-->
ಸೇವೆಯ ಕಾರ್ಯವಿಧಾನ ಕುರಿತು ಸರಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಅಧಿಕಾರ ವ್ಯಾಪ್ತಿ ಲೋಕಾಯುಕ್ತರಿಗಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸೇವೆಯ ಕಾರ್ಯವಿಧಾನ ಕುರಿತು ಸರಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಅಧಿಕಾರ ವ್ಯಾಪ್ತಿ ಲೋಕಾಯುಕ್ತರಿಗಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸೇವೆಯ ಕಾರ್ಯವಿಧಾನ ಕುರಿತು ಸರಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಅಧಿಕಾರ ವ್ಯಾಪ್ತಿ ಲೋಕಾಯುಕ್ತರಿಗಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು





ಸರಕಾರಿ ಅಧಿಕಾರಿಗಳಿಗೆ ತಮ್ಮ ಸೇವೆಯ ಕಾರ್ಯವಿಧಾನದ ಕುರಿತು ಯಾವುದೇ ನಿರ್ದೇಶನ ನೀಡುವ ಅಧಿಕಾರ ವ್ಯಾಪ್ತಿ ಲೋಕಾಯುಕ್ತರಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ಸಂಸ್ಥೆಗಳು ಸರಕಾರದ ಸಂಬಂಧ ಪಟ್ಟ ಪ್ರಾಧಿಕಾರಕ್ಕೆ ಕೇವಲ ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದ್ದು ಸರಕಾರಿ ಅಧಿಕಾರಿಗಳಿಗೆ ಯಾವುದೇ ಸಕಾರಾತ್ಮಕ ನಿರ್ದೇಶನವನ್ನು ನೀಡುವ ಅಧಿಕಾರ ವ್ಯಾಪ್ತಿ ಹೊಂದಿಲ್ಲ ಎಂಬುದಾಗಿ ಮಾನ್ಯ ಸುಪ್ರೀಂಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ರಾಜೇಶ್ ಬಿಂದಾಲ್ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠವು ಹೆಚ್ಚುವರಿ ತಹಶೀಲ್ದಾರರು ಮತ್ತೊಬ್ಬರು ವಿರುದ್ಧ ಊರ್ಮಿಳಾ ಜಿ. ಮತ್ತಿತರರು ಈ ಪ್ರಕರಣದಲ್ಲಿ ದಿನಾಂಕ 4.12.2023 ರಂದು ಮಹತ್ವದ ತೀರ್ಪು ನೀಡಿದೆ.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.


ಕೇರಳ ರಾಜ್ಯದ ವರ್ಕಳದ ಸರ್ವೆ ನಂಬರ್ 584 ರಲ್ಲಿ ದಿವಂಗತ ಕೆ. ಗೋಪಾಲಕೃಷ್ಣ ನಾಯರ್ ಅವರ ಒಡೆತನದ ಆಸ್ತಿಗೆ ಸಂಬಂಧಿಸಿದಂತೆ ಅವರ ನ್ಯಾಯಯುತ ವಾರಿಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡುವಂತೆ ಹಾಗೂ ಕಂದಾಯ ದಾಖಲೆಗಳಲ್ಲಿ ಸದರಿ ಜಮೀನಿನ ವಿಸ್ತೀರ್ಣದ ಕುರಿತಾದ ದೋಷವನ್ನು ಸರಿಪಡಿಸುವಂತೆ ಕೋರಿ ಮೃತರ ವಾರಿಸುದಾರರಾದ ಶ್ರೀಮತಿ ಊರ್ಮಿಳಾ ಜಿ. ಮತ್ತಿತರರು ವರ್ಕಳದ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದರು. ಸದರಿ ಅರ್ಜಿಯನ್ನು ತಿರಸ್ಕರಿಸಿ ದಿನಾಂಕ 19 4 20 16 ರಂದು ಹೆಚ್ಚುವರಿ ತಹಶೀಲ್ದಾರರು ಆದೇಶ ಹೊರಡಿಸಿದರು.


