2024ರ ಕ್ಯಾಲೆಂಡರ್ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್: ಯಾವ ಹಬ್ಬ, ವಿಶೇಷ ದಿನಗಳಿಗೆ ರಜೆ ಗೊತ್ತೇ..?
2024ರ ಕ್ಯಾಲೆಂಡರ್ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್: ಯಾವ ಹಬ್ಬ, ವಿಶೇಷ ದಿನಗಳಿಗೆ ರಜೆ ಗೊತ್ತೇ..?
2024 ನೆಯ ಇಸವಿಯ ಕ್ಯಾಲೆಂಡರ್ ಅನ್ನು ಪ್ರಕಟಿಸಿದ ಕರ್ನಾಟಕ ಹೈಕೋರ್ಟ್*
ಮಾನ್ಯ ಕರ್ನಾಟಕ ಹೈಕೋರ್ಟ್ 2024ನೇ ಇಸವಿಯ ಕ್ಯಾಲೆಂಡರ್ ಅನ್ನು ಪ್ರಕಟಿಸಿದ್ದು ಸಾರ್ವತ್ರಿಕ ರಜಾ ದಿನಗಳ ಕುರಿತು ರಾಜ್ಯ ಸರಕಾರವು ಪ್ರಕಟಿಸಿದ ಕ್ಯಾಲೆಂಡರ್ ಹಾಗೂ ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ ಕ್ಯಾಲೆಂಡರ್ ಅವಲೋಕಿಸಿದಾಗ ಕರ್ನಾಟಕ ಹೈಕೋರ್ಟ್ ಈ ಕೆಳಗಿನ ಹಬ್ಬಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
1. ರಾಮನವಮಿ ಹಬ್ಬ (17.4.2024)
2. ವರಮಹಾಲಕ್ಷ್ಮಿ ವೃತ (16.8.2024)
3.ಶ್ರೀ ಕೃಷ್ಣ ಜನ್ಮಾಷ್ಟಮಿ
(26.8.2024)
4. ಸ್ವರ್ಣ ಗೌರಿ ವೃತ (6.9.2024)
ಮೇಲ್ಕಾಣಿಸಿದ ಹಬ್ಬಗಳ ಜೊತೆಗೆ ದಿನಾಂಕ 1.1.2024, 12.4.2024 ಮತ್ತು 18.10.2024 ಈ ಮೂರು ದಿನಗಳನ್ನು ಸಾರ್ವತ್ರಿಕ ರಜಾ ದಿನಗಳೆಂದು ಘೋಷಿಸಲಾಗಿದೆ.
ಮೇಲ್ಕಾಣಿಸಿದ 7 ದಿನಗಳಂದು ರಾಜ್ಯ ಸರಕಾರವು ಸಾರ್ವತ್ರಿಕ ರಜೆಯನ್ನು ಘೋಷಿಸಿಲ್ಲ.
ಮೇಲ್ಕಾಣಿಸಿದ ಏಳು ದಿನಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿರುವುದರಿಂದ ಸದರಿ ಏಳು ರಜಾ ದಿನಗಳನ್ನು ಸರಿದೂಗಿಸಲು ಜನವರಿ, ಮಾರ್ಚ್, ಏಪ್ರಿಲ್, ಜೂನ್, ಅಗಸ್ಟ್, ಅಕ್ಟೋಬರ್ ಮತ್ತು ನವಂಬರ್ ತಿಂಗಳ ನಾಲ್ಕನೆಯ ಶನಿವಾರದಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕಲಾಪಗಳು ನಡೆಯಲಿವೆ.
