆ ಅದು ಭಾರತೀಯ ದಂಡ ಸಂಹಿತೆಯ ಕಲಂ 294(b) ಅಡಿ ಅಶ್ಲೀಲತೆಯ ಅಪರಾಧವಾಗದು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ರಮ್ಲಾ ಕಬೀರ್ Vs ಕೇರಳ ರಾಜ್ಯ ಪ್ರಕರಣವನ್ನು ಇತ್ಯರ್ಥ ಮಾಡಿದ ಕೇರಳ ಹೈಕೋರ್ಟ್‌ನ ನ್ಯಾ. ಪಿ.ವಿ. ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದ್ದು, 51 ವರ್ಷದ ಮಹಿಳೆಯೊಬ್ಬರ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ.
ಅಳಪ್ಪುಳ ಉತ್ತರ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಮಹಿಳೆ ದೂರವಾಣಿ ಮೂಲಕ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬುದು ಪ್ರಕರಣದಲ್ಲಿ ಮಾಡಲಾದ ಆರೋಪ. ಆರೋಪಪಟ್ಟಿಯಲ್ಲಿ ನಡೆದಿದೆ ಎನ್ನಲಾದ ಘಟನೆಯನ್ನು ಒಪ್ಪಿಕೊಂಡರೂ ಆರೋಪಿತ ಮಹಿಳೆ ಭಾರತೀಯ ದಂಡ ಸಂಹಿತೆಯ ಕಲಂ 294(b) ಅಡಿ ಯಾವುದೇ ಅಪರಾಧ ಮಾಡಿಲ್ಲ ಎನ್ನಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿ ಆಪಾದಿತ ಮಹಿಳೆ ಮೂರು ಬಾರಿ ಪೊಲೀಸ್ ಠಾಣೆಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದೆ. ಐಪಿಸಿ ಸೆಕ್ಷನ್ 294(b) ಅಡಿಯಲ್ಲಿ ಮಹಿಳೆ ರಮ್ಲ ಕಬೀರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಜೇಮ್ಸ್ Vs ಕೇರಳ ರಾಜ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಮಹಿಳೆ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದು ಹೇಗೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.
ಆರೋಪಿತ ಮಹಿಳೆಯು ಪೊಲೀಸರ ವಿರುದ್ಧ ನೀಡಲಾದ ದೂರಿಗೆ ಪ್ರತಿಯಾಗಿ ಮಹಿಳೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂಬುದಾಗಿ ನ್ಯಾಯಪೀಠ ಅನುಮಾನ ವ್ಯಕ್ತಪಡಿಸಿತು.