ಸದರಿ ಆದೇಶದ ವಿರುದ್ಧ ನಿಯಮಾನುಸಾರ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಬಾಧಿತ ಅರ್ಜಿದಾರರು ಮೇಲ್ಮನವಿ ಸಲ್ಲಿಸಲಿಲ್ಲ. ಬದಲಿಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ಉಪ ಲೋಕಾಯುಕ್ತರು ದಿನಾಂಕ 18.10.2016 ರ ರಹಸ್ಯ ಆದೇಶ ಪ್ರಕಾರ ಕಂದಾಯ ದಾಖಲೆಗಳಲ್ಲಿನ ತಪ್ಪನ್ನು ಸರಿಪಡಿಸಲು ಮತ್ತು ದೂರುದಾರರಿಂದ ತೆರಿಗೆಯನ್ನು ಸ್ವೀಕರಿಸಲು ತಹಶೀಲ್ದಾರರು ವರ್ಕಳ ಅವರಿಗೆ ಸೂಚಿಸಿದರು. ಆದೇಶವನ್ನು ಒಂದು ತಿಂಗಳೊಳಗೆ ಸಕಾರಾತ್ಮಕವಾಗಿ ಪಾಲನೆ ಮಾಡಬೇಕು ಹಾಗೂ ಪಾಲನಾ ವರದಿಯನ್ನು ದಿನಾಂಕ 16.11.2016 ರೊಳಗೆ ಸಲ್ಲಿಸಬೇಕು ಎಂದು ಆದೇಶಿಸಿದರು.


ಸದರಿ ಆದೇಶದಿಂದ ಭಾದಿತರಾದ ವರ್ಕಳದ ಹೆಚ್ಚುವರಿ ತಹಶೀಲ್ದಾರರು ಕೇರಳ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿತು.

ಕೇರಳ ಹೈಕೋರ್ಟಿನ ಆದೇಶದಿಂದ ಬಾಧಿತರಾದ ವರ್ಕಳದ ಹೆಚ್ಚುವರಿ ತಹಶೀಲ್ದಾರರು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿದಾರರ ಪರ ಈ ಕೆಳಗಿನ ವಾದ ಮಂಡಿಸಲಾಯಿತು.


ಉಪ ಲೋಕಾಯುಕ್ತರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆದೇಶ ಹೊರಡಿಸಿದ್ದಾರೆ. ಕಂದಾಯ ದಾಖಲೆಗಳನ್ನು ಸರಿಪಡಿಸಲು ಮತ್ತು ತೆರಿಗೆಯನ್ನು ಸ್ವೀಕರಿಸಲು 1961ರ ಕಾಯ್ದೆ 7 ಮತ್ತು 1964ರ ನಿಯಮಗಳ ಅಡಿಯಲ್ಲಿ ಶಾಸನಬದ್ಧ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಲೋಕಾಯುಕ್ತವು ಮೇಲೆ ಹೇಳಿದ ಕಾಯ್ದೆಗಳ ಅಡಿ ಶಾಸನಬದ್ಧ ಅಧಿಕಾರಿಗಳ ಮೇಲಿರುವ ಮೇಲ್ವಿಚಾರಣಾ ಸಂಸ್ಥೆಯಲ್ಲ.


ಲೋಕಾಯುಕ್ತರಿಗೆ ನೀಡಲಾದ ಅಧಿಕಾರ ವ್ಯಾಪ್ತಿಯು ಭ್ರಷ್ಟಾಚಾರದ ಸಮಸ್ಯೆಯನ್ನು ಪರಿಹರಿಸಲು ಮಾತ್ರ. ಆದರೆ ತನ್ನ ಆದೇಶದಲ್ಲಿ ಆ ಸಮಸ್ಯೆಯನ್ನು ಪರಿಹರಿಸದೆ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಅರ್ಹತೆಯ ಮೇಲೆ ವ್ಯವಹರಿಸಲು ಮತ್ತು ಕಂದಾಯ ದಾಖಲೆಗಳ ತಿದ್ದುಪಡಿಗೆ ಸಕಾರಾತ್ಮಕ ನಿರ್ದೇಶನಗಳನ್ನು ನೀಡಿರುವುದು ಕಾನೂನಿನಡಿ ಊರ್ಜಿತವಲ್ಲ.