ಕೈಲ್ ಮುಹೂರ್ತ (3.9.2024) ತುಲಾ ಸಂಕ್ರಮಣ (17.10.2024) ಮತ್ತು ಹುತ್ತರಿ ಹಬ್ಬ (4.12.2024) ಈ ಮೂರು ದಿನಗಳಂದು ಕೊಡಗು ಜಿಲ್ಲೆಯ ನ್ಯಾಯಾಲಯಗಳಿಗೆ ಸ್ಥಳೀಯ ರಜೆಯನ್ನು ಘೋಷಿಸಲಾಗಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿ (ಮೊಸರು ಕುಡಿಕೆ) ಹಬ್ಬವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಉಭಯ ಜಿಲ್ಲೆಗಳ ಸರಕಾರಿ ನೌಕರರಿಗೆ ಸ್ಥಳೀಯವಾಗಿ ಸಾರ್ವತ್ರಿಕ ರಜೆಯನ್ನು ಘೋಷಿಸಬೇಕೆಂದು ಮಾಡಿದ ಮನವಿಗೆ ರಾಜ್ಯ ಸರಕಾರ ಇದುವರೆಗೂ ಸ್ಪಂದಿಸದಿದ್ದರೂ ಇದೀಗ ಹೈಕೋರ್ಟ್ ಸಾರ್ವತ್ರಿಕ ರಜೆಯನ್ನು ಘೋಷಿಸಿದ್ದು ಉಭಯ ಜಿಲ್ಲೆಗಳ ನ್ಯಾಯಾಂಗ ನೌಕರರಿಗೆ ಸಂತಸವನ್ನುಂಟು ಮಾಡಿದೆ.
ಹಾಗೆ ವರಮಹಾಲಕ್ಷ್ಮಿ ವೃತ ಮತ್ತು ಸ್ವರ್ಣ ಗೌರಿ ವೃತ ಆಚರಣೆಗಾಗಿ ಸಾರ್ವತ್ರಿಕ ರಜೆಯನ್ನು ಘೋಷಿಸುವ ಮೂಲಕ ರಾಜ್ಯದ ನ್ಯಾಯಾಂಗ ಇಲಾಖೆಯ ಮಹಿಳಾ ನೌಕರರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ.
ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಹಬ್ಬಗಳು ಭಾನುವಾರ ಬರುವುದರಿಂದ ಹಾಗೂ ವಿಜಯ ದಶಮಿ ಹಬ್ಬ ಎರಡನೇ ಶನಿವಾರದಂದು ಬರುವುದರಿಂದ ಸದರಿ ಮೂರು ದಿನಗಳ ರಜೆ ನಷ್ಟವಾಗಿದೆ.
ರಾಜ್ಯದ ಎಲ್ಲಾ ಸಿವಿಲ್ ನ್ಯಾಯಾಲಯಗಳಿಗೆ ಹಾಗೂ ಕೌಟುಂಬಿಕ ನ್ಯಾಯಾಲಯಗಳಿಗೆ ಈ ಕೆಳಗಿನ ಅವಧಿಯಲ್ಲಿ ಬೇಸಿಗೆ ರಜೆ, ದಸರಾ ರಜೆ ಹಾಗೂ ಚಳಿಗಾಲದ ರಜೆಗಳನ್ನು ಘೋಷಿಸಲಾಗಿದೆ.
ಬೇಸಿಗೆ ರಜೆ - 29.4.2024 ರಿಂದ 25.5.2024
ದಸರಾ ರಜೆ - 3.10.2024 ರಿಂದ 10.10.2024
ಚಳಿಗಾಲದ ರಜೆ - 21.12.2024 ರಿಂದ 31.12.2024
ರಾಜ್ಯದ ಕ್ರಿಮಿನಲ್ ನ್ಯಾಯಾಲಯಗಳು ಹಾಗೂ ಕಾರ್ಮಿಕ ನ್ಯಾಯಾಲಯಗಳು ಮೇಲ್ಕಾಣಿಸಿದ ರಜಾ ಅವಧಿಯಲ್ಲಿ ಕಾರ್ಯನಿರ್ವಹಿಸಲಿವೆ.
ದಿನಾಂಕ 1.1.2025 ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ನ್ಯಾಯಾಲಯ ಸಂಕೀರ್ಣ, ಮಂಗಳೂರು