-->
ಗ್ರಾಹಕರಿಗೆ ನಿರಂಕುಶ ಬಡ್ಡಿದರ ವಿಧಿಸಲು ಅನುಮತಿ ಇದೆ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ಗ್ರಾಹಕರಿಗೆ ನಿರಂಕುಶ ಬಡ್ಡಿದರ ವಿಧಿಸಲು ಅನುಮತಿ ಇದೆ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ಗ್ರಾಹಕರಿಗೆ ನಿರಂಕುಶ ಬಡ್ಡಿದರ ವಿಧಿಸಲು ಅನುಮತಿ ಇದೆ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು





ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ ಮಾರ್ಗಸೂಚಿಗಳ ಹೊರತಾಗಿಯೂ, ಬ್ಯಾಂಕುಗಳು ತಮ್ಮ ಗ್ರಾಹಕರ ಮೇಲೆ ನಿರಂಕುಶವಾಗಿ ಹೆಚ್ಚಿನ ಬಡ್ಡಿದರಗಳನ್ನು ವಿಧಿಸಲು ಅನುಮತಿ ಇದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


"ಮನ್‌ಮೀತ್ ಸಿಂಗ್ Vs ಭಾರತ ಸರ್ಕಾರ ಮತ್ತಿತರರು" ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಮಹೇಶ್ ಚಂದ್ರ ತ್ರಿಪಾಠಿ ಮತ್ತು ನ್ಯಾ ಪ್ರಶಾಂತ್ ಕುಮಾರ್ ಅವರು ಈ ತೀರ್ಪು ನೀಡಿದ್ದಾರೆ.


ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ವಿಧಿಸುವ ಬಡ್ಡಿ ದರದ ಮೇಲೆ RBIಗೆ ಮಾತ್ರ ನಿಯಂತ್ರಣ ಇದೆ. ಅದರಲ್ಲಿ ಮಧ್ಯಪ್ರವೇಶ ಮಾಡಲು ನ್ಯಾಯಾಂಗಕ್ಕೆ ಸಾಧ್ಯವಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.


ಬ್ಯಾಂಕ್‌ಗಳು ವಿಧಿಸುವ ಮತ್ತು ವಿಧಿಸಬಹುದಾದ ಬಡ್ಡಿ ದರಗಳ ಬಗ್ಗೆ RBI ಕೇವಲ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ. ಆದರೆ, ಆ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಯಾವುದೇ ದೃಢ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಇದರಿಂದ ನಿಯಂತ್ರಣ ಪ್ರಾಧಿಕಾರ ಕೇವಲ ಮೂಕ ಪ್ರೇಕ್ಷಕನಂತಾಗಿದೆ. ಇಂತಹ ಪರಿಸ್ಥಿತಿ ಬ್ಯಾಂಕ್‌ಗಳು ನಿರಂಕುಶವಾಗಿ ಹೆಚ್ಚಿನ ಬಡ್ಡಿದರವನ್ನು ವಿಧಿಸಲು ಅವಕಾಶ ಮಾಡಿಕೊಡುತ್ತವೆ ಎಂದು ನ್ಯಾಯಪೀಠ ವಿಷಾದ ವ್ಯಕ್ತಪಡಿಸಿದೆ.


"ಬಡ್ಡಿ ದರ ವಿಧಿಸುವ ಅಧಿಕಾರದಲ್ಲಿ ಬ್ಯಾಂಕ್‌ಗೆ ನ್ಯಾಯಾಲಯ 'ಅನುಮಾನದ ಪ್ರಯೋಜನ' (Benifit of Doubt) ನೀಡಬಹುದು. ಆದರೆ, ಬ್ಯಾಂಕ್‌ಗಳು ವಿಧಿಸುವ ಅನಿಯಮಿತ ಬಡ್ಡಿಯಿಂದ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಆರ್‌ಬಿಐ ಕರ್ತವ್ಯ." ಎಂದು ನ್ಯಾಯಪೀಠ ಹೇಳಿದೆ.


ಸದ್ರಿ ಪ್ರಕರಣದ ಅರ್ಜಿದಾರರು ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನಿಂದ ವಾರ್ಷಿಕ 12.5%ರ ಬಡ್ಡಿದರದಲ್ಲಿ ₹9 ಲಕ್ಷ ಸಾಲ ಪಡೆದಿದ್ದರು. ಸಂಪೂರ್ಣ ಮೊತ್ತವನ್ನು ಮರುಪಾವತಿಸಿದ ನಂತರ, ಅರ್ಜಿದಾರರು ಬ್ಯಾಂಕ್‌ನಿಂದ 'No Due Certificate' ಪಡೆದು, ಆಸ್ತಿ ದಾಖಲೆ ಬಿಡುಗಡೆ ಮಾಡಿಕೊಂಡಿದ್ದರು.