ಕೇರಳ ಲೋಕಾಯುಕ್ತ ಕಾಯಿದೆ 1999ರ ಸೆಕ್ಷನ್ 12 ಲೋಕಾಯುಕ್ತರ ವರದಿಗಳಿಗೆ ಸಂಬಂಧಿಸಿದೆ. ದೂರುದಾರರಿಗೆ ಅನ್ಯಾಯ ಅಥವಾ ಅನಗತ್ಯ ತೊಂದರೆ ಆಗಿದೆ ಎಂಬ ನಿಷ್ಕರ್ಷಗೆ ಲೋಕಾಯುಕ್ತವು ಬಂದಲ್ಲಿ ಅಂತಹ ಅನ್ಯಾಯ ಅಥವಾ ತೊಂದರೆಯನ್ನು ನಿವಾರಿಸಲು ಲಿಖಿತ ವರದಿಯ ಮೂಲಕ ಲೋಕಾಯುಕ್ತವು ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡತಕ್ಕದ್ದಾಗಿದೆ. ವರ್ಕಳದ ಹೆಚ್ಚುವರಿ ತಹಸಿಲ್ದಾರರ ಆದೇಶದಿಂದ ಬಾಧಿತರಾದ ದೂರುದಾರರು ಕಂದಾಯ ದಾಖಲೆಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಶಾಸನಬದ್ಧ ಪರಿಹಾರಗಳನ್ನು ಪಡೆದಿಲ್ಲ. ಬದಲಿಗೆ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಯಾವುದೇ ಅಧಿಕಾರ ವ್ಯಾಪ್ತಿ ಹೊಂದಿರದ ಲೋಕಾಯುಕ್ತ ಸಂಸ್ಥೆಗೆ ನೀಡಿರುವ ದೂರು ಕಾನೂನಿನಡಿ ಊರ್ಜಿತವಲ್ಲ.


ಪ್ರತ್ಯರ್ಜಿದಾರರು/ ದೂರುದಾರರಿಗೆ ಮೇಲ್ಮನವಿಯ ಸೂಚನಾ ಪತ್ರ ಜಾರಿಯಾದರೂ ಅವರ ಪರವಾಗಿ ಯಾರೂ ಹಾಜರಾಗಲಿಲ್ಲ. ಕಂದಾಯ ದಾಖಲೆಗಳಲ್ಲಿನ ತಪ್ಪನ್ನು ಸರಿಪಡಿಸುವಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ದುರಾಡಳಿತಕ್ಕೆ ಸಮಾನವಾಗಿದ್ದು ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುವ ಅಧಿಕಾರ ವ್ಯಾಪ್ತಿ ಹೊಂದಿದೆ. ಕಂದಾಯ ದಾಖಲೆಗಳಲ್ಲಿನ ದೋಷಗಳನ್ನು ಸರಿಪಡಿಸುವ ಸಲುವಾಗಿ ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒದಗಿಸಿದ್ದರೂ ಕಂದಾಯ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿರುವುದು ದುರಾಡಳಿತ ವ್ಯಾಪ್ತಿಗೆ ಬರುತ್ತದೆ. ಆದುದರಿಂದ ಉಪಲೋಕಾಯುಕ್ತರು ನೀಡಿರುವ ನಿರ್ದೇಶನ ಕಾನೂನಿನಡಿ ಮಾನ್ಯತೆ ಪಡೆದಿದೆ ಎಂಬುದು ಪ್ರತ್ಯರ್ಜಿದಾರರ ನಿಲುವಾಗಿತ್ತು.


ಮೇಲ್ಮನವಿದಾರರ ಪರ ವಕೀಲರು ಮಂಡಿಸಿದ ವಾದ ಹಾಗೂ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯ ಪೀಠವು ಈ ಕೆಳಗಿನ ಅಭಿಪ್ರಾಯವನ್ನು ವ್ಯಕ್ತಪಡಿಸಿತು.


ಅರ್ಜಿದಾರರ ಮನವಿಯನ್ನು ಹೆಚ್ಚುವರಿ ತಹಶೀಲ್ದಾರರು ತಿರಸ್ಕರಿಸಿದ ಬಳಿಕ ಶಾಸನಬದ್ಧವಾಗಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳನ್ನು ಅರ್ಜಿದಾರರು ಕೈಗೊಂಡ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ವಿವಿಧ ಕಾಯ್ದೆಗಳ ಅಡಿ ರಚಿಸಲಾದ ಸಕ್ಷಮ ಪ್ರಾಧಿಕಾರದ ಮೇಲೆ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಮೇಲ್ವಿಚಾರಣಾ ಸಂಸ್ಥೆಯಲ್ಲ. ಏಕೆಂದರೆ ಆ ಪ್ರತಿಯೊಂದು ಕಾಯ್ದೆಗಳು ಮೇಲ್ಮನವಿ, ಪುನರಾವಲೋಕನ ಮುಂತಾದ ತಮ್ಮದೇ ಆದ ಪರಿಹಾರ ಕ್ರಮಗಳನ್ನು ಒದಗಿಸುತ್ತವೆ. ಪಕ್ಷಕಾರರು ಶಾಸನಬದ್ಧ ಕ್ರಮಗಳನ್ನು ಅನುಸರಿಸಬೇಕು. 1999 ರ ಕಾಯ್ದೆಯು ಸದರಿ ಕಾರ್ಯವಿಧಾನಗಳನ್ನು ಅತಿಕ್ರಮಿಸಲು ಉದ್ದೇಶಿಸಿಲ್ಲ. ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಶೀಲಿಸಿದ ಪೀಠವು ಆಸ್ತಿಯ ಕುರಿತು ಕಂದಾಯ ದಾಖಲೆಗಳಲ್ಲಿನ ದೋಷವನ್ನು ಸರಿಪಡಿಸುವ ಬಗ್ಗೆ ಬಾಧಿತ ಅರ್ಜಿದಾರರು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರು ಎಂಬುದನ್ನು ಗಮನಿಸಿತು.


