ಮಹಿಳಾ ವಕೀಲರ ಕಚೇರಿಗೆ ಆದಾಯ ತೆರಿಗೆ ದಾಳಿ: ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದ ಹೈಕೋರ್ಟ್
ಮಹಿಳಾ ವಕೀಲರ ಕಚೇರಿಗೆ ಆದಾಯ ತೆರಿಗೆ ದಾಳಿ: ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದ ಹೈಕೋರ್ಟ್
ಮಹಿಳಾ ವಕೀಲರ ಕಚೇರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಗೆ ಗುಜರಾತ್ ಹೈಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದೆ. ಇದು ವಕೀಲರ ವೈಯಕ್ತಿಕ ಖಾಸಗಿತನದ ಮೇಲೆ ನಡೆದ ದಾಳಿಯಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನ್ಯಾ. ಭಾರ್ಗವ್ ಕರಿಯಾ ಮತ್ತು ನ್ಯಾ. ನೀರಲ್ ಮೆಹ್ತಾ ಅವರಿದ್ದ ಗುಜರಾತ್ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಒಬ್ಬ ವ್ಯಕ್ತಿಯ ವಿರುದ್ಧ ಯಾವುದೇ ಪ್ರಕರಣವನ್ನು ವಿಚಾರಣೆ ನಡೆಸುವಾಗ ತನಿಖಾ ಸಂಸ್ಥೆಗಳು ಆ ವ್ಯಕ್ತಿಯ ಖಾಸಗಿತನಕ್ಕೆ ಗೌರವ ನೀಡಬೇಕು. ವೈಯಕ್ತಿಕ ಖಾಸಗಿತನವನ್ನು ರಕ್ಷಿಸುವ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ.
ಮಹಿಳಾ ವಕೀಲರ ಮನೆ ಹಾಗೂ ಕಚೇರಿ ಮೇಲೆ ಅಹ್ಮದಾಬಾದ್ ಆದಾಯ ತೆರಿಗೆ ಅಧಿಕಾರಿಗಳು ಮುಂಜಾನೆ ದಾಳಿ ನಡೆಸಿದ ಔಚಿತ್ಯವನ್ನು ನ್ಯಾಯಪೀಠ ಪ್ರಶ್ನಿಸಿತು.
"ನೀವು ಮುಂಜಾನೆ ಮಹಿಳಾ ವಕೀಲರ ಮನೆಗೆ ಭೇಟಿ ನೀಡಿ ಮತ್ತು ವಕೀಲರು ಮತ್ತು ಅವರ ಕುಟುಂಬ ಸದಸ್ಯರ ಸಾಧನಗಳನ್ನು ಹೇಗೆ ವಶಪಡಿಸಿಕೊಳ್ಳಬಹುದು? ಇದು ಅವರ ಗೌಪ್ಯತೆಯನ್ನು ಉಲ್ಲಂಘಿಸುವುದಿಲ್ಲವೇ?" ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು.
ಬೆಳ್ಳಂಬೆಳಗ್ಗೆ ವಕೀಲರ ನಿವಾಸದ ಮೇಲೆ ನಡೆದ ದಾಳಿಯ 'ಕಾನೂನು ಸಮರ್ಥನೆ'ಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಅವರು ಹುಡುಕುತ್ತಿರುವ ದಾಖಲೆಯು "ಸೂಕ್ಷ್ಮ" ಎಂಬ ಐಟಿ ಇಲಾಖೆ ಹೇಳಿಕೆಗೆ ವಿವರಣೆ ಬಯಸಿದೆ.
ಐಟಿ ದಾಳಿ ನಡೆಸಿದ ರೀತಿಯ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದ್ದು, ವಕೀಲರ ಕಚೇರಿಯಿಂದ ಮೂರನೇ ವ್ಯಕ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿವುದನ್ನು ಆಕ್ಷೇಪಿಸಿದೆ.