ಆದರೆ, ಸಾಲದ ಖಾತೆಯನ್ನು ಮುಚ್ಚಿದಾಗ, ಅರ್ಜಿದಾರರಿಗೆ ₹27,00,000 ಅನಧಿಕೃತ ಡೆಬಿಟ್ ಆಗಿರುವುದು ಕಂಡುಬಂತು. ವಾರ್ಷಿಕ 12.5% ಬಡ್ಡಿಯಲ್ಲಿ, ಪಾವತಿಸಬೇಕಾದ ಮೊತ್ತವು ₹17 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು. ಹೀಗಾಗಿ, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ಗೆ ದೂರು ಸಲ್ಲಿಸಿದ್ದರು.


ದೂರಿಗೆ ಸಮರ್ಪಕ ಉತ್ತರ ಬರದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದಲ್ಲಿ ಹಾಜರಾದ ಆರ್‌ಬಿಐ ಪರ ವಕೀಲರು, ಬ್ಯಾಂಕ್‌ಗಳು ವಿಧಿಸುವ ಬಡ್ಡಿದರಗಳನ್ನು ನಿಯಂತ್ರಿಸಿದ್ದು, ಸಾಲದ ಮೇಲಿನ ಬಡ್ಡಿ ದರ ಇತರ ಬಾಹ್ಯ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ವಾದಿಸಿದರು.


ಸಾಲದ ಅವಧಿಯುದ್ದಕ್ಕೂ ಸಮರ್ಥನೀಯವಲ್ಲದ ಹೆಚ್ಚಿನ ಬಡ್ಡಿದರ ನಿರಂತರವಾಗಿ ವಿಧಿಸಲಾಗಿದೆ ಎಂಬುದನ್ನು ನ್ಯಾಯಾಲಯವು ಗಮನಿಸಿತು. 


ಆದರೆ, "ಅರ್ಜಿದಾರರು ಫ್ಲೋಟಿಂಗ್ ದರದ ಬಡ್ಡಿಯನ್ನು ಪಾವತಿಸಲು ಸಾಲ ಒಪ್ಪಂದದಲ್ಲಿ ಒಪ್ಪಿಕೊಂಡಿದ್ದಾರೆ ಮತ್ತು ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ಬಡ್ಡಿಯನ್ನು ವಿಧಿಸಲು ಆರ್‌ಬಿಐ ಬ್ಯಾಂಕ್‌ಗೆ ಅನುಮತಿ ನೀಡಿದೆ ಎಂದು ಹೇಳುವ ಮೂಲಕ ಬ್ಯಾಂಕ್ ತಮ್ಮ ಅನಿಯಂತ್ರಿತ ಮತ್ತು ಕಾನೂನುಬಾಹಿರ ಕ್ರಮವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.


ಬ್ಯಾಂಕ್‌ ಮಟ್ಟದಲ್ಲಿ ಸದ್ರಿ ಪ್ರಕರಣವನ್ನು ನ್ಯಾಯತೀರ್ಮಾನ ಮಾಡುವಲ್ಲಿ ಬ್ಯಾಂಕಿಂಗ್ ಒಂಬುಡ್ಸ್‌ಮನ್ ವಿಫಲರಾಗಿದ್ದಾರೆ. ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಎತ್ತಿರುವ ಆಕ್ಷೇಪಣೆಗಳಿಗೆ ಪ್ರತಿಕ್ರಿಯಿಸಲು ಅರ್ಜಿದಾರರಿಗೆ ಯಾವುದೇ ಅವಕಾಶ ನೀಡಲಾಗಿಲ್ಲ ಎಂದು ಕೋರ್ಟ್ ಹೇಳಿದೆ.


ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಪ್ರಕರಣವನ್ನು ಹೊಸದಾಗಿ ಮರು ವಿಚಾರಣೆ ನಡೆಸುವಂತೆ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ನ್ಯಾಯಪೀಠ ನಿರ್ದೇಶನ ನೀಡಿತು. 


ಪ್ರಕರಣ: ಮನಮೀತ್ ಸಿಂಗ್ Vs ಭಾರತ ಸರ್ಕಾರ ಮತ್ತಿತರರು

ಅಲಹಾಬಾದ್ ಹೈಕೋರ್ಟ್: Writ C No 22011/2023 dated 18-01-2024

Ads on article

Advertise in articles 1

advertising articles 2

Advertise under the article