ಲೋಕಾಯುಕ್ತರ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಸುಧಾ ದೇವಿ ಕೆ. ವಿರುದ್ಧ ಜಿಲ್ಲಾಧಿಕಾರಿ ಈ ಪ್ರಕರಣದಲ್ಲಿ ಲೋಕಾಯುಕ್ತವು ತನ್ನ ಶಿಫಾರಸುಗಳೊಂದಿಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ವರದಿಯನ್ನು ಮಾತ್ರ ಸಲ್ಲಿಸಬಹುದು. ಯಾವುದೇ ಧನಾತ್ಮಕ ಆದೇಶ ನೀಡಲು ಅಧಿಕಾರ ವ್ಯಾಪ್ತಿ ಹೊಂದಿಲ್ಲ ಎಂಬ ಕೇರಳ ಹೈಕೋರ್ಟಿನ ವಿಭಾಗೀಯ ನ್ಯಾಯಪೀಠದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠವು ಗಮನಿಸಿತು.


ಜಿಲ್ಲಾಧಿಕಾರಿ ಮತ್ತೊಬ್ಬರು ವಿರುದ್ಧ ಕೇರಳ ಲೋಕಾಯುಕ್ತರು ಮತ್ತಿತರರು ಈ ಪ್ರಕರಣದಲ್ಲಿ ಕೇರಳ ಹೈಕೋರ್ಟಿನ ವಿಭಾಗೀಯ ಪೀಠವು ಸುಧಾದೇವಿ ಕೆ. ಪ್ರಕರಣದಲ್ಲಿ ಕೇರಳ ಹೈಕೋರ್ಟ್ ತಳೆದ ನಿಲುವನ್ನು ಅನುಸಮರ್ಥಿಸಿತು. ಸದರಿ ಪ್ರಕರಣಗಳಲ್ಲಿ ದೂರುದಾರರು ಶಾಸನಬದ್ಧ ಪರಿಹಾರಗಳನ್ನು ಪಡೆದಿಲ್ಲ. ಶಾಸನಬದ್ಧ ಪರಿಹಾರ ಒದಗಿಸುವ ಸಂಸ್ಥೆಗಳನ್ನು ಆಶ್ರಯಿಸುವ ಬದಲು ಲೋಕಾಯುಕ್ತಕ್ಕೆ ದೂರು ನೀಡಿರುವುದು ಹಾಗೂ ಲೋಕಾಯುಕ್ತರು ಹೊರಡಿಸಿದ ಆದೇಶ ಕಾನೂನಿನಡಿ ಊರ್ಜಿತವಲ್ಲ ಎಂಬ ಅಭಿಪ್ರಾಯವನ್ನು ನ್ಯಾಯ ಪೀಠವು ವ್ಯಕ್ತಪಡಿಸಿತು.


ಫಲಿತಾಂಶವಾಗಿ ವರ್ಕಳದ ಹೆಚ್ಚುವರಿ ತಹಸಿಲ್ದಾರರು ಸಲ್ಲಿಸಿದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಪುರಸ್ಕರಿಸಿತು. ಕಂದಾಯ ದಾಖಲೆಗಳಲ್ಲಿನ ತಪ್ಪನ್ನು ಸರಿಪಡಿಸಲು ಮತ್ತು ದೂರುದಾರರಿಂದ ತೆರಿಗೆಯನ್ನು ಸ್ವೀಕರಿಸಲು ವರ್ಕಳದ ತಹಶೀಲ್ದಾರರಿಗೆ ಉಪಲೋಕಾಯುಕ್ತರು ನೀಡಿದ ನಿರ್ದೇಶನ ಹಾಗೂ ಅದನ್ನು ಸಮರ್ಥಿಸಿದ ಕೇರಳ ಹೈಕೋರ್ಟಿನ ಆದೇಶಗಳನ್ನು ರದ್ದುಪಡಿಸಿತು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ನ್ಯಾಯಾಲಯ ಸಂಕೀರ್ಣ, ಮಂಗಳೂರು




Ads on article

Advertise in articles 1

advertising articles 2

Advertise under the article