ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್: ರಾಜ್ಯ ವಕೀಲರ ಪರಿಷತ್ತುಗಳಿಗೆ ಭಾರತೀಯ ವಕೀಲರ ಕೌನ್ಸಿಲ್ ಪತ್ರ
ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್: ರಾಜ್ಯ ವಕೀಲರ ಪರಿಷತ್ತುಗಳಿಗೆ ಭಾರತೀಯ ವಕೀಲರ ಕೌನ್ಸಿಲ್ ಪತ್ರ
ವಕೀಲರು ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್ ಮತ್ತು ಸೇವೆ ಸಲ್ಲಿಸುವ ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಇರುವ ವ್ಯವಸ್ಥೆಯನ್ನು ರೂಪಿಸುವಂತೆ ಭಾರತೀಯ ವಕೀಲರ ಕೌನ್ಸಿಲ್ ರಾಜ್ಯ ವಕೀಲರ ಪರಿಷತ್ತುಗಳಿಗೆ ಪತ್ರ ಹೊರಡಿಸಿದೆ.
ದಿನಾಂಕ 14-01-2024ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ರಾಜ್ಯ ವಕೀಲರ ಪರಿಷತ್ತುಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸರ್ಟಿಫಿಕೇಟ್ ಆಂಡ್ ಪ್ಲೇಸ್ ಆಫ್ ಪ್ರ್ಯಾಕ್ಟೀಸ್(ವೆರಿಫಿಕೇಶನ್) ರೂಲ್ಸ್-2015 ಪ್ರಕಾರ ವಕೀಲರು ತಮ್ಮ ಮಾಹಿತಿಗಳನ್ನು ವಕೀಲರ ಪರಿಷತ್ತಿಗೆ ನೀಡಿ ಸೂಕ್ತ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.
ಈಗಾಗಲೇ ಮಾಹಿತಿ ನೀಡಿದ ವಕೀಲರಿಂದ ಅಗತ್ಯ ಹೆಚ್ಚುವರಿ ಮಾಹಿತಿ ಪಡೆದು ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಕಾರ್ಯದರ್ಶಿ ಶ್ರೀಮಂತೋ ಸೇನ್ ಈ ಸೂಚನೆ ನೀಡಿದ್ದಾರೆ.
ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್‌ಗೆ ಅರ್ಜಿ ಸಲ್ಲಿಸಿದ ಬಳಿಕ ವಕೀಲರು ಯಾವುದೇ ವೃತ್ತಿಪರವಲ್ಲದ ಹಾಗೂ ಸ್ವೀಕಾರ್ಹವಲ್ಲದ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದರೆ ಅದರ ಬಗ್ಗೆ ರಾಜ್ಯ ವಕೀಲರ ಪರಿಷತ್ತು ಹೆಚ್ಚಿನ ನಿಗಾ ಇಡುವಂತೆ ಸುತ್ತೋಲೆ ಮನವಿ ಮಾಡಿದೆ.
ಇದೇ ವೇಳೆ, ವಕೀಲರ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರು, ಯಾ ಪದಾಧಿಕಾರಿಗಳು ಹಾಗೂ ವೈಯಕ್ತಿಕ ನೆಲೆಯಲ್ಲಿ ಯಾವುದೇ ವಕೀಲರ ಬಗ್ಗೆ ಆಕ್ಷೇಪಕಾರಿ ಅಂಶಗಳು ಗಮನಕ್ಕೆ ಬಂದಲ್ಲಿ ಮಾಹಿತಿ ನೀಡುವಂತೆ ಸುತ್ತೋಲೆ ತಿಳಿಸಿದೆ.
ವಕೀಲರು ತಮ್ಮ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್ ಬಗ್ಗೆ ಒದಗಿಸಬೇಕಾದ ಮಾಹಿತಿ/ದಾಖಲೆಗಳು ಹೀಗಿವೆ.
1 ತಾವು ವಕೀಲಿಕೆಯಲ್ಲಿ ಸಕ್ರಿಯರಾಗಿದ್ದೇವೆ ಎಂದು ಸೂಚಿಸುವ ನಿಟ್ಟಿನಲ್ಲಿ ತಾವು ಪ್ರತಿನಿಧಿಸಿರುವ ಕನಿಷ್ಟ ಐದು ಪ್ರಕರಣಗಳ ವಕಾಲತ್ತು ಅಥವಾ ತತ್ಸಮಾನವಾದ ದಾಖಲೆಗಳು
2 ಕಾನೂನು ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದರೆ ಅಲ್ಲಿ ತಾವು ವಹಿಸುತ್ತಿರುವ ಪಾತ್ರ ಮತ್ತು ಕೆಲಸದ ಪ್ರಕಾರಗಳ ಬಗ್ಗೆ ವಿವರ ಇರುವ ಅಂತಹ ಸಂಸ್ಥೆಯ ಅಧಿಕೃತ ವ್ಯಕ್ತಿಗಳಿಂದ ಸರ್ಟಿಫಿಕೇಟ್
3. ದಸ್ತಾವೇಜುಗಳು, ರೆವೆನ್ಯೂ/ಡಾಕ್ಯುಮೆಂಟೇಷನ್‌ನಲ್ಲಿ ತೊಡಗಿಸಿಕೊಂಡಿರುವ ವೃತ್ತಿಪರ ವಕೀಲರು ಕನಿಷ್ಟ ಹಿಂದಿನ 3 ವರ್ಷಗಳಲ್ಲಿ ತಾವು ತಯಾರಿಸಿದ ಕನಿಷ್ಟ 3 ದಾಖಲೆಗಳನ್ನು ಹಾಜರುಪಡಿಸುವುದು.
ಈ ಮೇಲಿನ ದಾಖಲೆಗಳಿಗೆ ಪೂರಕವಾಗಿ ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ ಎಂಬುದರ ಬಗ್ಗೆ ಘೋಷಣೆಗಳನ್ನು ಪಡೆದು ಸೂಕ್ತ ಹಾಗೂ ಸಮರ್ಪಕ ಮಾಹಿತಿಯೊಂದಿಗೆ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್‌ಗೆ ಅರ್ಜಿ ಪಡೆದುಕೊಳ್ಳುವಂತೆ ರಾಜ್ಯ ವಕೀಲರ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ವಕೀಲರ ನಡವಳಿಕೆ ಹಾಗೂ ಮಾಹಿತಿಯ ಕೊರತೆ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕಂಡು ಬಂದ ಕೆಲವು ಆಕ್ಷೇಪಗಳ ಹಿನ್ನೆಲೆಯಲ್ಲಿ ಈ ಸೂಚನೆ ನೀಡುತ್ತಿರುವುದಾಗಿ ಬಿಸಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.